WTC 2025 final: ‘ಅನುಮಾನಿಸಿದವರಿಗೆ ಈ ಟ್ರೋಫಿಯೇ ಉತ್ತರ’; ಟೀಕಾಕಾರರಿಗೆ ಬವುಮಾ ಉತ್ತರ

Temba Bavuma's Winning Response to Critics: ದಕ್ಷಿಣ ಆಫ್ರಿಕಾ ತಂಡದ ನಾಯಕ ಬವುಮಾ ಅವರು ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಗೆದ್ದ ನಂತರ ತಮ್ಮ ಗೆಲುವಿನ ಭಾಷಣದಲ್ಲಿ ಟೀಕೆಗಳಿಗೆ ಉತ್ತರಿಸಿದ್ದಾರೆ. ಕಗಿಸೊ ರಬಾಡ ಮತ್ತು ಮಾರ್ಕ್ರಮ್ ಅವರನ್ನು ಹೊಗಳಿ, ಹಿಂದಿನ ಸೋಲುಗಳನ್ನು ನೆನಪಿಸಿಕೊಂಡಿದ್ದಾರೆ. ಈ ಗೆಲುವು ತಮ್ಮ ತಂಡದ ಸಾಮರ್ಥ್ಯವನ್ನು ತೋರಿಸುತ್ತದೆ ಎಂದು ಅವರು ಹೇಳಿದ್ದಾರೆ.

WTC 2025 final: ‘ಅನುಮಾನಿಸಿದವರಿಗೆ ಈ ಟ್ರೋಫಿಯೇ ಉತ್ತರ’; ಟೀಕಾಕಾರರಿಗೆ ಬವುಮಾ ಉತ್ತರ
Temba Bavuma
Updated By: Digi Tech Desk

Updated on: Jun 20, 2025 | 10:05 AM

ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ (World Test Championship) ಫೈನಲ್​ನಲ್ಲಿ ಬಲಿಷ್ಟ ಆಸ್ಟ್ರೇಲಿಯಾ ಮಣಿಸಿರುವ ದಕ್ಷಿಣ ಆಫ್ರಿಕಾ ತಂಡ ಮೊದಲ ಬಾರಿಗೆ ಚಾಂಪಿಯನ್​ಪಟ್ಟಕ್ಕೇರಿದೆ. ಈ ಮೂಲಕ ಐಸಿಸಿ ಟೂರ್ನಿಗಳಲ್ಲಿ ಬರೋಬ್ಬರಿ 27ವರ್ಷಗಳ ಬಳಿಕ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ. ಐತಿಹಾಸಿಕ ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದ ಮೊದಲ ಇನ್ನಿಂಗ್ಸ್​ನಲ್ಲಿ 74ರನ್​ಗಳ ಹಿನ್ನಡೆ ಅನುಭವಿಸಿದ್ರೂ ನಂತರ ಮೈಗೊಡವಿ ಎದ್ದ ಹರಿಣಗಳ ಪಡೆ ದಾಖಲೆಯ ಮೊತ್ತ ಬೆನ್ನತ್ತಿ ಗೆದ್ದುಬೀಗಿದೆ. ಗೆಲುವಿನ ನಂತರ ಮಾತನಾಡಿದ ತಂಡದ ನಾಯಕ ಟೆಂಬಾ ಬವುಮಾ (Temba Bavuma), ಈ ಹಿಂದೆ ತಂಡವನ್ನು ಕೆಣಕಿದ ಟೀಕಾಕಾರರಿಗೆ ತಕ್ಕ ಉತ್ತರ ನೀಡಿದ್ದಾರೆ. ಅಲ್ಲದೆ ಈ ಗೆಲುವಿನ ಶ್ರೇಯವನ್ನು ಇಬ್ಬರು ಆಟಗಾರರಿಗೆ ನೀಡಿದ್ದಾರೆ.

ದುರ್ಬಲ ತಂಡದ ವಿರುದ್ಧ ಗೆದ್ದಿದ್ದಾರೆ ಎಂದಿದ್ದ ವಾನ್

ವಾಸ್ತವವಾಗಿ ಜನವರಿ 2, 2025 ರಂದು ದಕ್ಷಿಣ ಆಫ್ರಿಕಾ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಫೈನಲ್​ಗೆ ಅರ್ಹತೆ ಪಡೆದ ಬಗ್ಗೆ ಮಾತನಾಡಿದ್ದ ಇಂಗ್ಲೆಂಡ್‌ನ ಮಾಜಿ ನಾಯಕ ಮೈಕೆಲ್ ವಾಘನ್, ‘ದಕ್ಷಿಣ ಆಫ್ರಿಕಾ ತಂಡವನ್ನು ನೋಡಿದರೆ, ಅವರು ಬಹುತೇಕ ಯಾರನ್ನೂ ಸೋಲಿಸದೆ ಫೈನಲ್ ತಲುಪಿದ್ದಾರೆ. ದುರ್ಬಲ ತಂಡವನ್ನು ಸೋಲಿಸುವ ಮೂಲಕ ದಕ್ಷಿಣ ಆಫ್ರಿಕಾ ಪ್ರಶಸ್ತಿ ಪಂದ್ಯಕ್ಕೆ ಅರ್ಹತೆ ಪಡೆದಿದೆ ಎಂದು ಹೇಳಿಕೊಂಡಿದ್ದರು.

ಇದೀಗ ಫೈನಲ್ ಗೆದ್ದ ನಂತರ ಪಂದ್ಯದ ಪ್ರಸ್ತುತಿ ಸಮಾರಂಭದಲ್ಲಿ ಮಾತನಾಡಿದ ಬವುಮಾ, ‘ನಾವು ಒಂದು ತಂಡವಾಗಿ ಫೈನಲ್‌ಗೆ ಅರ್ಹತೆ ಪಡೆದವು. ನಾವು ನಡೆದುಬಂದ ಹಾದಿಯನ್ನು ಅನುಮಾನಿಸುವ ಜನರಿದ್ದರು, ನಾವು ದುರ್ಬಲ ತಂಡಗಳನ್ನು ಸೋಲಿಸಿ ಈ ಹಂತಕ್ಕೆ ಬಂದಿದ್ದೇವೆ ಎಂದು ಜರಿದರು. ಆದರೆ ಹಾಗೆ ಟೀಕಿಸಿದವರಿಗೆ ಈ ಟ್ರೋಫಿ ಉತ್ತರವಾಗಿದೆ ಎಂದರು.

ಗೆಲುವಿನ ಶ್ರೇಯ ಇಬ್ಬರು ಆಟಗಾರರಿಗೆ ಸಲ್ಲುತ್ತದೆ

ಫೈನಲ್ ಪಂದ್ಯಕ್ಕೂ ಮುನ್ನ ಸಾಕಷ್ಟು ಟೀಕೆಗಳನ್ನು ಎದುರಿಸಿದ್ದ ದಕ್ಷಿಣ ಆಫ್ರಿಕಾ ತಂಡದ ನಾಯಕ, ಆಸ್ಟ್ರೇಲಿಯಾ ವಿರುದ್ಧದ ಗೆಲುವಿಗೆ ತಮ್ಮ ಇಬ್ಬರು ಆಟಗಾರರನ್ನು ಶ್ಲಾಘಿಸಿದ್ದಾರೆ. ಮೊದಲನೆಯದಾದಗಿ ರಬಾಡರನ್ನು ಹೊಗಳಿದ ಬವುಮಾ, ‘ಕಗಿಸೊ ರಬಾಡ ಒಬ್ಬ ಶ್ರೇಷ್ಠ ಆಟಗಾರ. ಕೆಲವು ವರ್ಷಗಳಲ್ಲಿ ಅವರನ್ನು ಐಸಿಸಿ ಹಾಲ್ ಆಫ್ ಫೇಮ್‌ಗೆ ಸೇರಿಸಲಾಗುವುದು. ಅವರ ಸುತ್ತ ಎಷ್ಟೇ ವಿವಾದಗಳಿದ್ದರೂ ಅವುಗಳಿಗೆ ತಲೆಕೆಡಿಸಿಕೊಳ್ಳದೆ ಅವರು ಮಾಡುವುದನ್ನು ಮಾಡಿದರು’ ಎಂದರು. ಹಾಗೆಯೇ ಮಾರ್ಕ್ರಮ್ ಅವರನ್ನು ಹೊಗಳಿದ ಬವುಮಾ, ‘ಮಾರ್ಕ್ರಮ್ ಒಬ್ಬ ಶ್ರೇಷ್ಠ ಆಟಗಾರ, ಅವರ ಅಂಕಿಅಂಶಗಳೇ ಇದಕ್ಕೆ ಸಾಕ್ಷಿ ಎಂದರು.

ಟೆಸ್ಟ್‌ ಚಾಂಪಿಯನ್​ಶಿಪ್ ಗೆಲ್ಲುತ್ತಿದ್ದಂತೆ ಭಾವುಕರಾದ ಆಫ್ರಿಕಾ ಆಟಗಾರರು; ವಿಡಿಯೋ

ಕೆಟ್ಟ ದಿನಗಳನ್ನು ನೆನಪಿಸಿಕೊಂಡ ಬವುಮಾ

ಇದರ ಜೊತೆಗೆ ಐಸಿಸಿ ಪ್ರಶಸ್ತಿಯನ್ನು ಕಳೆದುಕೊಂಡ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ ಬವುಮಾ, ‘ನಾವು ಪದೇ ಪದೇ ಐಸಿಸಿ ಟ್ರೋಫಿ ಗೆಲ್ಲುವ ಸನಿಹಕ್ಕೆ ಬಂದು ಅದರಲ್ಲಿ ವಿಫಲರಾಗುತ್ತಿದ್ದೇವು. ನಾವು ಅನೇಕ ನೋವು ಮತ್ತು ನಿರಾಶೆಗಳನ್ನು ಎದುರಿಸಿದ್ದೇವೆ, ಆದರೆ ಈಗ ಎಲ್ಲವೂ ನಿಧಾನವಾಗಿ ಬದಲಾಗುತ್ತಿದೆ. ಈ ಗೆಲುವು ನಮಗೆ ತುಂಬಾ ವಿಶೇಷವಾಗಿದೆ, ಇದನ್ನು ವರ್ಣಿಸಲು ಸಾಧ್ಯವಿಲ್ಲ ಎಂದಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:34 pm, Sun, 15 June 25