ಭಾನುಕಾ ರಾಜಪಕ್ಸೆ ಬಳಿಕ ಟೆಸ್ಟ್​ ಕ್ರಿಕೆಟ್​ಗೆ ದಿಢೀರ್‌ ನಿವೃತ್ತಿ ಘೋಷಿಸಿದ ಮತ್ತೊಬ್ಬ ಲಂಕಾ ಕ್ರಿಕೆಟರ್!

| Updated By: ಪೃಥ್ವಿಶಂಕರ

Updated on: Jan 07, 2022 | 8:40 PM

Danushka Gunathilaka: ಈ ಬ್ಯಾಟ್ಸ್‌ಮನ್ ಕಳೆದ ವಾರವಷ್ಟೇ ತಮ್ಮ ನಿವೃತ್ತಿಗೆ ಸಂಬಂಧಿಸಿದ ಪತ್ರವನ್ನು ಮಂಡಳಿಗೆ ನೀಡಿದ್ದು, ಎಲ್ಲ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಂಡಿರುವುದಾಗಿ ಗುಣತಿಲಕ ಪತ್ರದಲ್ಲಿ ತಿಳಿಸಿದ್ದಾರೆ.

ಭಾನುಕಾ ರಾಜಪಕ್ಸೆ ಬಳಿಕ ಟೆಸ್ಟ್​ ಕ್ರಿಕೆಟ್​ಗೆ ದಿಢೀರ್‌ ನಿವೃತ್ತಿ ಘೋಷಿಸಿದ ಮತ್ತೊಬ್ಬ ಲಂಕಾ ಕ್ರಿಕೆಟರ್!
ದನುಷ್ಕ ಗುಣತಿಲಕ
Follow us on

ಶ್ರೀಲಂಕಾ ಕ್ರಿಕೆಟ್‌ನಲ್ಲಿ ಸದ್ಯಕ್ಕೆ ನಿವೃತ್ತಿಯ ಪ್ರವಾಸ ನಡೆಯುತ್ತಿರುವಂತೆ ಕಾಣುತ್ತಿದೆ. ಇತ್ತೀಚೆಗಷ್ಟೇ ಭಾನುಕಾ ರಾಜಪಕ್ಸೆ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ದಿಢೀರ್‌ ನಿವೃತ್ತಿ ಘೋಷಿಸಿದ್ದು, ಇದೀಗ ಮತ್ತೊಬ್ಬ ಆಟಗಾರ ನಿವೃತ್ತಿ ಘೋಷಿಸಿದ್ದಾರೆ. ಈ ಆಟಗಾರನ ಹೆಸರು ದನುಷ್ಕ ಗುಣತಿಲಕ. ಈ ಬಗ್ಗೆ 30 ವರ್ಷದ ಈ ಬ್ಯಾಟ್ಸ್‌ಮನ್ ಶ್ರೀಲಂಕಾ ಕ್ರಿಕೆಟ್‌ಗೆ ತಿಳಿಸಿದ್ದಾರೆ. ನ್ಯೂಸ್‌ವೈರ್ ವರದಿ ಪ್ರಕಾರ, ಈ ಬ್ಯಾಟ್ಸ್‌ಮನ್ ಕಳೆದ ವಾರವಷ್ಟೇ ತಮ್ಮ ನಿವೃತ್ತಿಗೆ ಸಂಬಂಧಿಸಿದ ಪತ್ರವನ್ನು ಮಂಡಳಿಗೆ ನೀಡಿದ್ದು, ಎಲ್ಲ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಂಡಿರುವುದಾಗಿ ಗುಣತಿಲಕ ಪತ್ರದಲ್ಲಿ ತಿಳಿಸಿದ್ದಾರೆ. ಆಟದ ಸಣ್ಣ ಸ್ವರೂಪದಲ್ಲಿ ಫಿಟ್ನೆಸ್ ಮೇಲೆ ಕೇಂದ್ರೀಕರಿಸಲು ಬಯಸುವುದಾಗಿ ಅವರು ಹೇಳಿದ್ದಾರೆ. ಗುಣತಿಲಕ ಟೆಸ್ಟ್‌ನಿಂದ ನಿವೃತ್ತಿ ಹೊಂದಿದ್ದರೂ ಸೀಮಿತ ಓವರ್‌ಗಳಲ್ಲಿ ಅಂತರಾಷ್ಟ್ರೀಯ ಮತ್ತು ದೇಶೀಯ ಕ್ರಿಕೆಟ್‌ನಲ್ಲಿ ಆಡುವುದನ್ನು ಮುಂದುವರಿಸಲಿದ್ದಾರೆ. ಈ ಬ್ಯಾಟ್ಸ್‌ಮನ್ ಶ್ರೀಲಂಕಾ ಪರ ಎಂಟು ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ.

ಕುಶಾಲ್ ಮೆಂಡಿಸ್ ಮತ್ತು ನಿರೋಶನ್ ಡಿಕ್ವೆಲ್ಲಾ ಜೊತೆಗೆ ಗುಣತಿಲಕ ಮೇಲೆ ಹೇರಲಾಗಿದ್ದ ನಿಷೇಧವನ್ನು ಶ್ರೀಲಂಕಾ ಕ್ರಿಕೆಟ್ ತಕ್ಷಣದಿಂದ ಜಾರಿಗೆ ಬರುವಂತೆ ಹಿಂತೆಗೆದುಕೊಂಡಿದೆ. ಮಂಡಳಿಯು ತನ್ನ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ನಿರ್ಧಾರ ಕೈಗೊಂಡಿದೆ. ಡರ್ಹಾಮ್‌ನಲ್ಲಿ ಬಯೋ ಬಬಲ್ ಅನ್ನು ಮುರಿದಿದ್ದಕ್ಕಾಗಿ ಮೂವರೂ ಆಟಗಾರರನ್ನು ನಿಷೇಧಿಸಲಾಯಿತು. ಮೂವರು ಆಟಗಾರರು ಮಾಡಿದ ಮನವಿಯ ನಂತರ ಮಂಡಳಿ ಈ ನಿರ್ಧಾರ ಕೈಗೊಂಡಿದೆ.

ದೇಶಕ್ಕಾಗಿ ಆಡುವುದೇ ಗೌರವ
ಗುಣತಿಲಕ 2018 ರಲ್ಲಿ ಕ್ರೈಸ್ಟ್‌ಚರ್ಚ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ತಮ್ಮ ಕೊನೆಯ ಟೆಸ್ಟ್ ಪಂದ್ಯವನ್ನು ಆಡಿದರು. ತಮ್ಮ ನಿರ್ಧಾರದ ಬಗ್ಗೆ ಮಾತನಾಡಿರುವ ಗುಣತಿಲಕ, ನನ್ನ ದೇಶಕ್ಕಾಗಿ ಆಡುವುದು ನನಗೆ ಗೌರವದ ವಿಚಾರವಾಗಿದೆ. ಭವಿಷ್ಯದಲ್ಲಿ ನನ್ನ ಸಾಮರ್ಥ್ಯಕ್ಕೆ ತಕ್ಕಂತೆ ನಾನು ಅಗತ್ಯವಿದ್ದಾಗ ಶ್ರೀಲಂಕಾವನ್ನು ಪ್ರತಿನಿಧಿಸುವುದನ್ನು ಮುಂದುವರಿಸುತ್ತೇನೆ ಎಂದಿದ್ದಾರೆ.

ಗುಣತಿಲಕ ಟೆಸ್ಟ್ ವೃತ್ತಿಜೀವನದಲ್ಲಿ, ಎಂಟು ಟೆಸ್ಟ್ ಪಂದ್ಯವನ್ನಾಡಿದ್ದು ಕೇವಲ 299 ರನ್ ಗಳಿಸಿದ್ದಾರೆ. ಇದರಲ್ಲಿ ಎರಡು ಅರ್ಧ ಶತಕಗಳು ಸೇರಿವೆ. ಟೆಸ್ಟ್‌ನಲ್ಲಿ ಅವರ ಸರಾಸರಿ 18.68. ಮತ್ತೊಂದೆಡೆ, ನಾವು ಅವರ ODI ವೃತ್ತಿಜೀವನದ ಬಗ್ಗೆ ಮಾತನಾಡುವುದಾದರೆ, ಈ ಆಟಗಾರ ಶ್ರೀಲಂಕಾದಲ್ಲಿ 44 ಪಂದ್ಯಗಳನ್ನು ಆಡಿದ್ದಾರೆ ಮತ್ತು 36.19 ರ ಸರಾಸರಿಯಲ್ಲಿ 1520 ರನ್ ಗಳಿಸಿದ್ದಾರೆ. ಅವರ ಬ್ಯಾಟ್‌ನಿಂದ ಎರಡು ಶತಕ ಮತ್ತು 10 ಅರ್ಧ ಶತಕಗಳು ಹೊರಹೊಮ್ಮಿವೆ. ಅದೇ ಸಮಯದಲ್ಲಿ, ಅವರು 30 ಟಿ20 ಪಂದ್ಯಗಳಲ್ಲಿ ಶ್ರೀಲಂಕಾವನ್ನು ಪ್ರತಿನಿಧಿಸಿದ್ದಾರೆ, ಇದರಲ್ಲಿ ಅವರು 568 ರನ್ ಗಳಿಸಿದ್ದಾರೆ. ಟಿ20ಯಲ್ಲಿ ಮೂರು ಅರ್ಧಶತಕಗಳನ್ನು ಗಳಿಸಿದ್ದಾರೆ.

ನಿಷೇಧ ಹೇರಿದ್ಯಾಕೆ?
ಕಳೆದ ವರ್ಷ ಜೂನ್‌ನಲ್ಲಿ ಶ್ರೀಲಂಕಾ ಕ್ರಿಕೆಟ್ ತಂಡ ಇಂಗ್ಲೆಂಡ್ ಪ್ರವಾಸ ಕೈಗೊಂಡಿತ್ತು. ಇಡೀ ತಂಡ ಕೋವಿಡ್‌ನಿಂದಾಗಿ ಬಯೋ ಬಬಲ್‌ನಲ್ಲಿದ್ದರು, ಆದರೆ ಈ ಮೂವರು ಆಟಗಾರರು ಬಯೋ ಬಬಲ್ ಬಗ್ಗೆ ಕಾಳಜಿ ವಹಿಸಿರಲಿಲ್ಲ. ಈ ಮೂವರು ಬಯೋ ಬಬಲ್ ಮುರಿದು ಡರ್ಹಾಮ್‌ನಲ್ಲಿ ರಾತ್ರಿ ಕಳೆಯುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಇದಾದ ಕೆಲವೇ ದಿನಗಳಲ್ಲಿ ಮೂವರನ್ನೂ ಮನೆಗೆ ಕಳುಹಿಸಲಾಯಿತು. ನಂತರ ಅವರಿಗೆ ಒಂದು ವರ್ಷ ನಿಷೇಧ ಹೇರಲಾಯಿತು. ಆದಾಗ್ಯೂ, ಆಟಗಾರರ ಮನವಿಯ ಮೇರೆಗೆ, ತಕ್ಷಣದಿಂದಲೇ ಜಾರಿಗೆ ಬರುವಂತೆ ತೆಗೆದುಹಾಕಲಾಗಿದೆ ಮತ್ತು ಈಗ ಈ ಮೂವರು ಜಿಂಬಾಬ್ವೆ ವಿರುದ್ಧದ ಸರಣಿಗೆ ಆಯ್ಕೆಗೆ ಲಭ್ಯವಿರುತ್ತಾರೆ.