Sri Lanka Protests: ಪ್ರತಿಭಟನೆಗೆ ಧುಮುಕಿದ ಲಂಕಾ ಕ್ರಿಕೆಟಿಗ ಜಯಸೂರ್ಯ; ಅಧ್ಯಕ್ಷರ ರಾಜೀನಾಮೆಗೆ ಒತ್ತಾಯ
Sri Lanka Protests: ಪ್ರತಿಭಟನಾಕಾರರು ರಾಷ್ಟ್ರಪತಿ ಭವನವನ್ನು ಆಕ್ರಮಿಸಿಕೊಂಡ ನಂತರ, ಜಯಸೂರ್ಯ ಮತ್ತೊಂದು ಟ್ವೀಟ್ ಮಾಡಿದ್ದು, ಜನರು ನಿಮ್ಮನ್ನು ಗೆಲ್ಲಿಸಿದ್ದಾರೆ. ಆದ್ದರಿಂದ ರಾಷ್ಟ್ರಪತಿಗಳು ಈಗ ತಮ್ಮ ಗೌರವವನ್ನು ಕಾಪಾಡಿಕೊಂಡು ತಕ್ಷಣ ರಾಜೀನಾಮೆ ನೀಡಬೇಕು ಎಂದು ಹೇಳಿದ್ದಾರೆ.
ಶ್ರೀಲಂಕಾದ ಆರ್ಥಿಕ ಬಿಕ್ಕಟ್ಟಿನಿಂದ ಉಂಟಾದ ರಾಜಕೀಯ ಬಿಕ್ಕಟ್ಟು ಇದೀಗ ಉತ್ತುಂಗಕ್ಕೇರಿದೆ. ರಾಜಧಾನಿ ಕೊಲಂಬೊದಲ್ಲಿ ದೇಶದ ಅಧ್ಯಕ್ಷ ಗೋತಬಯ ರಾಜಪಕ್ಸೆ ವಿರುದ್ಧದ ಪ್ರತಿಭಟನೆ ಉಗ್ರರೂಪ ತಾಳಿದೆ. ಶನಿವಾರ ಜುಲೈ 9 ರಂದು, ಪ್ರತಿಭಟನಾಕಾರರು ರಾಜಧಾನಿಯ ರಾಷ್ಟ್ರಪತಿ ಭವನದ ಕಡೆಗೆ ಮೆರವಣಿಗೆ ನಡೆಸಿ, ರಾಷ್ಟ್ರಪತಿ ಭವನಕ್ಕೆ ಮುತ್ತಿಗೆ ಹಾಕಿದ್ದಾರೆ. ಇದರಿಂದ ಅಧ್ಯಕ್ಷರು ತಮ್ಮ ನಿವಾಸ ಬಿಟ್ಟು ಓಡಿ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ಶ್ರೀಲಂಕಾದಲ್ಲಿ ಹಲವು ತಿಂಗಳುಗಳಿಂದ ಈ ಪ್ರತಿಭಟನೆ ನಡೆಯುತ್ತಿದ್ದು, ಇದೀಗ ದೇಶದ ಕೆಲ ಮಾಜಿ ಆಟಗಾರರು ಕೂಡ ಇದರಲ್ಲಿ ಪಾಲ್ಗೊಳ್ಳಲು ಆರಂಭಿಸಿದ್ದಾರೆ. ಶ್ರೀಲಂಕಾ ಕ್ರಿಕೆಟ್ ತಂಡದ ಮಾಜಿ ನಾಯಕ ಮತ್ತು ಅನುಭವಿ ಬ್ಯಾಟ್ಸ್‌ಮನ್ ಸನತ್ ಜಯಸೂರ್ಯ ಕೂಡ ಶನಿವಾರ ರಾಜಧಾನಿಯಲ್ಲಿ ಪ್ರತಿಭಟನಾಕಾರರೊಂದಿಗೆ ಕಾಣಿಸಿಕೊಂಡು ಅಧ್ಯಕ್ಷರ ರಾಜೀನಾಮೆಗೆ ಒತ್ತಾಯಿಸಿದರು.
ತಮ್ಮ ಅಬ್ಬರದ ಬ್ಯಾಟಿಂಗ್ ಮೂಲಕ ಬೌಲರ್ಗಳಿಗೆ ಸಿಂಹಸ್ವಪ್ನರಾಗಿದ್ದ ಜಯಸೂರ್ಯ, ಸರ್ಕಾರಿ ವಿರೋಧಿ ಹೋರಾಟಗಾರರ ಜತೆಗೂಡಿ ಅವರನ್ನು ಹುರಿದುಂಬಿಸಿದರು. ಈ ಸಮಯದಲ್ಲಿ, ಅನೇಕ ಪ್ರತಿಭಟನಾಕಾರರು ಶ್ರೀಲಂಕಾದ ದಂತಕಥೆಯೊಂದಿಗೆ ಸೆಲ್ಫಿಗೆ ಪೋಸ್ ನೀಡುತ್ತಿರುವುದು ಕಂಡುಬಂತು. ಈಗ ಜಯಸೂರ್ಯ, ಪ್ರತಿಭಟನಾಕಾರರೊಂದಿಗಿನ ಫೋಟೋಗಳನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಜೊತೆಗೆ ನಾನು ಯಾವಾಗಲೂ ಶ್ರೀಲಂಕಾದ ಜನರೊಂದಿಗೆ ನಿಲ್ಲುತ್ತೇನೆ ಎಂದು ಬರೆದುಕೊಂಡಿದ್ದಾರೆ.
Ialways stand with the People of Sri Lanka. And will celebrate victory soon. This should be continue without any violation. #Gohomegota#අරගලයටජය pic.twitter.com/q7AtqLObyn
— Sanath Jayasuriya (@Sanath07) July 9, 2022
ಅಧ್ಯಕ್ಷರ ರಾಜೀನಾಮೆ
ಪ್ರತಿಭಟನಾಕಾರರು ರಾಷ್ಟ್ರಪತಿ ಭವನವನ್ನು ಆಕ್ರಮಿಸಿಕೊಂಡ ನಂತರ, ಜಯಸೂರ್ಯ ಮತ್ತೊಂದು ಟ್ವೀಟ್ ಮಾಡಿದ್ದು, ಜನರು ನಿಮ್ಮನ್ನು ಗೆಲ್ಲಿಸಿದ್ದಾರೆ. ಆದ್ದರಿಂದ ರಾಷ್ಟ್ರಪತಿಗಳು ಈಗ ತಮ್ಮ ಗೌರವವನ್ನು ಕಾಪಾಡಿಕೊಂಡು ತಕ್ಷಣ ರಾಜೀನಾಮೆ ನೀಡಬೇಕು ಎಂದು ಹೇಳಿದ್ದಾರೆ. ಜೊತೆಗೆ, ಮುತ್ತಿಗೆ ಮುಗಿದಿದೆ. ನಿಮ್ಮ ಕೋಟೆ ಕುಸಿದಿದೆ. ಜನರ ಹೋರಾಟ ಮತ್ತು ಜನ ಶಕ್ತಿ ಗೆದ್ದಿದೆ. ದಯವಿಟ್ಟು ಸ್ವಲ್ಪ ಗೌರವ ನೀಡಿ ರಾಜೀನಾಮೆ ನೀಡಿ ಎಂದು ಬರೆದುಕೊಂಡಿದ್ದಾರೆ
The siege is over. Your bastion has fallen. Aragalaya and peoples power has won. Please have the dignity to resign now ! #GoHomeGota
— Sanath Jayasuriya (@Sanath07) July 9, 2022
ಗಾಲೆ ಟೆಸ್ಟ್ನಲ್ಲೂ ಪ್ರತಿಭಟನೆಯ ಬಿಸಿ
ಗಾಲೆಯಲ್ಲಿ ನಡೆಯುತ್ತಿರುವ ಶ್ರೀಲಂಕಾ-ಆಸ್ಟ್ರೇಲಿಯಾ ನಡುವಿನ ಎರಡನೇ ಟೆಸ್ಟ್ ಮೇಲ್ಲೂ ಪ್ರತಿಭಟನೆಯ ಕಾವು ತಟ್ಟಿದೆ. ಶನಿವಾರವೇ ನೂರಾರು ಪ್ರತಿಭಟನಾಕಾರರು ತಮ್ಮ ಕೈಯಲ್ಲಿ ಪೋಸ್ಟರ್‌ಗಳು ಮತ್ತು ಬ್ಯಾನರ್‌ಗಳೊಂದಿಗೆ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುತ್ತ, ಕ್ರೀಡಾಂಗಣಕ್ಕೆ ಹೊಂದಿಕೊಂಡಿರುವ ಐತಿಹಾಸಿಕ ಗಾಲೆ ಕೋಟೆಯನ್ನು ತಲುಪಿದ್ದರು.
ಮಾಜಿ ಪ್ರಧಾನಿ ವಿರುದ್ಧವೂ ಪ್ರತಿಭಟನೆ
ಶ್ರೀಲಂಕಾದಲ್ಲಿ ಉಂಟಾಗಿರುವ ಆರ್ಥಿಕ ಬಿಕ್ಕಟ್ಟಿನ ವಿರುದ್ಧ ಹಲವಾರು ತಿಂಗಳುಗಳಿಂದ ಈ ಜನಾಂದೋಲನ ನಡೆಯುತ್ತಿದೆ. ಕೆಲವು ವಾರಗಳ ಹಿಂದೆ, ಪ್ರತಿಭಟನಾಕಾರರು ದೇಶದ ಮಾಜಿ ಪ್ರಧಾನಿ ಮತ್ತು ಗೋತಬಯ ಅವರ ಸಹೋದರ ಮಹಿದ್ರಾ ರಾಜಪಕ್ಸೆ ಅವರ ವಿರುದ್ಧ ಮೆರವಣಿಗೆ ನಡೆಸಿದರು. ಆದರೆ ನಂತರ ಭದ್ರತಾ ಸಿಬ್ಬಂದಿ, ರಾಜಪಕ್ಸೆ ಬೆಂಬಲಿಗರು ಮತ್ತು ಪ್ರತಿಭಟನಾಕಾರರ ನಡುವೆ ತೀವ್ರ ಘರ್ಷಣೆ ನಡೆಯಿತು, ಅದು ಹಿಂಸಾಚಾರಕ್ಕೆ ತಿರುಗಿತು. ಅದರಲ್ಲಿ ಅನೇಕರು ಪ್ರಾಣ ಕಳೆದುಕೊಂಡಿದ್ದರು.
Published On - 5:20 pm, Sat, 9 July 22