ದುಬೈ ಇಂಟರ್ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಏಷ್ಯಾಕಪ್ (Asia Cup 2022) ಫೈನಲ್ನಲ್ಲಿ ಪಾಕಿಸ್ತಾನ್ (Pakistan vs Sri Lanka) ತಂಡವನ್ನು ಬಗ್ಗು ಬಡಿದು ಶ್ರೀಲಂಕಾ ತಂಡ ಚಾಂಪಿಯನ್ ಪಟ್ಟಕ್ಕೇರಿದೆ. ಚೇಸಿಂಗ್ ಪಿಚ್ನಲ್ಲಿ ಬೌಲಿಂಗ್ನಲ್ಲಿ ಪರಾಕ್ರಮ ಮೆರೆಯುವ ಮೂಲಕ ಲಂಕಾ ತಂಡವು ಪ್ರಶಸ್ತಿಯನ್ನು ಗೆದ್ದುಕೊಂಡಿರುವುದು ವಿಶೇಷ. ಆದರೆ ಬೌಲಿಂಗ್ನಲ್ಲಿ ಶ್ರೀಲಂಕಾ ತಂಡದ ಆರಂಭ ಕೂಡ ಉತ್ತಮವಾಗಿರಲಿಲ್ಲ ಎಂಬುದು ಇಲ್ಲಿ ಮತ್ತೊಂದು ವಿಶೇಷ. ಅಂದರೆ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ತಂಡವು ಭಾನುಕಾ ರಾಜಪಕ್ಸೆ (71) ಅವರ ಅಜೇಯ ಅರ್ಧಶತಕದ ನೆರವಿನಿಂದ 170 ರನ್ ಕಲೆಹಾಕಿತು. 171 ರನ್ಗಳ ಟಾರ್ಗೆಟ್ ಪಡೆದ ಪಾಕಿಸ್ತಾನ್ ತಂಡವು ಉತ್ತಮ ಆರಂಭ ಪಡೆದಿತ್ತು. ಅಂತಹದೊಂದು ಆರಂಭ ನೀಡಿದ್ದು ಶ್ರೀಲಂಕಾದ ವೇಗಿ ದಿಲ್ಶಾನ್ ಮಧುಶಂಕ. ಏಕೆಂದರೆ ಮೊದಲ ಓವರ್ನ ಮೊದಲ ಎಸೆತವನ್ನೇ ಮಧುಶಂಕ ನೋಬಾಲ್ ಎಸೆದಿದ್ದರು. ಇದಾದ ಬಳಿಕ ಬ್ಯಾಕ್ ಟು ಬ್ಯಾಕ್ 2 ವೈಡ್ ಎಸೆದರು.
ಆನಂತರ ಮತ್ತೊಂದು ವೈಡ್+ಬೈಸ್ ರೀತಿಯಲ್ಲಿ ಫೋರ್ ನೀಡಿದರು. ಆ ಬಳಿಕ ಇನ್ನೊಂದು ವೈಡ್ ಎಸೆದರು. ಅಂದರೆ ಮೊದಲ ಎಸೆತದ ಕೌಂಟ್ ಶುರುವಾಗುವ ಮುನ್ನ ಎಕ್ಸ್ಟ್ರಾ ರನ್ಗಳ ಮೂಲಕ ಮಧುಶಂಕ 9 ರನ್ಗಳನ್ನು ನೀಡಿದ್ದರು. ಅತ್ತ ಒಂದು ಬಾಲ್ ಎದುರಿಸದೇ ಪಾಕಿಸ್ತಾನ್ ತಂಡವು ತನ್ನ ಖಾತೆಗೆ 9 ರನ್ಗಳನ್ನು ಸೇರ್ಪಡೆಗೊಳಿಸಿತ್ತು. ಕೊನೆಗೂ ಸರಿಯಾದ ಎಸೆದ ಮೊದಲ ಎಸೆತದಲ್ಲಿ ಬಾಬರ್ ಆಜಂ 1 ರನ್ ಕಲೆಹಾಕಿದರು. ಅಂದರೆ ದಿಲ್ಶಾನ್ ಮಧುಶಂಕ ಮೊದಲ ಎಸೆತದ ಕೌಂಟ್ ಶರುವಾಗುಷ್ಟರಲ್ಲಿ 10 ರನ್ಗಳನ್ನು ನೀಡಿದ್ದರು. ಇದಾಗ್ಯೂ ಆ ಬಳಿಕ ಮಧುಶಂಕ 6 ಎಸೆತಗಳಲ್ಲಿ ನೀಡಿದ್ದು ಕೇವಲ 3 ರನ್ ಮಾತ್ರ. ಅಂದರೆ ಮೊದಲ ಓವರ್ನಲ್ಲೇ ಲಂಕಾ ಬೌಲರ್ 11 ಎಸೆತಗಳನ್ನು ಎಸೆದಿದ್ದರು.
ಆನಂತರ ಕಂಬ್ಯಾಕ್ ಮಾಡಿದ್ದ ಮಧುಶಂಕ 3 ಓವರ್ಗಳಲ್ಲಿ 24 ರನ್ ಮಾತ್ರ ನೀಡಿದ್ದರು. ಇನ್ನು ಹಸರಂಗ, ಮಧುಶಾನ ಸೇರಿದಂತೆ ಲಂಕಾ ತಂಡದ ಉಳಿದ ಬೌಲರ್ಗಳ ಸಾಂಘಿಕ ಪ್ರದರ್ಶನದಿಂದ ಶ್ರೀಲಂಕಾ ತಂಡವು ಪಾಕ್ ತಂಡವನ್ನು 147 ರನ್ಗಳಿಗೆ ಆಲೌಟ್ ಮಾಡಿ 23 ರನ್ಗಳ ಜಯ ಸಾಧಿಸಿತು.
ಏಷ್ಯಾಕಪ್ನ ದುಬಾರಿ ಓವರ್:
ಅಂದಹಾಗೆ ದಿಲ್ಶಾನ್ ಮಧುಶಂಕ ಎಸೆದಿರುವುದು ಏಷ್ಯಾಕಪ್ನ ಸುದೀರ್ಘ ಓವರ್ ಅಲ್ಲ ಎಂಬುದು ವಿಶೇಷ. ಅಂದರೆ ಮಧುಶಂಕ ಒಂದೇ ಓವರ್ನಲ್ಲಿ 11 ಎಸೆತಗಳನ್ನು ಎಸೆದಿದ್ದರೆ, ಏಷ್ಯಾಕಪ್ನಲ್ಲಿ ಮತ್ತೋರ್ವ ವೇಗಿ ಒಂದೇ ಓವರ್ನಲ್ಲಿ 17 ಎಸೆದ ಕೆಟ್ಟ ದಾಖಲೆ ಹೊಂದಿದ್ದಾರೆ.
2004 ರಲ್ಲಿ ನಡೆದ ಏಷ್ಯಾಕಪ್ ಟೂರ್ನಿಯಲ್ಲಿ ಬಾಂಗ್ಲಾದೇಶ್ ವಿರುದ್ದದ ಪಂದ್ಯದಲ್ಲಿ ಪಾಕಿಸ್ತಾನ್ ವೇಗಿ ಮೊಹಮ್ಮದ್ ಸಮಿ ಇಂತಹದೊಂದು ಹೀನಾಯ ದಾಖಲೆ ನಿರ್ಮಿಸಿದ್ದರು. ಅಂದು ಮೊಹಮ್ಮದ್ ಸಮಿ ಮೊದಲ ಬಾಲ್ ನೋಬಾಲ್ ಎಸೆದಿದ್ದರು. ಆ ಬಳಿಕ ವೈಡ್ ಎಸೆದರು. ಇದಾದ ಬಳಿಕ ಒಂದು ರನ್ ನೀಡಿದರು.
ಆ ಬಳಿಕ ಮತ್ತೆ ನೋ ಬಾಲ್ ಎಸೆದರು. ಇದರ ನಂತರ ಬ್ಯಾಕ್ ಟು ಬ್ಯಾಕ್ 2 ವೈಡ್ ಎಸೆದರು. ಆ ನಂತರ ಒಂದು ಡಾಟ್ ಬಾಲ್ ಮಾಡಿದರು. ಎಲ್ಲರೂ ಸಮಿ ಲಯಕ್ಕೆ ಮರಳಿದರೂ ಅಂದುಕೊಳ್ಳುವಷ್ಟರಲ್ಲಿ ಮತ್ತೆ ನೋ ಬಾಲ್ ಎಸೆದರು. ಇದಾದ ಬಳಿಕ ವೈಡ್ ಬಾಲ್ ಮಾಡಿದರು. ಹೀಗೆ ಅಂದು 7 ವೈಡ್ಗಳು ಹಾಗೂ ನಾಲ್ಕು ನೋಬಾಲ್ಗಳನ್ನು ಹೆಚ್ಚುವರಿಯಾಗಿ ನೀಡಿದ ಸಮಿ ಒಟ್ಟು 17 ಎಸೆತಗಳನ್ನು ಎಸೆದಿದ್ದರು. ಅಲ್ಲದೆ 22 ರನ್ ನೀಡುವ ಮೂಲಕ ದುಬಾರಿ ಬೌಲರ್ ಎನಿಸಿಕೊಂಡರು. ವಿಶೇಷ ಎಂದರೆ ಇದು ಏಷ್ಯಾಕಪ್ನಲ್ಲಿ ಮಾತ್ರವಲ್ಲದೆ, ಏಕದಿನ ಕ್ರಿಕೆಟ್ ಇತಿಹಾಸದ ಅತ್ಯಂತ ದೀರ್ಘಾವಧಿಯ ಓವರ್ ಕೂಡ ಆಗಿದೆ.