SL vs PAK: ಮರುಕಳಿಸಿದ ಇತಿಹಾಸ: ಅದೇರೀತಿ ಕ್ಯಾಚ್ ಬಿಟ್ಟು ಏಷ್ಯಾಕಪ್ ಫೈನಲ್ನಲ್ಲಿ ಸೋತ ಪಾಕಿಸ್ತಾನ
Pakisan Carch Drop: ಅಂದಿನಿಂದಲೂ ಪಾಕಿಸ್ತಾನ ತಂಡ ಫೀಲ್ಡಿಂಗ್ ವಿಚಾರದಲ್ಲಿ ಟ್ರೋಲ್ ಆಗುತ್ತಲೇ ಇದೆ. ಈ ಬಾರಿ ಶದಾಬ್ ಖಾನ್ ಮತ್ತು ಅಸಿಫ್ ಅಲಿ ನಡುವೆ ಕ್ಯಾಚ್ ಕಾಲ್ ಸರಿಯಾಗಿ ನಡೆಯದ ಕಾರಣ ಇಬ್ಬರೂ ಚೆಂಡನ್ನು ಹಿಡಿಯಲು ಓಡಿ ಬಂದು ಬಿಟ್ಟಿದ್ದಾರೆ.
ಏಷ್ಯಾಕಪ್ 2022 ಫೈನಲ್ (Asia Cup Final) ಪಂದ್ಯ ಆರಂಭಕ್ಕೂ ಮುನ್ನ ಯಾರು ಗೆಲ್ಲಬಹುದು ಎಂಬ ಪ್ರಶ್ನೆ ಕೇಳಿದಾಗ ಅನೇಕರ ಉತ್ತರ ಶ್ರೀಲಂಕಾ ಗೆಲ್ಲಬೇಕು ಆದರೆ ಪಾಕಿಸ್ತಾನ (Pakistan vs Sri Lanka) ಜಯ ಸಾಧಿಸಬಹುದು ಎಂಬ ಮಾತು ಕೇಳಿಬಂದಿತ್ತು. ಆದರೆ, ಸಿಂಹಳೀಯರು ಯಾರೂ ಊಹಿಸಲಾಗದ ರೀತಿಯಲ್ಲಿ ಆರನೇ ಬಾರಿಗೆ ಏಷ್ಯಾಕಪ್ ಪ್ರಶಸ್ತಿ ಎತ್ತಿ ಹಿಡಿದಿದ್ದಾರೆ. ಸೋಲಿನೊಂದಿಗೆ ಟೂರ್ನಿ ಆರಂಭಿಸಿದ್ದ ಲಂಕಾನ್ನರು ಅನೇಕ ಏರಿಳಿತಗಳನ್ನು ಕಂಡು ಪ್ರಶಸ್ತಿಗೆ ಮುತ್ತಿಕ್ಕಿದ್ದಾರೆ. ಇತ್ತ 10 ವರ್ಷಗಳ ನಂತರ ಏಷ್ಯಾಕಪ್ ಗೆಲ್ಲುವ ಕನಸು ಕಾಣುತ್ತಿದ್ದ ಪಾಕಿಸ್ತಾನದ ಬಯಕೆ ಈ ಬಾರಿ ಕೂಡ ಈಡೇರಲಿಲ್ಲ. ಮಹತ್ವದ ಟೂರ್ನಿಗಳಲ್ಲಿ ಪಾಕಿಸ್ತಾನ ಸೋಲಲು ಮುಖ್ಯ ಕಾರಣವಾಗುತ್ತಿರುವುದು ಫೀಲ್ಡರ್ಗಳು (Pakistan Fileding). ಇದು ಅಂದಿನಿಂದಲೂ ನಡೆದುಕೊಂಡು ಬಂದಿದೆ. ಅದು ಈ ಬಾರಿ ಕೂಡ ಮುಂದುವರೆಯಿತು.
ಟಾಸ್ ಸೋತು ಬ್ಯಾಟಿಂಗ್ಗೆ ಇಳಿದ ಶ್ರೀಲಂಕಾ ಆರಂಭದಲ್ಲೇ ಪ್ರಮುಖ ವಿಕೆಟ್ ಕಳೆದುಕೊಂಡಿತು. ಕೇವಲ 58 ರನ್ ಆಗುವ ಹೊತ್ತಿಗೆ 5 ವಿಕೆಟ್ಗಳನ್ನು ಕೈಚೆಲ್ಲಿತ್ತು. ಆದರೆ, ಪಂದ್ಯದ ಗತಿಯನ್ನೇ ಬದಲಾಯಿಸಿದ್ದು ಭನುಕಾ ರಾಜಪಕ್ಷ. ಇವರು ಕೇವಲ 45 ಎಸೆತಗಳಲ್ಲಿ 6 ಫೋರ್, 3 ಸಿಕ್ಸರ್ ಬಾರಿಸಿ ಅಜೇಯ 71 ರನ್ ಚಚ್ಚಿದರು. ಇದರ ನಡುವೆ ರಾಜಪಕ್ಷ ಅವರ ಕ್ಯಾಚ್ ಅನ್ನು ಪಾಕಿಸ್ತಾನ ಫೀಲ್ಡರ್ಗಳು ಕೈಚೆಲ್ಲಿದರು. ಇದರ ವಿಡಿಯೋ ವೈರಲ್ ಆಗುತ್ತಿದ್ದು ಟ್ವಿಟರ್ನಲ್ಲಿ ಸಖತ್ ಟ್ರೋಲ್ ಕೂಡ ಆಗುತ್ತಿದೆ.
ವಿಶೇಷ ಎಂದರೆ ಅಂದಿನಿಂದಲೂ ಪಾಕಿಸ್ತಾನ ತಂಡ ಫೀಲ್ಡಿಂಗ್ ವಿಚಾರದಲ್ಲಿ ಟ್ರೋಲ್ ಆಗುತ್ತಲೇ ಇದೆ. ಅದು ಈ ಬಾರಿ ಕೂಡ ಕ್ಯಾಚ್ ಡ್ರಾಪ್ ಮಾಡುವ ಮೂಲಕ ಮುಂದುವರೆದಿದೆ. ಕ್ರಿಕೆಟ್ ಇತಿಹಾಸದಲ್ಲೇ ಅತಿ ಹೆಚ್ಚು ವೈರಲ್ ಆದ ಸಯೀದ್ ಅಜ್ಮಲ್ ಹಾಗೂ ಶೋಯೆಬ್ ಮಲೀಕ್ ಅವರ ಐಕಾನಿಕ್ ಕ್ಯಾಚ್ ಡ್ರಾಪ್ ರೀತಿಯಲ್ಲೇ ಈ ಬಾರಿ ಕೂಡ ಮರುಕಳಿಸಿದೆ.
ಏಷ್ಯಾಕಪ್ ಫೈನಲ್ ಪಂದ್ಯದ ಡೆತ್ ಓವರ್ನಲ್ಲಿ ಭನುಕಾ ರಾಜಪಕ್ಷ ಚೆಂಡನ್ನು ಸಿಕ್ಸ್ಗೆಂದು ಅಟ್ಟಿದರು. ಬಾಲ್ ಅವರು ಅಂದುಕೊಂಡಷ್ಟು ದೂರ ಸಾಗದೆ ಕ್ಯಾಚ್ಗೆ ಅವಕಾಶವಿತ್ತು. ಆದರೆ, ಶದಾಬ್ ಖಾನ್ ಮತ್ತು ಅಸಿಫ್ ಅಲಿ ನಡುವೆ ಕ್ಯಾಚ್ ಕಾಲ್ ಸರಿಯಾಗಿ ನಡೆಯದ ಕಾರಣ ಇಬ್ಬರೂ ಚೆಂಡನ್ನು ಹಿಡಿಯಲು ಓಡಿ ಬಂದಿದ್ದಾರೆ. ಈ ಸಂದರ್ಭ ಇಬ್ಬರೂ ಎದುರೆದುರಾಗಿ ಕ್ಯಾಚ್ ಕೈಚೆಲ್ಲಿದ್ದಾರೆ. ಇಲ್ಲಿದೆ ನೋಡಿ ವೈರಲ್ ವಿಡಿಯೋ.
Incase someone asks what the best moment of #AsiaCup2022Final was: pic.twitter.com/mEJKZVsLq5
— Amshyra??? (@amshyraa) September 11, 2022
ರಾಜಪಕ್ಷ ಅವರ ಸ್ಫೋಟಕ ಬ್ಯಾಟಿಂಗ್ ಹಾಗೂ ಹಸರಂಗ ಅವರ 36 ರನ್‌ಗಳ ನೆರವಿನಿಂದ ಶ್ರೀಲಂಕಾ ತಂಡ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 170 ರನ್ ಸೇರಿಸಿತು. 171 ರನ್‌ಗಳ ಗುರಿ ಬೆನ್ನತ್ತಿದ ಪಾಕಿಸ್ತಾನ ತಂಡ ಬೇಗನೆ ನಾಯಕ 2 ವಿಕೆಟ್ ಕಳೆದುಕೊಂಡಿತು. ಈ ವೇಳೆ ಮೊಹಮ್ಮದ್ ರಿಜ್ವಾನ್ (55) ಮತ್ತು ಇಫ್ತಿಕರ್ ಅಹ್ಮದ್ (32) ಕುಸಿದಿದ್ದ ತಂಡಕ್ಕೆ ಆಸರೆಯಾದರು. ಇವರಿಬ್ಬರು 71 ರನ್‌ಗಳ ಜೊತೆಯಾಟ ಆಡಿದರು. ನಂತರ ಬಂದ ಪಾಕ್ ಬ್ಯಾಟರ್ಗಳೆಲ್ಲ ಬಂದಷ್ಟೆ ವೇಗದಲ್ಲಿ ಪೆವಿಲಿಯನ್ ಸೇರಿಕೊಂಡರು. ಪಾಕಿಸ್ತಾನ 20 ಓವರ್ನಲ್ಲಿಯೇ 147 ರನ್ಗೆ ಆಲೌಟ್ ಆಗಿ ಸೋಲುಂಡಿತು.
Published On - 9:37 am, Mon, 12 September 22