SL vs PAK: ಬಲವಂತವಾಗಿ ಅಂಪೈರ್ ಬಳಿ ಔಟ್ ನೀಡಲು ಹೇಳಿದ ಪಾಕಿಸ್ತಾನ ಕ್ರಿಕೆಟಿಗ: ವಿಡಿಯೋ ವೈರಲ್
Asia Cup Final, Shadab Khan Umpire: ಏಷ್ಯಾಕಪ್ 2022 ಫೈನಲ್ನ ಶ್ರೀಲಂಕಾ ಹಾಗೂ ಪಾಕಿಸ್ತಾನ ನಡುವಣ ಪಂದ್ಯದಲ್ಲಿ ನಡೆದ ವಿಶೇಷ ಘಟನೆಯ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ (Video Viral) ಆಗುತ್ತಿದೆ.
ಹದಿನೈದನೆ ಆವೃತ್ತಿಯ ಏಷ್ಯಾಕಪ್ (Asia Cup 2022) ಟೂರ್ನಿಗೆ ತೆರೆಬಿದ್ದಿದ್ದು ಶ್ರೀಲಂಕಾ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ. ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಪಾಕಿಸ್ತಾನ ವಿರುದ್ಧದ ಫೈನಲ್ ಪಂದ್ಯದಲ್ಲಿ ಲಂಕಾ (Sri Lanka vs Pakistan) 23 ರನ್‌ಗಳ ಗೆಲುವು ಸಾಧಿಸಿತು. ತೀವ್ರ ಆರ್ಥಿಕ ಬಿಕ್ಕಟ್ಟು, ರಾಜಕೀಯ ಪ್ರಕ್ಷುಬ್ದತೆಯ ನಡುವೆಯೂ ಏಷ್ಯಾಕಪ್ನಲ್ಲಿ ಬ್ಯಾಟಿಂಗ್ – ಬೌಲಿಂಗ್ ಎರಡೂ ವಿಭಾಗಗಳಲ್ಲಿ ಅದ್ಭುತ ಪ್ರದರ್ಶನ ತೋರಿದ ಸಿಂಹಳೀಯರು 2014ರ ನಂತರ ಪ್ರತಿಷ್ಟಿತ ಪ್ರಶಸ್ತಿ ಬಾಜಿಕೊಂಡಿತು. ಈ ಮೂಲಕ ಒಟ್ಟು 6ನೇ ಬಾರಿಗೆ ಏಷ್ಯಾಕಪ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. 10 ವರ್ಷಗಳ ನಂತರ ಪ್ರಶಸ್ತಿ ಗೆಲ್ಲುವ ಕನಸು ಕಾಣುತ್ತಿದ್ದ ಪಾಕ್ ಬಯಕೆ ಈ ಬಾರಿ ಕೂಡ ಈಡೇರಲಿಲ್ಲ. ಇದರ ನಡುವೆ ಪಂದ್ಯದ ನಡುವೆ ನಡೆದ ವಿಶೇಷ ಘಟನೆಯ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ (Video Viral) ಆಗುತ್ತಿದೆ.
ಫೈನಲ್ ಕಾದಾಟದಲ್ಲಿ ಟಾಸ್ ಗೆದ್ದ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಮ್ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಬ್ಯಾಟಿಂಗ್ಗೆ ಇಳಿದ ಶ್ರೀಲಂಕಾ ಪವರ್ ಪ್ಲೇನಲ್ಲೇ ಮೂರು ವಿಕೆಟ್ ಕಳೆದುಕೊಂಡಿತು. ಇನ್ನಿಂಗ್ಸ್‌ನ ಮೊದಲ ಓವರ್ನಲ್ಲಿ ಕುಸಲ್ ಮೆಂಡಿಸ್ (0) ಔಟಾದರೆ, ಪಥುಮ್ ನಿಸ್ಸಂಕಾ (8) ಹಾಗೂ ಗುಣತಿಲಕ (1) ಅವರನ್ನು ಹ್ಯಾರಿಸ್ ರೌಫ್ ಪೆವಿಲಿಯನ್ಗೆ ಅಟ್ಟಿದರು. ರೌಫ್ ಅವರ ತಮ್ಮ ಎರಡನೇ ಓವರ್ನಲ್ಲಿ ಮತ್ತೊಂದು ವಿಕೆಟ್ ಪಡೆಯುವ ಅವಕಾಶ ಕೂಡ ಇತ್ತು. ಭನುಕಾ ರಾಜಪಕ್ಷ ಪ್ಯಾಡ್ಗೆ ಚೆಂಡು ತಾಗಿದ ಪರಿಣಾಮ ಪಾಕ್ ಆಟಗಾರರು ಔಟೆಂದು ಮನವಿ ಮಾಡಿದರು. ಆದರೆ, ಅಂಪೈರ್ ನಾಟೌಟ್ ಎಂದು ಘೋಷಿಸಿದರು.
ಈ ಸಂದರ್ಭ ಪಾಕ್ ನಾಯಕ ಬಾಬರ್ ರಿವ್ಯೂ ತೆಗೆದುಕೊಂಡರು. ಥರ್ಡ್ ಅಂಪೈರ್ ಕೂಡ ಪರೀಕ್ಷಿಸಿ ನಾಟೌಟ್ ಎಂದರು. ಇತ್ತ ಫೀಲ್ಡ್ ಅಂಪೈರ್ ಥರ್ಡ್ ಅಂಪೈರ್ ನಿರ್ಧಾರವನ್ನು ಪ್ರಕಟಿಸಿದ ವೇಳೆ ಪಾಕಿಸ್ತಾನ ಆಟಗಾರ ಶದಾಬ್ ಖಾನ್ ಅಂಪೈರ್ ಕೈಯನ್ನು ಬಲವಂತವಾಗಿ ಎತ್ತಿ ಔಟ್ ಕೊಡಿ ಎಂದು ಹೇಳಿದ್ದಾರೆ. ಇದೊಂದು ತಮಾಷೆಯ ಕ್ಷಣವಾಗಿದ್ದು, ಇದರ ವಿಡಿಯೋ ಮಾತ್ರ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
Shadab asking the umpire to raise his finger even when it’s not out.? pic.twitter.com/6nl44KfjqS
— Humna. (@Humnayyy) September 11, 2022
ನಂತರ ಪಾಕಿಸ್ತಾನ ಬೌಲರ್ಗಳನ್ನು ಸುಲಭವಾಗಿ ದಂಡಿಸಿದ ರಾಜಪಕ್ಷ ಕೇವಲ 45 ಎಸೆತಗಳಲ್ಲಿ 6 ಫೋರ್, 3 ಸಿಕ್ಸರ್ ಬಾರಿಸಿ ಅಜೇಯ 71 ರನ್ ಚಚ್ಚಿದರು. ಇವರಿಗೆ ಉತ್ತಮ ಸಾಥ್ ನೀಡಿದ ಹಸರಂಗ 21 ಎಸೆತಗಳಲ್ಲಿ 36 ರನ್ ಬಾರಿಸಿದರು. ಶ್ರೀಲಂಕಾ ತಂಡ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 170 ರನ್ ಸೇರಿಸಿತು. ಪಾಕ್ ಪರ ಹ್ಯಾರಿಸ್ ರೌಫ್ 3 ವಿಕೆಟ್, ನಸೀಂ, ಶಬ್ದಾದ್ ಖಾನ್ ಹಾಗೂ ಅಹ್ಮದ್ ತಲಾ 1 ವಿಕೆಟ್ ಪಡೆದರು.
171 ರನ್‌ಗಳ ಗುರಿ ಬೆನ್ನತ್ತಿದ ಪಾಕಿಸ್ತಾನ ತಂಡ ಬೇಗನೆ ನಾಯಕ ಬಾಬರ್ ಅಜಮ್ (5) ಮತ್ತು ಫಖರ್ ಜಮಾನ್ (0) ಅವರ ವಿಕೆಟ್ ಕಳೆದುಕೊಂಡಿತು. ಈ ವೇಳೆ ಮೊಹಮ್ಮದ್ ರಿಜ್ವಾನ್ ಮತ್ತು ಇಫ್ತಿಕರ್ ಅಹ್ಮದ್ ಕುಸಿದಿದ್ದ ತಂಡಕ್ಕೆ ಆಸರೆಯಾದರು. ಇವರಿಬ್ಬರು 71 ರನ್‌ಗಳ ಜೊತೆಯಾಟ ಆಡಿದರು. ಆದರೆ 32 ರನ್ ಗಳಿಸಿದ್ದಾಗ ಇಫ್ತಿಕರ್ ಮೊಹಮ್ಮದ್ ನವಾಜ್ 6 ರನ್ ಹಾಗೂ ಮೊಹಮ್ಮದ್ ರಿಜ್ವಾನ್ 55 ರನ್ ಗಳಿಸಿ ನಿರ್ಗಮಿಸಿದರು.
ನಂತರ ಬಂದ ಪಾಕ್ ಬ್ಯಾಟರ್ಗಳೆಲ್ಲ ಬಂದಷ್ಟೆ ವೇಗದಲ್ಲಿ ಪೆವಿಲಿಯನ್ ಸೇರಿಕೊಂಡರು. ಇನ್ನಿಂಗ್ಸ್‌ನ ಕೊನೆಯ ಎಸೆತದಲ್ಲಿ ಹ್ಯಾರಿಸ್ ರೌಫ್ ಕ್ಲೀನ್ ಬೌಲ್ಡ್ ಆಗುವುದರೊಂದಿಗೆ ಪಾಕಿಸ್ತಾನ 147 ರನ್ಗೆ ಆಲೌಟ್ ಆಯಿತು. ಲಂಕಾ ಪರ ಪ್ರಮೋದ್ 4 ವಿಕೆಟ್ ಪಡೆದರೆ, ಹಸರಂಗ 3, ಕರುಣರತ್ನೆ 2 ಹಾಗೂ ತಿಕ್ಷಣ್ 1 ವಿಕೆಟ್ ತಮ್ಮದಾಗಿಸಿದರು. ಹಸರಂಗ ಸರಣಿಶ್ರೇಷ್ಠ ಮತ್ತು ರಾಜಪಕ್ಷ ಪಂದ್ಯಶ್ರೇಷ್ಠ ಪ್ರಶಸ್ತಿ ಬಾಚಿಕೊಂಡರು.
Published On - 8:15 am, Mon, 12 September 22