Bharat Army: ಭಾರತದ ಜೆರ್ಸಿ ತೊಡುವಂತಿಲ್ಲ: ಪಾಕ್, ಲಂಕಾ ಜೆರ್ಸಿ ಧರಿಸಿ ಬಂದ್ರೆ ಮಾತ್ರ ಫೈನಲ್ ಪಂದ್ಯಕ್ಕೆ ಪ್ರವೇಶ
Asia Cup Final: ಈ ಬಗ್ಗೆ ಟೀಮ್ ಇಂಡಿಯಾದ ಅಧಿಕೃತ ಅಭಿಮಾನಿ ಬಳಗ ಭಾರತ್ ಆರ್ಮಿ ತನ್ನ ಟ್ವಿಟರ್ ಖಾತೆಯಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದೆ. ಭಾರತದ ಜೆರ್ಸಿ ತೊಟ್ಟು ಪಾಕಿಸ್ತಾನ-ಶ್ರೀಲಂಕಾ ಫೈನಲ್ ಪಂದ್ಯ ನೋಡಲು ನಮಗೆ ಅವಕಾಶ ನೀಡುತ್ತಿಲ್ಲ ಎಂದು ಹೇಳಿದ್ದಾರೆ.

ಭಾನುವಾರ ಶ್ರೀಲಂಕಾ ಹಾಗೂ ಪಾಕಿಸ್ತಾನ (Sri Lanka vs Pakistan) ನಡುವೆ ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಏಷ್ಯಾಕಪ್ 2022 ಫೈನಲ್ (Asia Cup 2022 Final) ಪಂದ್ಯ ನಡೆದಿದ್ದು, ಇದರಲ್ಲಿ ಲಂಕಾನ್ನರು 23 ರನ್‌ಗಳ ಭರ್ಜರಿ ಗೆಲುವು ಸಾಧಿಸಿ ಪ್ರಶಸ್ತಿಗೆ ಮುತ್ತಿಕ್ಕಿದ್ದಾರೆ. ಪಂದ್ಯ ಆರಂಭಕ್ಕೂ ಮುನ್ನ ಈ ರೋಚಕ ಕಾದಾಟ ವೀಕ್ಷಿಸಲು ದುಬೈ ಕ್ರೀಡಾಂಗಣಕ್ಕೆ (Dubai Stadium) ಅನೇಕ ಅಭಿಮಾನಿಗಳು ಬಂದಿದ್ದರು. ಆದರೆ, ಭಾರತದ ಜೆರ್ಸಿ ತೊಟ್ಟು ಬಂದಿದ್ದ ಫ್ಯಾನ್ಸ್ಗೆ ಮಾತ್ರ ಭಾರೀ ನಿರಾಸೆಯಾಗಿದೆ. ಫೈನಲ್ ಪಂದ್ಯ ವೀಕ್ಷಿಸಲು ಭಾರತದ ಜೆರ್ಸಿ ಧರಿಸಿ ಬಂದಿದ್ದ ಫ್ಯಾನ್ಸ್ಗೆ ಶ್ರೀಲಂಕಾ ಅಥವಾ ಪಾಕಿಸ್ತಾನ ಜೆರ್ಸಿ ತೊಡುವಂತೆ ಅಲ್ಲಿನ ಪೊಲೀಸರು ತಾಕೀತು ಮಾಡಿದ್ದಾರೆ.
ಈ ಬಗ್ಗೆ ಟೀಮ್ ಇಂಡಿಯಾದ ಅಧಿಕೃತ ಅಭಿಮಾನಿ ಬಳಗ ಭಾರತ್ ಆರ್ಮಿ ತನ್ನ ಟ್ವಿಟರ್ ಖಾತೆಯಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದೆ. ಭಾರತದ ಜೆರ್ಸಿ ತೊಟ್ಟು ಪಾಕಿಸ್ತಾನ–ಶ್ರೀಲಂಕಾ ಫೈನಲ್ ಪಂದ್ಯ ನೋಡಲು ನಮಗೆ ಅವಕಾಶ ನೀಡುತ್ತಿಲ್ಲ. ಒಳ ಪ್ರವೇಶಿಸಬೇಕಾದರೆ ಶ್ರೀಲಂಕಾ ಜೆರ್ಸಿ ಅಥವಾ ಪಾಕಿಸ್ತಾನ ಜೆರ್ಸಿ ತೊಡಬೇಕೆಂದು ಆಗ್ರಹಿಸಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ದುಬೈ ಕ್ರೀಡಾಂಗಣದ ಹೊರಗಡೆ ನಡೆದ ಈ ಘಟನೆಗೆ ಸಾಕಷ್ಟು ವಿರೋಧಗಳು ವ್ಯಕ್ತವಾಗುತ್ತಿದೆ.
? SHOCKING TREATMENT as The Bharat Army and other Indian Cricket Fans told they can not enter the stadium wearing ‘India jerseys’! #BharatArmy #PAKvSL pic.twitter.com/5zORYZBcOy
— The Bharat Army (@thebharatarmy) September 11, 2022
ಈ ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಮ್ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಬ್ಯಾಟಿಂಗ್ಗೆ ಇಳಿದ ಶ್ರೀಲಂಕಾ ಪವರ್ ಪ್ಲೇನಲ್ಲೇ ಮೂರು ವಿಕೆಟ್ ಕಳೆದುಕೊಂಡಿತು. ಇನ್ನಿಂಗ್ಸ್ನ ಮೊದಲ ಓವರ್ನಲ್ಲಿ ಕುಸಲ್ ಮೆಂಡಿಸ್ (0) ಔಟಾದರೆ, ಪಥುಮ್ ನಿಸ್ಸಂಕಾ (8) ಹಾಗೂ ಗುಣತಿಲಕ (1) ಅವರನ್ನು ಹ್ಯಾರಿಸ್ ರೌಫ್ ಪೆವಿಲಿಯನ್ಗೆ ಅಟ್ಟಿದರು.
ನಂತರ ರಾಜಪಕ್ಷ ಕೇವಲ 45 ಎಸೆತಗಳಲ್ಲಿ 6 ಫೋರ್, 3 ಸಿಕ್ಸರ್ ಬಾರಿಸಿ ಅಜೇಯ 71 ರನ್ ಚಚ್ಚಿದರು. ಇವರಿಗೆ ಉತ್ತಮ ಸಾಥ್ ನೀಡಿದ ಹಸರಂಗ 21 ಎಸೆತಗಳಲ್ಲಿ 36 ರನ್ ಬಾರಿಸಿದರು. ಶ್ರೀಲಂಕಾ ತಂಡ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 170 ರನ್ ಸೇರಿಸಿತು. ಪಾಕ್ ಪರ ಹ್ಯಾರಿಸ್ ರೌಫ್ 3 ವಿಕೆಟ್, ನಸೀಂ, ಶಬ್ದಾದ್ ಖಾನ್ ಹಾಗೂ ಅಹ್ಮದ್ ತಲಾ 1 ವಿಕೆಟ್ ಪಡೆದರು.
171 ರನ್‌ಗಳ ಗುರಿ ಬೆನ್ನತ್ತಿದ ಪಾಕಿಸ್ತಾನ ತಂಡ ಬೇಗನೆ ನಾಯಕ 2 ವಿಕೆಟ್ ಕಳೆದುಕೊಂಡಿತು. ಈ ವೇಳೆ ಮೊಹಮ್ಮದ್ ರಿಜ್ವಾನ್ (55) ಮತ್ತು ಇಫ್ತಿಕರ್ ಅಹ್ಮದ್ (32) ಕುಸಿದಿದ್ದ ತಂಡಕ್ಕೆ ಆಸರೆಯಾದರು. ಇವರಿಬ್ಬರು 71 ರನ್‌ಗಳ ಜೊತೆಯಾಟ ಆಡಿದರು. ನಂತರ ಬಂದ ಪಾಕ್ ಬ್ಯಾಟರ್ಗಳೆಲ್ಲ ಬಂದಷ್ಟೆ ವೇಗದಲ್ಲಿ ಪೆವಿಲಿಯನ್ ಸೇರಿಕೊಂಡರು. ಪಾಕಿಸ್ತಾನ 20 ಓವರ್ನಲ್ಲಿಯೇ 147 ರನ್ಗೆ ಆಲೌಟ್ ಆಗಿ ಸೋಲುಂಡಿತು.
ಈ ಮೂಲಕ ಶ್ರೀಲಂಕಾ ಕ್ರಿಕೆಟ್ 23 ರನ್‌ಗಳ ಗೆಲುವು ಸಾಧಿಸಿತು. ತೀವ್ರ ಆರ್ಥಿಕ ಬಿಕ್ಕಟ್ಟು, ರಾಜಕೀಯ ಪ್ರಕ್ಷುಬ್ದತೆಯ ನಡುವೆಯೂ ಏಷ್ಯಾಕಪ್ನಲ್ಲಿ ಬ್ಯಾಟಿಂಗ್–ಬೌಲಿಂಗ್ ಎರಡೂ ವಿಭಾಗಗಳಲ್ಲಿ ಅದ್ಭುತ ಪ್ರದರ್ಶನ ತೋರಿದ ಸಿಂಹಳೀಯರು 2014ರ ನಂತರ ಪ್ರತಿಷ್ಟಿತ ಪ್ರಶಸ್ತಿ ಬಾಜಿಕೊಂಡಿತು. ಈ ಮೂಲಕ ಒಟ್ಟು 6ನೇ ಬಾರಿಗೆ ಏಷ್ಯಾಕಪ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. 10 ವರ್ಷಗಳ ನಂತರ ಪ್ರಶಸ್ತಿ ಗೆಲ್ಲುವ ಕನಸು ಕಾಣುತ್ತಿದ್ದ ಪಾಕ್ ಬಯಕೆ ಈ ಬಾರಿ ಕೂಡ ಈಡೇರಲಿಲ್ಲ.
Published On - 10:27 am, Mon, 12 September 22




