ಕೇವಲ 89 ರನ್​ಗೆ ವೆಸ್ಟ್ ಇಂಡೀಸ್ ಆಲೌಟ್

|

Updated on: Oct 16, 2024 | 7:39 AM

Sri Lanka vs West Indies: ವೆಸ್ಟ್ ಇಂಡೀಸ್ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯ ಎರಡನೇ ಪಂದ್ಯವನ್ನು ಶ್ರೀಲಂಕಾ ತಂಡ ಗೆದ್ದುಕೊಂಡಿದೆ. ಮೊದಲ ಮ್ಯಾಚ್​ನಲ್ಲಿ 5 ವಿಕೆಟ್​ಗಳ ಜಯ ಸಾಧಿಸಿದ್ದ ವಿಂಡೀಸ್ ಪಡೆಯನ್ನು 2ನೇ ಪಂದ್ಯದಲ್ಲಿ 73 ರನ್​ಗಳಿಂದ ಸೋಲಿಸುವಲ್ಲಿ ಶ್ರೀಲಂಕಾ ಯಶಸ್ವಿಯಾಗಿದೆ. ಇನ್ನು ಮೂರನೇ ಪಂದ್ಯವು ಅಕ್ಟೋಬರ್ 17 ರಂದು ನಡೆಯಲಿದೆ.

ಕೇವಲ 89 ರನ್​ಗೆ ವೆಸ್ಟ್ ಇಂಡೀಸ್ ಆಲೌಟ್
SL vs WI
Follow us on

ದಂಬುಲ್ಲಾದಲ್ಲಿ ನಡೆದ ಆತಿಥೇಯ ಶ್ರೀಲಂಕಾ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ವೆಸ್ ಇಂಡೀಸ್ ಹೀನಾಯ ಸೋಲನುಭವಿಸಿದೆ. ರಣ್​ಗಿರಿ ಇಂಟರ್ ನ್ಯಾಶನಲ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ತಂಡವು ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ಲಂಕಾ ತಂಡಕ್ಕೆ ಪಾತುಮ್ ನಿಸ್ಸಂಕಾ ಹಾಗೂ ಕುಸಾಲ್ ಮೆಂಡಿಸ್ ಉತ್ತಮ ಆರಂಭ ಒದಗಿಸಿದ್ದರು. ಮೊದಲ ವಿಕೆಟ್‌ಗೆ 77 ರನ್ ಪೇರಿಸಿದ ಬಳಿಕ ಮೆಂಡಿಸ್ (26) ಔಟಾದರು.

ಮತ್ತೊಂದೆಡೆ ಉತ್ತಮ ಬ್ಯಾಟಿಂಗ್ ಮುಂದುವರೆಸಿದ ಪಾತುಮ್ ನಿಸ್ಸಂಕಾ (54) ಅರ್ಧಶತಕ ಬಾರಿಸಿ ನಿರ್ಗಮಿಸಿದರು. ಇನ್ನು ಕುಸಾಲ್ ಪೆರೇರಾ 24 ರನ್ ಗಳಿಸಿದರೆ, ಕಮಿಂದು ಮೆಂಡಿಸ್ 19 ರನ್ ಬಾರಿಸಿದರು. ಈ ಮೂಲಕ ಶ್ರೀಲಂಕಾ ತಂಡವು 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 162 ರನ್ ಕಲೆಹಾಕಿತು.

163 ರನ್​ಗಳ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ವೆಸ್ಟ್ ಇಂಡೀಸ್ ತಂಡವು 38 ರನ್ ಗಳಿಸುವಷ್ಟರಲ್ಲಿ ಅಗ್ರ ಕ್ರಮಾಂಕದ ಐವರು ಬ್ಯಾಟರ್​ಗಳು ಪೆವಿಲಿಯನ್ ಗೆ ಹಿಂತಿರುಗಿದ್ದರು. ಈ ಆರಂಭಿಕ ಆಘಾತದಿಂದ ಪಾರಾಗುವ ಮುನ್ನವೇ ವೆಸ್ಟ್ ಇಂಡೀಸ್ ತಂಡವನ್ನು ಕೇವಲ 89 ರನ್​ಗಳಿಗೆ ಆಲೌಟ್ ಮಾಡುವಲ್ಲಿ ಲಂಕಾ ಬೌಲರ್‌ಗಳು ಯಶಸ್ವಿಯಾದರು.

ವೆಸ್ಟ್ ಇಂಡೀಸ್ ಪರ ನಾಯಕ ರೋವ್​ಮನ್ ಪೊವೆಲ್ 20 ರನ್ ಗಳಿಸಿದ್ದು ಗರಿಷ್ಠ ಸ್ಕೋರ್. ಇನ್ನು ಶ್ರೀಲಂಕಾ ಪರ ದುನಿತ್ ವೆಲ್ಲಲಾಗೆ ಓವರ್‌ಗಳಲ್ಲಿ ಕೇವಲ 9 ರನ್ ನೀಡಿ 3 ವಿಕೆಟ್ ಪಡೆದರೆ, ಮಹೀಶ್ ತೀಕ್ಷಣ, ಚರಿತ್ ಅಸಲಂಕಾ ಮತ್ತು ವನಿಂದು ಹಸರಂಗ ತಲಾ 2 ವಿಕೆಟ್ ಕಬಳಿಸಿ ಮಿಂಚಿದರು.

ಈ ಗೆಲುವಿನೊಂದಿಗೆ ಶ್ರೀಲಂಕಾ – ವೆಸ್ಟ್ ಇಂಡೀಸ್ ನಡುವಣ ಮೂರು ಪಂದ್ಯಗಳ ಟಿ20 ಸರಣಿಯು 1-1 ಅಂತರದಿಂದ ಸಮಬಲವಾಗಿದೆ. ಅಲ್ಲದೆ ಮೂರನೇ ಪಂದ್ಯವು ಫೈನಲ್ ಫೈಟ್ ಆಗಿ ಮಾರ್ಪಟ್ಟಿದೆ.

ಶ್ರೀಲಂಕಾ: 162/5 (20)

ವೆಸ್ಟ್ ಇಂಡೀಸ್: 89 (16.1)

ಶ್ರೀಲಂಕಾ ತಂಡಕ್ಕೆ 73 ರನ್​ಗಳ ಭರ್ಜರಿ ಜಯ

ಶ್ರೀಲಂಕಾ ಪ್ಲೇಯಿಂಗ್ 11: ಪಾತುಮ್ ನಿಸ್ಸಾಂಕ , ಕುಸಾಲ್ ಮೆಂಡಿಸ್ (ವಿಕೆಟ್ ಕೀಪರ್) , ಕುಸಾಲ್ ಪೆರೇರಾ , ಕಮಿಂದು ಮೆಂಡಿಸ್ , ಚರಿತ್ ಅಸಲಂಕ (ನಾಯಕ) , ಭಾನುಕ ರಾಜಪಕ್ಸೆ , ವನಿಂದು ಹಸರಂಗ , ದುನಿತ್ ವೆಲ್ಲಲಾಗೆ , ಮಹೀಶ್ ತೀಕ್ಷಣ , ಮತೀಶ ಪತಿರಾಣ , ನುವಾನ್ ತುಷಾರ.

ಇದನ್ನೂ ಓದಿ: IPL 2025: RCB ತಂಡದಿಂದ ಗ್ರೀನ್​ಗೆ ಗೇಟ್​ ಪಾಸ್..!

ವೆಸ್ಟ್ ಇಂಡೀಸ್ ಪ್ಲೇಯಿಂಗ್ 11: ಬ್ರಾಂಡನ್ ಕಿಂಗ್ , ಎವಿನ್ ಲೂಯಿಸ್, ಆಂಡ್ರೆ ಫ್ಲೆಚರ್ (ವಿಕೆಟ್ ಕೀಪರ್) , ರೋಸ್ಟನ್ ಚೇಸ್ , ಶೆರ್ಫೇನ್ ರುದರ್ಫೋರ್ಡ್ , ರೋವ್​ಮನ್ ಪೊವೆಲ್ (ನಾಯಕ) , ರೊಮಾರಿಯೋ ಶೆಫರ್ಡ್ , ಶಮರ್ ಸ್ಪ್ರಿಂಗರ್ , ಅಲ್ಝಾರಿ ಜೋಸೆಫ್ , ಗುಡಕೇಶ್ ಮೋಟಿ , ಶಮರ್ ಜೋಸೆಫ್.