Steffan Nero: ಕ್ರಿಕೆಟ್ ಲೋಕವೇ ಶಾಕ್: ಏಕದಿನ ಪಂದ್ಯದಲ್ಲಿ ತ್ರಿಶತಕ ಸಿಡಿಸಿದ ಆಸ್ಟ್ರೇಲಿಯಾ ಬ್ಯಾಟರ್ ಸ್ಟೀಫನ್ ನೀರೊ

| Updated By: Vinay Bhat

Updated on: Jun 17, 2022 | 9:35 AM

Blind Cricket, AUS vs NZ: ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ನಡುವೆ ನಡೆದ ಅಂಧರ ಏಕದಿನ ಕ್ರಿಕೆಟ್​ನ 40 ಓವರ್​ಗಳ ಪಂದ್ಯದಲ್ಲಿ ಆಸೀಸ್​ನ ಸ್ಟೀಫನ್ ನೀರೊ (Steffan Nero) ತ್ರಿಶತಕ ಸಿಡಿಸಿ ಕ್ರಿಕೆಟ್ ಲೋಕವನ್ನೇ ಬೆರಗುಗೊಳಿಸಿದ್ದಾರೆ.

Steffan Nero: ಕ್ರಿಕೆಟ್ ಲೋಕವೇ ಶಾಕ್: ಏಕದಿನ ಪಂದ್ಯದಲ್ಲಿ ತ್ರಿಶತಕ ಸಿಡಿಸಿದ ಆಸ್ಟ್ರೇಲಿಯಾ ಬ್ಯಾಟರ್ ಸ್ಟೀಫನ್ ನೀರೊ
Steffan Nero 300
Follow us on

ಕ್ರಿಕೆಟ್ ಲೋಕದಲ್ಲಿ ಅಚ್ಚರಿಗೊಳಿಸುವ ಸಾಧನೆಗಳು ನಡೆಯುತ್ತಲೇ ಇರುತ್ತದೆ. ಅದ್ಭುತ ಕ್ಯಾಚ್, ಒಬ್ಬನೇ ಬೌಲರ್ ಎಲ್ಲ ವಿಕೆಟ್ ಪಡೆದಿರುವುದು, ಆರು ಬಾಲ್​ಗೆ ಆರು ಸಿಕ್ಸ್, ಏಕದಿನ ಕ್ರಿಕೆಟ್​ನಲ್ಲಿ ದ್ವಿಶತಕ ಹೀಗೆ ಈರೀತಿಯ ಬೆರಗುಗೊಳಿಸುವ ಘಟನೆ ಕ್ರಿಕೆಟ್​ನಲ್ಲಿ ನಡೆಯುತ್ತಿರುತ್ತದೆ. ಆದರೆ, ಇದೇ ಮೊದಲ ಬಾರಿಗೆ ಶಾಕಿಂಗ್ ಎಂಬಂತೆ ಓರ್ವ ಬ್ಯಾಟರ್ ಏಕದಿನ ಕ್ರಿಕೆಟ್​ನಲ್ಲಿ ತ್ರಿಶತಕ ಸಿಡಿಸಿ ವಿಶ್ವ ದಾಖಲೆ ಬರೆದಿದ್ದಾರೆ. ಇದು ನಡೆದಿರುವುದು ಅಂಧರ ಏಕದಿನ ಕ್ರಿಕೆಟ್​ನಲ್ಲಿ (Blind Cricket). ಹೌದು, ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ (AUS vs NZ) ನಡುವೆ ನಡೆದ ದೃಷ್ಟಿ ಚೇತನರ ಕ್ರಿಕೆಟ್​ನ 40 ಓವರ್​ಗಳ ಪಂದ್ಯದಲ್ಲಿ ಆಸೀಸ್​ನ ಸ್ಟೀಫನ್ ನೀರೊ (Steffan Nero) ತ್ರಿಶತಕ ಸಿಡಿಸಿ ಕ್ರಿಕೆಟ್ ಲೋಕವನ್ನೇ ಬೆರಗುಗೊಳಿಸಿದ್ದಾರೆ. ಇದು ಅಂಧರ ಏಕದಿನ ಕ್ರಿಕೆಟ್​ ಇತಿಹಾಸದಲ್ಲಿ ಓರ್ವ ಬ್ಯಾಟರ್ ಗಳಿಸಿದ ಗರಿಷ್ಠ ಸ್ಕೋರ್ ಆಗಿದೆ. ಇದಕ್ಕೂ ಮುನ್ನ ಈ ದಾಖಲೆ ಪಾಕಿಸ್ತಾನದ ಮಸೂದ್‌ ಜಾನ್‌ ಅವರ ಹೆಸರಲ್ಲಿತ್ತು.

ಕೇವಲ 140 ಎಸೆತಗಳನ್ನು ಎದುರಿಸಿದ ಸ್ಟೀಫನ್ ನೀರೊ ಬರೋಬ್ಬರಿ 49 ಫೋರ್ ಮತ್ತು ಒಂದು ಸಿಕ್ಸರ್ ಸಿಡಿಸಿ 309 ರನ್ ಚಚ್ಚಿದ್ದಾರೆ. ಈ ಹಿಂದೆ 1998 ರಲ್ಲಿ ಪಾಕಿಸ್ತಾನದ ಮಸೂದ್‌ ಜಾನ್‌ 262 ರನ್ ಗಳಿಸಿ ಏಕದಿನ ಕ್ರಿಕೆಟ್‌ನಲ್ಲಿ ಗರಿಷ್ಠ ಸ್ಕೋರ್‌ ಮಾಡಿದ ವಿಶ್ವ ದಾಖಲೆ ಹೊಂದಿದ್ದರು. ಇದೀಗ ತ್ರಿಶತಕದೊಂದಿಗೆ ಸ್ಟೀಫನ್‌ ನೀರೊ ಇತಿಹಾಸದ ಪುಟ ಸೇರಿದ್ದಾರೆ. ನೀರೊ, ತಮ್ಮ ಈ ತ್ರಿಶತಕದ ಮೂಲಕ ಆಸ್ಟ್ರೇಲಿಯಾ ಪರ ಅಂತರರಾಷ್ಟ್ರೀಯ ಮಟ್ಟದಲ್ಲಿ ತ್ರಿಶತಕ ಬಾರಿಸಿದ ಕೆಲವೇ ಕೆಲ ಆಟಗಾರರ ವಿಶೇಷ ಪಟ್ಟಿಗೆ ಕೂಡ ಸೇರ್ಪಡೆ ಆಗಿದ್ದಾರೆ. ಮ್ಯಾಥ್ಯೂ ಹೇಡೆನ್‌, ಮೈಕಲ್‌ ಕ್ಲಾರ್ಕ್‌ ಮತ್ತು ಡೇವಿಡ್‌ ವಾರ್ನರ್‌ ಆಸ್ಟ್ರೇಲಿಯಾ ಪರ ಟೆಸ್ಟ್‌ ಕ್ರಿಕೆಟ್‌ನಲ್ಲಿ ತ್ರಿಶತಕ ಬಾರಿಸಿದ ಇತರೆ ಬ್ಯಾಟರ್​ಗಳಾಗಿದ್ದಾರೆ.

ಇದನ್ನೂ ಓದಿ
Ranji Trophy: ಪೂಜಾರ 2.0; ಬರೋಬ್ಬರಿ 54 ಎಸೆತಗಳ ನಂತರ ಖಾತೆ ತೆರೆದ ಐಪಿಎಲ್​ನ ಸ್ಟಾರ್ ಓಪನರ್..!
IND vs IRE: ಹಾರ್ದಿಕ್ ಭಾರತದ 9ನೇ ಟಿ20 ನಾಯಕ; 23 ವರ್ಷಗಳ ನಂತರ ಗುಜರಾತ್ ಆಟಗಾರನಿಗೆ ನಾಯಕತ್ವ!
IND vs SA: ನಾಲ್ಕನೇ ಟಿ20 ಪಂದ್ಯಕ್ಕೆ ಹೊಸ ಪ್ರಯೋಗ ಮಾಡಲು ಮುಂದಾದ ಪಂತ್-ದ್ರಾವಿಡ್
IND vs IRE Full Schedule, Squad: ಟಿ20 ಸರಣಿಯ ವೇಳಾಪಟ್ಟಿ, ತಂಡ, ಪಂದ್ಯದ ಬಗೆಗಿನ ಸಂಪೂರ್ಣ ಮಾಹಿತಿ ಹೀಗಿದೆ

 

ಪಂದ್ಯ ಮುಗಿದ ಬಳಿಕ ಮಾತನಾಡಿದ ಸ್ಟೀಫನ್, “ಸಾಕಷ್ಟು ಸಮಯದ ಬಳಿಕ ನಾನು ಏಕದಿನ ಕ್ರಿಕೆಟ್ ಪಂದ್ಯವನ್ನು ಆಡಿದೆ. ಈ ಪಿಚ್​ನಲ್ಲಿ ಬ್ಯಾಟ್‌ ಮಾಡುವುದು ತುಂಬಾ ಕಷ್ಟವಾಯಿತು. ಸಂಪೂರ್ಣವಾಗಿ ಕಣ್ಣು ಕಾಣುವ ಆಟಗಾರರಿಗೂ ಅಷ್ಟು ಓವರ್‌ಗಳು ಬ್ಯಾಟ್‌ ಮಾಡುವುದು ಕಷ್ಟ. ಅಂಧರಿಗೆ ಮತ್ತಷ್ಟು ಏಕಾಗ್ರತೆಯಿಂದ ಬ್ಯಾಟ್‌ಮಾಡುವ ಅನಿವಾರ್ಯತೆ ಇರುತ್ತದೆ. ಜೊತೆಗೆ ನನ್ನ ಸಹ ಆಟಗಾರರಿಂದ ಉತ್ತಮ ಬೆಂಬಲ ಲಭ್ಯವಾಯಿತು. ಇದು ತ್ರಿಶತಕ ಗಳಿಸಲು ಮುಖ್ಯ ಕಾರಣ. ನನ್ನ ಜೊತೆ ಆಡಲು ಬಂದ ಬ್ಯಾಟರ್‌ಗಳೆಲ್ಲಾ ಸಾಧ್ಯವಾದಷ್ಟು ಬ್ಯಾಟಿಂಗ್ ಮುಂದುವರಿಸು ಎಂದಷ್ಟೇ ಹೇಳಿದರು. ಅದನ್ನೇ ಮಾಡಿದೆ,” ಎಂಬುದು ನೀರೊ ಮಾತು.

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ಅಂಧರ ತಂಡ ನಿಗದಿತ 40 ಓವರ್​​ಗೆ 2 ವಿಕೆಟ್​ನಷ್ಟಕ್ಕೆ ಬರೋಬ್ಬರಿ 542 ರನ್‌ ಸಿಡಿಸಿತು. ನೀರೊ 309 ರನ್ ಬಾರಿಸಿದರೆ, ಮಿಚೆಲ್ ಜೆನ್ನಿಸ್ 58 ಮತ್ತು ಬ್ರೆವೆರ್ ಮೈಗ್ 26 ಎಸೆತಗಳಲ್ಲಿ 50 ರನ್ ಬಾರಿಸಿದರು. ಟಾರ್ಗೆಟ್ ಬೆನ್ನಟ್ಟಿದ ನ್ಯೂಜಿಲೆಂಡ್ ತಂಡ ಕೇವಲ 272 ರನ್​ಗೆ ಸರ್ವಪತನ ಕಂಡಿತು. ಆಸ್ಟ್ರೇಲಿಯಾ ತಂಡ ದಾಖಲೆಯ 269 ರನ್​ಗಳ ಅಮೋಘ ಜಯ ಸಾಧಿಸಿತು. ಆಸೀಸ್-ಕಿವೀಸ್ ಒಟ್ಟು ಎಂಟು ಏಕದಿನ ಪಂದ್ಯವನ್ನು ಆಡುತ್ತಿದೆ. ಇದರಲ್ಲಿ ಆಡಿದ ಎಲ್ಲ ಆರು ಪಂದ್ಯವನ್ನು ಆಸ್ಟ್ರೇಲಿಯಾ ಅಂಧರ ತಂಡ ಗೆದ್ದು ಬೀಗಿದೆ.

ಕ್ರಿಕೆಟ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.