IND vs SA: ನಾಲ್ಕನೇ ಟಿ20 ಪಂದ್ಯಕ್ಕೆ ಹೊಸ ಪ್ರಯೋಗ ಮಾಡಲು ಮುಂದಾದ ಪಂತ್-ದ್ರಾವಿಡ್
IND Predicted Playing XI vs SA, 4th T20I: ಇಂದು ರಾಜ್ಕೋಟ್ನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಭಾರತ- ದಕ್ಷಿಣ ಆಫ್ರಿಕಾ ನಡುವೆ ನಾಲ್ಕನೇ ಟಿ20 ಪಂದ್ಯ ನಡೆಯಲಿದೆ. ಹರಿಣಗಳು ಈಗಾಗಲೇ ಐದು ಪಂದ್ಯಗಳ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿದ್ದು, ಉಳಿದಿರುವ ಎರಡರಲ್ಲಿ ಒಂದು ಪಂದ್ಯ ಗೆದ್ದರೆ ಸರಣಿ ವಶಪಡಿಸಿಕೊಳ್ಳಲಿದೆ.
ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಎರಡು ಟಿ20 ಪಂದ್ಯಗಳನ್ನು ಸೋತು ಮೂರನೇ ಕದನದಲ್ಲಿ ಗೆಲುವಿನ ಲಯಕ್ಕೆ ಮರಳಿರುವ ಭಾರತ ತಂಡ ಇದೀಗ ನಾಲ್ಕನೇ ಪಂದ್ಯಕ್ಕೆ ಸಜ್ಜಾಗಿದೆ. ಇಂದು ರಾಜ್ಕೋಟ್ನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಭಾರತ- ದಕ್ಷಿಣ ಆಫ್ರಿಕಾ (India vs South Africa) ನಡುವೆ ನಾಲ್ಕನೇ ಟಿ20 ಪಂದ್ಯ ನಡೆಯಲಿದೆ. ಹರಿಣಗಳು ಈಗಾಗಲೇ ಐದು ಪಂದ್ಯಗಳ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿದ್ದು, ಉಳಿದಿರುವ ಎರಡರಲ್ಲಿ ಒಂದು ಪಂದ್ಯ ಗೆದ್ದರೆ ಸರಣಿ ವಶಪಡಿಸಿಕೊಳ್ಳಲಿದೆ. ಆದರೆ, ರಿಷಭ್ ಪಂತ್ (Rishabh Pant) ಪಡೆಗೆ ಬಾಕಿ ಇರುವ ಎರಡೂ ಪಂದ್ಯವನ್ನು ಗೆಲ್ಲಲೇ ಬೇಕು. ಮೂರನೇ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ ಅಂದುಕೊಂಡ ರೀತಿಯೇ ಎಲ್ಲ ಸಾಗಿತು. ಇದೀಗ ನಾಲ್ಕನೇ ಪಂದ್ಯಕ್ಕೆ ಕೋಚ್ ಹಾಗೂ ನಾಯಕ ಮಾಸ್ಟರ್ ಪ್ಲಾನ್ ರೆಡಿ ಮಾಡಿಕೊಂಡಿದ್ದಾರೆ. ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ತೆಂಬಾ ಬವುಮಾ (Temba Bavuma) ಪಡೆಗೆ ತಿರುಗೇಟು ನೀಡಲು ಮುಂದಾಗಿದ್ದಾರೆ.
ಸತತ 2 ಸೋಲುಗಳ ಹೊರತಾಗಿಯೂ 3ನೇ ಪಂದ್ಯದಲ್ಲಿ ಬದಲಾವಣೆ ಇಲ್ಲದ ತಂಡವನ್ನು ಕಣಕ್ಕಿಳಿಸಿ ಯಶಸ್ಸು ಕಂಡ ಭಾರತ, ಈ ಬಾರಿ ಒಂದು ಬದಲಾವಣೆ ಮಾಡುವ ಸಾಧ್ಯತೆ ಇದೆ. ಆಡಿದ 3 ಪಂದ್ಯಗಳಲ್ಲೂ ವಿಕೆಟ್ ಖಾತೆ ತೆರೆಯಲು ವಿಫಲರಾಗಿರುವ ವೇಗಿ ಆವೇಶ್ ಖಾನ್ ಬದಲಿಗೆ ಅರ್ಷದೀಪ್ ಸಿಂಗ್ ಅವಕಾಶ ಗಿಟ್ಟಿಸಿಕೊಳ್ಳಬಹುದು. ಡೆತ್ ಓವರ್‌ನಲ್ಲಿ ತೀಕ್ಷ್ಣ ಯಾರ್ಕರ್‌ಗಳ ಮೂಲಕ ಮಿಂಚಿರುವ ಅರ್ಷ್‌ದೀಪ್ ರನ್‌ನಿಯಂತ್ರಣದಲ್ಲಿಯೂ ಗಮನಸೆಳೆದಿದ್ದಾರೆ. ಅಲ್ಲದೆ 16 ಓವರ್ ಬಳಿಕ ಅಪಾಯಕಾರಿ ಆಗಿರುವ ಆಫ್ರಿಕಾ ಬ್ಯಾಟರ್ಗಳನ್ನು ಕಟ್ಟಿಹಾಕಲು ಭಾರತ ಬಳಿ ಇರುವುದು ಇದೊಂದೆ ಅಸ್ತ್ರವಾಗಿದೆ.
IND vs IRE Full Schedule, Squad: ಟಿ20 ಸರಣಿಯ ವೇಳಾಪಟ್ಟಿ, ತಂಡ, ಪಂದ್ಯದ ಬಗೆಗಿನ ಸಂಪೂರ್ಣ ಮಾಹಿತಿ ಹೀಗಿದೆ
ಇದರ ನಡುವೆ ನಾಯಕನ ಫಾರ್ಮ್ ದೊಡ್ಡ ಚಿಂತೆ ಮಾಡಿದೆ. ಮೂರನೇ ಪಂದ್ಯದಲ್ಲಿ ಗೆಲುವಿನ ಲಯ ಕಂಡುಕೊಂಡರೂ, ಭಾರತಕ್ಕೆ ರಿಷಭ್ ಪಂತ್ ಫಾರ್ಮ್ ತಲೆನೋವು ಆಗಿಯೇ ಉಳಿದುಕೊಂಡಿವೆ. ಮೊದಲ 3 ಪಂದ್ಯಗಳಲ್ಲಿ ಅವರು 29, 5, 6 ರನ್ ಗಳಿಸಿದ್ದು, ಶೀಘ್ರ ಬ್ಯಾಟಿಂಗ್ ಲಯಕ್ಕೆ ಮರಳಬೇಕಾದ ಒತ್ತಡ ಎದುರಿಸುತ್ತಿದ್ದಾರೆ. ಅದರಲ್ಲೂ ಇನಿಂಗ್ಸ್‌ನ ಕೊನೆಯ ಐದು ಓವರ್‌ಗಳಲ್ಲಿ ಹೆಚ್ಚು ರನ್ ಗಳಿಸುವ ಅಗತ್ಯವಿದೆ.
ಉಳಿದಂತೆ ಆರಂಭಿಕರಾದ ರುತುರಾಜ್ ಗಾಯಕ್ವಾಡ್ ಮತ್ತು ಇಶಾನ್ ಕಿಶನ್ ಕಳೆದ ಪಂದ್ಯದಲ್ಲಿ ತೋರಿದ ನಿರ್ವಹಣೆ ಭಾರತದ ಬ್ಯಾಟಿಂಗ್ ವಿಭಾಗಕ್ಕೆ ಶಕ್ತಿ ತುಂಬಿದೆ. ಮಧ್ಯಮ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್, ರಿಷಭ್ ಪಂತ್, ಹಾರ್ದಿಕ್, ಕಾರ್ತಿಕ್ ಇನ್ನಷ್ಟು ರನ್ ಗಳಿಸಬೇಕಾಗಿದೆ. ಚಹಲ್ ಮತ್ತು ಅಕ್ಷರ್ ಪಟೇಲ್ ಕಳೆದ ಪಂದ್ಯದಲ್ಲಿ ಸುಧಾರಿತ ಬೌಲಿಂಗ್ ಪ್ರದರ್ಶಿಸಿದ್ದರು. ಇತ್ತ ಆಫ್ರಿಕಾ ಬೌಲಿಂಗ್ ಪಡೆಯೂ ಉತ್ತಮವಾಗಿವೆ. ಕಗಿಸೊ ರಬಾಡ, ತಬ್ರೇಜ್ ಶಂಸಿ, ಕೇಶವ ಮಹಾರಾಜ್ ಮತ್ತು ಎನ್ರಿಚ್ ನಾಕಿಯಾ ಅವರು ಉತ್ತಮ ಲಯದಲ್ಲಿದ್ದಾರೆ. ಹೆನ್ರಿಚ್ ಕ್ಲಾಸೆನ್, ಡೇವಿಡ್ ಮಿಲ್ಲರ್, ರಸಿ ವ್ಯಾನ್ ಡರ್ ಡಸೆಬ್ಯಾಟಿಂಗ್ ವಿಭಾಗದ ಶಕ್ತಿಯಾಗಿದ್ದಾರೆ.
ರಾಜ್‌ಕೋಟ್ ಪಿಚ್‌ನಲ್ಲಿ ಸಾಮಾನ್ಯವಾಗಿ ರನ್‌ಪ್ರವಾಹವೇ ಹರಿಯುತ್ತದೆ. 2013ರಲ್ಲಿ ಇಲ್ಲಿ ಆಡಿದ ಮೊದಲ ಟಿ20ಯಲ್ಲಿ ಭಾರತ 202 ರನ್ ಚೇಸ್ ಮಾಡಿ ಗೆದ್ದಿತ್ತು. ದೇಶದ ಪಶ್ಚಿಮ ಭಾಗದಲ್ಲಿರುವ ಈ ನಗರದಲ್ಲಿ ಸ್ವಲ್ಪ ಚಳಿಯ ವಾತಾವರಣವಿದ್ದು, ಇಬ್ಬನಿಯೂ ಕಾಡಬಹುದು. ವಾತಾವರಣದಲ್ಲಿ ತೇವಾಂಶ ತುಸು ಹೆಚ್ಚಿರುವ ಕಾರಣ ಟಾಸ್ ಗೆದ್ದವರು ತೆಗೆದುಕೊಳ್ಳುವ ನಿರ್ಣಯವೂ ಮುಖ್ಯವಾಗಲಿದೆ. ಭಾರತ ತಂಡ ರಾಜ್‌ಕೋಟ್‌ನಲ್ಲಿ ಇದುವರೆಗೆ 3 ಟಿ20 ಪಂದ್ಯ ಆಡಿದ್ದು, 2ರಲ್ಲಿ ಗೆದ್ದು 1ರಲ್ಲಿ ಸೋತಿದೆ.
ಭಾರತ ಸಂಭಾವ್ಯ ಪ್ಲೇಯಿಂಗ್ XI: ರಿಷಭ್ ಪಂತ್ (ನಾಯಕ-ವಿಕೆಟ್‌ಕೀಪರ್), ರುತುರಾಜ್ ಗಾಯಕ್ವಾಡ್ , ಇಶಾನ್ ಕಿಶನ್, ಶ್ರೇಯಸ್ ಅಯ್ಯರ್, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್, ಅಕ್ಷರ್ ಪಟೇಲ್, ಹರ್ಷಲ್ ಪಟೇಲ್, ಭುವನೇಶ್ವರ್ ಕುಮಾರ್, ಯುಜ್ವೇಂದ್ರ ಚಹಲ್, ಆರ್ಷದೀಪ್ ಸಿಂಗ್.
ಕ್ರಿಕೆಟ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.