ಸ್ಟೀವ್ ಸ್ಮಿತ್ ಸ್ಟನ್ನಿಂಗ್ ಕ್ಯಾಚ್ಗೆ ಕೆಎಲ್ ರಾಹುಲ್ ಇನಿಂಗ್ಸ್ ಅಂತ್ಯ
Australia vs India, 3rd Test: ಬ್ರಿಸ್ಬೇನ್ನ ಗಾಬಾ ಮೈದಾನದಲ್ಲಿ ನಡೆಯುತ್ತಿರುವ ಟೀಮ್ ಇಂಡಿಯಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ಪ್ರಥಮ ಇನಿಂಗ್ಸ್ನಲ್ಲಿ 445 ರನ್ ಕಲೆಹಾಕಿದೆ. ಇದಕ್ಕುತ್ತರವಾಗಿ ಟೀಮ್ ಇಂಡಿಯಾ ಮೊದಲ ಇನಿಂಗ್ಸ್ ಆಡುತ್ತಿದೆ.
ಬ್ರಿಸ್ಬೇನ್ನಲ್ಲಿ ನಡೆಯುತ್ತಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಮೂರನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನದಾಟದ ಆರಂಭದಲ್ಲೇ ಸ್ಟೀವ್ ಸ್ಮಿತ್ ಕೆಎಲ್ ರಾಹುಲ್ ಅವರ ಸುಲಭ ಕ್ಯಾಚ್ ಅನ್ನು ಕೈಚೆಲ್ಲಿದ್ದರು. ಈ ಜೀವದಾನದ ಸಂಪೂರ್ಣ ಲಾಭ ಪಡೆದ ರಾಹುಲ್ 85 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು.
ಆದರೆ ಅರ್ಧಶತಕದ ಬಳಿಕ 34 ರನ್ ಸೇರಿಸುವಷ್ಟರಲ್ಲಿ ರಾಹುಲ್ ಔಟ್ ಆದರು. ಈ ಬಾರಿ ಕೂಡ ಕ್ಯಾಚ್ ಸಾಗಿದ್ದು ಸ್ಟೀವ್ ಸ್ಮಿತ್ನತ್ತ ಎಂಬುದು ವಿಶೇಷ. ಮೊದಲ ಅವಕಾಶದಲ್ಲಿ ಜೀವದಾನ ನೀಡಿದ್ದ ಸ್ಮಿತ್ ಈ ಬಾರಿ ಅದ್ಭುತ ಡೈವಿಂಗ್ ಮೂಲಕ ಒಂದೇ ಕೈಯಲ್ಲಿ ಕ್ಯಾಚ್ ಹಿಡಿದರು.
ಈ ಮೂಲಕ ಓವರ್ನಲ್ಲಿ ಕ್ರೀಸ್ ಕಚ್ಚಿ ಆಡುತ್ತಿದ್ದ ಕೆಎಲ್ ರಾಹುಲ್ ಔಟ್ ಆಗುವಲ್ಲಿ ಪ್ರಮುಖ ಪಾತ್ರವಹಿಸಿದರು. ಇದೀಗ ನಾಥನ್ ಲಿಯಾನ್ ಓವರ್ನಲ್ಲಿ ಸ್ಮಿತ್ ಹಿಡಿದ ಅತ್ಯುತ್ತಮ ಕ್ಯಾಚ್ ವಿಡಿಯೋ ವೈರಲ್ ಆಗಿದ್ದು, ಆಸ್ಟ್ರೇಲಿಯಾ ಫೀಲ್ಡರ್ನ ಟೈಮಿಂಗ್ಗೆ ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ.
ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡವು ಟ್ರಾವಿಸ್ ಹೆಡ್ (152) ಹಾಗೂ ಸ್ಟೀವ್ ಸ್ಮಿತ್ (101) ಅವರ ಶತಕದ ನೆರವಿನಿಂದ ಮೊದಲ ಇನಿಂಗ್ಸ್ನಲ್ಲಿ 425 ರನ್ ಕಲೆಹಾಕಿದೆ. ಇದಕ್ಕುತ್ತರವಾಗಿ ಪ್ರಥಮ ಇನಿಂಗ್ಸ್ ಆಡುತ್ತಿರುವ ಟೀಮ್ ಇಂಡಿಯಾ 62 ಓವರ್ಗಳ ಮುಕ್ತಾಯದ ವೇಳೆಗೆ 7 ವಿಕೆಟ್ ಕಳೆದುಕೊಂಡು 201 ರನ್ ಕಲೆಹಾಕಿದೆ.