IND vs AUS: 4ನೇ ದಿನದಾಟ ಅಂತ್ಯ: ಫಾಲೋಆನ್ ತಪ್ಪಿಸಿಕೊಂಡ ಭಾರತ
Australia vs India: ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ 295 ರನ್ಗಳ ಜಯ ಸಾಧಿಸಿದೆ. ಇನ್ನು ದ್ವಿತೀಯ ಪಂದ್ಯದಲ್ಲಿ ಆಸ್ಟ್ರೇಲಿಯಾ 10 ವಿಕೆಟ್ಗಳ ಗೆಲುವು ದಾಖಲಿಸಿದೆ. ಇದೀಗ ಐದು ಪಂದ್ಯಗಳ ಸರಣಿಯು 1-1 ಅಂತರದಿಂದ ಸಮಗೊಂಡಿದ್ದು, ಮೂರನೇ ಪಂದ್ಯದಲ್ಲಿ ಗೆಲ್ಲುವ ತಂಡ ಸರಣಿಯಲ್ಲಿ ಮುನ್ನಡೆ ಸಾಧಿಸಲಿದೆ.
ಬ್ರಿಸ್ಬೇನ್ನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನದಾಟದ ಅಂತ್ಯಕ್ಕೆ ಟೀಮ್ ಇಂಡಿಯಾ ಮೊದಲ ಇನಿಂಗ್ಸ್ನಲ್ಲಿ 9 ವಿಕೆಟ್ ಕಳೆದುಕೊಂಡು 252 ರನ್ಗಳಿಸಿದೆ. 51/4 ರನ್ಗಳೊಂದಿಗೆ ನಾಲ್ಕನೇ ದಿನದಾಟ ಆರಂಭಿಸಿದ ಭಾರತ ತಂಡವು ಆರಂಭದಲ್ಲೇ ರೋಹಿತ್ ಶರ್ಮಾ (10) ವಿಕೆಟ್ ಕಳೆದುಕೊಂಡಿತು. ಇದಾಗ್ಯೂ ಏಕಾಂಗಿ ಹೋರಾಟ ಮುಂದುವರೆಸಿದ್ದ ಕೆಎಲ್ ರಾಹುಲ್ಗೆ ರವೀಂದ್ರ ಜಡೇಜಾ ಉತ್ತಮ ಸಾಥ್ ನೀಡಿದರು.
ಅದರಂತೆ 139 ಎಸೆತಗಳನ್ನು ಎದುರಿಸಿದ ಕೆಎಲ್ ರಾಹುಲ್ 8 ಫೋರ್ಗಳೊಂದಿಗೆ 84 ರನ್ಗಳಿಸಿ ವಿಕೆಟ್ ಒಪ್ಪಿಸಿದರು. ಈ ಹಂತದಲ್ಲಿ ಕಣಕ್ಕಿಳಿದ ನಿತೀಶ್ ಕುಮಾರ್ ರೆಡ್ಡಿ 61 ಎಸೆತಗಳನ್ನು ಎದುರಿಸಿ 16 ರನ್ಗಳಿಸಿ ಔಟಾದರು.
ಆ ಬಳಿಕ ಬಂದ ಮೊಹಮ್ಮದ್ ಸಿರಾಜ್ (1) ಬಂದ ವೇಗದಲ್ಲೇ ಪೆವಿಲಿಯನ್ಗೆ ಹಿಂತಿರುಗಿದರು. ಮತ್ತೊಂದೆಡೆ ಉತ್ತಮ ಬ್ಯಾಟಿಂಗ್ ಮುಂದುವರೆಸಿದ ರವೀಂದ್ರ ಜಡೇಜಾ ಟೀಮ್ ಇಂಡಿಯಾ ಮೊತ್ತವನ್ನು 200ರ ಗಡಿದಾಟಿಸಿದರು.
ಆದರೆ 123 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 7 ಫೋರ್ಗಳೊಂದಿಗೆ ಬಿರುಸಿನ ಬ್ಯಾಟಿಂಗ್ಗೆ ಮುಂದಾದ ಜಡೇಜಾ 77 ರನ್ಗಳಿಸಿ 9ನೇ ವಿಕೆಟ್ ಆಗಿ ನಿರ್ಗಮಿಸಿದರು.
ಈ ಹಂತದಲ್ಲಿ ಜೊತೆಗೂಡಿದ ಜಸ್ಪ್ರೀತ್ ಬುಮ್ರಾ ಹಾಗೂ ಆಕಾಶ್ ದೀಪ್ 10ನೇ ವಿಕೆಟ್ಗೆ 39 ರನ್ಗಳ ಜೊತೆಯಾಟವಾಡುವ ಮೂಲಕ ಟೀಮ್ ಇಂಡಿಯಾವನ್ನು ಫಾಲೋಆನ್ನಿಂದ ಪಾರು ಮಾಡಿದರು.
ಅಂದರೆ ಈ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಆಸ್ಟ್ರೇಲಿಯಾ ತಂಡವು 445 ರನ್ ಕಲೆಹಾಕಿದೆ. ಹೀಗಾಗಿ ಟೀಮ್ ಇಂಡಿಯಾ ಫಾಲೋಆನ್ ತಪ್ಪಿಸಿಕೊಳ್ಳಲು 246 ರನ್ಗಳಿಸುವುದು ಅನಿವಾರ್ಯವಾಗಿತ್ತು. 213 ರನ್ಗಳಿಗೆ 9 ವಿಕೆಟ್ ಕಳೆದುಕೊಂಡ ಟೀಮ್ ಇಂಡಿಯಾಗೆ ಫಾಲೋಆನ್ ಭೀತಿ ಎದುರಾಗಿತ್ತು.
ಆದರೆ ಅತ್ಯುತ್ತಮ ಪ್ರದರ್ಶನ ನೀಡಿದ ಆಕಾಶ್ ದೀಪ್ ಸಿಂಗ್ ಹಾಗೂ ಬುಮ್ರಾ ತಂಡದ ಮೊತ್ತವನ್ನು 252 ಕ್ಕೆ ತಲುಪಿಸುವ ಮೂಲಕ ಆಸ್ಟ್ರೇಲಿಯಾದ ಫಾಲೋಆನ್ ಅವಕಾಶವನ್ನು ತಪ್ಪಿಸಿದರು.
ಒಂದು ವೇಳೆ ಟೀಮ್ ಇಂಡಿಯಾ 246 ರನ್ಗಳ ಓಲಗೆ ಆಲೌಟ್ ಆಗಿದ್ದರೆ, ಮತ್ತೆ ದ್ವಿತೀಯ ಇನಿಂಗ್ಸ್ ಆರಂಭಿಸಬೇಕಿತ್ತು. ಅತ್ತ ಕೊನೆಯ ದಿನದಾಟದಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆ ರನ್ಗಳ ಒಳಗೆ ಆಲೌಟ್ ಮಾಡಿದ್ದರೆ ಆಸ್ಟ್ರೇಲಿಯಾಗೆ ಇನಿಂಗ್ಸ್ ಗೆಲುವಿನ ಅವಕಾಶವಿತ್ತು.
ಆದರೀಗ ಫಾಲೋಆನ್ ತಪ್ಪಿಸಿಕೊಳ್ಳುವ ಮೂಲಕ ಟೀಮ್ ಇಂಡಿಯಾ 5ನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದೆ. ಇನ್ನು ಟೀಮ್ ಇಂಡಿಯಾ ಆಲೌಟ್ ಆದರೂ ಆಸ್ಟ್ರೇಲಿಯಾ ತಂಡ ದ್ವಿತೀಯ ಇನಿಂಗ್ಸ್ನಲ್ಲಿ ಬ್ಯಾಟಿಂಗ್ ಮಾಡಬೇಕು. ಇದಾದ ಬಳಿಕ ಬೃಹತ್ ಮೊತ್ತದ ಗುರಿ ನೀಡಿದರೂ, ಟೀಮ್ ಇಂಡಿಯಾ ಪಂದ್ಯವನ್ನು ಡ್ರಾ ಮಾಡಿಕೊಳ್ಳಲು ಮುಂದಾಗಲಿದೆ.
ಭಾರತ ಪ್ಲೇಯಿಂಗ್ 11: ರೋಹಿತ್ ಶರ್ಮಾ, ಯಶಸ್ವಿ ಜೈಸ್ವಾಲ್, ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ರಿಷಭ್ ಪಂತ್, ಕೆಎಲ್ ರಾಹುಲ್, ನಿತೀಶ್ ಕುಮಾರ್ ರೆಡ್ಡಿ, ರವೀಂದ್ರ ಜಡೇಜಾ, ಆಕಾಶ್ ದೀಪ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.
ಇದನ್ನೂ ಓದಿ: ಪಾಕಿಸ್ತಾನ್ ಪರ ಕಣಕ್ಕಿಳಿದ ಇಬ್ಬರು ಹಿಂದೂ ಕ್ರಿಕೆಟಿಗರು ಯಾರು ಗೊತ್ತಾ?
ಆಸ್ಟ್ರೇಲಿಯಾ ಪ್ಲೇಯಿಂಗ್ 11: ಉಸ್ಮಾನ್ ಖ್ವಾಜಾ, ನಾಥನ್ ಮೆಕ್‌ಸ್ವೀನಿ, ಮಾರ್ನಸ್ ಲ್ಯಾಬುಶೇನ್, ಸ್ಟೀವ್ ಸ್ಮಿತ್, ಟ್ರಾವಿಸ್ ಹೆಡ್, ಮಿಚ್ ಮಾರ್ಷ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್) ಪ್ಯಾಟ್ ಕಮಿನ್ಸ್, ಮಿಚೆಲ್ ಸ್ಟಾರ್ಕ್, ನಾಥನ್ ಲಿಯಾನ್, ಜೋಶ್ ಹ್ಯಾಝಲ್‌ವುಡ್.