IND vs AUS: ಫಾಲೋಆನ್ ಭೀತಿಯಲ್ಲಿ ಟೀಮ್ ಇಂಡಿಯಾ
Australia vs India, 3rd Test: ಬ್ರಿಸ್ಬೇನ್ನ ಗಾಬಾ ಮೈದಾನದಲ್ಲಿ ನಡೆಯುತ್ತಿರುವ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮೂರನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡವು 445 ರನ್ ಕಲೆಹಾಕಿದೆ. ಇದಕ್ಕುತ್ತರವಾಗಿ ಪ್ರಥಮ ಇನಿಂಗ್ಸ್ ಆಡುತ್ತಿರುವ ಟೀಮ್ ಇಂಡಿಯಾ 180 ರನ್ಗಳಿಗೆ 6 ವಿಕೆಟ್ ಕಳೆದುಕೊಂಡಿದೆ.
Updated on: Dec 17, 2024 | 10:34 AM

ಬ್ರಿಸ್ಬೇನ್ನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಟೀಮ್ ಇಂಡಿಯಾ 51.5 ಓವರ್ಗಳ ಮುಕ್ತಾಯದ ವೇಳೆಗೆ 180 ರನ್ಗಳಿಗೆ 6 ವಿಕೆಟ್ ಕಳೆದುಕೊಂಡಿದೆ. ಆಸ್ಟ್ರೇಲಿಯಾ ಕಲೆಹಾಕಿದ 445 ರನ್ಗಳಿಗೆ ಉತ್ತರವಾಗಿ ಇನಿಂಗ್ಸ್ ಆರಂಭಿಸಿದ ನಿರೀಕ್ಷಿತ ಆರಂಭ ಪಡೆದಿರಲಿಲ್ಲ.

ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ 4 ರನ್ಗಳಿಸಿ ಔಟಾದರೆ, ಆ ಬಳಿಕ ಬಂದ ಶುಭ್ಮನ್ ಗಿಲ್ 4 ರನ್ಗಳಿಸಿ ವಿಕೆಟ್ ಒಪ್ಪಿಸಿದ್ದರು. ಇನ್ನು ವಿರಾಟ್ ಕೊಹ್ಲಿ ಕೇವಲ 3 ರನ್ ಬಾರಿಸಿ ನಿರ್ಗಮಿಸಿದರು. ರಿಷಭ್ ಪಂತ್ ಇನಿಂಗ್ಸ್ ಕೇವಲ 9 ರನ್ಗಳಿಗೆ ಸೀಮಿತವಾಯಿತು. ಇದರ ಬೆನ್ನಲ್ಲೇ ರೋಹಿತ್ ಶರ್ಮಾ (10) ಕೂಡ ಔಟಾದರು.

ಇದಾಗ್ಯೂ ಏಕಾಂಕಿ ಹೋರಾಟ ಮುಂದುವರೆಸಿದ ಕೆಎಲ್ ರಾಹುಲ್ 139 ಎಸೆತಗಳಲ್ಲಿ 84 ರನ್ಗಳ ಕೊಡುಗೆ ನೀಡಿದರು. ಆದರೆ ಶತಕದತ್ತ ಸಾಗಿದ್ದ ರಾಹುಲ್ ಇನಿಂಗ್ಸ್ ನಾಲ್ಕನೇ ದಿನದಾಟದಲ್ಲಿ ಅಂತ್ಯಗೊಂಡಿತು. ಈ ವೇಳೆ ಕಣಕ್ಕಿಳಿದ ರವೀಂದ್ರ ಜಡೇಜಾ ಕೂಡ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು.

ಆಸ್ಟ್ರೇಲಿಯಾ ವೇಗಿಗಳನ್ನು ಆತ್ಮ ವಿಶ್ವಾಸದಿಂದಲೇ ಎದುರಿಸಿದ ರವೀಂದ್ರ ಜಡೇಜಾ 82 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಇದೀಗ ರವೀಂದ್ರ ಜಡೇಜಾ (52) ಹಾಗೂ ನಿತೀಶ್ ರೆಡ್ಡಿ (9) ಬ್ಯಾಟಿಂಗ್ ಮಾಡುತ್ತಿದ್ದು, ಟೀಮ್ ಇಂಡಿಯಾ 51.5 ಓವರ್ಗಳ ಮುಕ್ತಾಯದ ವೇಳೆಗೆ 180 ರನ್ ಕಲೆಹಾಕಿದೆ.

ಇತ್ತ ಫಾಲೋಆನ್ ತಪ್ಪಿಸಲು ಭಾರತ ತಂಡವು ಇನ್ನೂ 66 ರನ್ಗಳನ್ನು ಕಲೆಹಾಕಿಬೇಕಿದೆ. ಅಂದರೆ ಟೀಮ್ ಇಂಡಿಯಾ 246 ರನ್ಗಳ ಒಳಗೆ ಆಲೌಟ್ ಆದರೆ, ಆಸ್ಟ್ರೇಲಿಯಾ ತಂಡವು ಫಾಲೋಆನ್ ಹೇರಲಿದೆ. ಇದರಿಂದ ಟೀಮ್ ಇಂಡಿಯಾ ಮತ್ತೆ ದ್ವಿತೀಯ ಇನಿಂಗ್ಸ್ ಆರಂಭಿಸಬೇಕಾಗುತ್ತದೆ.

ಅತ್ತ ಕೊನೆಯ ದಿನದಾಟ ಮಾತ್ರ ಇರುವುದರಿಂದ ಟೀಮ್ ಇಂಡಿಯಾಗೆ ಫಾಲೋ ಆನ್ ತಪ್ಪಿಸಿಕೊಳ್ಳುವುದು ಅನಿವಾರ್ಯ. ಇಲ್ಲದಿದ್ದರೆ ಫಾಲೋಆನ್ ಹೇರಿ ಅಂತಿಮ ದಿನದಾಟದಲ್ಲಿ ಭಾರತ ತಂಡವನ್ನು ಬೇಗನೆ ಆಲೌಟ್ ಮಾಡಿ, ಆಸ್ಟ್ರೇಲಿಯಾ ಇನಿಂಗ್ಸ್ ಅಥವಾ ಕಡಿಮೆ ಮೊತ್ತದ ಗುರಿಯೊಂದಿಗೆ ಜಯ ಸಾಧಿಸಬಹುದು.



















