ಚಾಂಪಿಯನ್ಸ್ ಟ್ರೋಫಿಯಲ್ಲಿನ ಹೀನಾಯ ಪ್ರದರ್ಶನದ ಬೆನ್ನಲ್ಲೇ ಪಾಕಿಸ್ತಾನ್ ತಂಡದ ನಾಯಕ ಮೊಹಮ್ಮದ್ ರಿಝ್ವಾನ್ ಅವರನ್ನು ಟಿ20 ತಂಡದಿಂದ ಕೈ ಬಿಡಲಾಗಿತ್ತು. ಅಲ್ಲದೆ ದೇಶೀಯ ಟೂರ್ನಿಯಲ್ಲಿ ಆಡುವಂತೆ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ರಾಷ್ಟ್ರೀಯ ತಂಡದಿಂದ ಹೊರಬಿದ್ದ ಆಟಗಾರರಿಗೆ ಸೂಚಿಸಿದ್ದರು. ಇದಾಗ್ಯೂ ರಿಝ್ವಾನ್ ನ್ಯಾಷನಲ್ ಟಿ20 ಟೂರ್ನಿಯಲ್ಲಿ ಕಾಣಿಸಿಕೊಂಡಿಲ್ಲ. ಪಾಕ್ ತಂಡದ ನಾಯಕನ ಈ ನಡೆಯ ವಿರುದ್ಧ ಇದೀಗ ಮಾಜಿ ಆಟಗಾರರು ಆಕ್ರೋಶವನ್ನು ಹೊರಹಾಕುತ್ತಿದ್ದಾರೆ.
ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ನ ಆದೇಶವನ್ನೇ ಪಾಲಿಸದಿರುವ ಮೊಹಮ್ಮದ್ ರಿಝ್ವಾನ್ ಅವರ ಕೇಂದ್ರ ಒಪ್ಪಂದವನ್ನು ಕೊನೆಗೊಳಿಸಿ. ಆಗ ಮಾತ್ರ ಇಂತವರಿಗೆ ಬುದ್ಧಿ ಬರುತ್ತೆ ಎಂದು ಪಾಕಿಸ್ತಾನದ ಮಾಜಿ ವೇಗಿ ಸಿಕಂದರ್ ಬಖ್ತ್ ಪಿಸಿಬಿಗೆ ಮನವಿ ಮಾಡಿದ್ದಾರೆ.
ಖಾಸಗಿ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಸಿಕಂದರ್, ಕೇಂದ್ರೀಯ ಒಪ್ಪಂದದಡಿಯಲ್ಲಿ ಕಾರ್ಯನಿರ್ವಹಿಸುವ ಕ್ರಿಕೆಟಿಗರು ಮಂಡಳಿಯು ಆಯೋಜಿಸುವ ಎಲ್ಲಾ ಪಂದ್ಯಾವಳಿಗಳಲ್ಲಿ ಆಡಬೇಕು. ಆದರೆ ನಮ್ಮಲ್ಲಿ ಒಮ್ಮೆ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದರೆ ತಿರುಗಿ ಕೂಡ ನೋಡಲ್ಲ.
ಇದೀಗ ಪಿಸಿಬಿ ಸೂಚಿಸಿದರೂ ಕೆಲ ಆಟಗಾರರು ನ್ಯಾಷನಲ್ ಟಿ20 ಲೀಗ್ನಲ್ಲಿ ಕಾಣಿಸಿಕೊಂಡಿಲ್ಲ. ಇಂತಹ ಆಟಗಾರರ ವಿರುದ್ಧ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸಿಕಂದರ್ ಬಖ್ತ್ ಒತ್ತಾಯಿಸಿದ್ದಾರೆ.
ಪಾಕಿಸ್ತಾನಿ ಆಟಗಾರರು ತಿಂಗಳಿಗೆ 60 ಲಕ್ಷ ರೂಪಾಯಿ ಪಡೆಯುತ್ತಾರೆ. ಹೀಗಾಗಿ ಅವರು ಸಹ ದೇಶೀಯ ಪಂದ್ಯಾವಳಿಗಳಲ್ಲಿ ಆಡಲೇಬೇಕು. ಎಲ್ಲಾ ಆಟಗಾರರು ದೇಶೀಯ ಟೂರ್ನಿಗಳಲ್ಲಿ ಕಣಕ್ಕಿಳಿಯುವುದನ್ನು ಪಿಸಿಬಿ ಖಚಿತಪಡಿಸಿಕೊಳ್ಳಬೇಕು. ನೀವು ಮಂಡಳಿಯು ಆಯೋಜಿಸುವ ಪಂದ್ಯಾವಳಿಯ ಬದಲಿಗೆ ಕ್ಲಬ್ ಕ್ರಿಕೆಟ್ ಆಡುತ್ತಿದ್ದರೆ, ನೀವು ಪಿಸಿಬಿಯನ್ನು ಅವಮಾನಿಸುತ್ತಿದ್ದೀರಿ ಎಂದರ್ಥ ಎಂದು ಬಖ್ತ್ ಹೇಳಿದ್ದಾರೆ.
ಪಾಕ್ ಆಟಗಾರರ ಇಂತಹ ನಡೆಗಳಿಗೆ ಕಡಿವಾಣ ಹಾಕಲೇಬೇಕು. ಪಿಸಿಬಿ ಅಧ್ಯಕ್ಷರಾದ ಮೊಹ್ಸಿನ್ ನಖ್ವಿ ಕಟ್ಟುನಿಟ್ಟಾಗಿರಬೇಕು. ಅವರು ತಮ್ಮ ಮಾರ್ಗಗಳನ್ನು ಬದಲಾಯಿಸಿಕೊಳ್ಳಬೇಕು. ಏನು ನಡೆಯುತ್ತಿದೆ ಎಂಬುದನ್ನು ಅರಿತುಕೊಳ್ಳಬೇಕಾದ ಅನಿವಾರ್ಯತೆ ಇದೆ. ನಿಮ್ಮ ಮಾತಿಗೆ ಕಿಮ್ಮತ್ತು ನೀಡದಿದ್ದರೆ ಅಂತಹ ಆಟಗಾರರ ಕೇಂದ್ರೀಯ ವೇತನ ಒಪ್ಪಂದವನ್ನು ಕೊನೆಗೊಳಿಸಬೇಕು ಸಿಕಂದರ್ ಬಖ್ತ್ ಹೇಳಿದ್ದಾರೆ.
ಇದನ್ನೂ ಓದಿ: IPL 2025: ಬರೆದಿಟ್ಕೊಳ್ಳಿ, ಈ ಸಲ ಕಪ್ ಇವರದ್ದೆ… ಎಬಿಡಿ ಭವಿಷ್ಯ
ಪಾಕಿಸ್ತಾನ್ ಮಾಧ್ಯಮ ಕೆಲ ವರದಿಗಳ ಪ್ರಕಾರ, ದೇಶೀಯ ಟೂರ್ನಿಯಿಂದ ಹಿಂದೆ ಸರಿದಿರುವ ಮೊಹಮ್ಮದ್ ರಿಝ್ವಾನ್ ಕ್ಲಬ್ ಕ್ರಿಕೆಟ್ ಆಡುತ್ತಿದ್ದಾರೆ. ಇದನ್ನೆ ಪ್ರಸ್ತಾಪಿಸಿ ಪಾಕ್ ತಂಡದ ಮಾಜಿ ವೇಗಿ ಸಿಕಂದರ್ ಬಖ್ತ್, ಪಿಸಿಬಿ ಆಟಗಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.