ವಿರಾಟ್ ಕೊಹ್ಲಿ ಬಯಸಿದರೂ RCB ನಾಯಕತ್ವ ನೀಡಿಲ್ವಾ..!
IPL 2025: ಇಂಡಿಯನ್ ಪ್ರೀಮಿಯರ್ ಲೀಗ್ 2025 ರಲ್ಲಿ (ಐಪಿಎಲ್ 2025) ವಿರಾಟ್ ಕೊಹ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವನ್ನು ಮುನ್ನಡೆಸಲಿದ್ದಾರೆ ಎನ್ನಲಾಗಿತ್ತು. ಆದರೆ ಕೊನೆಯ ಹಂತದಲ್ಲಿ ಕಿಂಗ್ ಕೊಹ್ಲಿ ಬದಲಿಗೆ ಯುವ ದಾಂಡಿಗ ರಜತ್ ಪಾಟಿದಾರ್ ನಾಯಕನಾಗಿ ಆಯ್ಕೆಯಾಗಿದ್ದರು. ಆರ್ಸಿಬಿ ಫ್ರಾಂಚೈಸಿಯ ಈ ನಿರ್ಧಾರಕ್ಕೆ ಕೊಹ್ಲಿ ಬೆಂಬಲ ವ್ಯಕ್ತಪಡಿಸಿದ್ದಾರೆ.

ಈ ಬಾರಿಯ ಐಪಿಎಲ್ನಲ್ಲಿ ವಿರಾಟ್ ಕೊಹ್ಲಿ ನಾಯಕನಾಗಿ ಕಣಕ್ಕಿಳಿಯಬೇಕೆಂದು ಬಯಸಿದ್ದರು. ಇದಾಗ್ಯೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಅವರಿಗೆ ಕ್ಯಾಪ್ಟನ್ ಪಟ್ಟ ನೀಡಿಲ್ಲ ಎಂಬ ವಿಚಾರ ಬಹಿರಂಗವಾಗಿದೆ. ತೆರೆಮರೆಯ ಈ ವಿಚಾರವನ್ನು ಬಹಿರಂಗಪಡಿಸಿದ್ದು ಮತ್ಯಾರೂ ಅಲ್ಲ, ಕಿಂಗ್ ಕೊಹ್ಲಿಯ ಅತ್ಯಾಪ್ತರಲ್ಲಿ ಒಬ್ಬೆರನಿಸಿಕೊಂಡಿರುವ ಎಬಿ ಡಿವಿಲಿಯರ್ಸ್.
ಖಾಸಗಿ ಚಾನೆಲ್ ಚರ್ಚೆಯೊಂದರಲ್ಲಿ ಕಾಣಿಸಿಕೊಂಡ ಎಬಿ ಡಿವಿಲಿಯರ್ಸ್, ವಿರಾಟ್ ಕೊಹ್ಲಿ ಈ ಬಾರಿಯ ಐಪಿಎಲ್ನಲ್ಲಿ ಕೊಹ್ಲಿ ಆರ್ಸಿಬಿ ತಂಡವನ್ನು ಮುನ್ನಡೆಸಲು ಸಿದ್ಧರಾಗಿದ್ದರು. ಆದಾಗ್ಯೂ, ಮ್ಯಾನೇಜ್‌ಮೆಂಟ್ ಬೇರೆ ದಿಕ್ಕಿನಲ್ಲಿ ಸಾಗಲು ಬಯಸಿದೆ. ಅಂದರೆ ಆರ್ಸಿಬಿ ಫ್ರಾಂಚೈಸಿ ಹೊಸ ನಾಯಕನನ್ನು ಪರಿಚಯಿಸಲು ಮುಂದಾಗಿತ್ತು. ಈ ನಿರ್ಧಾರವನ್ನು ವಿರಾಟ್ ಕೊಹ್ಲಿ ಒಪ್ಪಿಕೊಂಡಿದ್ದಾರೆ ಎಂದು ಎಬಿಡಿ ತಿಳಿಸಿದ್ದಾರೆ.
ಆರ್ಸಿಬಿ ಕೋಚ್ ಆ್ಯಂಡಿ ಫ್ಲವರ್ ಮತ್ತು ಮೊ ಬೊಬಾಟ್ ಬಹಳ ಸಮಯದಿಂದ ಈ ಬಗ್ಗೆ ಯೋಚಿಸಿರಬೇಕು. ಹೊಸ ಆಟಗಾರನನ್ನು ನಾಯಕನಾಗಿ ಕಣಕ್ಕಿಳಿಸಲು ನಿರ್ಧರಿಸಿದ್ದರು. ಅವರು ಈ ಬಗ್ಗೆ ಖಂಡಿತವಾಗಿಯೂ ವಿರಾಟ್ ಜೊತೆ ಚರ್ಚೆ ನಡೆಸಿರುತ್ತಾರೆ. ಅದಕ್ಕೆ ವಿರಾಟ್ ಒಪ್ಪಿಗೆ ನೀಡಿದ್ದಾರೆ. ಇದರ ಹೊರತಾಗಿ ಕೊಹ್ಲಿ ನಾಯಕತ್ವವನ್ನು ತಿರಸ್ಕರಿಸಿದ್ದಾರೆ ಎಂಬುದನ್ನು ನಾನು ನಂಬಲ್ಲ ಎಂದು ಎಬಿ ಡಿವಿಲಿಯರ್ಸ್ ಹೇಳಿದ್ದಾರೆ.
ಇದು ವಿರಾಟ್ ಕೊಹ್ಲಿಯ ಅತ್ಯಂತ ಪ್ರಬುದ್ಧ ಪ್ರತಿಕ್ರಿಯೆಯಾಗಿತ್ತು. ಏಕೆಂದರೆ ವೃತ್ತಿಜೀವನದ ಕೊನೆಯ ಹಂತದಲ್ಲಿರುವ ಅವರು ಆರ್ಸಿಬಿ ತಂಡವನ್ನು ಮತ್ತೆ ಮುನ್ನಡೆಸಲು ಬಯಸುತ್ತಿದ್ದರು. ಆದರೆ ಆರ್‌ಸಿಬಿಯ ಭವಿಷ್ಯಕ್ಕಾಗಿ ಅವರು ಅದನ್ನು ಸಹ ಬಿಟ್ಟುಕೊಟ್ಟರು. ಇದೊಂದು ಒಂದು ದೊಡ್ಡ ಮತ್ತು ಉತ್ತಮ ನಡೆ ಎಂದು ನಾನು ಭಾವಿಸುತ್ತೇನೆ ಎಂದು ಎಬಿಡಿ ಹೇಳಿದ್ದಾರೆ.
ಇನ್ನು ರಜತ್ ಪಾಟಿದಾರ್ಗೆ ವಿರಾಟ್ ಕೊಹ್ಲಿ ಕಡೆಯಿಂದ ಉತ್ತಮ ಬೆಂಬಲ ಸಿಗಲಿದೆ. ಮೂರು ಸೀಸನ್ಗಳಲ್ಲಿ ಫಾಫ್ ಡುಪ್ಲೆಸಿಸ್ಗೆ ಹೇಗೆ ಬೆಂಬಲವಾಗಿ ನಿಂತಿದ್ದರೋ ಅದೇ ರೀತಿ ಪಾಟಿದಾರ್ ಜೊತೆಗೂ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಎಬಿ ಡಿವಿಲಿಯರ್ಸ್ ಹೇಳಿದ್ದಾರೆ.
ಅಂದಹಾಗೆ ವಿರಾಟ್ ಕೊಹ್ಲಿ ಈ ಹಿಂದೆ ಆರ್ಸಿಬಿ ತಂಡವನ್ನು 143 ಪಂದ್ಯಗಳಲ್ಲಿ ಮುನ್ನಡೆಸಿದ್ದಾರೆ. ಈ ವೇಳೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 66 ಪಂದ್ಯಗಳಲ್ಲಿ ಜಯ ಸಾಧಿಸಿದೆ. ಅಲ್ಲದೆ ಕಿಂಗ್ ಕೊಹ್ಲಿ ನಾಯಕತ್ವದಲ್ಲೇ ಆರ್ಸಿಬಿ 2016 ರಲ್ಲಿ ಫೈನಲ್ಗೆ ಪ್ರವೇಶಿಸಿದರೆ, 3 ಬಾರಿ ಪ್ಲೇಆಫ್ಸ್ ಆಡಿತ್ತು. ಹೀಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ಕಿಂಗ್ ಕೊಹ್ಲಿಗೆ ಮತ್ತೆ ನಾಯಕನ ಪಟ್ಟ ನೀಡುವ ನಿರೀಕ್ಷೆಯಿತ್ತು.
ಇದನ್ನೂ ಓದಿ: IPL 2025: ಬರೆದಿಟ್ಕೊಳ್ಳಿ, ಈ ಸಲ ಕಪ್ ಇವರದ್ದೆ… ಎಬಿಡಿ ಭವಿಷ್ಯ
ಆದರೆ ಅಚ್ಚರಿ ಎಂಬಂತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ರಜತ್ ಪಾಟಿದಾರ್ ಅವರನ್ನು ಕ್ಯಾಪ್ಟನ್ ಆಗಿ ಆಯ್ಕೆ ಮಾಡಿಕೊಂಡಿದೆ. ಹೀಗಾಗಿ ಈ ಬಾರಿ ಕೂಡ ಕಿಂಗ್ ಕೊಹ್ಲಿ ಆರ್ಸಿಬಿ ಪರ ಬ್ಯಾಟರ್ ಆಗಿ ಕಾಣಿಸಿಕೊಳ್ಳಲಿದ್ದಾರೆ.