ಭಾರತ-ಇಂಗ್ಲೆಂಡ್ (India vs England) ನಡುವಣ ಮೂರನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ (Team India) ಆಂಗ್ಲರಿಗೆ ಸುಲಭವಾಗಿ ಶರಣಾಗಿದ್ದಾರೆ. ಮೊದಲ ಇನಿಂಗ್ಸ್ನಲ್ಲಿ ಕೇವಲ 78 ರನ್ಗೆ ಆಲೌಟ್ ಆಗಿದ್ದ ಟೀಮ್ ಇಂಡಿಯಾ ದ್ವಿತೀಯ ಇನಿಂಗ್ಸ್ ಅನ್ನು 278 ರನ್ಗಳಿಗೆ ಅಂತ್ಯಗೊಳಿಸಿತ್ತು. ಇದರೊಂದಿಗೆ ಮೊದಲ ಇನಿಂಗ್ಸ್ನಲ್ಲಿ 432 ರನ್ ಬಾರಿಸಿದ್ದ ಇಂಗ್ಲೆಂಡ್ ತಂಡ ಇನಿಂಗ್ಸ್ ಹಾಗೂ 76 ರನ್ಗಳ ಭರ್ಜರಿ ಜಯ ಸಾಧಿಸಿತು. ಭಾರತ ತಂಡದ ಈ ಸೋಲಿನ ಬೆನ್ನಲ್ಲೇ ಟೀಕೆಗಳು ಕೇಳಿ ಬರಲಾರಂಭಿಸಿದೆ. ಅದರಲ್ಲೂ ಬ್ಯಾಟ್ಸ್ಮನ್ಗಳ ವೈಫಲ್ಯದ ಬಗ್ಗೆ ಆಕ್ರೋಶಗಳು ವ್ಯಕ್ತವಾಗುತ್ತಿದೆ. ಏಕೆಂದರೆ ದ್ವಿತೀಯ ಇನಿಂಗ್ಸ್ನಲ್ಲಿ ಟೀಮ್ ಇಂಡಿಯಾ 63 ರನ್ ಸೇರ್ಪಡೆಗೊಳಿಸುವಷ್ಟರಲ್ಲಿ 8 ವಿಕೆಟ್ ಕಳೆದುಕೊಂಡಿತ್ತು. ಅಂದರೆ ಮೊದಲ ಇನಿಂಗ್ಸ್ನಲ್ಲಿ 78 ರನ್ಗಳಿಗೆ ಆಲೌಟ್ ಆಗಿದ್ದ ಭಾರತ ದ್ವಿತೀಯ ಇನಿಂಗ್ಸ್ನಲ್ಲೂ ತನ್ನ ಕಳಪೆ ಬ್ಯಾಟಿಂಗ್ ಅನ್ನು ಮುಂದುವರೆಸಿತ್ತು. ಡ್ರಾ ಮಾಡಿಕೊಳ್ಳಬೇಕಾದ ಪಂದ್ಯದಲ್ಲಿ ಟೀಮ್ ಇಂಡಿಯಾ ಕೇವಲ 1 ಗಂಟೆಯೊಳಗೆ 8 ವಿಕೆಟ್ ಕಳೆದುಕೊಂಡಿದ್ದು ಹೇಗೆ ಎಂದು ದಿ ಲೆಜೆಂಡ್ ಸುನೀಲ್ ಗಾವಸ್ಕರ್ (Sunil Gavaskar) ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಗವಾಸ್ಕರ್, ಲಾರ್ಡ್ಸ್ನಲ್ಲಿ ನಾವು ಉತ್ತಮವಾಗಿ ಆಡಿದ್ದೆವು. ಇದಾಗ್ಯೂ ಅಗ್ರ ಮೂರು ವಿಕೆಟ್ ಕಳೆದುಕೊಂಡರೆ ಹೆಚ್ಚು ಕಾಲ ಉಳಿಯುವುದಿಲ್ಲ ಎಂಬುದು ಸ್ಪಷ್ಟವಾಗಿತ್ತು. ಯಾವುದೇ ರೀತಿಯಲ್ಲೂ ಕೇವಲ 54 ನಿಮಿಷಗಳಲ್ಲಿ ಏಳು ವಿಕೆಟ್ಗಳನ್ನು ಕಳೆದುಕೊಳ್ಳುವುದನ್ನು ಅರಗಿಸಿಕೊಳ್ಳುವುದು ತುಂಬಾ ಕಷ್ಟ ಎಂದು ಲಿಟಲ್ ಮಾಸ್ಟರ್ ಅಭಿಪ್ರಾಯಪಟ್ಟಿದ್ದಾರೆ.
ಇದೇ ವೇಳೆ ತಂಡದಲ್ಲಿ ಬದಲಾವಣೆ ಅಗತ್ಯ ಎಂದ ಗವಾಸ್ಕರ್, ಮೂರು ಟೆಸ್ಟ್‌ಗಳಲ್ಲೂ ರಿಷಬ್ ಪಂತ್ ರನ್ ಗಳಿಸಿಲ್ಲ. ಈಗ ನಾಲ್ಕನೇ ಟೆಸ್ಟ್‌ನಲ್ಲಿ ಹೆಚ್ಚುವರಿ ಬ್ಯಾಟ್ಸ್‌ಮನ್‌ನೊಂದಿಗೆ ಟೀಮ್ ಇಂಡಿಯಾ ಕಣಕ್ಕಿಳಿಯುವುದು ಉತ್ತಮ. ಹಾಗೆಯೇ ಟೀಮ್ ಮ್ಯಾನೇಜ್ಮೆಂಟ್ ತನ್ನ ಕಾರ್ಯತಂತ್ರವನ್ನು ಬದಲಾಯಿಸಬೇಕಿದೆ. ಟೀಮ್ ಇಂಡಿಯಾ ಮುಂದಿನ ಪಂದ್ಯದಲ್ಲಿ 4 ಬೌಲರ್‌ಗಳು ಮತ್ತು 7 ಬ್ಯಾಟ್ಸ್‌ಮನ್‌ಗಳೊಂದಿಗೆ (7+4) ಕಣಕ್ಕಿಳಿಯಬೇಕು. ಏಕೆಂದರೆ ಸದ್ಯಕ್ಕೆ ಭಾರತ ತಂಡದ ಬ್ಯಾಟಿಂಗ್ ವಿಭಾಗ ತುಂಬಾ ದುರ್ಬಲವಾಗಿದೆ ಎಂದರು.
ಹೆಡಿಂಗ್ಲೆಯಲ್ಲಿ ನಡೆದ ಮೂರನೇ ಟೆಸ್ಟ್‌ನಲ್ಲಿ ಭಾರತ ಮೊದಲ ಇನ್ನಿಂಗ್ಸ್ ನಲ್ಲಿ ಕೇವಲ 78 ರನ್ ಗಳಿಸಿತ್ತು. ಉತ್ತರವಾಗಿ ಇಂಗ್ಲೆಂಡ್ 432 ರನ್ ಕಲೆಹಾಕಿತು. ಇಂಗ್ಲೆಂಡ್ ನೀಡಿದ 354 ರನ್ ಗಳ ಮುನ್ನಡೆಯ ಗುರಿಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಭಾರತ 3ನೇ ದಿನದಾಟದ ಅಂತ್ಯಕ್ಕೆ 2 ವಿಕೆಟ್ ಗೆ 215 ರನ್ ಗಳಿಸಿತ್ತು. ಆದರೆ ನಾಲ್ಕನೇ ದಿನದಾಟದಲ್ಲಿ ಕೇವಲ 63 ರನ್ ಗಳ ಒಳಗೆ, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ ಸೇರಿದಂತೆ ಇಡೀ ತಂಡ ವಿಕೆಟ್ ಆಲೌಟ್ ಆಯಿತು. ಈ ಮೂಲಕ ಇಂಗ್ಲೆಂಡ್ ತಂಡ ಇನಿಂಗ್ಸ್ ಹಾಗೂ 76 ರನ್ಗಳ ಭರ್ಜರಿ ಜಯ ದಕ್ಕಿಸಿ ಐದು ಪಂದ್ಯಗಳ ಸರಣಿಯಲ್ಲಿ 1-1 ಸಮಬಲ ಸಾಧಿಸಿದೆ.
ಇದನ್ನೂ ಓದಿ: T20 ವಿಶ್ವಕಪ್ ಅರ್ಹತಾ ಪಂದ್ಯ: 20 ಓವರ್ನಲ್ಲಿ ಕೇವಲ 32 ರನ್..!
ಇದನ್ನೂ ಓದಿ: ಭಾರತಕ್ಕೆ ಸೋಲು, ಅಮಿತಾಭ್ ಬಚ್ಚನ್ ಟ್ವೀಟ್ ವೈರಲ್: ಡಿಲೀಟ್ ಮಾಡುವಂತೆ ಮನವಿ
ಇದನ್ನೂ ಓದಿ: ಟಿವಿಎಸ್‌ನ ಈ ದ್ವಿಚಕ್ರ ವಾಹನವನ್ನು ಕೇವಲ 7,999 ರೂ.ಗೆ ಖರೀದಿಸಬಹುದು
(Sunil Gavaskar got angry on the Indian team for losing 8 wickets in 1 hour)