ಭಾರತೀಯ ಕ್ರಿಕೆಟ್ ಮಂಡಳಿಯ (BCCI) ಆಡಳಿತಾತ್ಮಕ ಸಂವಿಧಾನ ತಿದ್ದುಪಡಿಗೆ ಬಿಸಿಸಿಐ ಸಲ್ಲಿಸಿದ ಮನವಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಗುರುವಾರಕ್ಕೆ ಮುಂದೂಡಿದೆ . ಬಿಸಿಸಿಐ ಪರ ವಾದ ಮಂಡಿಸಿದ ಹಿರಿಯ ವಕೀಲ ಹರೀಶ್ ಸಾಳ್ವೆ ಅವರು ವಿಚಾರಣೆಯನ್ನು ಮುಂದೂಡುವಂತೆ ಕೋರಿದ್ದರು. ಈ ಹಿನ್ನೆಲೆಯಲ್ಲಿ ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ, ನ್ಯಾಯಮೂರ್ತಿ ಕೃಷ್ಣ ಮುರಾರಿ ಮತ್ತು ನ್ಯಾಯಮೂರ್ತಿ ಹಿಮಾ ಕೊಹ್ಲಿ ಅವರಿದ್ದ ಪೀಠವು ವಿಚಾರಣೆಯನ್ನು ಒಂದು ದಿನಕ್ಕೆ ಮುಂದೂಡಿದ್ದಾರೆ. ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮತ್ತು ಕಾರ್ಯದರ್ಶಿ ಜಯ್ ಶಾ ಸೇರಿದಂತೆ ಪ್ರಮುಖ ಪದಾಧಿಕಾರಿಗಳ ಅಧಿಕಾರಾವಧಿ ಮುಗಿದಿದ್ದರೂ ಪದಾಧಿಕಾರಿಗಳು ತಮ್ಮ ಅವಧಿಯನ್ನು ಮುಂದುವರೆಸುತ್ತಿದ್ದಾರೆ ಎಂದು ಬಿಹಾರ ಕ್ರಿಕೆಟ್ ಸಂಸ್ಥೆಯ ಪರ ವಾದ ಮಂಡಿಸಿದ ವಕೀಲರು ತಿಳಿಸಿದ್ದಾರೆ. ಒಂದು ದಿನದಲ್ಲಿ ಏನೂ ಆಗುವುದಿಲ್ಲ. ಯಾಕೆ ಈ ಅವಸರ ಎಂದು ಮರು ಪ್ರಶ್ನಿಸಿದ ಪೀಠ, ಬಿಸಿಸಿಐ ವಕೀಲರು ಸಲ್ಲಿಸಿದ ಮನವಿಯನ್ನು ಅಂಗೀಕರಿಸಿದೆ.
ಇದಕ್ಕೂ ಮುನ್ನ ಬಿಸಿಸಿಐ ಮನವಿಯ ತುರ್ತು ವಿಚಾರಣೆಗೆ ಪೀಠ ಸಮ್ಮತಿಸಿತ್ತು. ಬಿಸಿಸಿಐ ತನ್ನ ಪದಾಧಿಕಾರಿಗಳ ಅವಧಿಗೆ ಸಂಬಂಧಿಸಿದಂತೆ ತನ್ನ ಸಂವಿಧಾನವನ್ನು ತಿದ್ದುಪಡಿ ಮಾಡಲು ಅನುಮೋದನೆಯನ್ನು ಕೋರುತ್ತಿದೆ. ಬಿಸಿಸಿಐ ಪರ ವಾದ ಮಂಡಿಸಿದ ಹಿರಿಯ ವಕೀಲ ಪಿಎಸ್ ಪಟ್ವಾಲಿಯಾ, ತಮ್ಮ ಅರ್ಜಿಯನ್ನು ಎರಡು ವರ್ಷಗಳ ಹಿಂದೆ ಸಲ್ಲಿಸಲಾಗಿದೆ. ಎರಡು ವಾರಗಳ ನಂತರ ನ್ಯಾಯಾಲಯವು ವಿಷಯವನ್ನು ಪಟ್ಟಿ ಮಾಡಲು ಸೂಚಿಸಿದೆ. ಇದಾದ ನಂತರ ಕೋವಿಡ್ ಬಂದಿದ್ದು, ಈ ವಿಷಯವನ್ನು ಪಟ್ಟಿ ಮಾಡಲು ಸಾಧ್ಯವಿಲ್ಲ ಎಂದು ಪಟ್ವಾಲಿಯಾ ಹೇಳಿದ್ದಾರೆ.
ನ್ಯಾಯಾಲಯದ ಹಿಂದಿನ ಆದೇಶದಲ್ಲಿ ನ್ಯಾಯಾಲಯದ ಅನುಮೋದನೆಯ ನಂತರವೇ ಸಂವಿಧಾನದಲ್ಲಿ ತಿದ್ದುಪಡಿ ಮಾಡಬಹುದು ಎಂದು ಹೇಳಲಾಗಿದೆ ಎಂದು ಪಟ್ವಾಲಿಯಾ ಇದೇ ವೇಳೆ ತಿಳಿಸಿದರು. ಈ ಹಿಂದೆ, ನ್ಯಾಯಮೂರ್ತಿ ಆರ್‌ಎಂ ಲೋಧಾ ನೇತೃತ್ವದ ಸಮಿತಿಯು ಬಿಸಿಸಿಐನಲ್ಲಿ ಸುಧಾರಣಾ ಕ್ರಮಗಳನ್ನು ಶಿಫಾರಸು ಮಾಡಿತ್ತು, ಅದನ್ನು ಸುಪ್ರೀಂ ಕೋರ್ಟ್ ಅಂಗೀಕರಿಸಿದೆ.
ಶಿಫಾರಸುಗಳ ಪ್ರಕಾರ, ರಾಜ್ಯ ಕ್ರಿಕೆಟ್ ಸಂಸ್ಥೆ ಅಥವಾ ಬಿಸಿಸಿಐ ಮಟ್ಟದಲ್ಲಿ ಪದಾಧಿಕಾರಿಗಳು 6 ವರ್ಷಗಳ ಅಧಿಕಾರಾವಧಿಯ ನಂತರ 3 ವರ್ಷಗಳ ವಿರಾಮವನ್ನು ಅನುಭವಿಸಬೇಕಾಗುತ್ತದೆ. ಬಿಸಿಸಿಐ ತನ್ನ ಪ್ರಸ್ತಾವಿತ ತಿದ್ದುಪಡಿಯಲ್ಲಿ, ತನ್ನ ಪದಾಧಿಕಾರಿಗಳ ವಿರಾಮದ ಸಮಯವನ್ನು ತೆಗೆದುಹಾಕಲು ಅನುಮೋದನೆಯನ್ನು ಕೋರಿದೆ. ಈ ಮೂಲಕ ಬಿಸಿಸಿಐ ಅಧ್ಯಕ್ಷ ಗಂಗೂಲಿ ಮತ್ತು ಕಾರ್ಯದರ್ಶಿ ಶಾ ಆಯಾ ರಾಜ್ಯ ಕ್ರಿಕೆಟ್ ಸಂಸ್ಥೆಗಳಲ್ಲಿ ಆರು ವರ್ಷಗಳನ್ನು ಪೂರೈಸಿದ ನಂತರವೂ ತಮ್ಮ ಹುದ್ದೆಗಳಲ್ಲಿ ಮುಂದುವರಿಯಬಹುದು.
ಬಿಸಿಸಿಐನ ಸಂವಿಧಾನದ ಪ್ರಕಾರ, ಒಬ್ಬ ಪದಾಧಿಕಾರಿಯು ರಾಜ್ಯ ಕ್ರಿಕೆಟ್ ಸಂಸ್ಥೆ ಅಥವಾ ಬಿಸಿಸಿಐನಲ್ಲಿ ಮೂರು ವರ್ಷಗಳ ಸತತ ಎರಡು ಅವಧಿಯನ್ನು ಪೂರ್ಣಗೊಳಿಸಿದರೆ, ನಂತರ ಅವರು ಮೂರು ವರ್ಷಗಳ ಕಡ್ಡಾಯ ವಿರಾಮವನ್ನು ತೆಗೆದುಕೊಳ್ಳಬೇಕಾಗುತ್ತದೆ. ಗಂಗೂಲಿ ಅವರು ಬಂಗಾಳದ ಕ್ರಿಕೆಟ್ ಅಸೋಸಿಯೇಷನ್‌ನಲ್ಲಿ ಪದಾಧಿಕಾರಿಯಾಗಿದ್ದರು ಮತ್ತು ಶಾ ಗುಜರಾತ್ ಕ್ರಿಕೆಟ್ ಸಂಸ್ಥೆಯಲ್ಲಿ ಪದಾಧಿಕಾರಿಯಾಗಿದ್ದರು.
Published On - 7:10 pm, Wed, 20 July 22