ಎರಡೆರಡು ವಿಶ್ವಕಪ್‌; ಟೀಂ ಇಂಡಿಯಾಗೆ ನಾಯಕರೇ ದೊಡ್ಡ ತಲೆನೋವು

ICC World Cup 2026: 2026ರ ICC ವಿಶ್ವಕಪ್‌ಗಳಿಗೆ ಮುನ್ನ ಭಾರತೀಯ ಕ್ರಿಕೆಟ್ ತಂಡಕ್ಕೆ ನಾಯಕರ ಫಾರ್ಮ್ ದೊಡ್ಡ ಸಮಸ್ಯೆಯಾಗಿದೆ. ಹಿರಿಯ ತಂಡದ ಸೂರ್ಯಕುಮಾರ್ ಯಾದವ್ ಮತ್ತು ಅಂಡರ್-19 ತಂಡದ ಆಯುಷ್ ಮ್ಹಾತ್ರೆ ಇಬ್ಬರೂ ರನ್ ಗಳಿಸಲು ಹೆಣಗಾಡುತ್ತಿದ್ದಾರೆ. ಏಷ್ಯಾಕಪ್‌ನಲ್ಲಿ ಆಯುಷ್ ಕಳಪೆ ಪ್ರದರ್ಶನ ನೀಡಿದ್ದರೆ, ಸೂರ್ಯಕುಮಾರ್ ಕೂಡ ರನ್ ಗಳಿಸಲು ವಿಫಲರಾಗಿದ್ದಾರೆ. ವಿಶ್ವಕಪ್‌ಗಳಲ್ಲಿ ಭಾರತದ ಪ್ರಶಸ್ತಿ ಆಕಾಂಕ್ಷೆಗಳಿಗೆ ಇದು ಗಂಭೀರ ಕಾಳಜಿಯಾಗಿದೆ.

ಎರಡೆರಡು ವಿಶ್ವಕಪ್‌; ಟೀಂ ಇಂಡಿಯಾಗೆ ನಾಯಕರೇ ದೊಡ್ಡ ತಲೆನೋವು
Surya, Ayush

Updated on: Dec 21, 2025 | 8:54 PM

2026 ರಲ್ಲಿ ಕ್ರಿಕೆಟ್ ಲೋಕದಲ್ಲಿ ಪ್ರಮುಖ ಐಸಿಸಿ (ICC) ಈವೆಂಟ್​ಗಳು ನಡೆಯಲಿವೆ. ಈ ಪಂದ್ಯಾವಳಿಗಳು ಜನವರಿಯಿಂದಲೇ ಪ್ರಾರಂಭವಾಗುತ್ತಿದ್ದು, ಅಂಡರ್-19 ಪುರುಷರ ವಿಶ್ವಕಪ್ ಮತ್ತು ಆ ನಂತರ 2026 ರ ಪುರುಷರ ಟಿ20 ವಿಶ್ವಕಪ್ (ICC World Cup 2026) ಪ್ರಮುಖ ಪಂದ್ಯಾವಳಿಗಳಾಗಿವೆ. ಭಾರತ ತಂಡವು ಎರಡೂ ಪಂದ್ಯಾವಳಿಗಳಲ್ಲಿ ಪ್ರಶಸ್ತಿ ಸ್ಪರ್ಧಿಗಳಾಗಿ ಪ್ರವೇಶಿಸಲಿದೆ. ಈ ಎರಡೂ ತಂಡಗಳಲ್ಲೂ ಪ್ರತಿಭಾವಂತೆ ಆಟಗಾರರಿದ್ದಾರೆ. ಆದಾಗ್ಯೂ, ಈ ವಿಶ್ವಕಪ್‌ಗಳ ಆರಂಭಕ್ಕೂ ಮೊದಲು, ಈ ಎರಡೂ ತಂಡಗಳ ನಾಯಕರು ತಂಡಕ್ಕೆ ದೊಡ್ಡ ಸಮಸ್ಯೆಯಾಗಿದ್ದಾರೆ. ಒಂದೆಡೆ ಹಿರಿಯರ ಪುರುಷರ ತಂಡದ ನಾಯಕ ಸೂರ್ಯಕುಮಾರ್ ಯಾದವ್ (Suryakumar Yadav) ರನ್ ಗಳಿಸಲು ಹೆಣಗಾಡುತ್ತಿದ್ದರೆ, ಇನ್ನೊಂದೆಡೆ ಅಂಡರ್-19 ತಂಡದ ನಾಯಕ ಆಯುಷ್ ಮ್ಹಾತ್ರೆ (Ayush Mhatre) ಕೂಡ ಕಳಪೆ ಫಾರ್ಮ್​ನಿಂದ ಬಳಲುತ್ತಿದ್ದಾರೆ.

ಡಿಸೆಂಬರ್ 21 ರ ಭಾನುವಾರದಂದು, ಭಾರತದ ಅಂಡರ್-19 ತಂಡವು ಪಾಕಿಸ್ತಾನದ ವಿರುದ್ಧ ಏಷ್ಯಾಕಪ್ ಫೈನಲ್‌ನಲ್ಲಿ ಸೋತಿತು. ಮುಂದಿನ ತಿಂಗಳು ನಡೆಯಲಿರುವ ಅಂಡರ್-19 ವಿಶ್ವಕಪ್‌ನಲ್ಲಿ ಸ್ಪರ್ಧಿಸಲಿರುವ ತಂಡ ಇದೇ ಆಗಿದೆ. ಫೈನಲ್ ಪಂದ್ಯಕ್ಕೂ ಮುನ್ನ ನಡೆದ ಎಲ್ಲಾ ಪಂದ್ಯಗಳಲ್ಲೂ ತಂಡವು ಸ್ಥಿರವಾಗಿ ಉತ್ತಮ ಪ್ರದರ್ಶನ ನೀಡಿತ್ತು. ಹೆಚ್ಚಿನ ಆಟಗಾರರು ಅದ್ಭುತ ಫಾರ್ಮ್​ನಲ್ಲಿದ್ದರು. ಆದ್ದರಿಂದ, ಈ ಸೋಲು ತಂಡದ ಭವಿಷ್ಯದ ಬಗ್ಗೆ ಹೆಚ್ಚಿನ ಕಳವಳವನ್ನು ಉಂಟುಮಾಡಿಲ್ಲ. ಆದಾಗ್ಯೂ, ಈ ಫೈನಲ್‌ನಲ್ಲಿ ನಾಯಕ ಆಯುಷ್ ಮ್ಹಾತ್ರೆ ಅವರ ವೈಫಲ್ಯವು ಮತ್ತೊಮ್ಮೆ ಅವರ ಪ್ರದರ್ಶನದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಆಯುಷ್ ಪ್ರದರ್ಶನ ಹೇಗಿದೆ?

ಫೈನಲ್ ಪಂದ್ಯದಲ್ಲಿ ಭಾರತ ತಂಡಕ್ಕೆ ಗೆಲ್ಲಲು 348 ರನ್‌ಗಳು ಬೇಕಾಗಿದ್ದವು, ಆದರೆ ಫೈನಲ್‌ನಲ್ಲಿ ನಾಯಕ ಆಯುಷ್ 8 ಎಸೆತಗಳಲ್ಲಿ ಕೇವಲ 2 ರನ್‌ಗಳಿಗೆ ಔಟಾದರು. ಇದು ಕೇವಲ ಫೈನಲ್ ಅಲ್ಲ, ಇಡೀ ಟೂರ್ನಮೆಂಟ್‌ನಲ್ಲಿ ಆಯುಷ್ ರನ್ ಗಳಿಸಲು ವಿಫಲರಾದರು. ಆಯುಷ್ ಮ್ಹಾತ್ರೆ ಆಡಿದ ಐದು ಇನ್ನಿಂಗ್ಸ್‌ಗಳಲ್ಲಿ 13 ರ ಸಾಧಾರಣ ಸರಾಸರಿಯಲ್ಲಿ ಕೇವಲ 65 ರನ್‌ಗಳನ್ನು ಗಳಿಸಿದರು. ಇದರಲ್ಲಿ ಅವರ ಗರಿಷ್ಠ ಸ್ಕೋರ್ 38 ರನ್ ಅಷ್ಟೆ.

ಆದರೆ ಈ ಟೂರ್ನಮೆಂಟ್‌ನಲ್ಲಿ ಮಾತ್ರವಲ್ಲ, ತಮ್ಮ ಅಂಡರ್-19 ವೃತ್ತಿಜೀವನದಲ್ಲಿ ಇಲ್ಲಿಯವರೆಗೆ ಆಡಿರುವ ಎಲ್ಲಾ ಏಕದಿನ ಪಂದ್ಯಗಳಲ್ಲಿ, ಮ್ಹಾತ್ರೆ ವಿಶೇಷವಾದದ್ದೇನೂ ಮಾಡಲು ಸಾಧ್ಯವಾಗಿಲ್ಲ. ಇಲ್ಲಿಯವರೆಗೆ 14 ಅಂಡರ್-19 ಏಕದಿನ ಪಂದ್ಯಗಳನ್ನು ಆಡಿರುವ ಆಯುಷ್ ಒಂದೇ ಒಂದು ಅರ್ಧಶತಕವಿಲ್ಲದೆ ಕೇವಲ 143 ರನ್ ಗಳಿಸಿದ್ದಾರೆ. ಪರಿಣಾಮವಾಗಿ, ಮುಂದಿನ ತಿಂಗಳು ನಡೆಯಲಿರುವ ಅಂಡರ್-19 ವಿಶ್ವಕಪ್‌ನಲ್ಲಿ ಅವರು ಟೀಂ ಇಂಡಿಯಾಕ್ಕೆ ಪ್ರಮುಖ ಚಿಂತೆಯಾಗಿ ಪರಿಣಮಿಸಿದ್ದಾರೆ.

ಸೂರ್ಯಕುಮಾರ್ ಕಥೆಯೂ ಇದೆ

ನಾಯಕತ್ವ ವೈಫಲ್ಯದ ಕಥೆ ಕೇವಲ ಅಂಡರ್-19 ತಂಡಕ್ಕೆ ಮಾತ್ರ ಸೀಮಿತವಾಗಿಲ್ಲ. ಹಿರಿಯರ ಟಿ20 ತಂಡ ಕೂಡ ಇದೇ ರೀತಿಯ ಪರಿಸ್ಥಿತಿಯಲ್ಲಿದೆ. ಅನುಭವಿ ಸೂಪರ್‌ಸ್ಟಾರ್ ಬ್ಯಾಟ್ಸ್‌ಮನ್ ಸೂರ್ಯಕುಮಾರ್ ಯಾದವ್ ಅವರ ಬ್ಯಾಟ್ ಸಂಪೂರ್ಣವಾಗಿ ಮೌನವಾಗಿದೆ. ಇತ್ತೀಚೆಗೆ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿಯೂ ಸೂರ್ಯ ರನ್​ಗಳಿಸಲು ವಿಫಲರಾದರು. ಆಡಿದ ನಾಲ್ಕು ಇನ್ನಿಂಗ್ಸ್‌ಗಳಲ್ಲಿ ಕೇವಲ 34 ರನ್ ಗಳಿಸಿದರು. ಅದಕ್ಕೂ ಮೊದಲು ಆಸ್ಟ್ರೇಲಿಯಾ ಮತ್ತು ಏಷ್ಯಾಕಪ್‌ನಲ್ಲಿಯೂ ಸೂರ್ಯ ಇದೇ ರೀತಿಯ ಪ್ರದರ್ಶನ ನೀಡಿದ್ದರು.

ಐಸಿಸಿ ಮನವಿಗೂ ನಿಲುವು ಬದಲಿಸದ ಬಿಸಿಸಿಐ; ಪಾಕ್ ನಾಯಕನೊಂದಿಗೆ ಕೈಕುಲುಕದ ಟೀಂ ಇಂಡಿಯಾ ನಾಯಕ

2024 ರ ವಿಶ್ವಕಪ್ ನಂತರ ಸೂರ್ಯ ಅವರನ್ನು ಟಿ20 ತಂಡದ ನಾಯಕನನ್ನಾಗಿ ನೇಮಿಸಲಾಯಿತು, ಆದರೆ ಅಂದಿನಿಂದ ಅವರು ನಿರಂತರವಾಗಿ ವಿಫಲರಾಗಿದ್ದಾರೆ. 2025 ರಲ್ಲಿ ಅವರ ಪ್ರದರ್ಶನವು ವಿಶೇಷವಾಗಿ ನಿರಾಶಾದಾಯಕವಾಗಿದೆ. ಈ ವರ್ಷದುದ್ದಕ್ಕೂ, ಸೂರ್ಯ 21 ಟಿ20 ಪಂದ್ಯಗಳಲ್ಲಿ 13 ಸರಾಸರಿಯಲ್ಲಿ ಕೇವಲ 218 ರನ್ ಗಳಿಸಿದ್ದಾರೆ. ಇದರಲ್ಲಿ ಒಂದೇ ಒಂದು ಅರ್ಧಶತಕವಿಲ್ಲದಿರುವುದು ಅವರ ಕಳಪೆ ಫಾರ್ಮ್​ಗೆ ಹಿಡಿದ ಕೈಗನ್ನಡಿಯಾಗಿದೆ. ಟಿ20 ವಿಶ್ವಕಪ್ ಫೆಬ್ರವರಿ 7 ರಂದು ಪ್ರಾರಂಭವಾಗಲಿದ್ದು, ಸೂರ್ಯ ಅಷ್ಟರೊಳಗೆ ತಮ್ಮ ಫಾರ್ಮ್​ ಕಂಡುಕೊಳ್ಳಬೇಕಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:51 pm, Sun, 21 December 25