ಐಸಿಸಿ ಮನವಿಗೂ ನಿಲುವು ಬದಲಿಸದ ಬಿಸಿಸಿಐ; ಪಾಕ್ ನಾಯಕನೊಂದಿಗೆ ಕೈಕುಲುಕದ ಟೀಂ ಇಂಡಿಯಾ ನಾಯಕ
India vs Pakistan U19 Asia Cup: ದುಬೈನಲ್ಲಿ ನಡೆದ ಅಂಡರ್ 19 ಏಷ್ಯಾಕಪ್ ಭಾರತ vs ಪಾಕಿಸ್ತಾನ ಪಂದ್ಯದಲ್ಲಿ ಆಟಗಾರರು ಕೈಕುಲುಕದೆ ಹಿರಿಯರ ಪಂದ್ಯದ ಸಂಪ್ರದಾಯ ಮುಂದುವರಿಸಿದರು. ಐಸಿಸಿ ಮನವಿಯ ಹೊರತಾಗಿಯೂ ಬಿಸಿಸಿಐ ತನ್ನ ನಿಲುವನ್ನು ಬದಲಿಸಲಿಲ್ಲ. ಈ ಹೈವೋಲ್ಟೇಜ್ ಪಂದ್ಯದಲ್ಲಿ ಟಾಸ್ ಸಮಯದಲ್ಲಿ ನಡೆದ ಘಟನೆ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ರಾಜಕೀಯವನ್ನು ಕ್ರೀಡೆಯಿಂದ ದೂರವಿಡಲು ಕೈಕುಲುಕುವಂತೆ ಐಸಿಸಿ ಮನವಿ ಮಾಡಿತ್ತು.

ದುಬೈನಲ್ಲಿ ನಡೆಯುತ್ತಿರುವ 19 ವರ್ಷದೊಳಗಿನವರ ಏಷ್ಯಾಕಪ್ (U19 Asia Cup) ಪಂದ್ಯಾವಳಿಯಲ್ಲಿ ಇಂದು ಹೈವೋಲ್ಟೇಜ್ ಕದನ ನಡೆಯುತ್ತಿದೆ. ಪಂದ್ಯಾವಳಿಯ ಎರಡು ಬಲಿಷ್ಠ ತಂಡಗಳಾದ ಭಾರತ ಹಾಗೂ ಪಾಕಿಸ್ತಾನ (India vs Pakistan) ಮುಖಾಮುಖಿಯಾಗಿವೆ. ಪಂದ್ಯ ಆರಂಭಕ್ಕೂ ಮುನ್ನವೇ ಅಭಿಮಾನಿಗಳಲ್ಲಿ ಕುತೂಹಲ ಹುಟ್ಟಿಸಿದ ಸಂಗತಿಯೆಂದರೆ ಉಭಯ ತಂಡಗಳ ನಾಯಕರು ಹಾಗೂ ಆಟಗಾರರು ಹ್ಯಾಂಡ್ಶೇಕ್ ಮಾಡುತ್ತಾರಾ? ಎಂಬುದು. ಏಕೆಂದರೆ ಇತ್ತೀಚೆಗೆ ಮುಗಿದ ಹಿರಿಯರ ಏಷ್ಯಾಕಪ್ನಲ್ಲೂ ಭಾರತ ಹಾಗೂ ಪಾಕ್ ತಂಡದ ಆಟಗಾರರು ಕೈಕುಲುಕಿರಲಿಲ್ಲ. ಇದು ಸಾಕಷ್ಟು ವಿವಾದವನ್ನು ಹುಟ್ಟುಹಾಕಿತ್ತು. ಹೀಗಾಗಿ ಈ ಪಂದ್ಯದ ಮೇಲೆ ಎಲ್ಲರ ದೃಷ್ಟಿ ನೆಟ್ಟಿತ್ತು. ಇದರ ಜೊತೆಗೆ ಐಸಿಸಿ ಕೂಡ ಬಿಸಿಸಿಐಗೆ ಕೈಕುಲುಕುವಂತೆ ಮನವಿ ಮಾಡಿದೆ ಎಂತಲೂ ಹೇಳಲಾಗಿತ್ತು. ಆದರೆ ತನ್ನ ನಿಲುವು ಬದಲಿಸದ ಬಿಸಿಸಿಐ, ಪಾಕ್ ಆಟಗಾರರೊಂದಿಗೆ ಹ್ಯಾಂಡ್ಶೇಕ್ ಮಾಡದಿರುವ ಪ್ರವೃತ್ತಿಯನ್ನು ಮುಂದುವರೆಸಿದೆ.
ಐಸಿಸಿ ಮನವಿಗೂ ಬಗ್ಗದ ಬಿಸಿಸಿಐ
ವಾಸ್ತವವಾಗಿ ಉಭಯ ತಂಡಗಳ ನಡುವಿನ ಈ ಪಂದ್ಯ ನಡೆಯುವುದಕ್ಕೂ ಮುನ್ನವೇ ಐಸಿಸಿ, ರಾಜಕೀಯವನ್ನು ಕ್ರೀಡೆಯಿಂದ ದೂರವಿಟ್ಟು, ಎದುರಾಳಿ ತಂಡದೊಂದಿಗೆ ಹ್ಯಾಂಡ್ಶೇಕ್ ಮಾಡಬೇಕು ಎಂದು ಬಿಸಿಸಿಐಗೆ ಮನವಿ ಮಾಡಿದೆ ಎಂದು ವರದಿಯಾಗಿತ್ತು. ಅದಾಗ್ಯೂ ಅಂತಿಮ ನಿರ್ಧಾರವನ್ನು ಬಿಸಿಸಿಐಗೆ ಬಿಟ್ಟಿದ್ದು, ಈ ನೀತಿಯನ್ನು ಮುಂದುವರಿಸಬೇಕಾದರೆ, ಪಂದ್ಯದ ರೆಫರಿಗೆ ಮುಂಚಿತವಾಗಿ ತಿಳಿಸಬೇಕು ಎಂದು ಐಸಿಸಿ ಹೇಳಿದೆ ಎಂತಲೂ ಹೇಳಲಾಗುತ್ತಿತ್ತು. ಇದಾದ ಬಳಿಕ ಬಿಸಿಸಿಐ, ತಂಡದ ಆಟಗಾರರಿಗೆ ಯಾವ ರೀತಿಯ ನಿರ್ದೇಶನ ನೀಡಿರುತ್ತದೆ ಎಂಬುದನ್ನು ನೋಡಲು ಅಭಿಮಾನಿಗಳು ಕಾತುರದಿಂದ ಕಾದಿದ್ದರು.
ಕೈಕುಲುಕುದ ಆಯುಷ್
ಆದರೆ ಭಾರತ ಹಾಗೂ ಪಾಕಿಸ್ತಾನ ಅಂಡರ್ 19 ತಂಡಗಳ ನಡುವಿನ ಪಂದ್ಯದ ಟಾಸ್ ಸಮಯ ಬಂದಾಗ, ಈ ಮೊದಲು ನಡೆದಿದ್ದ ಘಟನೆಯೇ ಈ ಬಾರಿಯೂ ಪುನಾರವರ್ತನೆಗೊಂಡಿತು. ಪಂದ್ಯದ ಟಾಸ್ ಮುಗಿದ ನಂತರ ಭಾರತದ ನಾಯಕ ಆಯುಷ್ ಮ್ಹಾತ್ರೆ, ಪಾಕಿಸ್ತಾನ ತಂಡದ ನಾಯಕನೊಂದಿಗೆ ಹಸ್ತಲಾಘವ ಮಾಡಲಿಲ್ಲ. ಇತ್ತ ಟಾಸ್ ಗೆದ್ದ ಪಾಕಿಸ್ತಾನ ನಾಯಕ ಫರ್ಹಾನ್ ಯೂಸುಫ್ ತಮ್ಮ ನಿರ್ಧಾರವನ್ನು ಪ್ರಕಟಿಸಿದ ಬಳಿಕ, ಭಾರತದ ನಾಯಕ ಮ್ಹಾತ್ರೆಯನ್ನು ಕಣ್ಣೆತ್ತಿಯೂ ನೋಡದೆ ಮೈಕ್ರೊಫೋನ್ ನೀಡಿ ನೇರವಾಗಿ ಡಗೌಟ್‌ಗೆ ಹೋದರು.
ಪಂದ್ಯ ಹೀಗಿದೆ
ಇನ್ನು ಈ ಪಂದ್ಯದ ಬಗ್ಗೆ ಹೇಳುವುದಾದರೆ… ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 46.1 ಓವರ್‌ಗಳಲ್ಲಿ 240 ರನ್ ಕಲೆಹಾಕಿ ತನ್ನ ಇನ್ನಿಂಗ್ಸ್ ಮುಗಿಸಿತು. ತಂಡದ ಪರ ಆರನ್ ಜಾರ್ಜ್ 88 ಎಸೆತಗಳಲ್ಲಿ 85 ರನ್ ಗಳಿಸಿದರೆ, ಕನಿಷ್ಕ್ ಚೌಹಾಣ್ 46 ರನ್ ಗಳಿಸಿದರು. ನಾಯಕ ಆಯುಷ್ ಮ್ಹಾತ್ರೆ 38 ರನ್ ಗಳಿಸಿದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:32 pm, Sun, 14 December 25
