ಸೂರ್ಯಕುಮಾರ್ ಯಾದವ್ ಮತ್ತು ದೇವಿಶಾ ಶೆಟ್ಟಿ ಮತ್ತೆ ಸುದ್ದಿಯಲ್ಲಿದ್ದಾರೆ. ಈ ಬಾರಿ ಸುದ್ದಿಯಾಗಲು ಕಾರಣ ಅವರು ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನಲ್ಲಿರುವ ಪ್ರಸಿದ್ಧ ಯಾತ್ರಾ ಸ್ಥಳ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿರುವುದು. ಭಾರತ ಟಿ20 ತಂಡದ ನಾಯಕ ಕರ್ನಾಟಕದ ದೇವಸ್ಥಾನಕ್ಕೆ ಭೇಟಿ ನೀಡುತ್ತಿರುವುದು ಇದೇ ಮೊದಲೇನಲ್ಲ.
ಈ ಹಿಂದೆ ಭಾರತ ಕ್ರಿಕೆಟ್ ತಂಡ ಟಿ20 ವಿಶ್ವಕಪ್ ಗೆದ್ದ ಬಳಿಕ ಸೂರ್ಯಕುಮಾರ್ ಯಾದವ್ ಉಡುಪಿಯ ಕಾಪು ಹೊಸ ಮಾರಿಗುಡಿ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದಿದ್ದರು. ಟಿ20 ವಿಶ್ವಕಪ್ಗೂ ಮುನ್ನ ಅವರು ಭಾರತ ತಂಡ ಟ್ರೋಫಿ ಗೆಲ್ಲಲು ವಿಶೇಷ ಹರಕೆ ಹೊತ್ತಿದ್ದರು. ಟೀಮ್ ಇಂಡಿಯಾ ವಿಶ್ವಕಪ್ ಗೆದ್ದ ಬಳಿಕ ಮಾರಿಗುಡಿ ದೇವಸ್ಥಾನಕ್ಕೆ ಭೇಟಿ ನೀಡಿ ಹರಕೆ ತೀರಿಸಿದ್ದರು. ಹೀಗೆ ದಕ್ಷಿಣ ಕನ್ನಡ ಜಿಲ್ಲೆಯೊಂದಿಗೆ ಸೂರ್ಯಕುಮಾರ್ ಯಾದವ್ಗೆ ವಿಶೇಷ ನಂಟು ಬೆಳೆಯಲು ಮುಖ್ಯ ಕಾರಣ ಅವರ ಪತ್ನಿ ದೇವಿಶಾ ಶೆಟ್ಟಿ.
ದೇವಿಶಾ ಶೆಟ್ಟಿ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಮುಂಬೈನಲ್ಲಿ ಹುಟ್ಟಿ ಬೆಳೆದ ದೇವಿಶಾ ತಮ್ಮ ಕಾಲೇಜ್ ವಿದ್ಯಾಭ್ಯಾಸ ಪೂರೈಸಿದ್ದು ಪೊದ್ದಾರ್ ಪದವಿ ಕಾಲೇಜಿನಲ್ಲಿ. ಇದೇ ಕಾಲೇಜ್ನಲ್ಲಿ ಸೂರ್ಯಕುಮಾರ್ ಯಾದವ್ ಕೂಡ ಓದಿದ್ದರು.
2012 ರಲ್ಲಿ ಕಾಲೇಜ್ನಲ್ಲಿ ನಡೆದ ನೃತ್ಯ ಕಾರ್ಯಕ್ರಮವೊಂದರಲ್ಲಿ ಸೂರ್ಯಕುಮಾರ್ ಯಾದವ್ ದೇವಿಶಾ ಶೆಟ್ಟಿ ಅವರನ್ನು ನೋಡಿದ್ದಾರೆ. ಇದೇ ವೇಳೆ ದೇವಿಶಾ ಅವರು ಮಾಡಿದ ನೃತ್ಯಕ್ಕೆ ಫಿದಾ ಆಗಿದ್ದರು. ಆಗ ಸೂರ್ಯಕುಮಾರ್ ಸೀನಿಯರ್ ಆಗಿದ್ದರೆ, ದೇವಿಶಾ ಜೂನಿಯರ್ ವಿದ್ಯಾರ್ಥಿನಿ.
ದೇವೀಶಾರ ನೃತ್ಯನ್ನು ನೋಡಿ ಮೊದಲ ನೋಟದಲ್ಲೇ ಬೌಲ್ಡ್ ಆಗಿದ್ದ ಸೂರ್ಯಕುಮಾರ್ ನಿಧಾನವಾಗಿ ಅವರೊಂದಿಗೆ ಸ್ನೇಹ ಬೆಳೆಸಿದ್ದಾರೆ. ಈ ಸ್ನೇಹವು ಕೆಲವೇ ದಿನಗಳಲ್ಲಿ ಪ್ರೇಮವಾಗಿದೆ. ಅಲ್ಲದೆ ದೇವಿಶಾ ಅವರ ಮೇಲಿನ ಪ್ರೀತಿಯನ್ನು ಸೂರ್ಯಕುಮಾರ್ ಯಾದವ್ ವ್ಯಕ್ತಪಡಿಸಿದ್ದಾರೆ.
ಸೂರ್ಯನ ಪ್ರೇಮ ನಿವೇದನೆಯನ್ನು ದೇವಿಶಾ ಶೆಟ್ಟಿ ಕೂಡ ಒಪ್ಪಿಕೊಂಡಿದ್ದರು. ಅಲ್ಲದೆ 2012 ರಿಂದ 2016 ರವರೆಗೆಇಬ್ಬರು ಪ್ರೇಮಪಕ್ಷಿಗಳಾಗಿ ತಿರುಗಾಡಿದ್ದರು. ಇನ್ನು 2016 ರಲ್ಲಿ ತಮ್ಮ ಪ್ರೇಮ ವಿಚಾರವನ್ನು ಮನೆಯವರಲ್ಲಿ ಪ್ರಸ್ತಾಪಿಸಿದ್ದಾರೆ. ಆದರೆ ಅದಾಗಲೇ ಐಪಿಎಲ್ ಮೂಲಕ ಸದ್ದು ಮಾಡಿದ್ದ ಸೂರ್ಯನನ್ನು ದೇವಿಶಾ ಕುಟುಂಬದವರು ಒಪ್ಪಿದ್ದಾರೆ. ಇತ್ತ ಸೂರ್ಯಕುಮಾರ್ ಯಾದವ್ ಅವರ ಕುಟುಂಬದವರಿಗೂ ದೇವಿಶಾ ಇಷ್ಟವಾಗಿದ್ದರು.
ಇದನ್ನೂ ಓದಿ: IPL 2025: RCB ಅಂಗಳದಲ್ಲಿ ಅಶುತೋಷ್ ಶರ್ಮಾ
ಹೀಗಾಗಿ ಮೇ 29, 2016 ರಲ್ಲಿ ಇಬ್ಬರ ನಿಶ್ಚಿತಾರ್ಥ ನೆರವೇರಿಸಿದ್ದರು. ಇದಾದ ಬಳಿಕ ಸೂರ್ಯಕುಮಾರ್ ಮತ್ತು ದೇವಿಶಾ ಶೆಟ್ಟಿ ದಕ್ಷಿಣ ಭಾರತದ ಸಂಪ್ರದಾಯದಂತೆ ಜುಲೈ 7, 2016 ರಂದು ವಿವಾಹವಾದರು. ಇದೀಗ ಇಬ್ಬರು ಮಾದರಿ ದಂಪತಿಗಳಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅದರಲ್ಲೂ ಮುಂಬೈನಲ್ಲೇ ಬೆಳೆದರೂ ತವರಿನ ನಂಟು ಬಿಟ್ಟುಕೊಳ್ಳದ ದೇವಿಶಾ ಶೆಟ್ಟಿ ಆಗಾಗ್ಗೆ ಪತಿ ಸೂರ್ಯಕುಮಾರ್ ಯಾದವ್ ಜೊತೆ ತುಳುನಾಡಿಗೆ ಬರುವ ಮೂಲಕ ಸುದ್ದಿಯಾಗುತ್ತಿದ್ದಾರೆ.