ಭಾರತ-ವೆಸ್ಟ್ ಇಂಡೀಸ್ (India vs West Indies) ನಡುವಣ 3ನೇ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ (Team India) ಭರ್ಜರಿ ಜಯ ಸಾಧಿಸಿತು. ಈ ಪಂದ್ಯದಲ್ಲಿ ಸ್ಪೋಟಕ ಇನಿಂಗ್ಸ್ ಆಡುವ ಮೂಲಕ ಸೂರ್ಯಕುಮಾರ್ ಯಾದವ್ (Suryakumar Yadav) ಗೆಲುವಿನ ರೂವಾರಿ ಎನಿಸಿಕೊಂಡಿದ್ದರು. ಅದರಲ್ಲೂ ವೇಗಿ ಅಲ್ಝಾರಿ ಜೋಸೆಫ್ ಎಸೆದ ಬೌನ್ಸರ್ಗೆ ಭರ್ಜರಿ ಪ್ರತ್ಯುತ್ತರ ನೀಡುವ ಮೂಲಕ ಎಲ್ಲರನ್ನು ನಿಬ್ಬೆರಗಾಗಿಸಿದ್ದರು. 10ನೇ ಓವರ್ ಬೌಲಿಂಗ್ ಮಾಡಿದ್ದ ಅಲ್ಝಾರಿ ಜೋಸೆಫ್ ಸೂರ್ಯಕುಮಾರ್ ಅವರನ್ನು ಟಾರ್ಗೆಟ್ ಮಾಡಿದ್ದರು. ಏಕೆಂದರೆ ಟೀಮ್ ಇಂಡಿಯಾ ಪರ ಭರ್ಜರಿ ಬ್ಯಾಟಿಂಗ್ ನಡೆಸುತ್ತಿದ್ದ ಸೂರ್ಯನ ವಿಕೆಟ್ ವಿಂಡೀಸ್ಗೆ ಅತ್ಯಗತ್ಯವಾಗಿತ್ತು. ಅತ್ತ 360 ಡಿಗ್ರಿಯಲ್ಲಿ ಬ್ಯಾಟ್ ಬೀಸುತ್ತಿದ್ದ ಟೀಮ್ ಇಂಡಿಯಾ ಬ್ಯಾಟ್ಸ್ಮನ್ನನ್ನು ಔಟ್ ಮಾಡುವುದು ಸುಲಭವಾಗಿರಲಿಲ್ಲ.
ಮೊದಲ ಐದು ಎಸೆತಗಳನ್ನು ನಿರಾಯಾಸವಾಗಿ ಎದುರಿಸಿದ ಸೂರ್ಯಕುಮಾರ್ ಯಾದವ್ಗೆ ಅಲ್ಝಾರಿ ಜೋಸೆಫ್ ಕೊನೆಯ ಎಸೆತದಲ್ಲಿ ಬೌನ್ಸರ್ ಎಸೆದರು. ಅತ್ತ ಮುಖದತ್ತ ನೇರವಾಗಿ ಬಂದ ಚೆಂಡನ್ನು ಅದ್ಭುತವಾಗಿ ಎದುರಿಸುವ ಮೂಲಕ ಬೌಂಡರಿ ಬಾರಿಸಿದರು.
ಈ ಅದ್ಭುತ ಶಾಟ್ ನೋಡಿ ಕಾಮೆಂಟ್ರಿ ಪ್ಯಾನೆಲ್ನಿಂದ ಕೇಳಿಬಂದಿದ್ದು ಒಂದೇ ಉತ್ತರ..ವಾಟ್ ಎ ಶಾಟ್. ಅಷ್ಟೇ ಅಲ್ಲದೆ ಈ ಅದ್ಭುತ ಹೊಡೆತಕ್ಕೆ ಕ್ರಿಕೆಟ್ ಪ್ರೇಮಿಗಳು ಕೂಡ ಫಿದಾ ಆಗಿದ್ದಾರೆ. ಇದೀಗ ಈ ಭರ್ಜರಿ ಹೊಡೆತದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಮೆಚ್ಚುಗೆ ಸೂಚಿಸುತ್ತಿದ್ದಾರೆ.
How good was that shot from @surya_14kumar? Let us know in the comments.
Watch all the action from the India tour of West Indies LIVE, only on #FanCode ? https://t.co/RCdQk12YsM@BCCI @windiescricket #WIvIND #INDvsWIonFanCode #INDvsWI pic.twitter.com/ym1JkZjb1r
— FanCode (@FanCode) August 2, 2022
ಇನ್ನು ಈ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ನೀಡಿದ 165 ರನ್ಗಳ ಟಾರ್ಗೆಟ್ ಪಡೆದ ಟೀಮ್ ಇಂಡಿಯಾ ಪರ ರೋಹಿತ್ ಶರ್ಮಾ ಹಾಗೂ ಸೂರ್ಯಕುಮಾರ್ ಯಾದವ್ ಇನಿಂಗ್ಸ್ ಆರಂಭಿಸಿದ್ದರು. ಆದರೆ 11 ರನ್ಗಳಿಸಿದ್ದ ವೇಳೆ ಗಾಯಗೊಂಡ ರೋಹಿತ್ ಶರ್ಮಾ ಅರ್ಧದಲ್ಲೇ ಮೈದಾನ ತೊರೆದರು. ಈ ಹಂತದಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ ಸೂರ್ಯಕುಮಾರ್ ಯಾದವ್ ವಿಂಡೀಸ್ ವೇಗಿಗಳ ಬೆಂಡೆತ್ತಿದ್ದರು. ಮತ್ತೊಂದೆಡೆ 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಶ್ರೇಯಸ್ ಅಯ್ಯರ್ (24) ಉತ್ತಮ ಸಾಥ್ ನೀಡಿದರು.
ಬಿರುಸಿನ ಇನಿಂಗ್ಸ್ ಆಡಿದ ಸೂರ್ಯಕುಮಾರ್ ಯಾದವ್ ಸಿಕ್ಸ್-ಫೋರ್ಗಳ ಸುರಿಮಳೆಯೊಂದಿಗೆ 26 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಇದಾದ ಬಳಿಕ ರನ್ ವೇಗವನ್ನು ಹೆಚ್ಚಿಸಿ ಸೂರ್ಯ 4 ಸಿಕ್ಸ್ ಹಾಗೂ 8 ಫೋರ್ಗಳನ್ನು ಬಾರಿಸಿದರು. ಅಲ್ಲದೆ ಕೇವಲ 50 ಎಸೆತಗಳಲ್ಲಿ 76 ರನ್ ಸಿಡಿಸುವ ಮೂಲಕ ತಂಡವನ್ನು ಗುರಿಯತ್ತ ಕೊಂಡೊಯ್ದರು.
14.3 ಓವರ್ಗಳಲ್ಲಿ ತಂಡದ ಮೊತ್ತ 135 ರನ್ ಆಗಿದ್ದ ವೇಳೆ ಅಲ್ಝಾರಿ ಜೋಸೆಫ್ ಎಸೆತದಲ್ಲಿ ಸೂರ್ಯಕುಮಾರ್ ಯಾದವ್ ವಿಕೆಟ್ ಒಪ್ಪಿಸಿ ಹೊರನಡೆದರು. ಆದರೆ ಅದಾಗಲೇ ಟೀಮ್ ಇಂಡಿಯಾ ಒಂಪೂರ್ಣ ಒತ್ತಡದಿಂದ ಪಾರಾಗಿತ್ತು. ಹೀಗಾಗಿ ಅಂತಿಮ ಹಂತದಲ್ಲಿ ರಿಷಭ್ ಪಂತ್ (33) ಹಾಗೂ ದೀಪಕ್ ಹೂಡಾ (10) ಉತ್ತಮ ಹೊಂದಾಣಿಕೆಯ ಆಟ ಪ್ರದರ್ಶಿಸಿ 19 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 165 ರನ್ಗಳ ಗುರಿ ತಲುಪಿಸಿದರು. ಇದರೊಂದಿಗೆ ಟೀಮ್ ಇಂಡಿಯಾ 7 ವಿಕೆಟ್ಗಳ ಭರ್ಜರಿ ಜಯ ಸಾಧಿಸಿ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿತು. ಇನ್ನು ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದ ಸೂರ್ಯಕುಮಾರ್ ಯಾದವ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.