
ಬೆಂಗಳೂರು (ಸೆ. 15): 2025 ರ ಏಷ್ಯಾ ಕಪ್ ನಲ್ಲಿ ಭಾರತ ತಂಡ (Indian Cricket Team) ಪಾಕಿಸ್ತಾನ ವಿರುದ್ಧ ಏಕಪಕ್ಷೀಯ ಜಯ ಸಾಧಿಸಿತು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ 127 ರನ್ ಗಳಿಸಿತು. ಇದಕ್ಕೆ ಪ್ರತಿಯಾಗಿ ಭಾರತ ತಂಡ 3 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಈ ಪಂದ್ಯಕ್ಕೆ ಭಾರತದಲ್ಲಿ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಕಾರಣ ಈ ವರ್ಷದ ಏಪ್ರಿಲ್ ನಲ್ಲಿ ಪಾಕಿಸ್ತಾನಿ ಭಯೋತ್ಪಾದಕರು ಪಹಲ್ಗಾಮ್ ನಲ್ಲಿ 26 ಅಮಾಯಕ ಜನರನ್ನು ಕೊಂದರು. ಇದರ ನಂತರ ಭಾರತ, ಆಪರೇಷನ್ ಸಿಂಧೂರ್ ಅನ್ನು ಪ್ರಾರಂಭಿಸಿತು. ಎರಡೂ ದೇಶಗಳ ನಡುವೆ ಯುದ್ಧದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.
ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಪಂದ್ಯದ ನಂತರದ ಸಂದರ್ಶನದಲ್ಲಿ ನೀಡಿದ ಹೇಳಿಕೆಯಿಂದ ಎಲ್ಲರ ಹೃದಯ ಗೆದ್ದರು. ಅವರು ಈ ಗೆಲುವನ್ನು ಭಾರತೀಯ ಭದ್ರತಾ ಪಡೆಗಳಿಗೆ ಅರ್ಪಿಸಿದರು ಮತ್ತು ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಪ್ರಾಣ ಕಳೆದುಕೊಂಡವರೊಂದಿಗೆ ನಿಲ್ಲುವ ಬಗ್ಗೆಯೂ ಮಾತನಾಡಿದರು. ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ನಲ್ಲಿ ಮಾತನಾಡಿದ ಸೂರ್ಯ, ‘ಒಂದು ವಿಷಯ ಹೇಳಲು ಬಯಸಿದ್ದೆ. ಇದು ಸೂಕ್ತ ಅವಕಾಶ, ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬಗಳೊಂದಿಗೆ ನಾವು ನಿಲ್ಲುತ್ತೇವೆ. ನಾವು ನಮ್ಮ ಒಗ್ಗಟ್ಟನ್ನು ವ್ಯಕ್ತಪಡಿಸುತ್ತೇವೆ’ ಎಂದು ಹೇಳಿದರು.
ಮಾತು ಮುಂದುವರೆಸಿದ ಭಾರತೀಯ ನಾಯಕ, ‘ಈ ವಿಜಯವನ್ನು ನಮ್ಮ ಎಲ್ಲಾ ಸಶಸ್ತ್ರ ಪಡೆಗಳಿಗೆ ಅರ್ಪಿಸಲು ಬಯಸುತ್ತೇನೆ, ಅವರು ಅದಮ್ಯ ಧೈರ್ಯವನ್ನು ತೋರಿಸಿದ್ದಾರೆ. ಅವರು ನಮಗೆ ಸದಾ ಸ್ಫೂರ್ತಿ ನೀಡುತ್ತಲೇ ಇರುತ್ತಾರೆ ಎಂದು ಭಾವಿಸುತ್ತೇವೆ ಮತ್ತು ನಮಗೆ ಅವಕಾಶ ಸಿಕ್ಕಾಗಲೆಲ್ಲಾ ನಾವು ಅವರಿಗೆ ಮೈದಾನದಲ್ಲಿ ನಗಲು ಹೆಚ್ಚಿನ ಕಾರಣಗಳನ್ನು ನೀಡುತ್ತೇವೆ” ಎಂದು ಹೇಳಿದರು.
IND vs PAK: ಫಲಿಸಿತು ಕೋಟ್ಯಾಂತರ ಭಾರತೀಯರ ಪ್ರಾರ್ಥನೆ; ಪಾಕ್ ಬಗ್ಗುಬಡಿದ ಭಾರತ
ನಿನ್ನೆ (ಸೆ. 14) ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಅವರ ಹುಟ್ಟುಹಬ್ಬವೂ ಆಗಿತ್ತು. ಈ ಗೆಲುವು ಆಹ್ಲಾದಕರ ಅನುಭವ ಮತ್ತು ಈ ಗೆಲುವು ಭಾರತಕ್ಕೆ ನನ್ನಿಂದ ಬಂದ ಅತ್ಯುತ್ತಮ ರಿಟರ್ನ್ ಗಿಫ್ಟ್ ಎಂದು ಅವರು ಹೇಳಿದರು. ನಾನು ಯಾವಾಗಲೂ ಕೊನೆಯವರೆಗೂ ಕ್ರೀಸ್‌ನಲ್ಲಿರಲು ಪ್ರಯತ್ನಿಸುತ್ತೇನೆ ಮತ್ತು ಇಂದು ಪಂದ್ಯವನ್ನು ಮುಗಿಸಿದ್ದು ನನಗೆ ತುಂಬಾ ಸಂತೋಷವಾಗಿದೆ ಎಂಬುದು ಅವರ ಮಾತು.
ಸೂರ್ಯ ಸಿಕ್ಸರ್ ಬಾರಿಸುವ ಮೂಲಕ ಪಂದ್ಯವನ್ನು ಮುಗಿಸಿದರು. ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ 9 ವಿಕೆಟ್‌ಗಳಿಗೆ 127 ರನ್ ಗಳಿಸಿತು. ಭಾರತ ತಂಡವು 16 ನೇ ಓವರ್‌ನಲ್ಲಿ ಪಂದ್ಯವನ್ನು ಗೆದ್ದಿತು. ನಾಯಕ ಸೂರ್ಯ ತಮ್ಮ ಬ್ಯಾಟ್‌ನಿಂದ ಅತ್ಯಧಿಕ 47 ರನ್ ಗಳಿಸಿದರು. ಇವರಿಗೆ ಅತ್ಯುತ್ತಮ ಸಾಥ್ ನೀಡಿದ ತಿಲಕ್ ವರ್ಮಾ 31 ರನ್ ಬಾರಿಸಿದರು. ಪಾಕ್ನ 3 ವಿಕೆಟ್ ಕಿತ್ತ ಕುಲ್ದೀಪ್ ಯಾದವ್ ಪಂದ್ಯಶ್ರೇಷ್ಠ ಪ್ರಶಸ್ತಿ ಬಾಚಿಕೊಂಡರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:16 am, Mon, 15 September 25