29 ಎಸೆತಗಳಲ್ಲಿ 82 ರನ್ ಚಚ್ಚಿದ ಸೂರ್ಯ..! ಟೀಕಾಕಾರರ ಬಾಯಿ ಮುಚ್ಚಿಸಿದ SKY
ಸೂರ್ಯಕುಮಾರ್ ಯಾದವ್ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಗುಜರಾತ್ ವಿರುದ್ಧ 29 ಎಸೆತಗಳಲ್ಲಿ 82 ರನ್ ಸಿಡಿಸಿ ಅಬ್ಬರಿಸಿದ್ದಾರೆ. 7 ಸಿಕ್ಸರ್, 9 ಬೌಂಡರಿಗಳ ಮೂಲಕ ಮುಂಬೈ ತಂಡಕ್ಕೆ 198 ರನ್‌ಗಳ ಗುರಿಯನ್ನು ಸುಲಭವಾಗಿ ಬೆನ್ನಟ್ಟಲು ನೆರವಾದರು. ಸತತ ಎರಡನೇ ವಿಜಯದ ನಂತರ, ಸೂರ್ಯ ಅವರ ಸ್ಫೋಟಕ ಬ್ಯಾಟಿಂಗ್ ಭಾರತ ತಂಡಕ್ಕೆ ಮರಳುವ ಭರವಸೆಯನ್ನು ಹೆಚ್ಚಿಸಿದೆ.

ಟೀಕೆಗಳಿಗೆ ತಲೆಕೆಡಿಸಿಕೊಳ್ಳದೆ ತಮ್ಮ ಬ್ಯಾಟಿಂಗ್ ಮೂಲಕವೇ ಉತ್ತರಿಸುವ ಕಲೆಯನ್ನು ಟೀಂ ಇಂಡಿಯಾದ ಸ್ಫೋಟಕ ಬ್ಯಾಟರ್ ಸೂರ್ಯಕುಮಾರ್ ಯಾದವ್ ಮತ್ತೊಮ್ಮೆ ಪ್ರದರ್ಶಿಸಿದ್ದಾರೆ. ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಗುಜರಾತ್ ವಿರುದ್ಧ ನಡೆದ ಪಂದ್ಯದಲ್ಲಿ ಸೂರ್ಯಕುಮಾರ್ ಅಕ್ಷರಶಃ ಅಬ್ಬರಿಸಿದ್ದಾರೆ. ಕೇವಲ 29 ಎಸೆತಗಳನ್ನು ಎದುರಿಸಿದ ಅವರು ಬರೋಬ್ಬರಿ 82 ರನ್ ಸಿಡಿಸಿ ಎದುರಾಳಿ ಬೌಲರ್‌ಗಳ ಬೆವರಿಳಿಸಿದ್ದಾರೆ. ತಮ್ಮ ಸ್ಫೋಟಕ ಇನ್ನಿಂಗ್ಸ್‌ನಲ್ಲಿ 7 ಭರ್ಜರಿ ಸಿಕ್ಸರ್ ಹಾಗೂ 9 ಬೌಂಡರಿಗಳನ್ನು ಬಾರಿಸಿದ ಸೂರ್ಯ, 282ಕ್ಕೂ ಅಧಿಕ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದರು. ಅವರ ಈ ಅಬ್ಬರದ ನೆರವಿನಿಂದ ಮುಂಬೈ ತಂಡ 198 ರನ್‌ಗಳ ಗುರಿಯನ್ನು ಕೇವಲ 15.4 ಓವರ್‌ಗಳಲ್ಲೇ ಬೆನ್ನಟ್ಟಿ ಗೆಲುವಿನ ನಗೆ ಬೀರಿತು.
ಮೈದಾನದಲ್ಲಿ ಸೂರ್ಯನ ಅಬ್ಬರ
198 ರನ್‌ಗಳ ಕಠಿಣ ಗುರಿ ಬೆನ್ನಟ್ಟಿದ ಮುಂಬೈ ತಂಡಕ್ಕೆ ಆರಂಭದಲ್ಲೇ ಆಘಾತ ಎದುರಾಗಿತ್ತು. ಕೇವಲ ಎರಡು ಓವರ್‌ಗಳಲ್ಲೇ ಎರಡು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಅಂಗ್‌ಕ್ರಿಶ್ ರಘುವಂಶಿ 4 ರನ್ ಹಾಗೂ ಮುಶೀರ್ ಖಾನ್ 14 ರನ್ ಗಳಿಸಿ ಪೆವಿಲಿಯನ್ ಸೇರಿದ್ದರು. ಈ ವೇಳೆ ಕ್ರೀಸ್‌ಗೆ ಬಂದ ನಾಯಕ ಸೂರ್ಯಕುಮಾರ್ ಯಾದವ್ ಪಂದ್ಯದ ಚಿತ್ರಣವನ್ನೇ ಬದಲಿಸಿದರು. ತಾವು ಎದುರಿಸಿದ ಮೂರನೇ ಎಸೆತದಲ್ಲೇ ಸಿಕ್ಸರ್ ಬಾರಿಸುವ ಮೂಲಕ ಅಬ್ಬರ ಆರಂಭಿಸಿದರು. ಐದನೇ ಓವರ್‌ನಲ್ಲಿ ಮತ್ತೆ ಎರಡು ಸಿಕ್ಸರ್ ಸಿಡಿಸಿ ಎದುರಾಳಿ ಬೌಲರ್‌ಗಳಿಗೆ ಎಚ್ಚರಿಕೆ ನೀಡಿದರು.
ಕೇವಲ 18 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಸೂರ್ಯ, ಅಂತಿಮವಾಗಿ 29 ಎಸೆತಗಳಲ್ಲಿ 82 ರನ್ ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಮತ್ತೊಂದೆಡೆ ಸರ್ಫರಾಜ್ ಖಾನ್ ಕೂಡ ತಮ್ಮ ಸ್ಫೋಟಕ ಬ್ಯಾಟಿಂಗ್ ಮುಂದುವರಿಸಿ ಕೇವಲ 17 ಎಸೆತಗಳಲ್ಲಿ ಅಜೇಯ 40 ರನ್ ಗಳಿಸಿದರು. ಈ ಮೂಲಕ ಮುಂಬೈ ಸತತ ಎರಡನೇ ಗೆಲುವು ದಾಖಲಿಸಿತು.
ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಸೂರ್ಯನ ಅಬ್ಬರ
ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಮುಂಬೈ ತಂಡದ ನಾಯಕತ್ವ ವಹಿಸಿರುವ ಸೂರ್ಯಕುಮಾರ್ ಯಾದವ್ ಸತತ ಎರಡು ಪಂದ್ಯಗಳಲ್ಲೂ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. ಟೂರ್ನಿಯ ಮೊದಲ ಪಂದ್ಯದಲ್ಲಿ 21 ಎಸೆತಗಳನ್ನು ಎದುರಿಸಿ ಅಜೇಯ 60 ರನ್ ಗಳಿಸಿದ್ದ ಅವರು, ಇದೀಗ ಗುಜರಾತ್ ವಿರುದ್ಧವೂ 82 ರನ್ ಸಿಡಿಸಿದ್ದಾರೆ. ಈ ಎರಡು ಇನ್ನಿಂಗ್ಸ್‌ಗಳಲ್ಲಿ ಒಟ್ಟು 50 ಎಸೆತಗಳನ್ನು ಎದುರಿಸಿರುವ ಸೂರ್ಯ, 12 ಸಿಕ್ಸರ್ ಹಾಗೂ 15 ಬೌಂಡರಿಗಳನ್ನು ಬಾರಿಸಿ ತಮ್ಮ ಸ್ಫೋಟಕ ಆಟದ ಮೂಲಕ ಗಮನ ಸೆಳೆದಿದ್ದಾರೆ.
ಬಾಲಕಿಯ ಕನ್ನಡ ಭಕ್ತಿಗೀತೆ ಕೇಳಿ ಮೋದಿ ಮೆಚ್ಚುಗೆ; ಸೂರ್ಯಕುಮಾರ್ ಜೊತೆಗಿನ ವಿಡಿಯೋದಲ್ಲಿ ಏನಿದೆ?
ಟೀಂ ಇಂಡಿಯಾಗೆ ಮರಳುವ ನಿರೀಕ್ಷೆ
ಸತತವಾಗಿ ಉತ್ತಮ ಪ್ರದರ್ಶನ ನೀಡುತ್ತಿರುವ ಸೂರ್ಯಕುಮಾರ್ ಯಾದವ್ ಇದೀಗ ಭಾರತ ತಂಡಕ್ಕೆ ಮರಳುವ ನಿರೀಕ್ಷೆಯಲ್ಲಿದ್ದಾರೆ. ದೇಶೀಯ ಟೂರ್ನಿಯಲ್ಲಿ ತಮ್ಮ ಸಾಮರ್ಥ್ಯ ಸಾಬೀತುಪಡಿಸುವ ಮೂಲಕ ಆಯ್ಕೆಗಾರರ ಗಮನ ಸೆಳೆಯುತ್ತಿದ್ದಾರೆ. ಆದರೆ ಭಾರತ ತಂಡಕ್ಕೆ ಮರಳಬೇಕಾದರೆ ಇದೇ ರೀತಿಯ ಪ್ರದರ್ಶನವನ್ನು ಮುಂದುವರಿಸುವುದು ಸೂರ್ಯಗೆ ಮುಖ್ಯವಾಗಿದೆ. ಸತತವಾಗಿ ರನ್ ಗಳಿಸಿ ತಮ್ಮ ಫಾರ್ಮ್ ಸಾಬೀತುಪಡಿಸಿದರೆ ರಾಷ್ಟ್ರೀಯ ತಂಡಕ್ಕೆ ಪುನರಾಗಮನ ಮಾಡುವ ಅವಕಾಶ ಸಿಗಬಹುದು. ಇದೀಗ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಸೂರ್ಯ ತೋರಿಸುತ್ತಿರುವ ಬ್ಯಾಟಿಂಗ್ ಅಬ್ಬರ ಕ್ರಿಕೆಟ್ ಅಭಿಮಾನಿಗಳಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ.
