
54ನೇ ಅಖಿಲ ಭಾರತ ಎಫ್‌ಸಿಐ ಅಂತರ ವಲಯ ಕ್ರಿಕೆಟ್ ಟೂರ್ನಮೆಂಟ್ನ ಫೈನಲ್ ಪಂದ್ಯದಲ್ಲಿ ಉತ್ತರ ವಲಯ ತಂಡ ಭರ್ಜರಿ ಗೆಲುವು ಸಾಧಿಸಿದೆ. ಈ ಗೆಲುವಿನ ರೂವಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಆಟಗಾರ ಸ್ವಸ್ತಿಕ್ ಚಿಕಾರ. ತಮಿಳುನಾಡಿನ ಸೇಲಂನಲ್ಲಿನ ಜಿವಿಎಸ್ ಕ್ಲಬ್ ಮೈದಾನದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಉತ್ತರ ವಲಯ ಹಾಗೂ ಪಶ್ಚಿಮ ವಲಯ ತಂಡಗಳು ಮುಖಾಮುಖಿಯಾಗಿದ್ದವು.
ಈ ಪಂದ್ಯದಲ್ಲಿ ಟಾಸ್ ಗೆದ್ದ ಪಶ್ಚಿಮ ವಲಯ ಬೌಲಿಂಗ್ ಆಯ್ದುಕೊಂಡರು. ಅದರಂತೆ ಮೊದಲು ಬ್ಯಾಟ್ ಮಾಡಿದ ಉತ್ತರ ವಲಯ ಪರ ಸ್ವಸ್ತಿಕ್ ಚಿಕಾರ ಹಾಗೂ ನಿತಿನ್ ಸೈನಿ ಆರಂಭಿಕರಾಗಿ ಕಣಕ್ಕಿಳಿದಿದ್ದರು. ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್ಗೆ ಒತ್ತು ನೀಡಿದ ಈ ಜೋಡಿಯು ಮೊದಲ ವಿಕೆಟ್ಗೆ 145 ರನ್ಗಳ ಜೊತೆಯಾಟವಾಡಿದರು.
ಈ ಹಂತದಲ್ಲಿ ಬಿರುಸಿನ ಹೊಡೆತಕ್ಕೆ ಮುಂದಾಗಿ ನಿತಿನ್ ಸೈನಿ (55) ವಿಕೆಟ್ ಒಪ್ಪಿಸಿದರು. ಇದಾಗ್ಯೂ ಮತ್ತೊಂದೆಡೆ ಆರ್ಭಟ ಮುಂದುವರೆಸಿದ ಸ್ವಸ್ತಿಕ್ ಚಿಕಾರ ಪಶ್ಚಿಮ ವಲಯ ಬೌಲರ್ಗಳ ಬೆಂಡೆತ್ತಿದರು. ಈ ಮೂಲಕ ಕೇವಲ 62 ಎಸೆತಗಳಲ್ಲಿ ಶತಕ ಪೂರೈಸಿದರು.
ಶತಕದ ಬಳಿಕ 6 ಎಸೆತಗಳನ್ನು ಎದುರಿಸಿದ ಸ್ವಸ್ತಿಕ್ ಚಿಕಾರ ಮತ್ತೆರಡು ಸಿಕ್ಸ್ ಸಿಡಿಸಿದರು. ಈ ಮೂಲಕ ಕೇವಲ 68 ಎಸೆತಗಳಲ್ಲಿ 11 ಸಿಕ್ಸ್ ಹಾಗೂ 1 ಫೋರ್ನೊಂದಿಗೆ 114 ರನ್ ಚಚ್ಚಿದರು. ಸ್ವಸ್ತಿಕ್ ಚಿಕಾರ ಅವರ ಈ ಸ್ಫೋಟಕ ಸೆಂಚುರಿ ನೆರವಿನೊಂದಿಗೆ ಉತ್ತರ ವಲಯ ತಂಡ 20 ಓವರ್ಗಳಲ್ಲಿ 2 ವಿಕೆಟ್ ಕಳೆದುಕೊಂಡು 197 ರನ್ ಕಲೆಹಾಕಿತು.
198 ರನ್ಗಳ ಕಠಿಣ ಗುರಿ ಬೆನ್ನತ್ತಿದ ಪಶ್ಚಿಮ ವಲಯ ತಂಡಕ್ಕೆ ಸಾಹಿಲ್ ಪರಕ್ (46) ಹಾಗೂ ಓಂಕಾರ್ ಗೌರವ್ (23) ಉತ್ತಮ ಆರಂಭ ಒದಗಿಸಿದ್ದರು. ಇನ್ನು ಮಧ್ಯಮ ಕ್ರಮಾಂಕದಲ್ಲಿ ದಶರತ್ ಚಾವನ್ 29 ಎಸೆತಗಳಲ್ಲಿ 47 ರನ್ ಬಾರಿಸಿದರು. ಆದರೆ ಆ ಬಳಿಕ ದಿಢೀರ್ ಕುಸಿತಕ್ಕೊಳಗಾದ ಪಶ್ಚಿಮ ವಲಯ ತಂಡವು 18.3 ಓವರ್ಗಳಲ್ಲಿ 160 ರನ್ಗಳಿಸಿ ಆಲೌಟ್ ಆಯಿತು.
ಇದನ್ನೂ ಓದಿ: ಮೊಹಮ್ಮದ್ ಸಿರಾಜ್ಗೆ ಬರೋಬ್ಬರಿ 80 ಲಕ್ಷ ರೂ..!
ಈ ಮೂಲಕ ಉತ್ತರ ವಲಯ ತಂಡವು 37 ರನ್ಗಳ ಭರ್ಜರಿ ಜಯ ಸಾಧಿಸಿ ಅಖಿಲ ಭಾರತ ಎಫ್‌ಸಿಐ ಅಂತರ ವಲಯ ಕ್ರಿಕೆಟ್ ಟೂರ್ನಮೆಂಟ್ನಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಇನ್ನು ಈ ಪಂದ್ಯದಲ್ಲಿ ಭರ್ಜರಿ ಸೆಂಚುರಿ ಸಿಡಿಸಿ ಮಿಂಚಿದ ಸ್ವಸ್ತಿಕ್ ಚಿಕಾರ ಆವರು ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.