ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ (Syed Mushtaq Ali Trophy 2021) ಸತತ ನಾಲ್ಕು ಗೆಲುವು ದಾಖಲಿಸಿ ಅಬ್ಬರಿಸಿದ್ದ ಕರ್ನಾಟಕ ತಂಡಕ್ಕೆ ಸೋಲುಣಿಸುವಲ್ಲಿ ಕೊನೆಗೂ ಬೆಂಗಾಲ್ ತಂಡ ಯಶಸ್ವಿಯಾಗಿದೆ. ಮೊದಲ ಪಂದ್ಯದಲ್ಲಿ ಮುಂಬೈ ವಿರುದ್ದ ಗೆದ್ದ ಕರ್ನಾಟಕ, ಆ ಬಳಿಕ ಛತ್ತೀಸ್ಗಢ್, ಸರ್ವೀಸಸ್ ಹಾಗೂ ಬರೋಡಾ ವಿರುದ್ದ ಭರ್ಜರಿ ಜಯ ಸಾಧಿಸಿತ್ತು. ಆದರೆ ಐದನೇ ಪಂದ್ಯದಲ್ಲಿ ಬೆಂಗಾಲ್ ವಿರುದ್ದ 7 ವಿಕೆಟ್ಗಳಿಂದ ಸೋಲನುಭವಿಸುವ ಮೂಲಕ ಕರ್ನಾಟಕ ಲೀಗ್ ಹಂತವನ್ನು ಮುಗಿಸಿದೆ. ಗೌವಾಟಿಯ ನೆಹರು ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಕರ್ನಾಟಕ ತಂಡದ ನಾಯಕ ಮನೀಷ್ ಪಾಂಡೆ ಬ್ಯಾಟಿಂಗ್ ಆಯ್ದುಕೊಂಡರು.
ಆದರೆ ನಾಯಕನ ನಿರೀಕ್ಷೆಯನ್ನು ಹುಸಿಗೊಳಿಸಿದಂತೆ ಮಯಾಂಕ್ ಅಗರ್ವಾಲ್ (4) ಹಾಗೂ ದೇವದತ್ ಪಡಿಕ್ಕಲ್ ಆರಂಭದಲ್ಲೇ ವಿಕೆಟ್ ಒಪ್ಪಿಸಿದರು. ಆ ಬಳಿಕ ಬಂದ ಮನೀಷ್ ಪಾಂಡೆ ಹಾಗೂ ಕರುಣ್ ನಾಯರ್ 61 ರನ್ಗಳ ಉತ್ತಮ ಜೊತೆಯಾಟವಾಡಿದರು. ಅದರಂತೆ ಪಾಂಡೆ 32 ರನ್ಗಳಿಸಿದರೆ, ಕರುಣ್ ನಾಯರ್ 44 ರನ್ ಕಲೆಹಾಕಿದರು. ಆದರೆ ಇವರಿಬ್ಬರು ವಿಕೆಟ್ ಒಪ್ಪಿಸುತ್ತಿದ್ದಂತೆ ಮತ್ತೆ ಕರ್ನಾಟಕ ಕುಸಿತಕ್ಕೆ ಒಳಗಾಯಿತು.
ಅನಿರುದ್ಧ್ ಜೋಶಿ (14), ಶರತ್ ಬಿಆರ್ (10), ವೈಶಾಖ್ (3) ಬ್ಯಾಕ್ ಟು ಬ್ಯಾಕ್ ವಿಕೆಟ್ ಒಪ್ಪಿಸಿದರು. ಅಂತಿಮವಾಗಿ ಕರ್ನಾಟಕ ತಂಡವು ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 134 ರನ್ಗಳಿಸಲಷ್ಟೇ ಶಕ್ತರಾದರು. ಬೆಂಗಾಲ್ ಪರ ಮುಖೇಶ್ ಕುಮಾರ್ 3 ವಿಕೆಟ್ ಪಡೆದು ಮಿಂಚಿದರು.
135 ರನ್ಗಳ ಸಾಧಾರಣ ಸವಾಲು ಬೆನ್ನತ್ತಿದ ಬೆಂಗಾಲ್ ತಂಡಕ್ಕೆ ಅಭಿಮನ್ಯು ಈಶ್ವರನ್ ಉತ್ತಮ ಆರಂಭ ಒದಗಿಸಿದ್ದರು. ಎಚ್ಚರಿಕೆ ಬ್ಯಾಟಿಂಗ್ ಪ್ರದರ್ಶಿಸಿದ ಅಭಿಮನ್ಯು (51) ಅಜೇಯ ಅರ್ಧಶತಕ ಬಾರಿಸಿ ಮಿಂಚಿದರು. ಅಷ್ಟೇ ಅಲ್ಲದೆ 18 ಓವರ್ನಲ್ಲಿ 3 ವಿಕೆಟ್ ನಷ್ಟಕ್ಕೆ ತಂಡವನ್ನು 138 ರನ್ಗೆ ತಲುಪಿಸಿ ಗುರಿ ಮುಟ್ಟಿಸಿದರು. ಈ ಸೋಲಿನ ಹೊರತಾಗಿಯೂ ಕರ್ನಾಟಕ ತಂಡವು ಗ್ರೂಪ್-ಬಿ ಪಾಯಿಂಟ್ ಟೇಬಲ್ನಲ್ಲಿ 2ನೇ ಸ್ಥಾನದಲ್ಲಿದ್ದು, ಹೀಗಾಗಿ ಪ್ರೀ ಕ್ವಾರ್ಟರ್ ಫೈನಲ್ಗೆ ಪ್ರವೇಶಿಸಲಿದೆ.
ಇದನ್ನೂ ಓದಿ: Team India: ಟೀಮ್ ಇಂಡಿಯಾದ ಈ ಜೋಡಿ ವಿಶ್ವಕಪ್ ಗೆದ್ದು ಕೊಡಲಿದೆ ಎಂದ ಮಾಜಿ ಕ್ರಿಕೆಟಿಗ
ಇದನ್ನೂ ಓದಿ: Team India: ಟೀಮ್ ಇಂಡಿಯಾದ ಮುಂದಿನ ಸರಣಿಗಳ ವೇಳಾಪಟ್ಟಿ ಹೀಗಿದೆ
ಇದನ್ನೂ ಓದಿ: Virat Kohli: ಟೀಮ್ ಇಂಡಿಯಾ ಮುಂದಿನ ನಾಯಕ ಯಾರು? ಸುಳಿವು ನೀಡಿದ ವಿರಾಟ್ ಕೊಹ್ಲಿ
(Syed Mushtaq Ali Trophy 2021: Bengal beat Karnataka)