ಕೌಲಾಲಂಪುರದಲ್ಲಿ ನಡೆದ ಟಿ20 ವಿಶ್ವಕಪ್ ಏಷ್ಯಾ ಕ್ವಾಲಿಫೈಯರ್-B ವಿಭಾಗದ ಮೊದಲ ಪಂದ್ಯದಲ್ಲೇ ಮಲೇಷ್ಯಾ ವೇಗಿ ಸೈಝ್ರುಲ್ ಇದ್ರಸ್ (Syazrul Idrus) ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಅದು ಕೂಡ ಈ ಹಿಂದಿನ ಎಲ್ಲಾ ದಾಖಲೆಗಳನ್ನು ಅಳಿಸಿ ಹಾಕಿ ಎಂಬುದು ವಿಶೇಷ. ಈ ಪಂದ್ಯದಲ್ಲಿ ಟಾಸ್ ಗೆದ್ದ ಚೀನಾ ತಂಡವು ಮೊದಲು ಬ್ಯಾಟಿಂಗ್ ಮಾಡಿತು. ಅದರಂತೆ ಇನಿಂಗ್ಸ್ ಆರಂಭಿಸಿದ ಚೀನಾ ತಂಡವು ಪ್ರಥಮ ವಿಕೆಟ್ಗೆ 12 ರನ್ ಪೇರಿಸಿದ್ದ ವೇಳೆ ಸೈಝ್ರುಲ್ ಇದ್ರಸ್ ಮೊದಲ ಆಘಾತ ನೀಡಿದರು. ವೀ ಗುಲೆಯಿ (7) ರನ್ನು ಕ್ಲೀನ್ ಬೌಲ್ಡ್ ಮಾಡಿದ ಬೆನ್ನಲ್ಲೇ ವಾಂಗ್ ಲಿಯುಯಾಂಗ್ (3) ಗೂ ಪೆವಿಲಿಯನ್ ಹಾದಿ ತೋರಿಸಿದರು.
ಇನ್ನು 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಝುವಾಂಗ್ ಝೆಲಿನ್ (5) ವಿಕೆಟ್ ಪಡೆದು ಪವನ್ದೀಪ್ ಸಿಂಗ್ 3ನೇ ಯಶಸ್ಸು ತಂದುಕೊಟ್ಟರು. 13 ರನ್ಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ಚೀನಾಗೆ ಆ ಬಳಿಕ ಸೈಝ್ರುಲ್ ಇದ್ರಸ್ ಮರ್ಮಾಘಾತ ನೀಡಿದರು.
ಬ್ಯಾಕ್ ಟು ಬ್ಯಾಕ್ ನಾಲ್ವರನ್ನು ಶೂನ್ಯಕ್ಕೆ ಔಟ್ ಮಾಡಿದ ಸೈಝ್ರುಲ್ ಇದ್ರಸ್ 5 ವಿಕೆಟ್ಗಳ ಸಾಧನೆ ಮಾಡಿದರು. ಇದರ ನಡುವೆ ಪವನ್ದೀಪ್ ಸಿಂಗ್ ಯಿನ್ ಚೆನ್ಹಾವೊ (2) ವಿಕೆಟ್ ಪಡೆದರು.
ಇನ್ನು ಝಾವೋ ಟಿಯಾನ್ಲೆ (0) ರನ್ನು ಸೈಝ್ರುಲ್ ಇದ್ರಸ್ ಶೂನ್ಯಕ್ಕೆ ಔಟ್ ಮಾಡಿದರೆ, ಲುವೊ ಶಿಲಿನ್ (0) ರನ್ನು ವಿಜಯಿ ಉನ್ನಿ ಎಲ್ಬಿ ಬಲೆಗೆ ಬೀಳಿಸಿದರು. ಇದರೊಂದಿಗೆ ಚೀನಾ ತಂಡವು ಕೇವಲ 23 ರನ್ಗಳಿಗೆ ಆಲೌಟ್ ಆಯಿತು.
24 ರನ್ಗಳ ಅತ್ಯಲ್ಪ ಗುರಿ ಪಡೆದ ಮಲೇಷ್ಯಾ ತಂಡವು 4.5 ಓವರ್ಗಳಲ್ಲಿ 2 ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತು. ಈ ಮೂಲಕ ಟಿ20 ವಿಶ್ವಕಪ್ ಏಷ್ಯಾ ಕ್ವಾಲಿಫೈಯರ್-B ನ ಮೊದಲ ಪಂದ್ಯದಲ್ಲಿ ಮಲೇಷ್ಯಾ ತಂಡವು ಶುಭಾರಂಭ ಮಾಡಿದೆ.
ಈ ಪಂದ್ಯದಲ್ಲಿ ಮಲೇಷಿಯನ್ ವೇಗಿ ಸೈಝ್ರುಲ್ ಇದ್ರಸ್ ಐವರನ್ನು ಶೂನ್ಯಕ್ಕೆ ಔಟ್ ಮಾಡಿದ್ದರು. ಇದು ಟಿ20 ಕ್ರಿಕೆಟ್ ಇತಿಹಾಸದಲ್ಲೇ ಹೊಸ ದಾಖಲೆಯಾಗಿದೆ. ಅಂದರೆ ಇದುವರೆಗೆ ಯಾವುದೇ ಬೌಲರ್ ಐವರು ಬ್ಯಾಟರ್ಗಳನ್ನು ಸೊನ್ನೆಗೆ ಔಟ್ ಮಾಡಿಲ್ಲ.
ಇನ್ನು ಈ ಪಂದ್ಯದಲ್ಲಿ 4 ಓವರ್ ಬೌಲಿಂಗ್ ಮಾಡಿದ್ದ ಸೈಝ್ರುಲ್ ಇದ್ರಸ್ ಕೇವಲ 8 ರನ್ ನೀಡಿ 7 ವಿಕೆಟ್ ಪಡೆದಿದ್ದರು. ಈ ಮೂಲಕ ಟಿ20 ಕ್ರಿಕೆಟ್ ಪಂದ್ಯವೊಂದರಲ್ಲಿ 7 ವಿಕೆಟ್ ಪಡೆದ ಮೊದಲ ಬೌಲರ್ ಎನಿಸಿಕೊಂಡಿದ್ದಾರೆ.
ಇದಕ್ಕೂ ಮುನ್ನ 2021 ರಲ್ಲಿ ಐರ್ಲೆಂಡ್ನ ಪೀಟರ್ ಅವೊ 5 ರನ್ಗೆ 6 ವಿಕೆಟ್ ಕಬಳಿಸಿದ್ದು ಇದುವರೆಗಿನ ಅತ್ಯುತ್ತಮ ಬೌಲಿಂಗ್ ದಾಖಲೆಯಾಗಿತ್ತು. ಇದೀಗ 7 ವಿಕೆಟ್ ಉರುಳಿಸಿ ಸೈಝ್ರುಲ್ ಇದ್ರಸ್ ಟಿ20 ಕ್ರಿಕೆಟ್ನಲ್ಲಿ ಹೊಸ ಇತಿಹಾಸ ನಿರ್ಮಿಸಿದ್ದಾರೆ.
ಇದನ್ನೂ ಓದಿ: ICC Test Rankings: ಅಗ್ರ ಹತ್ತರಲ್ಲಿ ಟೀಮ್ ಇಂಡಿಯಾದ ಏಕೈಕ ಆಟಗಾರನಿಗೆ ಸ್ಥಾನ
ಟೀಮ್ ಇಂಡಿಯಾ ಪರ ಟಿ20 ಕ್ರಿಕೆಟ್ನಲ್ಲಿ ಅತ್ಯುತ್ತಮ ಬೌಲಿಂಗ್ ಮಾಡಿದ ದಾಖಲೆ ದೀಪಕ್ ಚಹರ್ ಹೆಸರಿನಲ್ಲಿದೆ. 2019 ರಲ್ಲಿ ಬಾಂಗ್ಲಾದೇಶ್ ವಿರುದ್ಧ 7 ರನ್ ನೀಡಿ 6 ವಿಕೆಟ್ ಕಬಳಿಸಿದ್ದರು. ಇದು ಟಿ20 ಕ್ರಿಕೆಟ್ನಲ್ಲಿ ಭಾರತೀಯ ಬೌಲರ್ನ ಅತ್ಯುತ್ತಮ ಬೌಲಿಂಗ್ ದಾಖಲೆಯಾಗಿದೆ.
Published On - 10:58 pm, Wed, 26 July 23