T20 World Cup: ಸೆಮಿಫೈನಲ್‌ಗೂ ಮುನ್ನ ಆಂಗ್ಲರಿಗೆ ಆಘಾತ! ತಂಡದ ಸ್ಟಾರ್ ಓಪನರ್ ವಿಶ್ವಕಪ್​ನಿಂದ ಔಟ್

| Updated By: ಪೃಥ್ವಿಶಂಕರ

Updated on: Nov 08, 2021 | 6:15 PM

T20 World Cup: ತಂಡವನ್ನು ಸೆಮಿಫೈನಲ್‌ಗೆ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅನುಭವಿ ಆರಂಭಿಕ ಆಟಗಾರ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಗ್ರೂಪ್ ಪಂದ್ಯದ ವೇಳೆ ಗಾಯಗೊಂಡಿದ್ದ ಓಪನರ್ ಜೇಸನ್ ರಾಯ್ ವಿಶ್ವಕಪ್‌ನಿಂದ ಹೊರಗುಳಿದಿದ್ದಾರೆ.

T20 World Cup: ಸೆಮಿಫೈನಲ್‌ಗೂ ಮುನ್ನ ಆಂಗ್ಲರಿಗೆ ಆಘಾತ! ತಂಡದ ಸ್ಟಾರ್ ಓಪನರ್ ವಿಶ್ವಕಪ್​ನಿಂದ ಔಟ್
ಜೇಸನ್ ರಾಯ್
Follow us on

ಇಯಾನ್ ಮಾರ್ಗನ್ ನಾಯಕತ್ವದಲ್ಲಿ ಸತತ ಎರಡನೇ ವಿಶ್ವಕಪ್ ಪ್ರಶಸ್ತಿ ಗೆಲ್ಲುವ ನಿರೀಕ್ಷೆಯಲ್ಲಿರುವ ಇಂಗ್ಲೆಂಡ್ ಕ್ರಿಕೆಟ್ ತಂಡಕ್ಕೆ ಸೆಮಿಫೈನಲ್‌ಗೂ ಮುನ್ನವೇ ಕೆಟ್ಟ ಸುದ್ದಿಯೊಂದು ಬಂದಿದೆ. ತಂಡವನ್ನು ಸೆಮಿಫೈನಲ್‌ಗೆ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅನುಭವಿ ಆರಂಭಿಕ ಆಟಗಾರ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಗ್ರೂಪ್ ಪಂದ್ಯದ ವೇಳೆ ಗಾಯಗೊಂಡಿದ್ದ ಓಪನರ್ ಜೇಸನ್ ರಾಯ್ ವಿಶ್ವಕಪ್‌ನಿಂದ ಹೊರಗುಳಿದಿದ್ದಾರೆ. ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ರನ್ ತೆಗೆದುಕೊಳ್ಳುವಾಗ ರಾಯ್ ಕಾಲಿಗೆ ಗಾಯ ಮಾಡಿಕೊಂಡಿದ್ದರು. ಟೂರ್ನಿಯಲ್ಲಿ ಇಂಗ್ಲೆಂಡ್‌ಗೆ ಬಿರುಸಿನ ಆರಂಭ ನೀಡುವಲ್ಲಿ ತಮ್ಮ ಪಾತ್ರ ವಹಿಸಿದ್ದ ರಾಯ್ ಅವರನ್ನು ಹೊರಗಿಟ್ಟಿರುವುದು ಇಂಗ್ಲೆಂಡ್‌ಗೆ ದೊಡ್ಡ ಹೊಡೆತ ನೀಡಿದೆ. ರಾಯ್ ಅವರ ಸ್ಥಾನವನ್ನು ತುಂಬಲು, ಇಂಗ್ಲೆಂಡ್ ಕ್ರಿಕೆಟ್ ತಂಡವು ಆರಂಭಿಕ ಆಟಗಾರ ಜೇಮ್ಸ್ ವಿನ್ಸ್ ಅವರನ್ನು ಸೇರಿಸಿಕೊಂಡಿದೆ, ಅವರು ತಂಡದೊಂದಿಗೆ ಮೀಸಲು ಆಟಗಾರರಾಗಿ ಸೇರಿದ್ದಾರೆ. ಇಂಗ್ಲೆಂಡ್ ತನ್ನ ಸೆಮಿಫೈನಲ್ ಪಂದ್ಯವನ್ನು ನವೆಂಬರ್ 10 ರಂದು ನ್ಯೂಜಿಲೆಂಡ್ ವಿರುದ್ಧ ಆಡಬೇಕಾಗಿದೆ.

ತಮ್ಮ ಬಿರುಸಿನ ಬ್ಯಾಟ್ಸ್‌ಮನ್ ಗಾಯದ ಕಾರಣ ವಿಶ್ವಕಪ್‌ನಿಂದ ಹೊರಗುಳಿದಿದ್ದಾರೆ ಎಂದು ದೃಢಪಡಿಸಿದ ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯು ನವೆಂಬರ್ 8 ಸೋಮವಾರದಂದು ಹೇಳಿಕೆ ನೀಡಿತು. ಇಂಗ್ಲೆಂಡ್ ಮತ್ತು ಸರ್ರೆ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಜೇಸನ್ ರಾಯ್ ಟಿ 20 ವಿಶ್ವಕಪ್‌ನ ಉಳಿದ ಪಂದ್ಯಗಳಿಂದ ಹೊರಗುಳಿದಿದ್ದಾರೆ. ಶಾರ್ಜಾದಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಕೊನೆಯ ಸೂಪರ್-12 ಪಂದ್ಯದಲ್ಲಿ ರಾಯ್ ಇಂಜುರಿಗೆ ತುತ್ತಾಗಿದ್ದರು. ರಾಯ್ ಹೇಳಿಕೆಯಲ್ಲಿ, ನಾನು ವಿಶ್ವಕಪ್‌ನಿಂದ ಹೊರಗುಳಿಯಲು ತುಂಬಾ ನಿರಾಶೆಗೊಂಡಿದ್ದೇನೆ. ಇದು ನನಗೆ ಕಹಿ ಮಾತ್ರೆ ನುಂಗಿದಂತಿದೆ ಎಂದಿದ್ದಾರೆ.

ವಿಶ್ವಕಪ್‌ನಲ್ಲಿ ರಾಯ್ ಉತ್ತಮ ಪ್ರದರ್ಶನ
ರಾಯ್ ಈ ವಿಶ್ವಕಪ್‌ನಲ್ಲಿ ಇಂಗ್ಲೆಂಡ್‌ಗೆ ಪ್ರತಿ ಪಂದ್ಯದಲ್ಲೂ ತ್ವರಿತ ಆರಂಭವನ್ನು ನೀಡಿದರು ಮತ್ತು ಜೋಸ್ ಬಟ್ಲರ್ ಅವರೊಂದಿಗೆ ತಂಡಕ್ಕೆ ಸುಲಭ ಜಯಕ್ಕೆ ಅಡಿಪಾಯ ಹಾಕಿದರು. ಅವರು ನವೆಂಬರ್ 6, ಶನಿವಾರದಂದು ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ 20 ರನ್ ಗಳಿಸಿದರು, ಆದರೆ ಐದನೇ ಓವರ್‌ನಲ್ಲಿ 1 ರನ್ ತೆಗೆದುಕೊಳ್ಳುವಾಗ ಗಾಯಗೊಂಡು ಮೈದಾನದಿಂದ ಮರಳಿದರು. ಟಿ20 ಕ್ರಿಕೆಟ್‌ನಲ್ಲಿ 4 ಶತಕ ಮತ್ತು 46 ಅರ್ಧ ಶತಕಗಳ ನೆರವಿನಿಂದ 6 ಸಾವಿರಕ್ಕೂ ಹೆಚ್ಚು ರನ್ ಗಳಿಸಿದ್ದ ರಾಯ್ ವಿಶ್ವಕಪ್‌ನಲ್ಲೂ ಉತ್ತಮ ಪ್ರದರ್ಶನ ನೀಡಿದ್ದರು. ಅವರು 5 ಇನ್ನಿಂಗ್ಸ್‌ಗಳಲ್ಲಿ 1 ಅರ್ಧಶತಕದ ಸಹಾಯದಿಂದ 120 ರನ್ ಗಳಿಸಿದರು.

ಸರಿಯಾಗಿ 2 ವರ್ಷಗಳ ನಂತರ ಜೇಮ್ಸ್ ವಿನ್ಸ್ ಈ ಪಂದ್ಯವನ್ನು ಆಡಲಿದ್ದಾರೆ
ರಾಯ್ ಸ್ಥಾನ ತುಂಬಲು ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ವಿನ್ಸ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ. ವಿನ್ಸ್ ತನ್ನ ಕೊನೆಯ T20 ಪಂದ್ಯವನ್ನು ಇಂಗ್ಲೆಂಡ್‌ಗಾಗಿ ನ್ಯೂಜಿಲೆಂಡ್ ವಿರುದ್ಧ ನಿಖರವಾಗಿ 2 ವರ್ಷಗಳ ಹಿಂದೆ 10 ನವೆಂಬರ್ 2019 ರಂದು ಆಡಿದರು. ಈಗ ಮತ್ತೊಮ್ಮೆ ಅವರು ಈ ತಂಡದ ವಿರುದ್ಧ ಆಡುವುದನ್ನು ಕಾಣಬಹುದು. ವಿನ್ಸ್ ಆಕ್ರಮಣಕಾರಿ ಬ್ಯಾಟಿಂಗ್‌ಗೆ ಹೆಸರುವಾಸಿಯಾಗಿದ್ದಾರೆ ಮತ್ತು ಇಂಗ್ಲೆಂಡ್‌ಗಾಗಿ ಎಲ್ಲಾ ಮೂರು ಸ್ವರೂಪಗಳಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಡಿದ್ದಾರೆ. ಆಂಗ್ಲರ 12 ಟಿ20 ಪಂದ್ಯಗಳಲ್ಲಿ 123 ಸ್ಟ್ರೈಕ್ ರೇಟ್‌ನಲ್ಲಿ 340 ರನ್ ಗಳಿಸಿದ್ದಾರೆ. ಅದೇ ಸಮಯದಲ್ಲಿ ಒಟ್ಟಾರೆ T20 ವೃತ್ತಿಜೀವನದಲ್ಲಿ ವಿನ್ಸ್ 259 ಇನ್ನಿಂಗ್ಸ್‌ಗಳಲ್ಲಿ 2 ಶತಕ ಮತ್ತು 44 ಅರ್ಧಶತಕಗಳ ಸಹಾಯದಿಂದ 7146 ರನ್ ಗಳಿಸಿದ್ದಾರೆ. ಸ್ಟ್ರೈಕ್ ರೇಟ್ 133. ಅಂದಹಾಗೆ, ಇಂಗ್ಲೆಂಡ್ ಕೂಡ ಜಾನಿ ಬೈರ್‌ಸ್ಟೋವ್ ಮತ್ತು ಲಿಯಾಮ್ ಲಿವಿಂಗ್‌ಸ್ಟನ್‌ರಂತಹ ಪ್ರಚಂಡ ಆಯ್ಕೆಗಳನ್ನು ಹೊಂದಿದೆ.

Published On - 5:56 pm, Mon, 8 November 21