T20 World Cup 2021: ಒಂದು ಪಂದ್ಯ, ಐದು ದಾಖಲೆ ನಿರ್ಮಿಸಿದ ಟೀಮ್ ಇಂಡಿಯಾ

| Updated By: ಝಾಹಿರ್ ಯೂಸುಫ್

Updated on: Nov 06, 2021 | 4:34 PM

Team India's Record: ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಸ್ಕಾಟ್ಲೆಂಡ್ ಕೇವಲ 85 ರನ್​ಗೆ ಆಲೌಟ್ ಆಯಿತು. ಈ ಸಾಧಾರಣ ಸವಾಲು ಬೆನ್ನತ್ತಿದ ಟೀಮ್ ಇಂಡಿಯಾ ಕೇವಲ 6.3 ಓವರ್​ನಲ್ಲಿ ಗೆಲುವು ದಾಖಲಿಸಿತು.

T20 World Cup 2021: ಒಂದು ಪಂದ್ಯ, ಐದು ದಾಖಲೆ ನಿರ್ಮಿಸಿದ ಟೀಮ್ ಇಂಡಿಯಾ
Team India
Follow us on

ಟೀಮ್ ಇಂಡಿಯಾ (Team India) ಸ್ಕಾಟ್ಲೆಂಡ್ ವಿರುದ್ದ (India vs Scotland) ಭರ್ಜರಿ ಜಯ ಸಾಧಿಸಿದೆ. ಸ್ಕಾಟ್ಲೆಂಡ್ ನೀಡಿ 86 ರನ್​ಗಳ ಟಾರ್ಗೆಟ್​ ಅನ್ನು ಟೀಮ್ ಇಂಡಿಯಾ 6.3 ಓವರ್​ನಲ್ಲಿ ಚೇಸ್ ಮಾಡುವ ಮೂಲಕ ಟೀಮ್ ಇಂಡಿಯಾ ಭರ್ಜರಿ ಗೆಲುವು ದಾಖಲಿಸಿತು. ಈ ಗೆಲುವಿನೊಂದಿಗೆ ಟೀಮ್ ಇಂಡಿಯಾ ಬ್ಯಾಟ್ಸ್​ಮನ್​ಗಳು 3 ವರ್ಷಗಳ ಹಿಂದಿನ ದಾಖಲೆ ಮುರಿದರು. ಅಷ್ಟೇ ಅಲ್ಲದೆ ಒಟ್ಟು 6 ದಾಖಲೆಗಳನ್ನು ಬರೆದರು. ಆ ದಾಖಲೆಗಳಾವುವು ನೋಡೋಣ.

1- 86 ರನ್​ಗಳ ಟಾರ್ಗೆಟ್​ನೊಂದಿಗೆ ಕಣಕ್ಕಿಳಿದ ರೋಹಿತ್ ಶರ್ಮಾ ಹಾಗೂ ಕೆಎಲ್ ರಾಹುಲ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಕೇವಲ 5 ಓವರ್​ನಲ್ಲಿ 70 ರನ್ ಬಾರಿಸುವ ಮೂಲಕ ಅಬ್ಬರಿಸಿದ್ದರು. ಈ ಹಂತದಲ್ಲಿ ಹಿಟ್​ಮ್ಯಾನ್ ಔಟಾದರೂ ಮತ್ತೊಂದೆಡೆ ರಾಹುಲ್ ಅಬ್ಬರ ಮುಂದುವರೆದಿತ್ತು. ಅಂತಿಮವಾಗಿ ಪವರ್​ಪ್ಲೇನಲ್ಲಿ ಟೀಮ್ ಇಂಡಿಯಾ ಕಲೆಹಾಕಿದ್ದು ಬರೋಬ್ಬರಿ 82 ರನ್​ಗಳು. ಇದು ಟೀಮ್ ಇಂಡಿಯಾ ಪಾಲಿಗೆ ಹೊಸ ದಾಖಲೆ. ಈ ಹಿಂದೆ 2018 ರಲ್ಲಿ ಸೌತ್ ಆಫ್ರಿಕಾ ವಿರುದ್ದ ಟಿ20ಯಲ್ಲಿ ಪವರ್​ಪ್ಲೇನಲ್ಲಿ 78 ರನ್​ ಬಾರಿಸಿದ್ದು ಇದುವರೆಗಿನ ದಾಖಲೆಯಾಗಿತ್ತು. ಇದೀಗ ಸ್ಕಾಟ್ಲೆಂಡ್ ವಿರುದ್ದ ಅಬ್ಬರಿಸುವ ಮೂಲಕ ಟೀಮ್ ಇಂಡಿಯಾ ಬ್ಯಾಟ್ಸ್​ಮನ್​ಗಳು ಪವರ್​ಪ್ಲೇನಲ್ಲಿ 82 ರನ್​ ಬಾರಿಸಿ ಹೊಸ ದಾಖಲೆ ಬರೆದಿದ್ದಾರೆ.

2- ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಸ್ಕಾಟ್ಲೆಂಡ್ ಕೇವಲ 85 ರನ್​ಗೆ ಆಲೌಟ್ ಆಯಿತು. ಈ ಸಾಧಾರಣ ಸವಾಲು ಬೆನ್ನತ್ತಿದ ಟೀಮ್ ಇಂಡಿಯಾ ಕೇವಲ 6.3 ಓವರ್​ನಲ್ಲಿ ಗೆಲುವು ದಾಖಲಿಸಿತು. ಅಂದರೆ 39 ಬಾಲ್​ನಲ್ಲಿ ಚೇಸ್ ಮಾಡುವ ಮೂಲಕ ಟೀಮ್ ಇಂಡಿಯಾ 81 ಎಸೆತಗಳನ್ನು ಬಾಕಿ ಉಳಿಸಿದರು. ಇದು ಟಿ20 ಕ್ರಿಕೆಟ್​ನಲ್ಲಿ ಟೀಮ್ ಇಂಡಿಯಾ ಪಾಲಿಗೆ ದಾಖಲೆಯಾಗಿದೆ. ಇದಕ್ಕೂ ಮುನ್ನ2016 ರಲ್ಲಿ ಯುಎಇ ವಿರುದ್ದ ಭಾರತ 59 ಬಾಲ್ ಬಾಕಿ ಇರುವಾಗ ಗೆದ್ದಿರುವುದು ದಾಖಲೆಯಾಗಿತ್ತು. ಇದೀಗ 81 ಎಸೆತಗಳು ಬಾಕಿ ಇರುವಾಗಲೇ ಭರ್ಜರಿ ಜಯ ಸಾಧಿಸಿ ಹೊಸ ಇತಿಹಾಸ ನಿರ್ಮಿಸಿದೆ.

3- ಇನ್ನು ಟಿ20 ವಿಶ್ವಕಪ್​ನಲ್ಲಿ ಅತೀ ಹೆಚ್ಚು ಬಾಲ್ ಬಾಕಿ ಇರುವಂತೆ ಗೆದ್ದ ತಂಡಗಳ ಪಟ್ಟಿಯಲ್ಲಿ ಟೀಮ್ ಇಂಡಿಯಾ ಮೂರನೇ ಸ್ಥಾನ ಪಡೆದುಕೊಂಡಿದೆ. ಈ ಪಟ್ಟಿಯಲ್ಲಿ 2014 ರಲ್ಲಿ 90 ಎಸೆತಗಳು ಬಾಕಿ ಇರುವಾಗ ನೆದರ್​ಲ್ಯಾಂಡ್ಸ್​ ವಿರುದ್ದ ಗೆದ್ದಿರುವ ಶ್ರೀಲಂಕಾ ಅಗ್ರಸ್ಥಾನದಲ್ಲಿದೆ. ಇನ್ನು 2021 ರಲ್ಲೇ ಬಾಂಗ್ಲಾದೇಶದ ವಿರುದ್ದ 82 ಎಸೆತಗಳನ್ನು ಉಳಿಸಿ ಆಸ್ಟ್ರೇಲಿಯಾ ಜಯ ಸಾಧಿಸಿ 2ನೇ ಸ್ಥಾನ ಅಲಂಕರಿಸಿದೆ. ಇದೀಗ 81 ಎಸೆತಗಳು ಬಾಕಿ ಇರುವಾಗಲೇ ಗೆದ್ದು ಟೀಮ್ ಇಂಡಿಯಾ ಮೂರನೇ ಸ್ಥಾನಕ್ಕೇರಿದೆ.

4- ಟಿ20 ವಿಶ್ವಕಪ್​ನಲ್ಲಿ ಪವರ್​ಪ್ಲೇನಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ತಂಡಗಳ ಪಟ್ಟಿಯಲ್ಲಿ ಟೀಮ್ ಇಂಡಿಯಾ ನಾಲ್ಕನೇ ಸ್ಥಾನ ಅಲಂಕರಿಸಿದೆ. ಸ್ಕಾಟ್ಲೆಂಡ್​ ವಿರುದ್ದ ಪವರ್​ಪ್ಲೇನಲ್ಲಿ 82 ರನ್​ ಬಾರಿಸುವ ಮೂಲಕ ಈ ಬಾರಿಯ ವಿಶ್ವಕಪ್​ನಲ್ಲಿ ಮೊದಲ 6 ಓವರ್​ನಲ್ಲಿ ಅತ್ಯಧಿಕ ರನ್​ಗಳಿಸಿದ ತಂಡ ಎನಿಸಿಕೊಂಡಿದೆ. ಇನ್ನು ಒಟ್ಟಾರೆ ಟಿ20 ಕ್ರಿಕೆಟ್​ನಲ್ಲಿ ಪವರ್​ಪ್ಲೇನಲ್ಲಿ ಅತ್ಯಧಿಕ ರನ್ ಕಲೆಹಾಕಿದ್ದು ನೆದರ್​ಲ್ಯಾಂಡ್ ತಂಡ. 2014 ರಲ್ಲಿ ನೆದರ್​ಲ್ಯಾಂಡ್ ತಂಡವು ಐರ್ಲೆಂಡ್ ವಿರುದ್ದ ಪವರ್​ಪ್ಲೇನಲ್ಲಿ 91 ರನ್​ಗಳಿಸಿತ್ತು. ನಂತರದ ಸ್ಥಾನದಲ್ಲಿ ಸೌತ್ ಆಫ್ರಿಕಾ ವಿರುದ್ದ 89 ರನ್​ಗಳಿಸಿದ ಇಂಗ್ಲೆಂಡ್​ ತಂಡವಿದೆ. ಹಾಗೆಯೇ ಮೂರನೇ ಸ್ಥಾನದಲ್ಲಿ ಇಂಗ್ಲೆಂಡ್ ವಿರುದ್ದ 83 ರನ್ ಬಾರಿಸಿದ ಸೌತ್ ಆಫ್ರಿಕಾವಿದೆ. ಇದೀಗ ಪವರ್​ಪ್ಲೇನಲ್ಲಿ 82 ರನ್ ಬಾರಿಸಿ ಟೀಮ್ ಇಂಡಿಯಾ ನಾಲ್ಕನೇ ಸ್ಥಾನ ಅಲಂಕರಿಸಿದೆ.

5- ಸ್ಕಾಟ್ಲೆಂಡ್ ವಿರುದ್ದ ಅಬ್ಬರಿಸುವ ಮೂಲಕ ಕೆಎಲ್ ರಾಹುಲ್ ದಾಖಲೆ ಬರೆದಿದ್ದಾರೆ. ರಾಹುಲ್ ಕೇವಲ 18 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 6 ಫೋರ್​ನೊಂದಿಗೆ ಅರ್ಧಶತಕದ ಪೂರೈಸಿದ್ದರು. ಇದು ಈ ಬಾರಿಯ ಟಿ20 ವಿಶ್ವಕಪ್​ನ ವೇಗದ ಅರ್ಧಶತಕವಾಗಿದೆ. ಅಷ್ಟೇ ಅಲ್ಲದೆ ಒಟ್ಟಾರೆ ಟಿ20 ವಿಶ್ವಕಪ್​ನ 4ನೇ ವೇಗದ ಹಾಫ್​ ಸೆಂಚುರಿ.

ಇದನ್ನೂ ಓದಿ: ICC T20 Rankings: ನೂತನ ಟಿ20 ರ‍್ಯಾಂಕಿಂಗ್ ಪ್ರಕಟ: ಎಲ್ಲರನ್ನು ಹಿಂದಿಕ್ಕಿದ ಬಾಬರ್

ಇದನ್ನೂ ಓದಿ: IPL 2022: RCB ಈ ನಾಲ್ವರು ಆಟಗಾರರನ್ನು ಉಳಿಸಿಕೊಳ್ಳಬಹುದು..!

ಇದನ್ನೂ ಓದಿ: T20 World Cup 2021: ಸೆಹ್ವಾಗ್-ಗಂಭೀರ್ ದಾಖಲೆ ಮುರಿದ ಕೆಎಲ್ ರಾಹುಲ್-ರೋಹಿತ್ ಶರ್ಮಾ

(T20 World Cup 2021: India set 5 records while thrashing Scotland)