T20 World Cup 2022: ಟಿ20 ವಿಶ್ವಕಪ್ ಆರಂಭಕ್ಕೂ ಮುನ್ನ ಪ್ಲೇಯಿಂಗ್ ಇಲೆವೆನ್ ರೂಪಿಸಿಕೊಳ್ಳುವ ಟೀಮ್ ಇಂಡಿಯಾದ (Team India) ಲೆಕ್ಕಚಾರಗಳು ತಲೆಕೆಳಗಾಗಿದೆ. ಈ ಹಿಂದೆ ಆಸ್ಟ್ರೇಲಿಯಾ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಬಹುತೇಕ ಆಟಗಾರರಿಗೆ ಅವಕಾಶ ನೀಡುವ ಮೂಲಕ ಯಾರು ಬೆಸ್ಟ್ ಎಂಬ ಲೆಕ್ಕಚಾರಕ್ಕೆ ಟೀಮ್ ಮ್ಯಾನೇಜ್ಮೆಂಟ್ ಮುಂದಾಗಿತ್ತು. ಅಲ್ಲದೆ ಆ ಪಂದ್ಯದಲ್ಲಿ ಟೀಮ್ ಇಂಡಿಯಾ 7 ಬೌಲರ್ಗಳನ್ನು ಬಳಸಿಕೊಂಡಿತ್ತು. ಇದಾಗ್ಯೂ ಅಕ್ಷರ್ ಪಟೇಲ್ಗೆ ಓವರ್ ನೀಡಿರಲಿಲ್ಲ. ಮತ್ತೊಂದೆಡೆ ನ್ಯೂಜಿಲೆಂಡ್ ವಿರುದ್ಧದ 2ನೇ ಅಭ್ಯಾಸ ಪಂದ್ಯದ ಮೂಲಕ ಪ್ಲೇಯಿಂಗ್ ಇಲೆವೆನ್ ರೂಪಿಸಿಕೊಳ್ಳಲು ಟೀಮ್ ಇಂಡಿಯಾ ಪ್ಲ್ಯಾನ್ ರೂಪಿಸಿತ್ತು. ಅದರಲ್ಲೂ ಪಾಕ್ ವಿರುದ್ಧದ ಪಂದ್ಯಕ್ಕೂ ಮುನ್ನ ಬೌಲಿಂಗ್ ಲೈನಪ್ ಸರಿಪಡಿಸಿಕೊಳ್ಳುವ ಅನಿವಾರ್ಯತೆ ಟೀಮ್ ಇಂಡಿಯಾ ಮುಂದಿದೆ.
ಆದರೀಗ ರೋಹಿತ್ ಶರ್ಮಾ ಅ್ಯಂಡ್ ಕಂಪೆನಿಯ ಎಲ್ಲಾ ಲೆಕ್ಕಚಾರಗಳು ತಲೆಕೆಳಗಾಗಿದೆ. ಬ್ರಿಸ್ಬೇನ್ನಲ್ಲಿ ನಡೆಯಬೇಕಿದ್ದ 2ನೇ ಅಭ್ಯಾಸ ಪಂದ್ಯವು ಮಳೆಯ ಕಾರಣ ರದ್ದಾಗಿದೆ. ಹೀಗಾಗಿಯೇ ಇದೀಗ ಪಾಕಿಸ್ತಾನ್ ವಿರುದ್ಧ ಯಾರನ್ನು ಕಣಕ್ಕಿಳಿಸಿ ಯಾರನ್ನು ಕೈ ಬಿಡಬೇಕೆಂಬ ಹೊಸ ತಲೆನೋವು ಉದ್ಭವಿಸಿದೆ.
ಏಕೆಂದರೆ ನ್ಯೂಜಿಲೆಂಡ್ ವಿರುದ್ಧ ಮೊಹಮ್ಮದ್ ಶಮಿ, ಭುವನೇಶ್ವರ್ ಕುಮಾರ್ ಹಾಗೂ ಹರ್ಷಲ್ ಪಟೇಲ್ ಅವರನ್ನು ಕಣಕ್ಕಿಳಿಸಿ ಉತ್ತಮ ಪ್ರದರ್ಶನ ನೀಡುವ ಇಬ್ಬರನ್ನು ಆಯ್ಕೆ ಮಾಡಿಕೊಳ್ಳಲು ಟೀಮ್ ಇಂಡಿಯಾ ಪ್ಲ್ಯಾನ್ ರೂಪಿಸಿತ್ತು. ಆದರೆ ಇದೀಗ ಪಂದ್ಯ ರದ್ದಾಗಿರುವ ಕಾರಣ ಯಾರನ್ನು ಕೈ ಬಿಟ್ಟು ಯಾರಿಗೆ ಅವಕಾಶ ನೀಡುವುದು ಎಂಬ ಗೊಂದಲ ಏರ್ಪಟ್ಟಿದೆ.
ಟೀಮ್ ಇಂಡಿಯಾದಲ್ಲಿ ಏಕೈಕ ಎಡಗೈ ವೇಗಿಯಾಗಿರುವ ಅರ್ಷದೀಪ್ ಸಿಂಗ್ ಪ್ಲೇಯಿಂಗ್ ಇಲೆವೆನ್ನಲ್ಲಿ ಅವಕಾಶ ಪಡೆಯುವುದು ಬಹುತೇಕ ಖಚಿತ. ಹಾಗೆಯೇ ವೇಗದ ಬೌಲಿಂಗ್ ಮಾಡುವ ಹಾರ್ದಿಕ್ ಪಾಂಡ್ಯ ಆಲ್ರೌಂಡರ್ ಸ್ಥಾನದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇನ್ನುಳಿದಂತೆ ಹರ್ಷಲ್ ಪಟೇಲ್, ಭುವನೇಶ್ವರ್ ಕುಮಾರ್ ಹಾಗೂ ಮೊಹಮ್ಮದ್ ಶಮಿ…ಇವರಲ್ಲಿ ಇಬ್ಬರು ವೇಗಿಗಳನ್ನು ಆಯ್ಕೆ ಮಾಡಬೇಕಿದೆ.
ಅತ್ತ ಸ್ಪಿನ್ನರ್ಗಳ ವಿಭಾಗದಲ್ಲಿ ಅಕ್ಷರ್ ಪಟೇಲ್ ಹಾಗೂ ಅಶ್ವಿನ್ ಆಡಬಹುದು. ಇಲ್ಲಿ ಎಡಗೈ ಸ್ಪಿನ್ನರ್ ಆಗಿರುವ ಕಾರಣ ಅಕ್ಷರ್ಗೆ ಚಾನ್ಸ್ ಸಿಗುವ ಸಾಧ್ಯತೆ ಹೆಚ್ಚು. ಹಾಗೆಯೇ ಅನುಭವಕ್ಕೆ ಮಣೆಹಾಕಿದರೆ ಚಹಾಲ್ ಬದಲಿಗೆ ಅಶ್ವಿನ್ ಕಣಕ್ಕಿಳಿಯಲಿದ್ದಾರೆ.
ಅಂದರೆ ಟೀಮ್ ಇಂಡಿಯಾ ನಾಲ್ವರು ವೇಗಿಗಳು ಹಾಗೂ ಇಬ್ಬರು ಸ್ಪಿನ್ನರ್ಗಳೊಂದಿಗೆ ಕಣಕ್ಕಿಳಿಯಬಹುದು. ಇವರಲ್ಲಿ ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್ ಹಾಗೂ ಅಶ್ವಿನ್ ಆಲ್ರೌಂಡರ್ಗಳಾಗಿರುವ ಕಾರಣ ಬ್ಯಾಟಿಂಗ್ ಲೈನಪ್ ಕೂಡ ಬಲಿಷ್ಠವಾಗಲಿದೆ. ಆದರೆ ವೇಗಿಗಳ ಪಟ್ಟಿಯಲ್ಲಿ ಅರ್ಷದೀಪ್ ಸಿಂಗ್ ಜೊತೆ ಯಾರು ಕಣಕ್ಕಿಳಿಯಲಿದ್ದಾರೆ ಎಂಬುದೇ ಪ್ರಶ್ನೆ.
ಏಕೆಂದರೆ ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್ ಟೀಮ್ ಇಂಡಿಯಾದ ಖಾಯಂ ಸದಸ್ಯರು. ಇನ್ನು ಮೊಹಮ್ಮದ್ ಶಮಿ ಜಸ್ಪ್ರೀತ್ ಬುಮ್ರಾ ಸ್ಥಾನದಲ್ಲಿ ಬದಲಿ ವೇಗಿಯಾಗಿ ಆಯ್ಕೆಯಾಗಿದ್ದಾರೆ. ಆದರೆ ಶಮಿ ಟಿ20 ಕ್ರಿಕೆಟ್ನಲ್ಲಿ ಆಡಿರುವುದು ಕೇವಲ 17 ಪಂದ್ಯಗಳನ್ನು ಮಾತ್ರ. ಈ ವೇಳೆ ಪಡೆದಿರುವುದು 18 ವಿಕೆಟ್ಗಳನ್ನು.
ಹಾಗಾಗಿ ನ್ಯೂಜಿಲೆಂಡ್ ವಿರುದ್ಧದ ಅಭ್ಯಾಸ ಪಂದ್ಯದ ಮೂಲಕ ಯಾರು ಫಾರ್ಮ್ನಲ್ಲಿದ್ದಾರೆ ಎಂಬದನ್ನು ಪರಿಗಣಿಸಿ ಇಬ್ಬರು ವೇಗಿಗಳನ್ನು ಆಯ್ಕೆ ಮಾಡಿಕೊಳ್ಳಲು ನಾಯಕ ರೋಹಿತ್ ಶರ್ಮಾ ಬಯಸಿದ್ದರು. ಆದರೀಗ ಪಂದ್ಯವೇ ರದ್ದಾಗಿರುವ ಕಾರಣ ಯಾರನ್ನು ಕೈ ಬಿಟ್ಟು ಯಾರನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬ ದೊಡ್ಡ ಸವಾಲು ರೋಹಿತ್ ಶರ್ಮಾ ಹಾಗೂ ಕೋಚ್ ರಾಹುಲ್ ದ್ರಾವಿಡ್ ಮುಂದಿದೆ. ಅದರಂತೆ ಪಾಕಿಸ್ತಾನ್ ವಿರುದ್ಧದ ಮಹತ್ವದ ಪಂದ್ಯದಲ್ಲಿ ಟೀಮ್ ಇಂಡಿಯಾ ಪರ ವೇಗಿಗಳಾಗಿ ಯಾರು ಕಣಕ್ಕಿಳಿಯಲಿದ್ದಾರೆ ಎಂಬುದೇ ಈಗ ಕುತೂಹಲವಾಗಿ ಮಾರ್ಪಟ್ಟಿದೆ.
ಭಾರತ ತಂಡ ಹೀಗಿದೆ:
ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಆರ್ ಅಶ್ವಿನ್, ಮೊಹಮ್ಮದ್ ಶಮಿ, ಯುಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್, ಭುವನೇಶ್ವರ ಕುಮಾರ್, ಹರ್ಷಲ್ ಪಟೇಲ್, ಅರ್ಷದೀಪ್ ಸಿಂಗ್.