ಐಸಿಸಿ ಟಿ20 ವಿಶ್ವಕಪ್ 2022 ರ ಟೂರ್ನಿಗಾಗಿ ಇಡೀ ವಿಶ್ವವೇ ಕಾತುರದಿಂದ ಕಾಯುತ್ತಿದೆ. ಅದರಲ್ಲೂ ಭಾರತ-ಪಾಕಿಸ್ತಾನ್ ಮುಖಾಮುಖಿಯನ್ನು ಕ್ರಿಕೆಟ್ ಪ್ರೇಮಿಗಳು ಎದುರು ನೋಡುತ್ತಿದ್ದಾರೆ. ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ಗೆ ಅಕ್ಟೋಬರ್ 16 ರಂದು ಟೂರ್ನಿಗೆ ಚಾಲನೆ ಸಿಗಲಿದೆ. ಅಕ್ಟೋಬರ್ 23 ರಂದು ಭಾರತ ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ (India vs Pakistan) ವಿರುದ್ಧ ಆಡುವ ಮೂಲಕ ಅಭಿಯಾನವನ್ನು ಆರಂಭಿಸಲಿದೆ. ಆದರೆ ಈ ಕದನ ಕುತೂಹಲದ ಪಂದ್ಯದ ಟಿಕೆಟ್‌ಗಳು ಈಗಾಗಲೇ ಸಂಪೂರ್ಣವಾಗಿ ಮಾರಾಟವಾಗಿದೆ. ಪಂದ್ಯಕ್ಕೆ ಇನ್ನು 8 ತಿಂಗಳು ಬಾಕಿ ಇದ್ದು, ಇದಾಗ್ಯೂ ಆಸ್ಟ್ರೇಲಿಯಾದ ಅತಿದೊಡ್ಡ ಮೈದಾನ ಎಂಸಿಜಿಯಲ್ಲಿ ಉಭಯ ತಂಡಗಳ ನಡುವಿನ ಈ ಹಣಾಹಣಿ ವೀಕ್ಷಿಸಲು ಈಗಾಗಲೇ 60,000 ಟಿಕೆಟ್ಗಳನ್ನು ಕ್ರಿಕೆಟ್ ಪ್ರೇಮಿಗಳು ಖರೀದಿಸಿದ್ದಾರೆ.
ಈಗಾಗಲೇ ಎಲ್ಲಾ ಟಿಕೆಟ್‌ಗಳು ಸೋಲ್ಡ್ ಔಟ್ ಆಗಿದ್ದು, ಹೀಗಾಗಿ ಅಕ್ಟೋಬರ್ 23 ರಂದು ನಡೆಯಲಿರುವ ಭಾರತ-ಪಾಕಿಸ್ತಾನ್ ನಡುವಣ ಪಂದ್ಯದ ಟಿಕೆಟ್‌ಗಳು ಇನ್ನು ಲಭಿಸುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ 2022 ಗೆ ಅಕ್ಟೋಬರ್ 16 ರಿಂದ ಶುರವಾಗಲಿದ್ದು, ನವೆಂಬರ್ 9 ರಂದು ಮೊದಲ ಸೆಮಿಫೈನಲ್ ನಡೆಯಲಿದೆ. ನವೆಂಬರ್ 10 ರಂದು ಎರಡನೇ ಸೆಮಿಫೈನಲ್ ಮತ್ತು ನವೆಂಬರ್ 13 ರಂದು ಫೈನಲ್ ಪಂದ್ಯವನ್ನು ಏರ್ಪಡಿಸಲಾಗಿದೆ.
ಮೊದಲ ರೌಂಡ್ನ ಮೊದಲ ಪಂದ್ಯ ಶ್ರೀಲಂಕಾ ಮತ್ತು ನಮೀಬಿಯಾ ನಡುವೆ ನಡೆಯಲಿದೆ. ಅಕ್ಟೋಬರ್ 21ರವರೆಗೆ ನಡೆಯುವ ಈ ಪಂದ್ಯಗಳಲ್ಲಿ ಅರ್ಹತೆ ಪಡೆದ ತಂಡಗಳು ಸೂಪರ್-12 ಹಂತಕ್ಕೆ ಪ್ರವೇಶ ಪಡೆಯಲಿದೆ. ಮೊದಲ ರೌಂಡ್ನಲ್ಲಿ ಶ್ರೀಲಂಕಾ, ನಮೀಬಿಯಾ, ಸ್ಕಾಟ್ಲೆಂಡ್, ವೆಸ್ಟ್ ಇಂಡೀಸ್ ತಂಡಗಳು ಆಡಲಿವೆ.
ಇನ್ನು ಸೂಪರ್ 12 ಪಂದ್ಯಗಳು ಅಕ್ಟೋಬರ್ 22ರಿಂದ ಶುರುವಾಗಲಿದ್ದು, ಮೊದಲ ಪಂದ್ಯ ನ್ಯೂಜಿಲೆಂಡ್ ಮತ್ತು ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ನಡುವೆ ಸಿಡ್ನಿ ಕ್ರಿಕೆಟ್ ಗ್ರೌಂಡ್ನಲ್ಲಿ ನಡೆಯಲಿದೆ. ಭಾರತ ಹಾಗೂ ಪಾಕಿಸ್ತಾನ ನಡುವಣ ಪಂದ್ಯವನ್ನು ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್ನಲ್ಲಿ ಜರುಗಲಿದೆ.
ಭಾರತ ಪಂದ್ಯಗಳ ವೇಳಾಪಟ್ಟಿ:
ಭಾರತ vs ಪಾಕಿಸ್ತಾನ, ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್, ಅಕ್ಟೋಬರ್ 23
ಭಾರತ vs ಗ್ರೂಪ್ A ರನ್ನರ್ ಅಪ್, ಸಿಡ್ನಿ ಕ್ರಿಕೆಟ್ ಗ್ರೌಂಡ್, ಅಕ್ಟೋಬರ್ 27
ಭಾರತ vs ದಕ್ಷಿಣ ಆಫ್ರಿಕಾ, ಪರ್ತ್ ಸ್ಟೇಡಿಯಂ, ಅಕ್ಟೋಬರ್ 30
ಭಾರತ vs ಬಾಂಗ್ಲಾದೇಶ, ಅಡಿಲೇಡ್ ಓವಲ್, ನವೆಂಬರ್ 2
ಇದನ್ನೂ ಓದಿ: Yuzvendra Chahal: ವಿಕೆಟ್ಗಳ ಶತಕ ಪೂರೈಸಿದ ಚಹಾಲ್
ಇದನ್ನೂ ಓದಿ: Rohit Sharma: ಸಚಿನ್ ದಾಖಲೆ ಮುರಿದ ಹಿಟ್ಮ್ಯಾನ್ ರೋಹಿತ್ ಶರ್ಮಾ
ಇದನ್ನೂ ಓದಿ: Lata Mangeshkar: ಎಲ್ಲರೂ ಕೈಬಿಟ್ಟಾಗ ಟೀಮ್ ಇಂಡಿಯಾ ಕೈ ಹಿಡಿದಿದ್ದ ಲತಾ ಮಂಗೇಶ್ಕರ್..!
(T20 World Cup 2022: India Pakistan match Tickets sold out in a few minutes)