ಮೆಲ್ಬೋರ್ನ್ ಮೈದಾನದಲ್ಲಿ ನಡೆದ ಟಿ20 ವಿಶ್ವಕಪ್ (T20 World Cup 2022) ಸೂಪರ್ 12 ಸುತ್ತಿನ ಇಂಗ್ಲೆಂಡ್ ಹಾಗೂ ಐರ್ಲೆಂಡ್ (Ireland vs England) ನಡುವಣ ಪಂದ್ಯ ರೋಚಕ ಪಲಿತಾಂಶದೊಂದಿಗೆ ಅಂತ್ಯಗೊಂಡಿದೆ. ಮಳೆ ಪೀಡಿತ ಈ ಪಂದ್ಯದಲ್ಲಿ ಡಕ್ ವರ್ತ್ ನಿಯಮದಡಿಯಲ್ಲಿ ಬಟ್ಲರ್ ಪಡೆ ಐರ್ಲೆಂಡ್ ಎದುರು 5 ರನ್ಗಳಿಂದ ಸೋಲನನುಭವಿಸಿದೆ. ಈ ಮೂಲಕ ಐರ್ಲೆಂಡ್ ಟೂರ್ನಿಯಲ್ಲಿ ತನ್ನ ಗೆಲುವಿನ ಖಾತೆ ತೆರೆದಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಐರ್ಲೆಂಡ್ 19. 5 ಓವರ್‌ಗಳಲ್ಲಿ ತನ್ನೇಲ್ಲ ವಿಕೆಟ್ ಕಳೆದುಕೊಂಡು 157 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಇಂಗ್ಲೆಂಡ್ ತಂಡ 14.3 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 105 ರನ್ ಗಳಿಸಿದ್ದಾಗ ಮಳೆ ಪಂದ್ಯಕ್ಕೆ ಅಡ್ಡಿಪಡಿಸಿತು. ನಿರಂತರವಾಗಿ ಮಳೆ ಸುರಿಯಲಾರಂಭಿಸಿದ ಕಾರಣ ಡಕ್ವರ್ತ್ ಲೂಯಿಸ್ ನಿಯಮದ ಪ್ರಕಾರ ಐರ್ಲೆಂಡ್ ತಂಡವನ್ನು ವಿಜಯಿ ಎಂದು ಘೋಷಿಸಲಾಯಿತು.
ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಐರ್ಲೆಂಡ್ ತಂಡ ಉತ್ತಮ ಆರಂಭ ಪಡೆಯಿತು. ತಂಡದ ಆರಂಭಿಕರಾದ ಪಾಲ್ ಸ್ಟಿರ್ಲಿಂಗ್ ಹಾಗೂ ಆಂಡ್ರ್ಯೂ ಬಾಲ್ಬಿರ್ನಿ ಮೊದಲ ವಿಕೆಟ್ ಪತನದ ವೇಳೆಗೆ ತಂಡಕ್ಕೆ 21 ರನ್ ಕೊಡುಗೆ ನೀಡಿದರು. ಹೀಗಾಗಿ ಪವರ್‌ಪ್ಲೇನಲ್ಲಿ ತಂಡ 59 ರನ್ ಗಳಿಸಿ ಭದ್ರ ಬುನಾದಿ ಹಾಕಿತು. ಆ ಬಳಿಕ ಎರಡನೇ ವಿಕೆಟ್ಗೆ ಜೊತೆಯಾದ ಲೋರ್ಕನ್ ಟಕರ್ ಹಾಗೂ ಬಾಲ್ಬಿರ್ನಿ ತಂಡವನ್ನು 100 ರ ಗಡಿ ದಾಟಿಸಿದರು.
24 ಎಸೆತಗಳಲ್ಲಿ 7 ವಿಕೆಟ್
ಆದರೆ ಈ ಜೊತೆಯಾಟವನ್ನು ಮುರಿಯುವಲ್ಲಿ ಯಶಸ್ವಿಯಾದ ಇಂಗ್ಲೆಂಡ್ ಬೌಲರ್ಗಳು ಡೆತ್ ಓವರ್‌ಗಳಲ್ಲಿ ರನ್ ಕಟ್ಟಿಹಾಕುವುದರೊಂದಿಗೆ ವಿಕೆಟ್ಗಳ ಸುರಿಮಳೈಗೆದರು. ಹೀಗಾಗಿ 24 ಎಸೆತಗಳಲ್ಲಿ ಐರ್ಲೆಂಡ್ ತಂಡ 7 ವಿಕೆಟ್ ಕಳೆದುಕೊಂಡಿತು. ಅಂತಿಮವಾಗಿ ಐರ್ಲೆಂಡ್ ತಂಡ 19.2 ಓವರ್‌ಗಳಲ್ಲಿ ತನ್ನೇಲ್ಲ ವಿಕೆಟ್ ಕಳೆದುಕೊಂಡು 157 ರನ್‌ಗಳಿಸಿತು. ತಂಡದ ಪರ ನಾಯಕ ಆಂಡ್ರ್ಯೂ ಬಲ್ಬಿರ್ನಿ (62) ಅರ್ಧಶತಕದೊಂದಿಗೆ ಮಿಂಚಿದರೆ, ಲೋರ್ಕನ್ ಟೇಕರ್ 34 ರನ್ ಗಳಿಸಿದರು. ಕಾಂಪರ್ ಕೂಡ 17 ರನ್ಗಳ ಕೊಡುಗೆ ನೀಡಿದರು. ಇಂಗ್ಲೆಂಡ್ ಪರ ಬೌಲಿಂಗ್ನಲ್ಲಿ ಮಿಂಚಿದ ವೇಗಿಗಳಾದ ಮಾರ್ಕ್ವುಡ್ ಮತ್ತು ಲಿಯಾಮ್ ಲಿವಿಂಗ್ಸ್ಟನ್ ತಲಾ 3 ವಿಕೆಟ್ ಪಡೆದರೆ, ಮತ್ತೊಬ್ಬ ವೇಗಿ ಸ್ಯಾಮ್ ಕರನ್ 2 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.
ಇದನ್ನೂ ಓದಿ: ಪಾಕ್ ವಿರುದ್ಧದ ಗೆಲುವನ್ನು ಅದ್ಧೂರಿಯಾಗಿ ಸಂಭ್ರಮಿಸುವುದು ಬೇಡವೆಂದ ರೋಹಿತ್- ದ್ರಾವಿಡ್!
ಈ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಮೊದಲ ಓವರ್ನಲ್ಲೇ ನಾಯಕ ಬಟ್ಲರ್ ಶೂನ್ಯಕ್ಕೆ ತಮ್ಮ ವಿಕೆಟ್ ಒಪ್ಪಿಸಿದರು. ಆ ಬಳಿಕವೂ ನಿರಂತರವಾಗಿ ವಿಕೆಟ್ಗಳು ಉರುಳಿದರಿಂದ ಇಂಗ್ಲೆಂಡ್ ತಂಡ ಸಂಕಷ್ಟಕ್ಕೆ ಸಿಲುಕಿತು. ಆದರೆ ಒಂದು ಬದಿಯಲ್ಲಿ ತಂಡದ ಇನ್ನಿಂಗ್ಸ್ ಕಟ್ಟಲು ಯತ್ನಿಸಿದ ಮಲಾನ್, 37 ಎಸೆತಗಳಲ್ಲಿ 2 ಬೌಂಡರಿ ಸಹಿತ 35 ರನ್ ಗಳಿಸಿ ಔಟಾದರು. ಆ ಬಳಿಕ ಜೊತೆಯಾದ ಮೊಯಿನ್ ಅಲಿ ಹಾಗೂ ಲಿವಿಂಗ್ಸ್ಟನ್ ವೇಗವಾಗಿ ರನ್ ಗಳಿಸಲು ಮುಂದಾದರು.
ಇಂಗ್ಲೆಂಡ್ ಗೆಲುವಿಗೆ ಅಡ್ಡಿಯಾದ ಮಳೆ
ಆದರೆ ಈ ವೇಳೇಗೆ ಇಂಗ್ಲೆಂಡ್ ಪಾಳಯದ ಗೆಲುವಿಗೆ ವಿಲನ್ ಆಗಿ ಎಂಟ್ರಿಕೊಟ್ಟ ವರುಣ ಇಂಗ್ಲೆಂಡ್ ಇನ್ನಿಂಗ್ಸ್ನ 15ನೇ ಓವರ್ ನಡೆಯುವಾಗ ಆಟಕ್ಕೆ ಅಡ್ಡಿಪಡಿಸಿದ. ಮಳೆ ಬಂದು ಆಟ ನಿಲ್ಲುವ ವೇಳೆಗೆ ಇಂಗ್ಲೆಂಡ್ ತಂಡ 5 ವಿಕೆಟ್ ಕಳೆದುಕೊಂಡು 105 ರನ್ ಗಳಿಸಿತ್ತು. ಅಲ್ಲದೆ ಡಕ್ವರ್ತ್ ಲೂಯಿಸ್ ನಿಯಮದ ಪ್ರಕಾರ ಇಂಗ್ಲೆಂಡ್ ತಂಡ ಆಟ ನಿಲ್ಲುವ ವೇಳೆಗೆ 5 ರನ್ಗಳ ಹಿಂದಿತ್ತು ( ಅಂದರೆ ಇಂಗ್ಲೆಂಡ್ ಗೆಲ್ಲಬೇಕಿದ್ದರೆ ಆ ವೇಳೆಗೆ 110 ರನ್ ಗಳಿಸಿರಬೇಕಿತ್ತು). ಆದರೆ ಆಟ ಮುಂದುವರೆಯಲು ಮಳೆ ಅವಕಾಶ ನೀಡಲಿಲ್ಲ. ಹೀಗಾಗಿ ಅಂಪೈರ್‌ಗಳು ಡಿಎಲ್‌ಎಸ್ ವಿಧಾನದ ಮೂಲಕ ಐರ್ಲೆಂಡ್ ತಂಡವನ್ನು ವಿಜೇತವೆಂದು ಘೋಷಿಸಿದರು.
ಇನ್ನಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:38 pm, Wed, 26 October 22