ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ (T20 World Cup 2022) ಈಗ ಕೊನೆಯ ಹಂತ ತಲುಪಿದೆ. ಈ ಬಾರಿಯ ವಿಶ್ವಕಪ್‌ನಲ್ಲಿ ಮಳೆಯ ಅವಾಂತರ ನಿರಂತರವಾಗಿ ಕಂಡುಬರುತ್ತಿದ್ದು, ಹಲವು ತಂಡಗಳ ಸೆಮಿಫೈನಲ್ ಸಮೀಕರಣವನ್ನೇ ಕೆಡಿಸಿದೆ. ಆತಿಥೇಯ ಆಸ್ಟ್ರೇಲಿಯಾದ ಒಂದು ಪಂದ್ಯವೂ ಮಳೆಗೆ ಬಲಿಯಾಗಿದೆ. ಸದ್ಯ ಜಾರಿಯಲ್ಲಿರುವ ನಿಯಮಗಳ ಪ್ರಕಾರ ಪಂದ್ಯ ನಡೆಯದಿದ್ದರೆ ತಲಾ ಒಂದೊಂದು ಅಂಕಗಳನ್ನು ಉಭಯ ತಂಡಗಳಿಗೂ ಹಂಚಲಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ನಾಕೌಟ್ ಪಂದ್ಯಗಳಲ್ಲಿ ಅಂದರೆ ಸೆಮಿಫೈನಲ್ ಮತ್ತು ಫೈನಲ್‌ಗಳಲ್ಲಿ ಮಳೆಯಾದರೆ ಪಂದ್ಯದ ಫಲಿತಾಂಶವನ್ನು ಹೇಗೆ ನಿರ್ಣಹಿಸಲಾಗುತ್ತದೆ ಎಂಬುದರ ವಿವರಣೆ ಹೀಗಿದೆ.
ಸೂಪರ್ 12 ಸುತ್ತಿಗಾಗಿ ಮಾಡಲಾದ ನಿಯಮಗಳ ಪ್ರಕಾರ, ಮಳೆಯಿಂದಾಗಿ ಪಂದ್ಯವನ್ನು ರದ್ದು ಮಾಡಿದರೆ, ಎರಡೂ ತಂಡಗಳಿಗೆ ತಲಾ ಒಂದೊಂದು ಅಂಕವನ್ನು ನೀಡಲಾಗುತ್ತದೆ. ಆದರೆ ಪಂದ್ಯದ ವೇಳೆ ಮಳೆ ಬಂದರೂ ಸಹ ಉಭಯ ತಂಡಗಳು ತಲಾ 5 ಓವರ್ಗಳನ್ನು ಆಡಲು ಸಫಲವಾದರೆ ಆಗ ವಿನ್ನರ್ ತಂಡವನ್ನು ಘೋಷಿಸಲಾಗುತ್ತಿತ್ತು. ಆದರೆ, ಫೈನಲ್ ಮತ್ತು ಸೆಮಿಫೈನಲ್‌ಗಳಲ್ಲಿ ನಿಯಮಗಳೇ ಪೂರ್ಣ ಬದಲಾಗಲಿವೆ.
ಕನಿಷ್ಠ 10 ಓವರ್‌ಗಳಾದರೂ ಪಂದ್ಯ ನಡೆಯಬೇಕು
ಐಸಿಸಿ, ಸೆಮಿಫೈನಲ್ ಪಂದ್ಯಗಳು ಮತ್ತು ಫೈನಲ್ ಪಂದ್ಯಗಳಿಗೆ ಮೀಸಲು ದಿನವನ್ನು ಇರಿಸಿದೆ. ಅದೇನೆಂದರೆ, ಮಳೆಯಿಂದಾಗಿ ಪಂದ್ಯ ಆರಂಭವಾಗದಿದ್ದರೆ ಮರುದಿನವೇ ಪಂದ್ಯ ನಡೆಯಲಿದೆ. ಮತ್ತೊಂದೆಡೆ, ಪಂದ್ಯದ ವೇಳೆ ಮಳೆ ಬಂದರೆ, ಇನ್ನಿಂಗ್ಸ್‌ಗೆ ಐದು ಓವರ್‌ಗಳವರೆಗೆ ಕಾಯಬೇಕಾಗಿಲ್ಲ. ಸೆಮಿಫೈನಲ್ ಮತ್ತು ಫೈನಲ್ ಪಂದ್ಯ ನಡೆಯಬೇಕಾದರೆ ಎರಡೂ ಇನಿಂಗ್ಸ್‌ಗಳಲ್ಲಿ ಕನಿಷ್ಠ 10 ಓವರ್‌ಗಳು ನಡೆಯಬೇಕು. ಇದು ಆಗದಿದ್ದಲ್ಲಿ ಮರುದಿನ (ಮೀಸಲು ದಿನ) ಪಂದ್ಯ ನಡೆಯಲಿದೆ.
ಇದನ್ನೂ ಓದಿ: AUS vs AFG: ಅಫ್ಘಾನ್ ಮಣಿಸಿದ ಆಸೀಸ್; ಹಾಲಿ ಚಾಂಪಿಯನ್ಗಳ ಸೇಮಿಸ್ ಹಾದಿ ಇನ್ನೂ ಜೀವಂತ! ಆದರೆ?
ನವೆಂಬರ್ 13 ರಂದು ಫೈನಲ್
ಟಿ20 ವಿಶ್ವಕಪ್ 2022 ರ ಮೊದಲ ಸೆಮಿಫೈನಲ್ ಪಂದ್ಯವು ಸಿಡ್ನಿಯಲ್ಲಿ ನವೆಂಬರ್ 9 ರಂದು ನಡೆಯಲಿದೆ. ಮರುದಿನ ಅಂದರೆ ನವೆಂಬರ್ 10 ರಂದು ಅಡಿಲೇಡ್ ಓವಲ್‌ನಲ್ಲಿ ಎರಡನೇ ಸೆಮಿಫೈನಲ್ ಪಂದ್ಯ ನಡೆಯಲಿದೆ. ಟೂರ್ನಿಯ ಪ್ರಶಸ್ತಿ ಪಂದ್ಯವು ನವೆಂಬರ್ 13 ರಂದು ಮೆಲ್ಬೋರ್ನ್‌ನ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ. ಇವೆಲ್ಲವೂ ಭಾರತೀಯ ಕಾಲಮಾನದ ಪ್ರಕಾರ ಮಧ್ಯಾಹ್ನ 1.30 ರಿಂದ ಆರಂಭವಾಗಲಿವೆ.
ಸೆಮಿಫೈನಲ್ ತಲುಪಿದ ಮೊದಲ ತಂಡ ನ್ಯೂಜಿಲೆಂಡ್
ಶುಕ್ರವಾರ ನ್ಯೂಜಿಲೆಂಡ್ ತಂಡ ಟಿ20 ವಿಶ್ವಕಪ್‌ನಲ್ಲಿ ಸೆಮಿಫೈನಲ್ ತಲುಪಿದೆ. ಕೇನ್ ವಿಲಿಯಮ್ಸನ್ 35 ಎಸೆತಗಳಲ್ಲಿ 61 ರನ್ ಗಳಿಸಿದ ನಂತರ ಸ್ಪಿನ್ನರ್‌ಗಳ ಅದ್ಭುತ ಪ್ರದರ್ಶನದ ಹಿನ್ನೆಲೆಯಲ್ಲಿ ನ್ಯೂಜಿಲೆಂಡ್ ಶುಕ್ರವಾರ ಐರ್ಲೆಂಡ್ ತಂಡವನ್ನು 35 ರನ್‌ಗಳಿಂದ ಸೋಲಿಸಿ ಟಿ20 ವಿಶ್ವಕಪ್‌ನ ಸೆಮಿಫೈನಲ್ ಪ್ರವೇಶಿಸಿತು. ನ್ಯೂಜಿಲೆಂಡ್ ಐದು ಪಂದ್ಯಗಳಿಂದ ಏಳು ಅಂಕಗಳನ್ನು ಹೊಂದಿದ್ದು, ಅವರ ರನ್ ರೇಟ್ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್‌ಗಿಂತ ಉತ್ತಮವಾಗಿದೆ. ಹೀಗಾಗಿ ಕಿವೀಸ್ ಪಡೆ ಗುಂಪಿನಲ್ಲಿ ಅಗ್ರಸ್ಥಾನ ಪಡೆಯುವುದು ಖಚಿತವಾಗಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ