T20 World Cup 2022: ಟಿ20 ವಿಶ್ವಕಪ್ನ ಸೂಪರ್-12 ಪಂದ್ಯಗಳ ಲೆಕ್ಕಾಚಾರಗಳು ತಲೆಕೆಳಗಾಗುತ್ತಿದೆ. ಒಂದೆಡೆ ಕೆಲ ತಂಡಗಳು ಬಲಿಷ್ಠ ಪಡೆಗಳಿಗೆ ಸೋಲುಣಿಸುತ್ತಿದ್ದರೆ, ಮತ್ತೊಂದೆಡೆ ಮಳೆಯ ಕಾರಣ ಕೆಲ ಪಂದ್ಯಗಳು ರದ್ದಾಗಿವೆ. ಹೀಗಾಗಿ ಬಹುತೇಕ ತಂಡಗಳ ನಡುವೆ ಇದೀಗ ಸೆಮಿಫೈನಲ್ಗೇರುವ ಫೈಟ್ ಏರ್ಪಟ್ಟಿದೆ. ಈ ಪಟ್ಟಿಯಲ್ಲಿ ಜಿಂಬಾಬ್ವೆ (Zimbabwe) ತಂಡ ಕೂಡ ಇರುವುದು ವಿಶೇಷ. ಗ್ರೂಪ್- 2 ನಲ್ಲಿರುವ ಜಿಂಬಾಬ್ವೆ ತಂಡವು ಇದುವೆರೆಗೆ ಸೋಲನುಭವಿಸಿಲ್ಲ. ಸೌತ್ ಆಫ್ರಿಕಾ ವಿರುದ್ಧ ಆಡಿದ ಮೊದಲ ಪಂದ್ಯವು ಮಳೆಯ ಕಾರಣ ರದ್ದಾಗಿತ್ತು. ಹೀಗಾಗಿ ಜಿಂಬಾಬ್ವೆಗೆ ಒಂದು ಪಾಯಿಂಟ್ ಲಭಿಸಿತ್ತು. ಇದಾದ ಬಳಿಕ ಪಾಕಿಸ್ತಾನ್ ತಂಡವನ್ನು ಬಗ್ಗು ಬಡಿಯುವ ಮೂಲಕ 2 ಅಂಕಗಳನ್ನು ಕಲೆಹಾಕಿದೆ. ಅದರಂತೆ ಇದೀಗ 2 ಪಂದ್ಯಗಳಿಂದ 3 ಅಂಕ ಪಡೆದು ಪಾಯಿಂಟ್ ಟೇಬಲ್ನಲ್ಲಿ 3ನೇ ಸ್ಥಾನದಲ್ಲಿದೆ.
ಇತ್ತ ಎಲ್ಲರೂ ಪಾಕಿಸ್ತಾನ್ ಹಾಗೂ ಸೌತ್ ಆಫ್ರಿಕಾ ಸೆಮಿಫೈನಲ್ ಹಾದಿಯ ಚರ್ಚೆಯಲ್ಲಿದ್ದರೆ ಅತ್ತ ಜಿಂಬಾಬ್ವೆ ಕೂಡ ಮುಂದಿನ ಹಂತಕ್ಕೇರುವ ವಿಶ್ವಾಸದಲ್ಲಿದೆ. ಏಕೆಂದರೆ ಜಿಂಬಾಬ್ವೆಗೆ ಇನ್ನುಳಿದಿರುವುದು 3 ಪಂದ್ಯಗಳು. ಅದು ಕೂಡ ಬಾಂಗ್ಲಾದೇಶ್, ನೆದರ್ಲ್ಯಾಂಡ್ಸ್ ಹಾಗೂ ಭಾರತ ವಿರುದ್ಧ. ಇಲ್ಲಿ ಟೀಮ್ ಇಂಡಿಯಾವನ್ನು ಹೊರತುಪಡಿಸಿದರೆ ಉಳಿದ ತಂಡಗಳು ಜಿಂಬಾಬ್ವೆಗೆ ಸರಿಸಮಾನವಾದ ತಂಡಗಳು ಎನ್ನಬಹುದು. ಹೀಗಾಗಿಯೇ ಸೆಮಿ ಫೈನಲ್ಗೇರುವ ವಿಶ್ವಾಸದಲ್ಲಿದೆ.
ಜಿಂಬಾಬ್ವೆ ಹೇಗೆ ಸೆಮಿಫೈನಲ್ಗೇರಬಹುದು?
ಅಂದರೆ ಇಲ್ಲಿ ಟೀಮ್ ಇಂಡಿಯಾ ಹಾಗೂ ಪಾಕಿಸ್ತಾನ್ ತಂಡಗಳು ಸೌತ್ ಆಫ್ರಿಕಾವನ್ನು ಸೋಲಿಸಿದರೆ ಜಿಂಬಾಬ್ವೆ ಹಾದಿ ಸುಗಮವಾಗಲಿದೆ. ಏಕೆಂದರೆ ಸೌತ್ ಆಫ್ರಿಕಾ ಮುಂದಿನ 2 ಪಂದ್ಯಗಳನ್ನು ಸೋತು, ಕೊನೆಯ ಪಂದ್ಯ ಗೆದ್ದರೂ 5 ಪಾಯಿಂಟ್ ಮಾತ್ರ ಆಗಲಿದೆ.
ಇತ್ತ ಜಿಂಬಾಬ್ವೆ ತಂಡವು ಟೀಮ್ ಇಂಡಿಯಾ ವಿರುದ್ಧ ಸೋತರೂ, ಬಾಂಗ್ಲಾದೇಶ್ ಹಾಗೂ ನೆದರ್ಲ್ಯಾಂಡ್ಸ್ ವಿರುದ್ಧ ಗೆದ್ದರೆ ಸಾಕು. ಇದರಿಂದ ಒಟ್ಟು 7 ಪಾಯಿಂಟ್ ಪಡೆಯಲಿದೆ. ಮತ್ತೊಂದೆಡೆ ಪಾಕಿಸ್ತಾನ್ ಮುಂದಿನ 3 ಪಂದ್ಯಗಳನ್ನು ಗೆದ್ದರೂ 6 ಪಾಯಿಂಟ್ ಮಾತ್ರ ಸಿಗಲಿದೆ. ಇದರಿಂದ 7 ಪಾಯಿಂಟ್ ಹೊಂದಿರುವ ಜಿಂಬಾಬ್ವೆ ಸೆಮಿಫೈನಲ್ ಆಡುವ ಅವಕಾಶ ಪಡೆಯಲಿದೆ.
ಹೀಗಾಗಿ ಜಿಂಬಾಬ್ವೆ ತಂಡವು ಬಲಿಷ್ಠ ಟೀಮ್ ಇಂಡಿಯಾ ಸೌತ್ ಆಫ್ರಿಕಾ ವಿರುದ್ಧ ಗೆಲ್ಲುವುದನ್ನು ಎದುರು ನೋಡುತ್ತಿದೆ. ಹಾಗೆಯೇ ಪಾಕಿಸ್ತಾನ್ ತಂಡ ಕೂಡ ಸೌತ್ ಆಫ್ರಿಕಾ ವಿರುದ್ಧ ಗೆಲ್ಲಲಿ ಎಂದು ಪ್ರಾರ್ಥಿಸುತ್ತಿದೆ. ಇದರಿಂದ ಜಿಂಬಾಬ್ವೆಗೆ ಸೆಮೀಸ್ ಹಾದಿ ಸುಗಮವಾಗಲಿದೆ.
ಇದನ್ನೂ ಓದಿ: Virat Kohli: ಒಂದಲ್ಲ, ಎರಡಲ್ಲ…ಹಲವು ವಿಶ್ವ ದಾಖಲೆಗಳನ್ನು ಉಡೀಸ್ ಮಾಡಿದ ಕಿಂಗ್ ಕೊಹ್ಲಿ
ಅಂದರೆ ಜಿಂಬಾಬ್ವೆ ಟೀಮ್ ಇಂಡಿಯಾ ವಿರುದ್ಧ ಸೋತರೂ, ಬಾಂಗ್ಲಾದೇಶ್ ಹಾಗೂ ನೆದರ್ಲ್ಯಾಂಡ್ಸ್ ವಿರುದ್ಧ ಗೆಲ್ಲುವ ಮೂಲಕ ನೇರವಾಗಿ ಸೆಮಿಫೈನಲ್ಗೇರುವ ಕನಸು ಹೊಂದಿದೆ. ಅದರಂತೆ ಮುಂದಿನ ಪಂದ್ಯಗಳಲ್ಲಿ ಜಿಂಬಾಬ್ವೆ ತಂಡದಿಂದ ರೋಚಕ ಹೋರಾಟವನ್ನು ನಿರೀಕ್ಷಿಸಬಹುದು. ಅಷ್ಟೇ ಅಲ್ಲದೆ ಟಿ20 ವಿಶ್ವಕಪ್ ಇತಿಹಾಸದಲ್ಲೇ ಚೊಚ್ಚಲ ಬಾರಿ ಸೆಮಿಫೈನಲ್ ಆಡುವ ಅವಕಾಶ ಜಿಂಬಾಬ್ವೆ ಪಾಲಾಗಲಿದೆಯಾ ಕಾದು ನೋಡಬೇಕಿದೆ.