Updated on:Oct 29, 2022 | 12:45 PM
ಟಿ20 ವಿಶ್ವಕಪ್‌ನಲ್ಲಿ ಶುಕ್ರವಾರ ಮೆಲ್ಬೋರ್ನ್‌ನಲ್ಲಿ ನಡೆಯಬೇಕಿದ್ದ ಎರಡು ಪಂದ್ಯಗಳು ಮಳೆಯಿಂದ ರದ್ದಾದವು. ಈ ಎರಡು ಪಂದ್ಯಗಳಲ್ಲಿ ಒಂದು ಅಫ್ಘಾನಿಸ್ತಾನ ಹಾಗೂ ಐರ್ಲೆಂಡ್ ನಡುವಿನ ಪಂದ್ಯವಾಗಿದ್ದರೆ, ಮತ್ತೊಂದು ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ನಡುವಿನ ಪಂದ್ಯವಾಗಿತ್ತು. ಮಳೆಯಿಂದಾಗಿ ಎರಡೂ ಪಂದ್ಯಗಳಲ್ಲಿ ಒಂದು ಎಸೆತವನ್ನು ಆಡಲಾಗಲಿಲ್ಲ. ಹಾಗಾಗಿ ಉಭಯ ತಂಡಗಳಿಗೆ ತಲಾ ಒಂದೊಂದು ಅಂಕಗಳನ್ನು ನೀಡಲಾಗಿದೆ. ಇದರಿಂದ ಹಾಲಿ ಚಾಂಪಿಯನ್ ಆಸೀಸ್ಗೆ ಟೂರ್ನಿಯಿಂದ ಹೊರ ಬೀಳುವ ಭೀತಿ ಎದುರಾಗಿದೆ.
ಸೆಮಿಫೈನಲ್ ಹಾದಿ ಸುಗಮವಾಗಲು ಆಸ್ಟ್ರೇಲಿಯಾ, ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಗೆಲ್ಲಲೇಬೇಕಿತ್ತು. ಆದರೆ ಮಳೆ ಅತಿಥೇಯರ ಆಸೆಗೆ ಅಡ್ಡಿಯಾಯಿತು. ಈಗ ಒಂದೊಂದು ಅಂಕ ಹಂಚಿಕೆಯಿಂದಾಗಿ ತವರಿನಲ್ಲಿ ವಿಶ್ವಕಪ್‌ನಿಂದ ಹೊರಬೀಳುವ ಭೀತಿ ಫಿಂಚ್ ಪಡೆಗೆ ಎದುರಾಗಿದೆ.
ಈ ಆವೃತ್ತಿಯಲ್ಲಿ ಆಡಿರುವ 3 ಪಂದ್ಯಗಳಲ್ಲಿ ಆರನ್ ಫಿಂಚ್ ಪಡೆ 3 ಅಂಕಗಳನ್ನು ಗಳಿಸಿದೆ. ಈ ಮೂಲಕ ಗ್ರೂಪ್ 1 ರಲ್ಲಿ ಆಸ್ಟ್ರೇಲಿಯಾ ನಾಲ್ಕನೇ ಸ್ಥಾನದಲ್ಲಿದೆ. ನ್ಯೂಜಿಲೆಂಡ್, ಇಂಗ್ಲೆಂಡ್ ಮತ್ತು ಐರ್ಲೆಂಡ್ ಕೂಡ 3 ಅಂಕ ಸಂಪಾದಿಸಿದ್ದು, ನೆಟ್ ರನ್ ರೇಟ್ ಆಧಾರದ ಮೇಲೆ ಮೊದಲ ಮೂರು ಸ್ಥಾನದಲ್ಲಿವೆ. ಗುಂಪಿನಲ್ಲಿ ಅಗ್ರ ಎರಡು ಸ್ಥಾನ ಗಳಿಸುವ ತಂಡಗಳು ಸೆಮಿಫೈನಲ್‌ಗೆ ಪ್ರವೇಶಿಸುವುದರಿಂದ, 4ನೇ ಸ್ಥಾನದಲ್ಲಿರುವ ಆಸ್ಟ್ರೇಲಿಯಾಕ್ಕೆ ತಲೆನೋವು ತಂದಿದೆ.
ಆಸ್ಟ್ರೇಲಿಯಾ ಈಗಾಗಲೇ ಮೂರು ಪಂದ್ಯಗಳನ್ನು ಆಡಿದ್ದು, ಇನ್ನು ಎರಡು ಪಂದ್ಯಗಳು ಬಾಕಿ ಇವೆ. ಐರ್ಲೆಂಡ್ ಮತ್ತು ಅಫ್ಘಾನಿಸ್ತಾನ ವಿರುದ್ಧ ಎರಡು ಪಂದ್ಯಗಳನ್ನು ಫಿಂಚ್ ಪಡೆ ಆಡಬೇಕಿದ್ದು, ಈ ಎರಡೂ ಪಂದ್ಯಗಳನ್ನು ಭಾರೀ ಅಂತರದಿಂದ ಗೆಲ್ಲಬೇಕಾಗಿದೆ. ಆಗ ಮಾತ್ರ ನೆಟ್ ರನ್ ರೇಟ್ ಸುಧಾರಿಸುತ್ತವುದರೊಂದಿಗೆ 4 ಅಂಕಗಳು ಸಿಗುತ್ತಿವೆ. ಹೀಗಾದರೆ ಮಾತ್ರ ಫಿಂಚ ಪಡೆಯ ಸೇಮಿಸ್ ಹಾದಿ ಸುಗಮಗೊಳಲ್ಲಿದೆ.
ಗುಂಪು 1ರ ಇತರ ತಂಡಗಳಿಗೂ ಮಳೆ ಕಾಟ ನೀಡಿದೆ. ಆದರೂ ಕೂಡ ತಮ್ಮ ನೆಟ್ ರನ್ ರೇಟ್‌ನಲ್ಲಿ ಮೇಲಿರುವ ತಂಡಗಳಿಗೆ ಇದು ಹೆಚ್ಚು ತಲೆನೋವು ನೀಡಿಲ್ಲ. ಆಸ್ಟ್ರೇಲಿಯದಷ್ಟೇ ಸಮಾನ ಅಂಕ ಹೊಂದಿರುವ ಐರ್ಲೆಂಡ್, ತನ್ನ ನೆಟ್ ರನ್ರೇಟ್ನಲ್ಲಿ ಆಸೀಸ್ಗಿಂತ ಮೇಲಿದೆ. ಹೀಗಾಗಿ ಅದು ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ.
Published On - 12:42 pm, Sat, 29 October 22