ಕ್ರಿಕೆಟ್ನಲ್ಲಿ ಸೋಲು ಗೆಲುವು ಸಹಜ.. ಒಂದು ಬಾರಿ ಸೋತ ತಂಡಕ್ಕೆ ಇನ್ನೊಂದು ಬಾರಿ ಗೆಲುವು ಖಚಿತ. ಇದೆಲ್ಲವೂ ಆಟದ ಒಂದು ಭಾಗವಷ್ಟೆ… ಹೀಗೆಲ್ಲ ಮಾತಿನಲ್ಲಿ ಹೇಳುವುದು ತುಂಬಾ ಸುಲಭ. ಆದರೆ ಸೋತವರ ಜಾಗದಲ್ಲಿ ನೀವಿದ್ದರೆ ಅಥವಾ ನಿಮ್ಮ ತಂಡವಿದ್ದರೆ ಈ ಆಘಾತವನ್ನು ಎದುರಿಸುವುದು ಬಹಳ ಕಷ್ಟ. ಈಗ ಪಾಕಿಸ್ತಾನದ ಕ್ರಿಕೆಟಿಗರು ಮತ್ತು ಅಭಿಮಾನಿಗಳ ವಿಷಯದಲ್ಲೂ ಇದೇ ಆಗಿದೆ. ಟಿ20 ವಿಶ್ವಕಪ್‌ನಲ್ಲಿ (T20 World Cup 2022) ಗೆಲ್ಲಲೇಬೇಕಾದ ಪಂದ್ಯದಲ್ಲಿ ಪಾಕ್ ಪಡೆ ಜಿಂಬಾಬ್ವೆ ವಿರುದ್ಧ ಸೋಲನುಭವಿಸಿದೆ. ಅದರಲ್ಲೂ ಒಂದು ರನ್‌ನಿಂದ ಸೋತಿರುವುದು ಪಾಕ್ ತಂಡದ ಆಟಗಾರರಿಗೆ ಹಾಗೂ ತಂಡದ ಅಭಿಮಾನಿಗಳಿಗೆ ಇನ್ನಿಲ್ಲದ ನೋವು ನೀಡಿದೆ. ಇದಕ್ಕೆ ಸಾಕ್ಷಿಯಾಗಿ ಪಾಕ್ ತಂಡದ ಉಪನಾಯಕ ಶಾದಾಬ್ ಖಾನ್ (Shadab Khan) ನೆಲಕ್ಕುರುಳಿ ರೋಧಿಸುತ್ತಿರುವ ವೀಡಿಯೊವೊಂದು ಈಗ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.
ಜಿಂಬಾಬ್ವೆ ಎದುರು ಪಾಕ್ ತಂಡ ಸೋತ ಬಳಿಕ ಆ ಸೋಲನ್ನು ಅರಗಿಸಿಕೊಳ್ಳಲು ಸಾಧ್ಯವಾಗದೆ ತಂಡದ ಉಪನಾಯಕ ಶಾದಾಬ್ ಖಾನ್, ನೆಲದ ಮೇಲೆ ಮಂಡಿಯೂರಿ ಕಣ್ಣೀರಿಟ್ಟಿದ್ದಾರೆ. ಸೋಲಿನ ಶಾಖ್ನಲ್ಲಿ ಕಣ್ಣೀರಿಡುತ್ತಿದ್ದ ಶಾದಬ್ರನ್ನು ತಂಡದ ಸಹಾಯಕ ಸಿಬ್ಬಂದಿಯೊಬ್ಬರು ಸಮಾದಾನ ಪಡಿಸಲು ಮುಂದಾಗಿದ್ದಾರೆ. ಈಗ ಶಾದಾಬ್ ಅವರು ಕಣ್ಣೀರಿಟ್ಟಿರುವ ಈ ವಿಡಿಯೋ ಹಲವು ಪಾಕಿಸ್ತಾನಿ ಅಭಿಮಾನಿಗಳನ್ನು ಭಾವುಕರನ್ನಾಗಿಸಿದೆ. ಅಂದಹಾಗೆ, ಹಲವರು ಕಣ್ಣೀರು ಹಾಕುವ ಬದಲು ಆಟದತ್ತ ಗಮನ ಹರಿಸುವಂತೆ ಸಲಹೆಯನ್ನೂ ನೀಡಿದ್ದಾರೆ.
LITERALLY TEARS IN MY EYES. JUST CANT SEE THAT??? pic.twitter.com/pTbM39vxFC
— momina ?? (@theobsessedbear) October 28, 2022
ಬಾಬರ್-ನವಾಜ್ ಕೂಡ ಕಣ್ಣೀರಿಟ್ಟರು
ಪಾಕಿಸ್ತಾನದ ಸೋಲಿನ ನಂತರ, ಕ್ಯಾಪ್ಟನ್ ಬಾಬರ್ ಅಜಮ್ ಕೂಡ ತುಂಬಾ ದುಃಖಿತರಾಗಿದ್ದರು ಎಂಬುದು ವಿಡಿಯೋಗಳಲ್ಲಿ ಕಾಣಿಸುತ್ತಿತ್ತು. ತಂಡದ ಇತರ ಆಟಗಾರರೊಂದಿಗೆ ಮೈದಾನದ ಹೊರಗೆ ಕುಳಿತಿದ್ದ ಬಾಬರ್, ತಂಡ ರೋಚಕ ಘಟ್ಟದಲ್ಲಿ ಸೋಲನುಭವಿಸಿದನ್ನು ಕಂಡು ಶಾಕ್ಗೆ ಒಳಗಾಗಿದ್ದಲ್ಲದೆ ಕಣ್ಣೀರಿಟ್ಟಿದ್ದರು. ಮೊಹಮ್ಮದ್ ನವಾಜ್ ಕೂಡ ಇದೇ ರೀತಿ ರೋದಿಸಿದ್ದರು. 20ನೇ ಓವರ್‌ನ ಐದನೇ ಎಸೆತದಲ್ಲಿ ನವಾಜ್ ಔಟಾದ ಕೂಡಲೇ, ಅವರು ಸ್ವಲ್ಪ ಸಮಯ ಪಿಚ್‌ನಲ್ಲಿ ಕುಳಿತು, ತಮ್ಮ ನೋವನ್ನು ಹೊರಹಾಕಿದ್ದರು.
ಇದನ್ನೂ ಓದಿ: T20 World Cup 2022: ಮಳೆಯಿಂದಾಗಿ ಇಡೀ ದಿನದಾಟ ರದ್ದು; ಪಾಯಿಂಟ್ ಪಟ್ಟಿಯಲ್ಲಿ ಯಾವ ತಂಡಕ್ಕೆ ಯಾವ ಸ್ಥಾನ?
ಅನುಭವಿಗಳ ಶಾಪಕ್ಕೆ ಗುರಿಯಾದ ಪಾಕ್ ತಂಡ
ಈ ಪಂದ್ಯದಲ್ಲಿ ಪಾಕ್ ತಂಡಕ್ಕೆ ಕೇವಲ 131 ರನ್‌ಗಳ ಗುರಿ ಇತ್ತು. ಆದರೆ ಇದರ ಹೊರತಾಗಿಯೂ, ಅದು ಒಂದು ರನ್‌ನಿಂದ ಸೋಲನುಭವಿಸಿತು. ಈ ಸೋಲಿನ ನಂತರ ಪಾಕಿಸ್ತಾನ ತಂಡ ತನ್ನ ಮಾಜಿ ಕ್ರಿಕೆಟಿಗರ ಹಿಡಿಶಾಪಕ್ಕೆ ತುತ್ತಾಗಿದೆ. ಪಾಕ್ ಮಂಡಳಿಯ ಮೇಲೆ ಕಿಡಿಕಾರಿರುವ ಮಾಜಿ ಆಟಗಾರ ಶೋಯೆಬ್ ಅಖ್ತರ್, ಪಾಕಿಸ್ತಾನದ ಕ್ರಿಕೆಟ್ ಸಂಕಷ್ಟದಲ್ಲಿದೆ ಎಂದಿದ್ದಾರೆ. ಪಾಕಿಸ್ತಾನ ತಂಡವು ಉತ್ತಮ ಬ್ಯಾಟ್ಸ್‌ಮನ್‌ಗಳನ್ನು ಹೊರಗಿಟ್ಟು ಕಳಪೆ ಫಾರ್ಮ್ ಹೊಂದಿರುವ ಆಟಗಾರರನ್ನು ತಂಡಕ್ಕೆ ಸೇರಿಸಿಕೊಂಡಿದ್ದರಿಂದ ಅವರಿಗೆ ಈ ರೀತಿಯಾಗಿದೆ ಎಂದು ಜಾವೇದ್ ಮಿಯಾಂದಾದ್ ಹೇಳಿದ್ದಾರೆ.
ಮಾಜಿ ಆರಂಭಿಕ ಆಟಗಾರ ಮೊಹ್ಸಿನ್ ಖಾನ್, ‘ಇದು ನಮ್ಮ ಕ್ರಿಕೆಟ್ ಆಗಿದೆಯೇ? ಜಿಂಬಾಬ್ವೆಯಂತಹ ಕೆಳ ಕ್ರಮಾಂಕದ ತಂಡದ ವಿರುದ್ಧ ನಾವು 130 ರನ್ ಗಳಿಸಲು ಸಾಧ್ಯವಾಗಲಿಲ್ಲ. ಇದು ನಮ್ಮ ಬ್ಯಾಟಿಂಗ್ ಆಗಿದ್ದರೆ, ದೇವರು ನಮ್ಮ ಕ್ರಿಕೆಟ್‌ಗೆ ಸಹಾಯ ಮಾಡಲಿ ಎಂದಿದ್ದಾರೆ. ಹಾಗೆಯೇ ಸಲ್ಮಾನ್ ಬಟ್ ಕೂಡ ತಂಡವನ್ನು ಟೀಕಿಸಿದ್ದು, ಪಾಕಿಸ್ತಾನದ ಬ್ಯಾಟಿಂಗ್ ಮತ್ತು ನಾಯಕ ಬಾಬರ್ ಅಜಮ್ ಬಗ್ಗೆಯೂ ಪ್ರಶ್ನೆಗಳನ್ನು ಎತ್ತಿದ್ದಾರೆ. ಬಾಬರ್-ರಿಜ್ವಾನ್ ಉತ್ತಮವಾಗಿ ಆಡದಿದ್ದರೆ, ತಂಡಕ್ಕೆ ಸಂಕಷ್ಟ ಹೆಚ್ಚಾಗುತ್ತವೆ ಎಂದಿದ್ದಾರೆ.
ಇನ್ನಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:39 pm, Fri, 28 October 22