T20 World Cup 2022: ವಿಶ್ವಕಪ್ ಇತಿಹಾಸದಲ್ಲೇ ಭಾರತದ ಪಾಲಿನ ಅತ್ಯಂತ ಕೆಟ್ಟ ಪಂದ್ಯ ಯಾವುದೆಂದು ಕೇಳಿದರೆ ಥಟ್ಟನೆ ಬರುವ ಉತ್ತರ 2021 ರ ವಿಶ್ವಕಪ್ನಲ್ಲಿನ ಮೊದಲ ಪಂದ್ಯ. ಅಕ್ಟೋಬರ್ 24, 2021 ರಲ್ಲಿ ದುಬೈ ಇಂಟರ್ನ್ಯಾಷನಲ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಭಾರತದ ವಿರುದ್ಧ ಪಾಕಿಸ್ತಾನ್ (India vs Pakistan) ತಂಡವು 10 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು. ಇದರೊಂದಿಗೆ ವಿಶ್ವಕಪ್ನಲ್ಲಿ ಪಾಕ್ ವಿರುದ್ಧ ಸೋಲಿಲ್ಲದ ಸರದಾರನಾಗಿ ಮೆರೆಯುತ್ತಿದ್ದ ಟೀಮ್ ಇಂಡಿಯಾದ ಗೆಲುವಿನ ನಾಗಾಲೋಟಕ್ಕೂ ತೆರೆಬಿತ್ತು.
ಅಂದು ಭಾರತ ತಂಡದ ಸೋಲಿಗೆ ಕಾರಣರಾಗಿದ್ದು ಪಾಕ್ ವೇಗಿ ಶಾಹೀನ್ ಅಫ್ರಿದಿ. ಪಂದ್ಯದ ಮೊದಲ ಓವರ್ನ 4ನೇ ಎಸೆತದಲ್ಲಿ ರೋಹಿತ್ ಶರ್ಮಾರನ್ನು (0) ಎಲ್ಬಿ ಬಲೆಗೆ ಕೆಡವಿದ್ದ ಅಫ್ರಿದಿ, ಮೂರನೇ ಓವರ್ನ ಮೊದಲ ಎಸೆತದಲ್ಲೇ ಕೆಎಲ್ ರಾಹುಲ್ (3) ಅವರನ್ನು ಕ್ಲೀನ್ ಬೌಲ್ಡ್ ಮಾಡಿದ್ದರು.
ಈ ಆರಂಭಿಕ ಆಘಾತದಿಂದ ಚೇತರಿಸಿಕೊಳ್ಳಲು ಟೀಮ್ ಇಂಡಿಯಾ ಹರಸಾಹಸಪಡಬೇಕಾಯಿತು. ಇದಾಗ್ಯೂ ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶಿಸಿದ ವಿರಾಟ್ ಕೊಹ್ಲಿ 49 ಎಸೆತಗಳಲ್ಲಿ 57 ರನ್ ಬಾರಿಸಿದ್ದರು. ಆದರೆ 19ನೇ ಓವರ್ನಲ್ಲಿ ಮರಳಿದ್ದ ಶಾಹೀನ್ ಅಫ್ರಿದಿ ಕೊಹ್ಲಿಯ ವಿಕೆಟ್ ಅನ್ನು ಕೂಡ ಪಡೆದರು. ಈ ಮೂಲಕ ಟೀಮ್ ಇಂಡಿಯಾದ ಮೊತ್ತವನ್ನು 151 ಕ್ಕೆ ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದರು.
ಇನ್ನು 152 ರನ್ಗಳ ಟಾರ್ಗೆಟ್ ಪಡೆದ ಪಾಕಿಸ್ತಾನ್ ತಂಡವು 17.5 ಓವರ್ಗಳಲ್ಲಿ ಗುರಿ ಮುಟ್ಟುವ ಮೂಲಕ 10 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು. ಅಂದು ಮ್ಯಾನ್ ಆಫ್ ದಿ ಮ್ಯಾಚ್ ಪಡೆದಿದ್ದು ಶಾಹೀನ್ ಅಫ್ರಿದಿ.
ಈ ಹೀನಾಯ ಸೋಲಿನ ಬಳಿಕ ಟೀಮ್ ಇಂಡಿಯಾ ಪಾಕಿಸ್ತಾನ್ ವಿರುದ್ಧ 2 ಟಿ20 ಪಂದ್ಯಗಳನ್ನು ಆಡಿದೆ. ಆದರೆ ಈ ಮುಖಾಮುಖಿಯಲ್ಲಿ ಶಾಹೀನ್ ಅಫ್ರಿದಿ ವರ್ಸಸ್ ಕೆಎಲ್ ರಾಹುಲ್, ರೋಹಿತ್ ಶರ್ಮಾ ಹಾಗೂ ಕೊಹ್ಲಿಯ ಜಿದ್ದಾಜಿದ್ದಿಯನ್ನು ಎದುರು ನೋಡಿದ್ದ ಕ್ರಿಕೆಟ್ ಪ್ರೇಮಿಗಳಿಗೆ ನಿರಾಸೆ ಕಾದಿತ್ತು. ಏಕೆಂದರೆ ಈ ಎರಡೂ ಪಂದ್ಯಗಳಲ್ಲಿ ಶಾಹೀನ್ ಅಫ್ರಿದಿ ಆಡಿರಲಿಲ್ಲ. ಅಂದರೆ ಈ ಬಾರಿಯ ಏಷ್ಯಾಕಪ್ನಿಂದ ಗಾಯದ ಕಾರಣ ಪಾಕ್ ವೇಗಿ ಹೊರಗುಳಿದಿದ್ದರು.
ಇದೀಗ ಮತ್ತೆ ಭಾರತ ಮತ್ತು ಪಾಕಿಸ್ತಾನ್ ತಂಡಗಳು ಮುಖಾಮುಖಿಯಾಗುತ್ತಿದೆ. ಅದು ಕೂಡ ಟಿ20 ವಿಶ್ವಕಪ್ನಲ್ಲಿನ ಉಭಯ ತಂಡಗಳ ಮೊದಲ ಪಂದ್ಯದಲ್ಲಿ ಎಂಬುದು ವಿಶೇಷ. ಅಂದರೆ ಕಳೆದ ವರ್ಷ ಅಕ್ಟೋಬರ್ 24 ರಂದು ಎದುರು ಬದುರಾಗಿದ್ದ ತಂಡಗಳು ಇದೇ ಅಕ್ಟೋಬರ್ 23 ರಂದು ಮತ್ತೆ ಮುಖಾಮುಖಿಯಾಗುತ್ತಿದೆ.
ಅಂದರೆ ಬರೋಬ್ಬರಿ ಒಂದು ವರ್ಷಗಳ ಬಳಿಕ ಕೆಎಲ್ ರಾಹುಲ್, ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಪಾಕ್ ವೇಗಿ ಶಾಹೀನ್ ಅಫ್ರಿದಿಯನ್ನು ಎದುರಿಸಲು ಸಿದ್ಧರಾಗಿದ್ದಾರೆ. ಅತ್ತ ಅಫ್ರಿದಿ ಕೂಡ ವಿಶ್ರಾಂತಿಯ ಬಳಿಕ ಹೊಸ ಅಸ್ತ್ರಗಳೊಂದಿಗೆ ಸಜ್ಜಾಗಿದ್ದಾರೆ. ಹೀಗಾಗಿಯೇ ಭಾರತ-ಪಾಕ್ ನಡುವಣ ಪಂದ್ಯದ ಮೊದಲ ಓವರ್ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.
ಅದರಲ್ಲೂ ಟೀಮ್ ಇಂಡಿಯಾ ಅಭಿಮಾನಿಗಳು ಕೆಎಲ್ ರಾಹುಲ್, ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಶಾಹೀನ್ ಅಫ್ರಿದಿಯ ಬೆಂಡೆತ್ತಿ ಸೇಡು ತೀರಿಸಿಕೊಳ್ಳುವುದನ್ನು ಎದುರು ನೋಡುತ್ತಿದ್ದಾರೆ. ಅದರಂತೆ ಅಕ್ಟೋಬರ್ 23 ರಂದು ಟೀಮ್ ಇಂಡಿಯಾ ಆಟಗಾರರು ಶಾಹೀನ್ ಅಫ್ರಿದಿ ವಿರುದ್ಧ ಸೋಲಿನ ಸೇಡು ತೀರಿಸಿಕೊಳ್ಳಲಿದ್ದಾರಾ ಕಾದು ನೋಡಬೇಕಿದೆ.
ಭಾರತ ತಂಡ ಹೀಗಿದೆ:
ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಆರ್ ಅಶ್ವಿನ್, ಮೊಹಮ್ಮದ್ ಶಮಿ, ಯುಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್, ಭುವನೇಶ್ವರ ಕುಮಾರ್, ಹರ್ಷಲ್ ಪಟೇಲ್, ಅರ್ಷದೀಪ್ ಸಿಂಗ್.
ಪಾಕಿಸ್ತಾನ ತಂಡ ಹೀಗಿದೆ:
ಬಾಬರ್ ಅಜಮ್ (ನಾಯಕ), ಶಾದಾಬ್ ಖಾನ್ (ಉಪನಾಯಕ), ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಫಖರ್ ಜಮಾನ್, ಆಸಿಫ್ ಅಲಿ, ಹೈದರ್ ಅಲಿ, ಹಾರಿಸ್ ರೌಫ್, ಇಫ್ತಿಕರ್ ಅಹ್ಮದ್, ಶಾನ್ ಮಸೂದ್, ಮೊಹಮ್ಮದ್ ನವಾಜ್, ಶಾಹೀನ್ ಶಾ ಆಫ್ರಿದಿ, ಖುಷ್ದಿಲ್ ಶಾ , ಮೊಹಮ್ಮದ್ ವಾಸಿಂ, ನಸೀಮ್ ಶಾ, ಮೊಹಮ್ಮದ್ ಹಸ್ನೈನ್.
Published On - 10:09 pm, Thu, 20 October 22