India vs South Africa: ಟೀಮ್ ಇಂಡಿಯಾಗೆ ಸೋಲುಣಿಸಿ ಅಗ್ರಸ್ಥಾನಕ್ಕೇರಿದ ಸೌತ್ ಆಫ್ರಿಕಾ

| Updated By: ಝಾಹಿರ್ ಯೂಸುಫ್

Updated on: Oct 30, 2022 | 8:12 PM

T20 World Cup 2022: ಈ ಹಂತದಲ್ಲಿ ಜೊತೆಯಾದ ಸೂರ್ಯಕುಮಾರ್ ಯಾದವ್ ಹಾಗೂ ದಿನೇಶ್ ಕಾರ್ತಿಕ್ ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶಿಸಿ 52 ರನ್​ಗಳ ಜೊತೆಯಾಟವಾಡಿದರು.

India vs South Africa: ಟೀಮ್ ಇಂಡಿಯಾಗೆ ಸೋಲುಣಿಸಿ ಅಗ್ರಸ್ಥಾನಕ್ಕೇರಿದ ಸೌತ್ ಆಫ್ರಿಕಾ
India vs South Africa
Follow us on

T20 World Cup 2022: ಪರ್ತ್​ನಲ್ಲಿ ನಡೆದ ಟಿ20 ವಿಶ್ವಕಪ್​ನ 30ನೇ ಪಂದ್ಯದಲ್ಲಿ ಟೀಮ್ ಇಂಡಿಯಾ ವಿರುದ್ಧ ಸೌತ್ ಆಫ್ರಿಕಾ ತಂಡವು ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಗ್ರೂಪ್-2 ರ ಪಾಯಿಂಟ್ ಟೇಬಲ್​ನಲ್ಲಿ ಸೌತ್ ಆಫ್ರಿಕಾ ತಂಡವು ಅಗ್ರಸ್ಥಾನಕ್ಕೇರಿದೆ. ಇದಕ್ಕೂ ಮುನ್ನ ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ (Team India) ನಾಯಕ ರೋಹಿತ್ ಶರ್ಮಾ (Rohit Sharma) ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ಟೀಮ್ ಇಂಡಿಯಾ ಉತ್ತಮ ಆರಂಭ ಪಡೆದಿರಲಿಲ್ಲ. ಆರಂಭಿಕರಾಗಿ ಕಣಕ್ಕಿಳಿದ ರೋಹಿತ್ ಶರ್ಮಾ (15) ಹಾಗೂ ಕೆಎಲ್ ರಾಹುಲ್ (9) ಲುಂಗಿ ಎನ್​ಗಿಡಿ ಎಸೆತಗಳಲ್ಲಿ ಕ್ಯಾಚ್ ನೀಡಿ ಹೊರನಡೆದರು. ಇದರ ಬೆನ್ನಲ್ಲೇ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಲು ಮುಂದಾಗಿ ವಿರಾಟ್ ಕೊಹ್ಲಿ (12) ಕೂಡ ಎನ್​ಗಿಡಿ ಎಸೆತದಲ್ಲಿ ಕ್ಯಾಚ್ ನೀಡಿ ನಿರ್ಗಮಿಸಿದರು.

ಆ ಬಳಿಕ ಬಂದ ದೀಪಕ್ ಹೂಡಾ ಅವರನ್ನು ಶೂನ್ಯಕ್ಕೆ ಪೆವಿಲಿಯನ್​ಗೆ ಕಳುಹಿಸುವಲ್ಲಿ ಅನ್ರಿಕ್ ನೋಕಿಯಾ ಯಶಸ್ವಿಯಾದರು. ಇದರ ಬೆನ್ನಲ್ಲೇ ಹಾರ್ದಿಕ್ ಪಾಂಡ್ಯ (2) ಎನ್​ಗಿಡಿ ಎಸೆತದಲ್ಲಿ ಔಟಾದರು. ಅದರಂತೆ ಟೀಮ್ ಇಂಡಿಯಾ ಕೇವಲ 49 ರನ್​ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.

ಈ ಹಂತದಲ್ಲಿ ಜೊತೆಯಾದ ಸೂರ್ಯಕುಮಾರ್ ಯಾದವ್ ಹಾಗೂ ದಿನೇಶ್ ಕಾರ್ತಿಕ್ ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶಿಸಿ 52 ರನ್​ಗಳ ಜೊತೆಯಾಟವಾಡಿದರು. ಈ ವೇಳೆ 6 ರನ್​ಗಳಿಸಿದ್ದ ಡಿಕೆ ಬಿರುಸಿನ ಹೊಡೆತಕ್ಕೆ ಮುಂದಾಗಿ ಪಾರ್ನೆಲ್ ಎಸೆತದಲ್ಲಿ ಕ್ಯಾಚ್ ನೀಡಿ ನಿರ್ಗಮಿಸಿದರು.

ಇದನ್ನೂ ಓದಿ
Virat Kohli: ಒಂದಲ್ಲ, ಎರಡಲ್ಲ…ಹಲವು ವಿಶ್ವ ದಾಖಲೆಗಳನ್ನು ಉಡೀಸ್ ಮಾಡಿದ ಕಿಂಗ್ ಕೊಹ್ಲಿ
India vs Pakistan: ಪಾಕ್​ನ ಬಗ್ಗು ಬಡಿದು ವಿಶ್ವ ದಾಖಲೆ ನಿರ್ಮಿಸಿದ ಟೀಮ್ ಇಂಡಿಯಾ
IND vs PAK: ವಿಶ್ವಕಪ್​ನಲ್ಲಿ ವಿಶ್ವ ದಾಖಲೆ ಬರೆದ ರೋಹಿತ್ ಶರ್ಮಾ
India vs Pakistan: ಹೊಸ ದಾಖಲೆ ನಿರ್ಮಿಸಿದ ದಿನೇಶ್ ಕಾರ್ತಿಕ್

ಇದಾಗ್ಯೂ ಏಕಾಂಗಿಯಾಗಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ಸೂರ್ಯಕುಮಾರ್ ಯಾದವ್ 3 ಭರ್ಜರಿ ಸಿಕ್ಸ್ ಹಾಗೂ 6 ಆಕರ್ಷಕ ಫೋರ್​ಗಳನ್ನು ಬಾರಿಸಿದರು. ಈ ಮೂಲಕ 40 ಎಸೆತಗಳಲ್ಲಿ 68 ರನ್​ ಸಿಡಿಸಿದರು. ಸೂರ್ಯಕುಮಾರ್ ಯಾದವ್ ಅವರ ಆಕರ್ಷಕ ಅರ್ಧಶತಕದ ನೆರವಿನಿಂದ ಟೀಮ್ ಇಂಡಿಯಾ 9 ವಿಕೆಟ್ ನಷ್ಟಕ್ಕೆ 133 ರನ್ ಕಲೆಹಾಕಿತು.

134 ರನ್​ಗಳ ಸುಲಭ ಟಾರ್ಗೆಟ್ ಬೆನ್ನತ್ತಿದ ಸೌತ್ ಆಫ್ರಿಕಾ ತಂಡಕ್ಕೆ ಆರಂಭಿಕ ಆಘಾತ ನೀಡುವಲ್ಲಿ ಅರ್ಷದೀಪ್ ಸಿಂಗ್ ಯಶಸ್ವಿಯಾದರು. 2ನೇ ಓವರ್​ನಲ್ಲಿ ಕ್ವಿಂಟನ್ ಡಿಕಾಕ್ (1) ಹಾಗೂ ರಿಲೀ ರೊಸ್ಸೊ (0) ವಿಕೆಟ್ ಪಡೆಯುವ ಮೂಲಕ ಅರ್ಷದೀಪ್ ಅಮೂಲ್ಯ ಯಶಸ್ಸು ತಂದುಕೊಟ್ಟರು. ಇದರ ಬೆನ್ನಲ್ಲೇ ಮೊಹಮ್ಮದ್ ಶಮಿ ತೆಂಬ ಬವುಮಾ (10) ವಿಕೆಟ್ ಕಬಳಿಸಿದರು.

ಪವರ್​ಪ್ಲೇನಲ್ಲೇ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ಸೌತ್ ಆಫ್ರಿಕಾ ತಂಡವು ಮೊದಲ 6 ಓವರ್​ಗಳಲ್ಲಿ ಕಲೆಹಾಕಿದ್ದು ಕೇವಲ 24 ರನ್​ಗಳು ಮಾತ್ರ. ಈ ಹಂತದಲ್ಲಿ ಜೊತೆಯಾದ ಏಡನ್ ಮಾರ್ಕ್ರಾಮ್ ಹಾಗೂ ಡೇವಿಡ್ ಮಿಲ್ಲರ್ ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶಿಸಿದರು. ಮೊದಲ 10 ಓವರ್​ಗಳವರೆಗೂ ಎಚ್ಚರಿಕೆಯುವಾಗಿ ಬ್ಯಾಟ್ ಬೀಸಿದ ಈ ಜೋಡಿ ನಿಧಾನಕ್ಕೆ ರನ್​ಗಳಿಸುತ್ತಾ ಸಾಗಿದರು.

ಆ ಬಳಿಕ ರನ್​ ಗತಿ ಹೆಚ್ಚಿಸಿದ ಈ ಜೋಡಿಯು ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದರು. ಪರಿಣಾಮ 39 ಎಸೆತಗಳಲ್ಲಿ ಅರ್ಧಶತಕ ಪೂರೈಸಿ ಏಡನ್ ಮಾರ್ಕ್ರಾಮ್ ಬ್ಯಾಟ್ ಮೇಲೆತ್ತಿದರು. ಆದರೆ ಅರ್ಧಶತಕದ ಬೆನ್ನಲ್ಲೇ ಹಾರ್ದಿಕ್ ಪಾಂಡ್ಯ ಎಸೆತದಲ್ಲಿ ಕ್ಯಾಚ್ ನೀಡಿ ಮಾಕ್ರಾರ್ಮ್​ (52) ಹೊರನಡೆದರು. ಅಷ್ಟರಲ್ಲಾಗಲೇ ಮಿಲ್ಲರ್ ಜೊತೆ 66 ರನ್​ಗಳ ಜೊತೆಯಾಟವಾಡಿ ತಂಡದ ಮೊತ್ತವನ್ನು 100 ಕ್ಕೆ ತಂದು ನಿಲ್ಲಿಸಿದ್ದರು.

ಕೊನೆಯ ಮೂರು ಓವರ್​ಗಳಲ್ಲಿ 25 ರನ್​ಗಳ ಟಾರ್ಗೆಟ್ ಪಡೆದ ಸೌತ್ ಆಫ್ರಿಕಾ ಪರ ಡೇವಿಡ್ ಮಿಲ್ಲರ್ ಅಬ್ಬರಿಸಿದರು. ಅಶ್ವಿನ್ ಎಸೆದ 18ನೇ ಓವರ್​ನಲ್ಲಿ 2 ಭರ್ಜರಿ ಸಿಕ್ಸ್ ಸಿಡಿಸುವ ಮೂಲಕ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ಅಂತಿಮ 12 ಎಸೆತಗಳಲ್ಲಿ 12 ರನ್​ಗಳ ಗುರಿ ಪಡೆದಿದ್ದ ಸೌತ್ ಆಫ್ರಿಕಾ ಬ್ಯಾಟರ್​ಗಳನ್ನು ನಿಯಂತ್ರಿಸುವಲ್ಲಿ ಶಮಿ ಯಶಸ್ವಿಯಾದರು. 19ನೇ ಓವರ್​ನಲ್ಲಿ ಕೇವಲ 6 ರನ್ ನೀಡಿದ ಪರಿಣಾಮ ಸೌತ್ ಆಫ್ರಿಕಾಗೆ ಕೊನೆಯ ಓವರ್​ನಲ್ಲಿ 6 ರನ್ ಬೇಕಿತ್ತು.

ಅಂತಿಮ ಓವರ್ ಎಸೆದ ಭುವನೇಶ್ವರ್ ಕುಮಾರ್​ ಅವರ ನಾಲ್ಕನೇ ಎಸೆತದಲ್ಲಿ ಡೇವಿಡ್ ಮಿಲ್ಲರ್ ಫೋರ್ ಬಾರಿಸಿದರು. ಇನ್ನು 5ನೇ ಎಸೆತದಲ್ಲಿ ಮತ್ತೊಂದು ಬೌಂಡರಿ ಬಾರಿಸುವ ಮೂಲಕ 19.5 ಓವರ್​ನಲ್ಲಿ ತಂಡವನ್ನು ಗುರಿ ಮುಟ್ಟಿಸಿದರು. ಅದರಂತೆ ಸೌತ್ ಆಫ್ರಿಕಾ ತಂಡವು 5 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿತು.

ಸೌತ್ ಆಫ್ರಿಕಾ ಪ್ಲೇಯಿಂಗ್ 11-  ಕ್ವಿಂಟನ್ ಡಿ ಕಾಕ್, ತೆಂಬಾ ಬವುಮಾ (ನಾಯಕ), ರಿಲೀ ರೊಸ್ಸೊ, ಐಡೆನ್ ಮಾರ್ಕ್ರಾಮ್, ಡೇವಿಡ್ ಮಿಲ್ಲರ್, ಟ್ರಿಸ್ಟಾನ್ ಸ್ಟಬ್ಸ್, ವೇಯ್ನ್ ಪಾರ್ನೆಲ್, ಕೇಶವ್ ಮಹಾರಾಜ್, ಕಗಿಸೊ ರಬಾಡಾ, ಲುಂಗಿ ಎನ್‌ಗಿಡಿ, ಅನ್ರಿಕ್ ನೋಕಿಯಾ

ಟೀಮ್ ಇಂಡಿಯಾ ಪ್ಲೇಯಿಂಗ್ 11- ರೋಹಿತ್ ಶರ್ಮಾ (ನಾಯಕ), ಕೆಎಲ್. ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ದೀಪಕ್ ಹೂಡಾ , ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ, ಅರ್ಷದೀಪ್ ಸಿಂಗ್, ಅಶ್ವಿನ್.

 

 

Published On - 8:04 pm, Sun, 30 October 22