Updated on: Oct 30, 2022 | 10:09 PM
ಪರ್ತ್ನಲ್ಲಿ ನಡೆದ ಸೌತ್ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾ ಪರ ಸೂರ್ಯಕುಮಾರ್ ಯಾದವ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಆರಂಭಿಕ ಆಘಾತಕ್ಕೆ ಸಿಲುಕಿದ್ದ ಟೀಮ್ ಇಂಡಿಯಾಗೆ ಆಸರೆಯಾಗಿ ನಿಂತ ಸೂರ್ಯ ಅತ್ಯಾಕರ್ಷಕ ಹೊಡೆತಗಳ ಮೂಲಕ ಗಮನ ಸೆಳೆದರು.
ಸೌತ್ ಆಫ್ರಿಕಾ ವೇಗಿಗಳನ್ನು ಆತ್ಮ ವಿಶ್ವಾಸದಿಂದಲೇ ಎದುರಿಸಿದ ಸೂರ್ಯ 3 ಭರ್ಜರಿ ಸಿಕ್ಸ್ ಹಾಗೂ 6 ಆಕರ್ಷಕ ಫೋರ್ಗಳನ್ನು ಬಾರಿಸಿದರು. ಈ ಮೂಲಕ 40 ಎಸೆತಗಳಲ್ಲಿ 68 ರನ್ ಸಿಡಿಸಿ ಟೀಮ್ ಇಂಡಿಯಾ ಮೊತ್ತ 133 ಆಗುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ವಿಶೇಷ ಎಂದರೆ ಈ ಅತ್ಯಾಕರ್ಷಕ ಅರ್ಧಶತಕದೊಂದಿಗೆ ಟೀಮ್ ಇಂಡಿಯಾ ಪರ ಸೂರ್ಯಕುಮಾರ್ ಯಾದವ್ ವಿಶೇಷ ದಾಖಲೆಯನ್ನು ನಿರ್ಮಿಸಿದ್ದಾರೆ.
ಟಿ20 ಕ್ರಿಕೆಟ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಟೀಮ್ ಇಂಡಿಯಾ ಪರ ಒಂದು ವರ್ಷದಲ್ಲಿ ಅತ್ಯಧಿಕ ರನ್ ಕಲೆಹಾಕಿದ ವಿಶೇಷ ದಾಖಲೆಯೊಂದು ಸೂರ್ಯಕುಮಾರ್ ಯಾದವ್ ಪಾಲಾಗಿದೆ.
ಈ ವರ್ಷ 26 ಇನಿಂಗ್ಸ್ ಆಡಿರುವ ಸೂರ್ಯಕುಮಾರ್ ಯಾದವ್ 1 ಶತಕ ಹಾಗೂ 8 ಅರ್ಧಶತಕದೊಂದಿಗೆ ಒಟ್ಟು 933 ರನ್ ಕಲೆಹಾಕಿದ್ದಾರೆ. ಈ ಮೂಲಕ ಟೀಮ್ ಇಂಡಿಯಾ ಪರ ಟಿ20 ಕ್ರಿಕೆಟ್ನಲ್ಲಿ ಒಂದು ವರ್ಷದೊಳಗೆ 900+ ರನ್ ಬಾರಿಸಿದ ಮೊದಲ ಬ್ಯಾಟ್ಸ್ಮನ್ ಎನಿಸಿಕೊಂಡಿದ್ದಾರೆ.
ಹಾಗೆಯೇ ಈ ವರ್ಷ ಟಿ20 ಕ್ರಿಕೆಟ್ನಲ್ಲಿ ಅತ್ಯಧಿಕ ರನ್ ಕಲೆಹಾಕಿದ ಬ್ಯಾಟ್ಸ್ಮನ್ ಎಂಬ ವಿಶ್ವ ದಾಖಲೆ ಕೂಡ ಸೂರ್ಯಕುಮಾರ್ ಹೆಸರಿನಲ್ಲಿದೆ.
2022 ರಲ್ಲಿ ಒಟ್ಟು 933 ರನ್ ಬಾರಿಸುವ ಮೂಲಕ ಸೂರ್ಯಕುಮಾರ್ ಯಾದವ್ ಟಿ20 ಕ್ರಿಕೆಟ್ನ ರನ್ ಸರದಾರನಾಗಿ ಮುಂದುವರೆಯುತ್ತಿದ್ದಾರೆ. ಅಲ್ಲದೆ ಈ ವಿಶ್ವಕಪ್ ಮೂಲಕ ಸಾವಿರ ರನ್ ಪೂರೈಸಿ ಹೊಸ ಇತಿಹಾಸ ನಿರ್ಮಿಸಲಿದ್ದಾರಾ ಕಾದು ನೋಡಬೇಕಿದೆ.