T20 World Cup 2022: ಈ ಬಾರಿಯ ಟಿ20 ವಿಶ್ವಕಪ್​ನಲ್ಲೂ ಟಾಸೇ ಬಾಸು, ಆದರೆ…

| Updated By: ಝಾಹಿರ್ ಯೂಸುಫ್

Updated on: Oct 18, 2022 | 8:31 PM

T20 World Cup 2022: ಪಾಕಿಸ್ತಾನದ ಮಾಜಿ ವೇಗಿ ವಾಸಿಂ ಅಕ್ರಮ್ ಕೂಡ ಆಸ್ಟ್ರೇಲಿಯಾದಲ್ಲಿ ಮೊದಲು ಬ್ಯಾಟಿಂಗ್ ಮಾಡುವ ತಂಡಕ್ಕೆ ಅನುಕೂಲವಾಗಲಿದೆ ಎಂದಿದ್ದಾರೆ.

T20 World Cup 2022: ಈ ಬಾರಿಯ ಟಿ20 ವಿಶ್ವಕಪ್​ನಲ್ಲೂ ಟಾಸೇ ಬಾಸು, ಆದರೆ...
ಸಾಂದರ್ಭಿಕ ಚಿತ್ರ
Follow us on

ಟಿ20 ವಿಶ್ವಕಪ್​ ಶುರುವಾದ ಬೆನ್ನಲ್ಲೇ ಇದೀಗ ಟಾಸ್​ ಲೆಕ್ಕಚಾರಗಳು ಶುರುವಾಗಿದೆ. ಇದಕ್ಕೆ ಮುಖ್ಯ ಕಾರಣ ಅರ್ಹತಾ ಸುತ್ತಿನ ಪಂದ್ಯಗಳ ಫಲಿತಾಂಶ. ಏಕೆಂದರೆ ಅರ್ಹತಾ ಸುತ್ತಿನಲ್ಲಿ ಇದುವರೆಗೆ ಆಡಲಾದ 6 ಪಂದ್ಯಗಳಲ್ಲಿ 4 ಮ್ಯಾಚ್​ಗಳನ್ನು ಮೊದಲು ಬ್ಯಾಟಿಂಗ್ ಮಾಡಿದ ತಂಡವೇ ಗೆದ್ದಿದೆ. ಇನ್ನು ಅಭ್ಯಾಸ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ 6 ರನ್​ಗಳಿಂದ ಜಯ ಸಾಧಿಸಿತ್ತು. ಹೀಗಾಗಿಯೇ ಇದೀಗ ಎಲ್ಲಾ ತಂಡಗಳ ನಾಯಕರುಗಳ ಚಿತ್ತ ಟಾಸ್ ಗೆಲುವಿನತ್ತ ನೆಟ್ಟಿದೆ. ಆದರೆ…ಆಸ್ಟ್ರೇಲಿಯಾ ಸ್ಟೇಡಿಯಂನಲ್ಲಿನ ಅಂಕಿ ಅಂಶಗಳು ಮಿಶ್ರ ಫಲಿತಾಂಶಗಳಿಗೆ ಸಾಕ್ಷಿಯಾಗಿವೆ. ಅಂದರೆ ಈ ಬಾರಿಯ ಟಿ20 ವಿಶ್ವಕಪ್ ಒಟ್ಟು 7 ಮೈದಾನಗಳಲ್ಲಿ ನಡೆಯಲಿದೆ. ಆದರೆ ಈ ಮೈದಾನಗಳಲ್ಲಿ ಟಾಸ್ ಮುಖ್ಯ ಪಾತ್ರವಹಿಸಿರುವುದು ಅಡಿಲೇಡ್​ನಲ್ಲಿ ಮಾತ್ರ. ಹಾಗಿದ್ರೆ ಹಿಂದಿನ ಅಂಕಿ ಅಂಶಗಳ ಪ್ರಕಾರ ಯಾವ ಮೈದಾನದಲ್ಲಿ ಯಾವ ರೀತಿಯ ಫಲಿತಾಂಶ ಮೂಡಿಬಂದಿದೆ ನೋಡೋಣ…

  • ಅಡಿಲೇಡ್​: ಅಡಿಲೇಡ್​ನ ಓವಲ್​ ಕ್ರಿಕೆಟ್​ ಸ್ಟೇಡಿಯಂನಲ್ಲಿ ಆಡಲಾದ ಟಿ20 ಪಂದ್ಯಗಳನ್ನು ನೋಡಿದ್ರೆ ಮೊದಲು ಬ್ಯಾಟಿಂಗ್ ಮಾಡಿದ ತಂಡವು 52 ಬಾರಿ ಜಯ ಸಾಧಿಸಿದೆ. ಇನ್ನು 2ನೇ ಬ್ಯಾಟಿಂಗ್ ತಂಡ ಗೆದ್ದಿರುವುದು ಕೇವಲ 32 ಬಾರಿ ಮಾತ್ರ. ಹೀಗಾಗಿ ಇಲ್ಲಿ ಟಾಸ್ ಗೆಲ್ಲುವುದು ಅನಿವಾರ್ಯ ಎನ್ನಬಹುದು. ಏಕೆಂದರೆ ಮೊದಲ ಇನಿಂಗ್ಸ್ ಆಡಿದ ತಂಡಗಳೇ ಹೆಚ್ಚು ಗೆದ್ದಿದೆ.
  • ಬ್ರಿಸ್ಬೇನ್​: ಗಾಬಾ ಸ್ಟೇಡಿಯಂನಲ್ಲಿ ನಡೆದಿರುವ ಪಂದ್ಯಗಳಲ್ಲಿ ಮೊದಲು ಬ್ಯಾಟ್ ಮಾಡಿದ ತಂಡವು 33 ಬಾರಿ ಜಯ ಸಾಧಿಸಿದೆ. ಇದೇ ಮೈದಾನದಲ್ಲೇ ಟೀಮ್ ಇಂಡಿಯಾ ಕೂಡ ಆಸ್ಟ್ರೇಲಿಯಾ ವಿರುದ್ಧ ಅಭ್ಯಾಸ ಪಂದ್ಯ ಗೆದ್ದುಕೊಂಡಿತ್ತು ಎಂಬುದು ವಿಶೇಷ. ಆದರೆ ಈ ಪಿಚ್​ನಲ್ಲಿ 2ನೇ ಬ್ಯಾಟಿಂಗ್ ಮಾಡಿದ ತಂಡ 34 ಬಾರಿ ಗೆಲುವು ಕಂಡಿದೆ. ಹೀಗಾಗಿ ಈ ಮೈದಾನದಲ್ಲಿ ಟಾಸ್ ಮುಖ್ಯ ಪಾತ್ರವಹಿಸಲ್ಲ ಎಂದೇ ಹೇಳಬಹುದು.
  • ಗೀಲಾಂಗ್: ಆಸ್ಟ್ರೇಲಿಯಾದ ಈ ಹೊಸ ಸ್ಟೇಡಿಯಂನಲ್ಲಿ ಇದುವರೆಗೆ 9 ಟಿ20 ಪಂದ್ಯಗಳನ್ನಾಡಲಾಗಿದ್ದು, ಈ ವೇಳೆ ಮೊದಲು ಬ್ಯಾಟ್ ಮಾಡಿದ ತಂಡ 3 ಬಾರಿ ಮಾತ್ರ ಗೆದ್ದಿದೆ. ಇನ್ನು ಚೇಸಿಂಗ್ ಮೂಲಕ 6 ಬಾರಿ ಜಯ ಸಾಧಿಸಲಾಗಿದೆ. ಇಲ್ಲೂ ಕೂಡ ಟಾಸ್ ಪ್ರಮುಖ ಪಾತ್ರವಹಿಸುವ ಸಾಧ್ಯತೆಯಿದೆ.
  • ಹೋಬಾರ್ಟ್: ಹೋಬಾರ್ಟ್ ಸ್ಟೇಡಿಯಂನಲ್ಲಿ ಮೊದಲು ಬ್ಯಾಟ್ ಮಾಡಿದ ತಂಡ 39 ಪಂದ್ಯಗಳಲ್ಲಿ ಜಯ ಸಾಧಿಸಿದೆ. ಇನ್ನು ಚೇಸಿಂಗ್ ಮೂಲಕ ಗೆದ್ದಿದ್ದು 28 ಬಾರಿ ಮಾತ್ರ. ಅಂದರೆ ಈ ಮೈದಾನದಲ್ಲಿ ಟಾಸ್ ಗೆದ್ದ ತಂಡಗಳು ಮೊದಲು ಬ್ಯಾಟಿಂಗ್ ಆಯ್ಕೆ ಮಾಡುವ ಸಾಧ್ಯತೆ ಹೆಚ್ಚಿದೆ.
  • ಮೆಲ್ಬೋರ್ನ್​: ಎಂಸಿಜಿ ಮೈದಾನದಲ್ಲಿ ಮೊದಲು ಬ್ಯಾಟ್ ಮಾಡಿದ ತಂಡ 39 ಬಾರಿ ಗೆಲುವು ದಾಖಲಿಸಿದೆ. ಇನ್ನು ಚೇಸಿಂಗ್​ ಮೂಲಕ 46 ಪಂದ್ಯಗಳನ್ನು ಜಯ ಸಾಧಿಸಲಾಗಿತ್ತು. ಅಂದರೆ ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್ ಚೇಸಿಂಗ್​ಗೆ ಅನುಕೂಲ ಎನ್ನಬಹುದು. ಆದರೆ ಇಲ್ಲಿ ಮೊದಲು ಬ್ಯಾಟಿಂಗ್ ಹಾಗೂ ಚೇಸಿಂಗ್ ನಡುವೆ ಅಂತಹ ವ್ಯತ್ಯಾಸವಿಲ್ಲದ ಕಾರಣ ಎರಡು ಇನಿಂಗ್ಸ್​ನಲ್ಲೂ ಭರ್ಜರಿ ಪೈಪೋಟಿಯನ್ನು ನಿರೀಕ್ಷಿಸಬಹುದು. ಹೀಗಾಗಿ ಟಾಸ್ ನಿರ್ಣಾಯಕ ಪಾತ್ರವಹಿಸಲ್ಲ ಎನ್ನಬಹುದು. ವಿಶೇಷ ಎಂದರೆ ಇದೇ ಮೈದಾನದಲ್ಲಿ ಭಾರತ-ಪಾಕಿಸ್ತಾನ್ ಮುಖಾಮುಖಿಯಾಗಲಿದೆ.
  • ಪರ್ತ್: ಈ ಮೈದಾನದಲ್ಲಿ ಆಡಿದ ಅಭ್ಯಾಸ ಪಂದ್ಯದಲ್ಲಿ ಟೀಮ್ ಇಂಡಿಯಾ ಸೋಲನುಭವಿಸಿತ್ತು. ವಿಶೇಷ ಎಂದರೆ ಇಲ್ಲಿ ಆಡಲಾದ 14 ಟಿ20 ಪಂದ್ಯಗಳಲ್ಲಿ ಮೊದಲು ಬ್ಯಾಟ್ ಮಾಡಿದ ತಂಡ ಗೆದ್ದಿದೆ. ಇನ್ನೂ ಚೇಸಿಂಗ್ ಮಾಡಿ ಗೆದ್ದಿದ್ದು ಕೇವಲ 9 ಬಾರಿ ಮಾತ್ರ. ಅಂದರೆ ಟಾಸ್ ಗೆದ್ದ ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚು.
  • ಸಿಡ್ನಿ: ಸಿಡ್ನಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಆಡಲಾದ ಪಂದ್ಯಗಳಲ್ಲಿ ಚೇಸಿಂಗ್ ತಂಡವು 30 ಬಾರಿ ಗೆಲುವು ದಾಖಲಿಸಿದೆ. ಹಾಗೆಯೇ ಮೊದಲು ಬ್ಯಾಟ್ ಮಾಡಿದ ತಂಡ ಗೆದ್ದಿರುವುದು ಕೇವಲ 26 ಬಾರಿ ಮಾತ್ರ. ಇಲ್ಲಿ ಕೂಡ ಟಾಸ್ ನಿರ್ಣಾಯಕ ಪಾತ್ರವಹಿಸುವ ಸಾಧ್ಯತೆಯಿಲ್ಲ.

ಆದರೆ ಪ್ರಸ್ತುತ ಫಲಿತಾಂಶಗಳಲ್ಲಿ 6 ಪಂದ್ಯಗಳಲ್ಲಿ 4 ಮ್ಯಾಚ್​ಗಳು ಮೊದಲು ಬ್ಯಾಟ್ ಮಾಡಿರುವ ತಂಡಗಳೇ ಗೆದ್ದಿದೆ. ಇದೇ ಕಾರಣದಿಂದಾಗಿ ಪಾಕಿಸ್ತಾನದ ಮಾಜಿ ವೇಗಿ ವಾಸಿಂ ಅಕ್ರಮ್ ಕೂಡ ಆಸ್ಟ್ರೇಲಿಯಾದಲ್ಲಿ ಮೊದಲು ಬ್ಯಾಟಿಂಗ್ ಮಾಡುವ ತಂಡಕ್ಕೆ ಅನುಕೂಲವಾಗಲಿದೆ ಎಂದಿದ್ದಾರೆ.

ಏಕೆಂದರೆ ಸಂಜೆ ವೇಳೆ ವೇಗದ ಬೌಲರ್‌ಗಳಿಗೆ ಪಿಚ್​ಗಳು ಸಹಕಾರಿಯಾಗುತ್ತಿದ್ದು, ಹೀಗಾಗಿ ದ್ವಿತೀಯ ಇನಿಂಗ್ಸ್ ಆಡುವ ತಂಡಗಳಿಗೆ ಬ್ಯಾಟಿಂಗ್ ಮಾಡಲು ಕಷ್ಟಕರವಾಗಲಿದೆ ಎಂದು ವಾಸಿಂ ಅಕ್ರಮ್ ಅಭಿಪ್ರಾಯಪಟ್ಟಿದ್ದಾರೆ. ಇದೇ ಕಾರಣದಿಂದಾಗಿ ಇದೀಗ ಆಸ್ಟ್ರೇಲಿಯಾ ಪಿಚ್​ನಲ್ಲೂ ಟಾಸ್ ಬಾಸ್ ಆಗುವ ಸಾಧ್ಯತೆಯಿದೆ.

ಇದನ್ನೂ ಓದಿ
T20 World Cup 2022: ಟಿ20 ವಿಶ್ವಕಪ್​ನಲ್ಲಿ ವಿದೇಶಿ ತಂಡದ ಪರ ಆಡುತ್ತಿರುವ ಭಾರತೀಯ ಮೂಲದವರು ಯಾರೆಲ್ಲಾ ಗೊತ್ತಾ?
T20 World Cup 2022 All Squad: ಟಿ20 ವಿಶ್ವಕಪ್​ನಲ್ಲಿ ಕಣಕ್ಕಿಳಿಯುವ 16 ತಂಡಗಳ ಆಟಗಾರರ ಸಂಪೂರ್ಣ ಪಟ್ಟಿ ಇಲ್ಲಿದೆ
T20 World Cup 2022: ಭಾರತ-ಪಾಕ್ ಅಲ್ಲ, ಈ ಬಾರಿ ಸೂರ್ಯ vs ರಿಜ್ವಾನ್..!
Team India: ಟೀಮ್ ಇಂಡಿಯಾದ ಮೊದಲ ಟಿ20 ತಂಡದಲ್ಲಿ ಯಾರೆಲ್ಲಾ ಇದ್ದರು ಗೊತ್ತಾ?