SMAT T20: ಎರಡಂಕಿ ಮೊತ್ತಕ್ಕೆ ಆಲೌಟ್ ಮಾಡಿ, 6.5 ಓವರ್ನಲ್ಲಿ ಪಂದ್ಯ ಮುಗಿಸಿದ ಕರ್ನಾಟಕ
Syed Mushtaq Ali Trophy 2022: ಅಲ್ಪ ಮೊತ್ತದ ಗುರಿ ಪಡೆದ ಕರ್ನಾಟಕ ತಂಡಕ್ಕೆ ಆರಂಭಿಕ ಆಟಗಾರರಾದ ದೇವದತ್ ಪಡಿಕ್ಕಲ್ (28) ಹಾಗೂ ಮಾಯಾಂಕ್ ಅಗರ್ವಾಲ್ ಬಿರುಸಿನ ಆರಂಭ ಒದಗಿಸಿದರು.
Syed Mushtaq Ali Trophy 2022: ಸೈಯದ್ ಮುಷ್ತಾಕ್ ಅಲಿ ಟೂರ್ನಿಯ ಗ್ರೂಪ್-ಸಿ ಪಂದ್ಯದಲ್ಲಿ ಅರುಣಾಚಲ ಪ್ರದೇಶ ವಿರುದ್ಧ ಕರ್ನಾಟಕ (Arunachal Pradesh vs Karnataka) ತಂಡವು ಭರ್ಜರಿ ಜಯ ಸಾಧಿಸಿದೆ. ಮೊಹಾಲಿಯಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಜಯಿಸಿದ ಕರ್ನಾಟಕ ತಂಡದ ನಾಯಕ ಮಯಾಂಕ್ ಅಗರ್ವಾಲ್ (Mayank Agarwal) ಬೌಲಿಂಗ್ ಮಾಡುವ ನಿರ್ಧಾರ ತೆಗೆದುಕೊಂಡರು. ಈ ನಿರ್ಧಾರವನ್ನು ಸಮರ್ಥಿಸುವಂತೆ ಕರ್ನಾಟಕ ಬೌಲರ್ಗಳು ಅತ್ಯುತ್ತಮ ಪ್ರದರ್ಶನವನ್ನೇ ನೀಡಿದರು.
ಮೊದಲು ಬ್ಯಾಟ್ ಮಾಡಿದ ಅರುಣಾಚಲ ಪ್ರದೇಶ ತಂಡ 14 ರನ್ಗಳಿಸುವಷ್ಟರಲ್ಲಿ ಆರಂಭಿಕರನ್ನು ಔಟ್ ಮಾಡುವ ಮೂಲಕ ವಿಧ್ವತ್ ಕಾವೇರಪ್ಪ ಹಾಗೂ ವಿ ಕೌಶಿಕ್ ಕರ್ನಾಟಕ ತಂಡಕ್ಕೆ ಆರಂಭಿಕ ಯಶಸ್ಸು ತಂದುಕೊಟ್ಟರು. ಆ ಬಳಿಕ ಬಂದ ರೋಹನ್ ಶರ್ಮಾ 18 ರನ್ಗಳಿಸಿದರೂ ವಿಜಯ್ಕುಮಾರ್ ವೈಶಾಖ್ ಎಸೆತಕ್ಕೆ ವಿಕೆಟ್ ಒಪ್ಪಿಸಲೇಬೇಕಾಯಿತು.
ಮತ್ತೊಂದೆಡೆ ಕೃಷ್ಣಪ್ಪ ಗೌತಮ್ ಅರುಣಾಚಲ ತಂಡದ ನಾಯಕ ಸೂರಜ್ (11) ವಿಕೆಟ್ ಪಡೆಯುವ ಮೂಲಕ ಮತ್ತೊಂದು ಯಶಸ್ಸು ತಂದುಕೊಟ್ಟರು. ಇದರ ಬೆನ್ನಲ್ಲೇ ತೆಚಿ ನೇರಿಯನ್ನು ಜಗದೀಶ್ ಸುಚಿತ್ ಕ್ಲೀನ್ ಬೌಲ್ಡ್ ಮಾಡಿದರು. ಈ ಹಂತದಲ್ಲಿ ಮತ್ತೆ ದಾಳಿಗಿಳಿದ ವಿದ್ವತ್ ಕಾವೇರಪ್ಪ ಬ್ಯಾಕ್ ಟು ಬ್ಯಾಕ್ ಎರಡು ವಿಕೆಟ್ ಉರುಳಿಸಿದರು. ಅಂತಿಮವಾಗಿ ಅರುಣಾಚಲ ಪ್ರದೇಶ ತಂಡವು 19.2 ಓವರ್ಗಳಲ್ಲಿ 75 ರನ್ಗಳಿಗೆ ಆಲೌಟ್ ಆಯಿತು.
ಕರ್ನಾಟಕ ಪರ ಮಿಂಚಿನ ದಾಳಿ ಸಂಘಟಿಸಿದ ವಿಧ್ವತ್ ಕಾವೇರಪ್ಪ 4 ಓವರ್ಗಳಲ್ಲಿ 22 ರನ್ ನೀಡಿ 3 ವಿಕೆಟ್ ಪಡೆದರೆ, ವಿ ಕೌಶಿಕ್ 3.5 ಓವರ್ಗಳಲ್ಲಿ ಕೇವಲ 5 ರನ್ ನೀಡಿ 3 ವಿಕೆಟ್ ಕಬಳಿಸಿ ಮಿಂಚಿದರು.
ಇನ್ನು ಅಲ್ಪ ಮೊತ್ತದ ಗುರಿ ಪಡೆದ ಕರ್ನಾಟಕ ತಂಡಕ್ಕೆ ಆರಂಭಿಕ ಆಟಗಾರರಾದ ದೇವದತ್ ಪಡಿಕ್ಕಲ್ (28) ಹಾಗೂ ಮಾಯಾಂಕ್ ಅಗರ್ವಾಲ್ ಬಿರುಸಿನ ಆರಂಭ ಒದಗಿಸಿದರು. ಅದರಲ್ಲೂ ಅಗರ್ವಾಲ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸುವ ಮೂಲಕ ಕೇವಲ 21 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 5 ಫೋರ್ನೊಂದಿಗೆ ಅಜೇಯ 47 ರನ್ ಚಚ್ಚಿದರು. ಪರಿಣಾಮ ಕರ್ನಾಟಕ ತಂಡವು ಕೇವಲ 6.5 ಓವರ್ಗಳಲ್ಲಿ 76 ರನ್ ಬಾರಿಸುವ ಮೂಲಕ 10 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು.
ಅರುಣಾಚಲ ಪ್ರದೇಶ ಪ್ಲೇಯಿಂಗ್ 11: ಸೂರಜ್ ತಯಾಮ್ (ನಾಯಕ) , ಟೆಚಿ ಡೋರಿಯಾ , ನೀಲಂ ಓಬಿ , ಕಮ್ಶಾ ಯಾಂಗ್‌ಫೊ , ರೋಹನ್ ಶರ್ಮಾ , ಟೆಚಿ ನೇರಿ , ಮೋಹಿತ್ ಪನ್ವರ್ , ಮೈನ್ಡುಂಗ್ ಸಿಂಗ್ಪೋ , ತನ್ಮಯ್ ಗುಪ್ತಾ , ಅಖಿಲೇಶ್ ಸಹಾನಿ , ನಬಮ್ ಟೆಂಪೋಲ್
ಕರ್ನಾಟಕ ಪ್ಲೇಯಿಂಗ್ 11: ಮಯಾಂಕ್ ಅಗರ್ವಾಲ್ (ನಾಯಕ) , ದೇವದತ್ತ್ ಪಡಿಕ್ಕಲ್ , ಮನೀಶ್ ಪಾಂಡೆ , ಅಭಿನವ್ ಮನೋಹರ್ , ಮನೋಜ್ ಭಾಂಡಗೆ , ಕೃಷ್ಣಪ್ಪ ಗೌತಮ್ , ಲುವ್ನಿತ್ ಸಿಸೋಡಿಯಾ , ಜಗದೀಶ ಸುಚಿತ್ , ವಿಜಯ್ ಕುಮಾರ್ ವೈಶಾಕ್ , ವಿಧ್ವತ್ ಕಾವೇರಪ್ಪ , ವಾಸುಕಿ ಕೌಶಿಕ್