T20 World Cup 2022: ಕೇವಲ 8 ವಿಕೆಟ್ ಪಡೆದ ಬೌಲರ್​ಗೆ ಸ್ಥಾನ: ಯುವ ಸ್ಪಿನ್ನರ್​ಗೆ ಅನ್ಯಾಯ..?

India Squad For T20 World Cup 2022: ತಂಡದಲ್ಲಿ ಅನುಭವಿ ಸ್ಪಿನ್ನರ್ ಆಗಿ ಯುಜ್ವೇಂದ್ರ ಚಹಾಲ್ ಇದ್ದಾರೆ. ಹೀಗಾಗಿ ಅಶ್ವಿನ್​ಗಿಂತ ರವಿ ಬಿಷ್ಣೋಯ್ ಉತ್ತಮ ಆಯ್ಕೆಯಾಗಿತ್ತು.

T20 World Cup 2022: ಕೇವಲ 8 ವಿಕೆಟ್ ಪಡೆದ ಬೌಲರ್​ಗೆ ಸ್ಥಾನ: ಯುವ ಸ್ಪಿನ್ನರ್​ಗೆ ಅನ್ಯಾಯ..?
Team India
Updated By: ಝಾಹಿರ್ ಯೂಸುಫ್

Updated on: Sep 13, 2022 | 10:37 AM

India Squad For T20 World Cup 2022: ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್​ಗಾಗಿ ಟೀಮ್ ಇಂಡಿಯಾವನ್ನು ಪ್ರಕಟಿಸಲಾಗಿದೆ. 15 ಸದಸ್ಯರ ಈ ಬಳಗದಲ್ಲಿ ಅನುಭವಿ ಆಟಗಾರರಿಗೆ ಮಣೆ ಹಾಕಲಾಗಿದೆ. ಆದರೆ ಈ ಆಯ್ಕೆಯಿಂದಾಗಿ ಯುವ ಸ್ಪಿನ್ನರ್​ರೊಬ್ಬರು ಅವಕಾಶ ವಂಚಿತರಾಗಿದ್ದಾರೆ. ಅಂದರೆ ಕಳೆದ ಒಂದು ವರ್ಷದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದರೂ ಈ ಬಾರಿಯ ಟಿ20 ವಿಶ್ವಕಪ್​ ತಂಡದಲ್ಲಿ ಸ್ಥಾನ ನೀಡಲಾಗಿಲ್ಲ. ಇದುವೇ ಈಗ ಹೊಸ ಚರ್ಚೆಗೆ ಕಾರಣವಾಗಿದೆ. ಈ ಬಾರಿಯ ಟಿ20 ವಿಶ್ವಕಪ್​ ತಂಡದಲ್ಲಿ ಅನುಭವಿ ಸ್ಪಿನ್ನರ್ ಆಗಿ ರವಿಚಂದ್ರನ್ ಅಶ್ವಿನ್ ಸ್ಥಾನ ಪಡೆದಿದ್ದಾರೆ. ಆದರೆ ಕಳೆದ ಒಂದು ವರ್ಷದ ಅವಧಿಯಲ್ಲಿ ಅಶ್ವಿನ್ ಪಡೆದಿರುವುದು ಕೇವಲ 8 ವಿಕೆಟ್ ಎಂದರೆ ನಂಬಲೇಬೇಕು.

2021 ರ ಟಿ20 ವಿಶ್ವಕಪ್​ ಮೂಲಕ ಟೀಮ್ ಇಂಡಿಯಾಗೆ ಕಂಬ್ಯಾಕ್ ಮಾಡಿದ್ದ ಅಶ್ವಿನ್ ಒಂದು ವರ್ಷದ ಅವಧಿಯಲ್ಲಿ ಆಡಿದ್ದು ಕೇವಲ 7 ಟಿ20 ಪಂದ್ಯಗಳನ್ನು ಮಾತ್ರ. ಈ ವೇಳೆ 8 ವಿಕೆಟ್​ ಪಡೆದಿದ್ದಾರೆ. ಆದರೆ ಮತ್ತೊಂದೆಡೆ ಯುವ ಸ್ಪಿನ್ನರ್ ರವಿ ಬಿಷ್ಣೋಯ್ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಅಶ್ವಿನ್‌ಗಿಂತ ಹೆಚ್ಚು ವಿಕೆಟ್ ಪಡೆದಿದ್ದಾರೆ. ಅಂದರೆ ಕಳೆದ ಒಂದು ವರ್ಷದ ಅವಧಿಯಲ್ಲಿ 10 ಟಿ20 ಪಂದ್ಯಗಳನ್ನು ಆಡಿರುವ ಬಿಷ್ಣೋಯ್, 16 ವಿಕೆಟ್ ಉರುಳಿಸಿ ಮಿಂಚಿದ್ದಾರೆ. ಇದಾಗ್ಯೂ ರವಿ ಬಿಷ್ಣೋಯ್ ಅವರನ್ನು ತಂಡಕ್ಕೆ ಆಯ್ಕೆ ಮಾಡಿಲ್ಲ.

ಇಲ್ಲಿ ಗಮನಿಸಬೇಕಾದ ಮತ್ತೊಂದು ಅಂಶವೆಂದರೆ ಕಳೆದ ಒಂದು ವರ್ಷದ ಅವಧಿಯಲ್ಲಿ ಅಶ್ವಿನ್ ಆಡಿರುವುದು ಕೇವಲ 7 ಟಿ20 ಪಂದ್ಯಗಳನ್ನು ಎಂಬುದು. ಅಂದರೆ ಆಡಿದಕ್ಕಿಂತ ವಿಶ್ರಾಂತಿ ಪಡೆದಿದ್ದೇ ಹೆಚ್ಚು. ಇನ್ನು ಈ ಬಾರಿಯ ಏಷ್ಯಾಕಪ್​ನಲ್ಲಿ 2 ಪಂದ್ಯಗಳಲ್ಲಿ ಕಣಕ್ಕಿಳಿದರೂ ಹೇಳಿಕೊಳ್ಳುವಂತಹ ಪ್ರದರ್ಶನವನ್ನೂ ಕೂಡ ನೀಡಿರಲಿಲ್ಲ. ಇದಾಗ್ಯೂ ಅಶ್ವಿನ್ ಅವರ ಆಯ್ಕೆ ಇದೀಗ ಹೊಸ ಚರ್ಚೆಗೆ ಕಾರಣವಾಗಿದೆ. ಏಕೆಂದರೆ ವಿಕೆಟ್ ಟೇಕರ್ ಬೌಲರ್ ಎನಿಸಿಕೊಂಡಿರುವ ಬಿಷ್ಣೋಯ್ ಏಷ್ಯಾಕಪ್​ನಲ್ಲಿ ಸಿಕ್ಕ ಅವಕಾಶದಲ್ಲಿ ಅತ್ಯುತ್ತಮವಾಗಿ ಬೌಲಿಂಗ್ ಮಾಡಿದ್ದರು.

ಇದನ್ನೂ ಓದಿ
Team India: ಟೀಮ್ ಇಂಡಿಯಾ ಆಟಗಾರರ ಜೊತೆ ಕಾಣಿಸಿಕೊಂಡ ಸ್ಟಾರ್ ಕ್ರಿಕೆಟಿಗನ ಮಗ..!
RCB ತಂಡದ ಮೊದಲ ಪ್ಲೇಯಿಂಗ್ ಇಲೆವೆನ್​ನಲ್ಲಿ ಯಾರೆಲ್ಲಾ ಇದ್ದರು ಗೊತ್ತಾ?
Sanju Samson: ಧೋನಿ, ದ್ರಾವಿಡ್​ಗೂ ಸಾಧ್ಯವಾಗದ ದಾಖಲೆ ನಿರ್ಮಿಸಿದ ಸಂಜು ಸ್ಯಾಮ್ಸನ್
T20 World Cup 2022: ಟಿ20 ವಿಶ್ವಕಪ್​ನಲ್ಲಿ ಕಣಕ್ಕಿಳಿಯುವ 16 ತಂಡಗಳು ಫೈನಲ್

ಇದೀಗ ತಂಡದಲ್ಲಿ ಅನುಭವಿ ಸ್ಪಿನ್ನರ್ ಆಗಿ ಯುಜ್ವೇಂದ್ರ ಚಹಾಲ್ ಕೂಡ ಇದ್ದಾರೆ. ಹೀಗಾಗಿ ಅಶ್ವಿನ್​ಗಿಂತ ರವಿ ಬಿಷ್ಣೋಯ್ ಉತ್ತಮ ಆಯ್ಕೆಯಾಗಿತ್ತು. ಇದಾಗ್ಯೂ ಬಿಸಿಸಿಐ ಆಯ್ಕೆ ಸಮಿತಿ ಯುವ ಸ್ಪಿನ್ನರ್​ ಅನ್ನು ಮೀಸಲು ಆಟಗಾರರ ಪಟ್ಟಿಗೆ ಸೇರ್ಪಡೆಗೊಳಿಸಿರುವುದೇ ಅಚ್ಚರಿ.

ಟಿ20 ವಿಶ್ವಕಪ್​ಗೆ ಟೀಮ್ ಇಂಡಿಯಾ ಹೀಗಿದೆ:

 ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಆರ್.ಅಶ್ವಿನ್, ಯುಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಅರ್ಷದೀಪ್ ಸಿಂಗ್.

ಮೀಸಲು ಆಟಗಾರರು: ಮೊಹಮ್ಮದ್ ಶಮಿ, ಶ್ರೇಯಸ್ ಅಯ್ಯರ್, ರವಿ ಬಿಷ್ಣೋಯ್, ದೀಪಕ್ ಚಹಾರ್.