Pakistan vs Zimbabwe: ಪಾಕಿಸ್ತಾನ್ ವಿರುದ್ಧ ಜಿಂಬಾಬ್ವೆಗೆ ಐತಿಹಾಸಿಕ ಜಯ

| Updated By: ಝಾಹಿರ್ ಯೂಸುಫ್

Updated on: Oct 27, 2022 | 8:32 PM

T20 World Cup 2022: ಹೈದರ್ ಅಲಿಯನ್ನೂ ಕೂಡ ಎಲ್​ಬಿ ಬಲೆಗೆ ಬೀಳಿಸಿದ ಸಿಕಂದರ್ ರಾಝ ಜಿಂಬಾಬ್ವೆ ಆಟಗಾರರಿಗೆ ಗೆಲ್ಲುವ ಹುಮ್ಮಸ್ಸು ಮೂಡಿಸಿದರು.

Pakistan vs Zimbabwe: ಪಾಕಿಸ್ತಾನ್ ವಿರುದ್ಧ ಜಿಂಬಾಬ್ವೆಗೆ ಐತಿಹಾಸಿಕ ಜಯ
Zimbabwe
Follow us on

T20 World Cup 2022:  ಪರ್ತ್​ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಟಿ20 ವಿಶ್ವಕಪ್​ನ 24ನೇ ಪಂದ್ಯದಲ್ಲಿ ಪಾಕಿಸ್ತಾನ್ (Pakistan vs Zimbabwe) ವಿರುದ್ಧ ಜಿಂಬಾಬ್ವೆ 1 ರನ್​ಗಳ ರೋಚಕ ಜಯ ಸಾಧಿಸಿದೆ. ಈ ಮೂಲಕ ಇದೇ ಮೊದಲ ಬಾರಿಗೆ ಟಿ20 ವಿಶ್ವಕಪ್​ನಲ್ಲಿ ಜಿಂಬಾಬ್ವೆ ತಂಡವು ಪಾಕ್ ಪಡೆಗೆ ಸೋಲುಣಿಸಿ ಐತಿಹಾಸಿಕ ಗೆಲುವು ದಾಖಲಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಜಿಂಬಾಬ್ವೆ ತಂಡವು ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ಅದರಂತೆ ಇನಿಂಗ್ಸ್ ಆರಂಭಿಸಿದ ಮಧುವರೆ ಹಾಗೂ ನಾಯಕ ಕ್ರೇಗ್ ಇರ್ವಿನ್ ಮೊದಲ ವಿಕೆಟ್​ಗೆ 42 ರನ್​ಗಳ ಜೊತೆಯಾಟವಾಡಿದರು. ಆದರೆ ಈ ವೇಳೆ ಕ್ರೇಗ್​ (19) ಔಟಾದರೆ, ಇದರ ಬೆನ್ನಲ್ಲೇ ಮಧುವರೆ (17) ವಿಕೆಟ್ ಒಪ್ಪಿಸಿದರು.

ಆ ಬಳಿಕ ನಾಟಕೀಯ ಕುಸಿತಕ್ಕೆ ಒಳಗಾಗಿದ್ದ ಜಿಂಬಾಬ್ವೆ ತಂಡಕ್ಕೆ ಆಸರೆಯಾಗಿದ್ದು ಸೀನ್ ವಿಲಿಯಮ್ಸ್. 31 ರನ್​ ಬಾರಿಸುವ ಮೂಲಕ ಮಧ್ಯಮ ಕ್ರಮಾಂಕದಲ್ಲಿ ಕ್ರೀಸ್​ ಕಚ್ಚಿ ನಿಲ್ಲುವ ಮೂಲಕ ತಂಡವನ್ನು ದಿಢೀರ್ ಕುಸಿತದಿಂದ ಪಾರು ಮಾಡಿದರು. ಇದಾಗ್ಯೂ ಮತ್ತೊಮ್ಮೆ ಕುಸಿತಕ್ಕೊಳಗಾದ ಜಿಂಬಾಬ್ವೆ ತಂಡವು 100 ರನ್​ಗಳ ಒಳಗೆ ಆಲೌಟ್ ಆಗುವ ಭೀತಿ ಎದುರಿಸಿತ್ತು.

ಆದರೆ ಅಂತಿಮ ಹಂತದಲ್ಲಿ ಬ್ರಾಡ್ ಇವನ್ಸ್ 15 ಎಸೆತಗಳಲ್ಲಿ 19 ರನ್​ ಬಾರಿಸುವ ಮೂಲಕ ತಂಡದ ಮೊತ್ತವನ್ನು ನೂರರ ಗಡಿದಾಟಿಸಿದರು. ಅದರಂತೆ ನಿಗದಿತ 20 ಓವರ್​ಗಳಲ್ಲಿ ಜಿಂಬಾಬ್ವೆ ತಂಡವು 8 ವಿಕೆಟ್ ನಷ್ಟಕ್ಕೆ 130 ರನ್​ ಕಲೆಹಾಕಿತು. ಪಾಕ್ ಪರ ಮೊಹಮ್ಮದ್ ವಾಸಿಂ ಜೂನಿಯರ್ 4 ಓವರ್​ಗಳಲ್ಲಿ 24 ರನ್ ನೀಡಿ 4 ವಿಕೆಟ್ ಕಬಳಿಸಿ ಮಿಂಚಿದರು.

ಇದನ್ನೂ ಓದಿ
Virat Kohli: ಒಂದಲ್ಲ, ಎರಡಲ್ಲ…ಹಲವು ವಿಶ್ವ ದಾಖಲೆಗಳನ್ನು ಉಡೀಸ್ ಮಾಡಿದ ಕಿಂಗ್ ಕೊಹ್ಲಿ
India vs Pakistan: ಪಾಕ್​ನ ಬಗ್ಗು ಬಡಿದು ವಿಶ್ವ ದಾಖಲೆ ನಿರ್ಮಿಸಿದ ಟೀಮ್ ಇಂಡಿಯಾ
IND vs PAK: ವಿಶ್ವಕಪ್​ನಲ್ಲಿ ವಿಶ್ವ ದಾಖಲೆ ಬರೆದ ರೋಹಿತ್ ಶರ್ಮಾ
India vs Pakistan: ಹೊಸ ದಾಖಲೆ ನಿರ್ಮಿಸಿದ ದಿನೇಶ್ ಕಾರ್ತಿಕ್

ಇನ್ನು 131 ರನ್​ಗಳ ಸುಲಭ ಗುರಿ ಬೆನ್ನತ್ತಿದ ಪಾಕಿಸ್ತಾನ್ ತಂಡದ ಆರಂಭಿಕರನ್ನು ಕಾಡುವಲ್ಲಿ ಜಿಂಬಾಬ್ವೆ ವೇಗಿಗಳು ಯಶಸ್ವಿಯಾದರು. ಅದರಂತೆ ಪವರ್​ಪ್ಲೇನಲ್ಲಿ ಬಾಬರ್ ಆಜಂ (4) ವಿಕೆಟ್ ಪಡೆಯುವ ಮೂಲಕ ಬ್ರಾಡ್ ಇವನ್ಸ್ ಮೊದಲ ಯಶಸ್ಸು ತಂದುಕೊಟ್ಟರು. ಇದರ ಬೆನ್ನಲ್ಲೇ ಮೊಹಮ್ಮದ್ ರಿಜ್ವಾನ್ (14) ಕೂಡ ವಿಕೆಟ್ ಒಪ್ಪಿಸಿದರು. ಅಷ್ಟೇ ಅಲ್ಲದೆ ಮೊದಲ 6 ಓವರ್​ಗಳಲ್ಲಿ ನೀಡಿದ್ದು ಕೇವಲ 28 ರನ್​ಗಳು ಮಾತ್ರ.

ಆ ಬಳಿಕ ಬಂದ ಇಫ್ತಿಕರ್ ಕೇವಲ 5 ರನ್​ಗಳಿಗೆ ಇನಿಂಗ್ಸ್ ಅಂತ್ಯಗೊಳಿಸಿದರು. ಈ ಹಂತದಲ್ಲಿ ಜೊತೆಯಾದ ಶಾನ್ ಮಸೂದ್ ಹಾಗೂ ಶಾದಾಬ್ ಖಾನ್ ಉತ್ತಮ ಜೊತೆಯಾಟವಾಡಿದರು. ಆದರೆ ಈ ವೇಳೆ ದಾಳಿಗಿಳಿದ ಸಿಕಂದರ್ ರಾಝ ಶಾದಾಬ್ (17) ವಿಕೆಟ್ ಪಡೆಯುವ ಮೂಲಕ ಮಹತ್ವದ ಯಶಸ್ಸು ತಂದುಕೊಟ್ಟರು.

ಇದರ ಬೆನ್ನಲ್ಲೇ ಹೈದರ್ ಅಲಿಯನ್ನೂ ಕೂಡ ಎಲ್​ಬಿ ಬಲೆಗೆ ಬೀಳಿಸಿದ ಸಿಕಂದರ್ ರಾಝ ಜಿಂಬಾಬ್ವೆ ಆಟಗಾರರಿಗೆ ಗೆಲ್ಲುವ ಹುಮ್ಮಸ್ಸು ಮೂಡಿಸಿದರು. ಇದಾಗ್ಯೂ ಪಾಕಿಸ್ತಾನ್ ತಂಡವು ಎಚ್ಚರಿಕೆ ಆಟ ಪ್ರದರ್ಶಿಸಿದರು. 15 ಓವರ್​ಗಳಲ್ಲಿ 90 ರ ಗಡಿದಾಟಿದ್ದ ಪಾಕ್ ತಂಡವು ಗೆಲ್ಲುವ ವಿಶ್ವಾಸದಲ್ಲಿತ್ತು.

ಈ ವೇಳೆ ಮತ್ತೆ ದಾಳಿಗಿಳಿದ ಸಿಕಂದರ್ ರಾಝ ಶಾನ್ ಮಸೂದ್ (44) ಅವರ ಮಹತ್ವದ ವಿಕೆಟ್ ಪಡೆದು ಪಂದ್ಯದ ಚಿತ್ರಣ ಬದಲಿಸಿದರು. ಪರಿಣಾಮ ಕೊನೆಯ 2 ಓವರ್​ಗಳಲ್ಲಿ ಪಾಕಿಸ್ತಾನ್ ತಂಡಕ್ಕೆ 22 ರನ್​ಗಳ ಅವಶ್ಯಕತೆಯಿತ್ತು. ಈ ಹಂತದಲ್ಲಿ ಮೊಹಮ್ಮದ್ ನವಾಜ್ ನಗ್ವಾರ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದರು. ಅಲ್ಲದೆ 19ನೇ ಓವರ್​ನಲ್ಲಿ 11 ರನ್ ಕಲೆಹಾಕಿದರು.

ಪರಿಣಾಮ ಅಂತಿಮ 6 ಎಸೆತಗಳಲ್ಲಿ 11 ರನ್​ಗಳ ಅವಶ್ಯಕತೆಯಿತ್ತು. ಬ್ರಾಡ್ ಇವನ್ಸ್ ಎಸೆದ ಈ ಓವರ್​ನ ಮೊದಲ ಎಸೆತದಲ್ಲಿ ನವಾಜ್ ಭರ್ಜರಿ ಹೊಡೆತ ಬಾರಿಸಿದರು. ಆದರೆ ಅತ್ಯುತ್ತಮ ಫೀಲ್ಡಿಂಗ್ ಮೂಲಕ ಜಿಂಬಾಬ್ವೆ ಫೀಲ್ಡರ್ ಫೋರ್ ತಡೆದರು. ಇದಾಗ್ಯೂ 3 ರನ್ ಓಡಿದರು. 2ನೇ ಎಸೆತದಲ್ಲಿ ವಾಸಿಂ ಫೋರ್ ಬಾರಿಸುವ ಮೂಲಕ ಗೆಲ್ಲುವ ಭರವಸೆ ಹೆಚ್ಚಿಸಿದರು. ಅದರಂತೆ ಕೊನೆಯ 3 ಎಸೆತಗಳಲ್ಲಿ 4 ರನ್ ಬೇಕಿತ್ತು. ಈ ವೇಳೆ ವಾಸಿಂ 1 ರನ್ ಕಲೆಹಾಕಿದರು. ಇನ್ನು 4ನೇ ಎಸೆತದಲ್ಲಿ ನವಾಜ್ ಯಾವುದೇ ರನ್ ತೆಗೆಯಲು ಸಾಧ್ಯವಾಗಿಲ್ಲ. 5ನೇ ಎಸೆತದಲ್ಲಿ ಕ್ಯಾಚ್ ನೀಡುವ ಮೂಲಕ ನವಾಜ್ ಹೊರನಡೆದರು.

ಅದರಂತೆ ಅಂತಿಮ ಎಸೆತದಲ್ಲಿ ಪಾಕಿಸ್ತಾನ್ ತಂಡಕ್ಕೆ 3 ರನ್​ ಬೇಕಿತ್ತು. ಈ ವೇಳೆ ಬೌಂಡರಿ ಲೈನ್​ನತ್ತ ಬಾರಿಸಿದ ಶಾಹೀನ್ ಅಫ್ರಿದಿ 2 ರನ್​ ಓಡುವ ಯತ್ನ ಮಾಡಿದರೂ, ವಿಕೆಟ್ ಕೀಪರ್ ಕಡೆಯಿಂದ ರನೌಟ್ ಆದರು. ಅದರಂತೆ ಜಿಂಬಾಬ್ವೆ ತಂಡವು 1 ರನ್​ಗಳ ರೋಚಕ ಜಯ ಸಾಧಿಸಿ ಹೊಸ ಇತಿಹಾಸ ಬರೆಯಿತು.

ಜಿಂಬಾಬ್ವೆ ಪರ 4 ಓವರ್​ಗಳಲ್ಲಿ ಕೇವಲ 25 ರನ್ ನೀಡಿ ಮಹತ್ವದ 3 ವಿಕೆಟ್ ಕಬಳಿಸಿದ ಸಿಕಂದರ್ ರಾಝ ಗೆಲುವಿನ ರೂವಾರಿಯಾದರು. ಅಲ್ಲದೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಕೂಡ ಅವರಿಗೆ ಒಲಿಯಿತು.

 

 

 

Published On - 8:09 pm, Thu, 27 October 22