T20 World Cup 2024: ಟಿ20 ವಿಶ್ವಕಪ್ನ ಸೂಪರ್-8 ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಇಂಗ್ಲೆಂಡ್ ತಂಡ ಭರ್ಜರಿ ಜಯ ಸಾಧಿಸಿದೆ. ಸೇಂಟ್ ಲೂಸಿಯಾದ ಡಾರೆನ್ ಸ್ಯಾಮಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡದ ನಾಯಕ ಜೋಸ್ ಬಟ್ಲರ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ ತಂಡಕ್ಕೆ ಜಾನ್ಸನ್ ಚಾರ್ಲ್ಸ್ ಹಾಗೂ ಬ್ರಾಂಡನ್ ಕಿಂಗ್ ಉತ್ತಮ ಆರಂಭ ಒದಗಿಸಿದ್ದರು.
ಮೊದಲ ವಿಕೆಟ್ಗೆ 94 ರನ್ ಪೇರಿಸಿದ ಬಳಿಕ ಚಾಲ್ಸ್ (38) ವಿಕೆಟ್ ಒಪ್ಪಿಸಿದರು. ಇನ್ನು 23 ರನ್ಗಳಿಸಿದ್ದ ಬ್ರಾಂಡನ್ ಕಿಂಗ್ ಗಾಯಗೊಂಡು ಮೈದಾನ ತೊರೆದರು. ಆರಂಭಿಕರಿಬ್ಬರ ನಿರ್ಗಮನದ ನಂತರ ವಿಂಡೀಸ್ ರನ್ ಗತಿಯು ಕುಸಿದತ್ತ ಸಾಗಿತು.
ಇದಾಗ್ಯೂ ಮಧ್ಯಮ ಕ್ರಮಾಂಕದಲ್ಲಿ ನಿಕೋಲಸ್ ಪೂರನ್ (36) ಹಾಗೂ ರೋವ್ಮನ್ ಪೊವೆಲ್ (36) ಉಪಯುಕ್ತ ಕಾಣಿಕೆ ನೀಡಿದರು. ಈ ಮೂಲಕ ವೆಸ್ಟ್ ಇಂಡೀಸ್ ತಂಡವು 20 ಓವರ್ಗಳಲ್ಲಿ 180 ರನ್ ಕಲೆಹಾಕಿತು.
181 ರನ್ಗಳ ಕಠಿಣ ಗುರಿ ಬೆನ್ನತ್ತಿದ ಇಂಗ್ಲೆಂಡ್ ತಂಡಕ್ಕೆ ಫಿಲ್ ಸಾಲ್ಟ್ ಹಾಗೂ ಜೋಸ್ ಬಟ್ಲರ್ ಸಿಡಿಲಬ್ಬರದ ಆರಂಭ ಒದಗಿಸಿದ್ದರು. ಪವರ್ ಪ್ಲೇನಲ್ಲಿ 58 ರನ್ ಕಲೆಹಾಕಿದ ಈ ಜೋಡಿ ಬೃಹತ್ ಮೊತ್ತವನ್ನು ಚೇಸ್ ಮಾಡಲು ಅತ್ಯುತ್ತಮ ಅಡಿಪಾಯ ಹಾಕಿದರು.
ಈ ಹಂತದಲ್ಲಿ 25 ರನ್ಗಳಿಸಿದ್ದ ಜೋಸ್ ಬಟ್ಲರ್ ಎಲ್ಬಿಡಬ್ಲ್ಯೂ ಆಗಿ ಹೊರನಡೆದರು. ಇದರ ಬೆನ್ನಲ್ಲೇ ಮೊಯೀನ್ ಅಲಿ (13) ಕೂಡ ವಿಕೆಟ್ ಒಪ್ಪಿಸಿದರು.
ಇದಾಗ್ಯೂ ಮತ್ತೊಂದೆಡೆ ಫಿಲ್ ಸಾಲ್ಟ್ ಅಬ್ಬರ ಮುಂದುವರೆದಿತ್ತು. ವಿಂಡೀಸ್ ಬೌಲರ್ಗಳನ್ನು ಮನಸೋ ಇಚ್ಛೆ ದಂಡಿಸಿದ ಫಿಲ್ ಸಾಲ್ಟ್ 47 ಎಸೆತಗಳಲ್ಲಿ 5 ಭರ್ಜರಿ ಸಿಕ್ಸ್ ಹಾಗೂ 6 ಫೋರ್ಗಳನ್ನು ಬಾರಿಸಿದರು. ಅಲ್ಲದೆ ಅಜೇಯ 87 ರನ್ ಸಿಡಿಸಿದರು.
ಮತ್ತೊಂದೆಡೆ ಜಾನಿ ಬೈರ್ಸ್ಟೋವ್ 26 ಎಸೆತಗಳಲ್ಲಿ 48 ರನ್ಗಳನ್ನು ಕಲೆಹಾಕಿದರು. ಈ ಮೂಲಕ ಇಂಗ್ಲೆಂಡ್ ತಂಡವು 17.3 ಓವರ್ಗಳಲ್ಲಿ ಗುರಿ ತಲುಪಿ 8 ವಿಕೆಟ್ಗಳ ಅಮೋಘ ಗೆಲುವು ದಾಖಲಿಸಿದೆ.
ಮೊದಲ ಸುತ್ತಿನಲ್ಲಿ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದ ಇಂಗ್ಲೆಂಡ್ ತಂಡವು ನೆಟ್ ರನ್ ರೇಟ್ ನೆರವಿನಿಂದ ದ್ವಿತೀಯ ಸುತ್ತು ಪ್ರವೇಶಿಸಿದೆ. ಆದರೀಗ ಸೂಪರ್-8 ಸುತ್ತಿನ ಮೊದಲ ಪಂದ್ಯದಲ್ಲೇ ಅಮೋಘ ಗೆಲುವು ದಾಖಲಿಸುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ದ್ವಿತೀಯ ಸುತ್ತಿನಲ್ಲಿ ಭರ್ಜರಿ ಪ್ರದರ್ಶನ ನೀಡುವ ಸೂಚನೆ ನೀಡಿದ್ದಾರೆ ಹಾಲಿ ಚಾಂಪಿಯನ್ ಇಂಗ್ಲೆಂಡ್ ಪಡೆ.
ಇಂಗ್ಲೆಂಡ್ ಪ್ಲೇಯಿಂಗ್ 11: ಫಿಲಿಪ್ ಸಾಲ್ಟ್ , ಜೋಸ್ ಬಟ್ಲರ್ (ನಾಯಕ) , ಜಾನಿ ಬೈರ್ಸ್ಟೋವ್ , ಹ್ಯಾರಿ ಬ್ರೂಕ್ , ಮೊಯೀನ್ ಅಲಿ , ಲಿಯಾಮ್ ಲಿವಿಂಗ್ಸ್ಟೋನ್ , ಸ್ಯಾಮ್ ಕರನ್ , ಜೋಫ್ರಾ ಆರ್ಚರ್ , ಆದಿಲ್ ರಶೀದ್ , ಮಾರ್ಕ್ ವುಡ್ , ರೀಸ್ ಟೋಪ್ಲಿ.
ಇದನ್ನೂ ಓದಿ: Ramandeep Singh: 2ನೇ ಬಾರಿ ಒಂದೇ ಓವರ್ನಲ್ಲಿ 5 ಸಿಕ್ಸ್ ಸಿಡಿಸಿದ ರಮಣ್ದೀಪ್ ಸಿಂಗ್
ವೆಸ್ಟ್ ಇಂಡೀಸ್ ಪ್ಲೇಯಿಂಗ್ 11: ಬ್ರಾಂಡನ್ ಕಿಂಗ್ , ಜಾನ್ಸನ್ ಚಾರ್ಲ್ಸ್ , ನಿಕೋಲಸ್ ಪೂರನ್ (ವಿಕೆಟ್ ಕೀಪರ್) , ರೋಸ್ಟನ್ ಚೇಸ್ , ರೋವ್ಮನ್ ಪೊವೆಲ್ (ನಾಯಕ) , ಶೆರ್ಫೇನ್ ರುದರ್ಫೋರ್ಡ್ , ಆಂಡ್ರೆ ರಸೆಲ್ , ರೊಮಾರಿಯೋ ಶೆಫರ್ಡ್ , ಅಕೇಲ್ ಹೊಸೈನ್ , ಅಲ್ಝಾರಿ ಜೋಸೆಫ್ , ಗುಡಾಕೇಶ್ ಮೋಟಿ.
Published On - 9:30 am, Thu, 20 June 24