‘ತಮ್ಮಲ್ಲೇ ಭಿನ್ನಾಭಿಪ್ರಾಯ, ತಿಳುವಳಿಕೆಯ ಕೊರತೆ, ಇಂತಹ ತಂಡವನ್ನು ನೋಡಿಲ್ಲ’: ಪಾಕ್ ತಂಡದ ಬಗ್ಗೆ ಕೋಚ್ ಗ್ಯಾರಿ ಸ್ಫೋಟಕ ಹೇಳಿಕೆ

|

Updated on: Jun 17, 2024 | 8:07 PM

Gary Kirsten: ಆಟಗಾರರಿಗೆ ಕೌಶಲ್ಯದ ಕೊರತೆ ಮಾತ್ರವಲ್ಲದೆ ಆಟದ ಅರಿವು ಅಂದರೆ ಪಂದ್ಯದ ಸಂದರ್ಭಗಳ ತಿಳುವಳಿಕೆಯೂ ಇರುವುದಿಲ್ಲ. ಏಕೆಂದರೆ ಆಟಗಾರರಿಗೆ ಯಾವಾಗ ಯಾವ ಶಾಟ್ ಆಡಬೇಕು ಎಂದು ತಿಳಿದಿಲ್ಲ. ಈ ಎಲ್ಲಾ ವಿಷಯಗಳನ್ನು ತಮ್ಮ ವರದಿಯಲ್ಲಿ ಬರೆದು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಮುಖ್ಯಸ್ಥರಿಗೆ ಕಳುಹಿಸುವುದಾಗಿ’ ಕರ್ಸ್ಟನ್ ಹೇಳಿದ್ದಾರೆ ಎಂದು ವರದಿಯಾಗಿದೆ.

‘ತಮ್ಮಲ್ಲೇ ಭಿನ್ನಾಭಿಪ್ರಾಯ, ತಿಳುವಳಿಕೆಯ ಕೊರತೆ, ಇಂತಹ ತಂಡವನ್ನು ನೋಡಿಲ್ಲ’: ಪಾಕ್ ತಂಡದ ಬಗ್ಗೆ ಕೋಚ್ ಗ್ಯಾರಿ ಸ್ಫೋಟಕ ಹೇಳಿಕೆ
ಬಾಬರ್ ಆಝಂ, ಗ್ಯಾರಿ ಕರ್ಸ್ಟನ್
Follow us on

ಪಾಕಿಸ್ತಾನ ಕ್ರಿಕೆಟ್ ತಂಡ (Pakistan cricket Team) ಯಾವುದೇ ಸರಣಿ ಅಥವಾ ಯಾವುದೇ ದೊಡ್ಡ ಪಂದ್ಯಾವಳಿಯಲ್ಲಿ ಕಳಪೆ ಪ್ರದರ್ಶನ ನೀಡಿದಾಗ ಆ ತಂಡದ ವಿರುದ್ಧ ಟೀಕಾ ಪ್ರಹಾರವೇ ನಡೆಯುತ್ತಿದೆ. ಇದರ ಜೊತೆಗೆ ತಂಡದಲ್ಲಿ ಎಲ್ಲವೂ ಸರಿ ಇಲ್ಲ ಎಂಬ ಮಾತು ಮೊದಲಿಗೆ ಮುನ್ನೆಲೆಗೆ ಬಂದು ನಿಲ್ಲುತ್ತದೆ. ಇದು ಕಳೆದ ಹಲವು ವರ್ಷಗಳಿಂದ ನಡೆಯುತ್ತಿದ್ದು, 2024ರ ಟಿ20 ವಿಶ್ವಕಪ್‌ನಲ್ಲಿ (T20 World Cup 2024) ಗ್ರೂಪ್ ಹಂತದಿಂದ ಹೊರಗುಳಿದ ಬಳಿಕ ಮತ್ತೊಮ್ಮೆ ಅದೇ ದೃಶ್ಯ ಕಂಡು ಬರುತ್ತಿದೆ. ಕಳೆದ ಕೆಲವು ತಿಂಗಳುಗಳಿಂದ ತಂಡದಲ್ಲಿ ಗುಂಪುಗಾರಿಕೆಯ ವರದಿಗಳಿದ್ದು, ಆಟಗಾರರ ಆಯ್ಕೆಯಲ್ಲಿ ಇಷ್ಟ-ಅನಿಷ್ಟಗಳ ಸಮಸ್ಯೆಗಳು ಎದುರಾಗಿವೆ. ಇದೀಗ ತಂಡದ ಮುಖ್ಯ ಕೋಚ್ ಗ್ಯಾರಿ ಕರ್ಸ್ಟನ್ (Gary Kirsten) ಕೂಡ ತಂಡದ ಡ್ರೆಸ್ಸಿಂಗ್ ರೂಮ್ ಕಹಾನಿಯನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ಆಟಗಾರರ ನಡುವೆ ಬಿರುಕು, ಏಕತೆಯ ಕೊರತೆ

ಟಿ20 ವಿಶ್ವಕಪ್​ನ ಮೊದಲ 2 ಪಂದ್ಯಗಳಲ್ಲಿ ಕಳಪೆ ನೀಡಿದ್ದ ಪಾಕ್ ತಂಡ ಆರಂಭದಲ್ಲೇ ಟೂರ್ನಿಯಿಂದ ಹೊರಗುಳಿದಿತ್ತು. ಐರ್ಲೆಂಡ್ ವಿರುದ್ಧ ಔಪಚಾರಿಕ ಪಂದ್ಯವನ್ನಾಡಿದ ಪಾಕಿಸ್ತಾನ ತಂಡ, ಬಹಳ ಪ್ರಯಾಸ ಪಟ್ಟು ಗೆಲುವಿನ ದಡ ಮುಟ್ಟಿತ್ತು. ಐರ್ಲೆಂಡ್ ನೀಡಿದ್ದ 107 ರನ್ ಗುರಿಯನ್ನು ಪಾಕ್ ತಂಡ 7 ವಿಕೆಟ್ ಕಳೆದುಕೊಂಡು 19ನೇ ಓವರ್​ನಲ್ಲಿ ಸಾಧಿಸಿತು. ಈ ಗೆಲುವಿನೊಂದಿಗೆ ತಂಡದ ಟಿ20 ವಿಶ್ವಕಪ್ ಪ್ರಯಾಣ ಕೂಡ ಕೊನೆಗೊಂಡಿತು. ಆದರೆ ಅಮೆರಿಕದಿಂದ ಹೊರಡುವ ಮುನ್ನ ತಂಡದೊಳಗಿನ ನ್ಯೂನತೆಗಳ ಬಗ್ಗೆ ಮಾತನಾಡಿರುವ ಮುಖ್ಯ ಕೋಚ್ ಕರ್ಸ್ಟನ್, ಆಟಗಾರರಿಗೆ ಇದು ಹೆಸರಿಗೆ ಮಾತ್ರ ತಂಡವಾಗಿದೆ. ಆದರೆ ವಾಸ್ತವದಲ್ಲಿ ತಂಡದ ಬಗ್ಗೆ ಒಬ್ಬರಿಗೂ ಕಾಳಜಿ ಇಲ್ಲ ಎಂದಿದ್ದಾರೆ.

ಪಾಕಿಸ್ತಾನಿ ಮಾಧ್ಯಮ ವರದಿಗಳ ಪ್ರಕಾರ, ಐರ್ಲೆಂಡ್ ವಿರುದ್ಧದ ಗೆಲುವಿನ ನಂತರ, ಗ್ಯಾರಿ ಕರ್ಸ್ಟನ್ ತನ್ನ ದೇಶವಾದ ದಕ್ಷಿಣ ಆಫ್ರಿಕಾಕ್ಕೆ ಮರಳಿದರು. ಆದರೆ ಹೊರಡುವ ಮೊದಲು ಅವರು ಪಾಕಿಸ್ತಾನ ತಂಡದಲ್ಲಿರುವ ಸಮಸ್ಯೆಗಳನ್ನು ಬಹಿರಂಗಪಡಿಸಿದ್ದಾರೆ ಎಂದು ವರದಿಯಾಗಿದೆ.

ಇಂತಹ ತಂಡವನ್ನು ನೋಡಿಯೇ ಇಲ್ಲ

ತಂಡದ ಬಗ್ಗೆ ಅಸಮಾಧಾನಗೊಂಡಿರುವ ಕರ್ಸ್ಟನ್, ‘ಪಾಕಿಸ್ತಾನಿ ಆಟಗಾರರ ನಡುವೆ ಸಾಕಷ್ಟು ಒಡಕು ಇದೆ. ಇಡೀ ತಂಡದಲ್ಲಿ ಒಗ್ಗಟ್ಟಿನ ಕೊರತೆ ಇದೆ. ಈ ವಿಷಯಗಳು ತಂಡವನ್ನು ಹಾಳು ಮಾಡುತ್ತಿವೆ. ಇದು ಹೆಸರಿಗೆ ಮಾತ್ರ ತಂಡವಾಗಿದೆ. ಆದರೆ ತಂಡದಲ್ಲಿ ಏಕತೆಯಿಲ್ಲ. ಪ್ರತಿ ಆಟಗಾರನು ವಿಭಿನ್ನ ಮಾರ್ಗವನ್ನು ಅನುಸರಿಸುತ್ತಾನೆ ಮತ್ತು ಯಾರೂ ಪರಸ್ಪರ ಬೆಂಬಲಿಸುವುದಿಲ್ಲ. ನಾನು ಅನೇಕ ತಂಡಗಳೊಂದಿಗೆ ಕೆಲಸ ಮಾಡಿದ್ದೇನೆ. ಆದರೆ ಇಂತಹ ತಂಡವನ್ನು ಹಿಂದೆಂದೂ ನೋಡಿಲ್ಲ. ಅನೇಕ ಆಟಗಾರರಿಗೆ ನಾಯಕತ್ವ ಮತ್ತು ಉಪನಾಯಕತ್ವದ ದುರಾಸೆ ಇದೆ’ ಎಂದು ಕರ್ಸ್ಟನ್ ಹೇಳಿದ್ದಾರೆ.

ಆಟಗಾರರಲ್ಲಿ ತಿಳುವಳಿಕೆಯ ಕೊರತೆ

ಟಿ20 ವಿಶ್ವಕಪ್‌ಗೆ ಮುನ್ನವೇ ಪಾಕಿಸ್ತಾನ ತಂಡದ ಕೋಚ್ ಆಗಿ ನೇಮಕಗೊಂಡಿದ್ದ ಗ್ಯಾರಿ ಕರ್ಸ್ಟನ್ ಸುಮಾರು 3 ವಾರಗಳಲ್ಲಿ ಪಾಕಿಸ್ತಾನ ತಂಡದ ಪ್ರಸ್ತುತ ಸ್ಥಿತಿಯನ್ನು ಅರಿತುಕೊಳ್ಳುವ ಯತ್ನ ಮಾಡಿದ್ದಾರೆ. ‘ಆಟಗಾರರಿಗೆ ಕೌಶಲ್ಯದ ಕೊರತೆ ಮಾತ್ರವಲ್ಲದೆ ಆಟದ ಅರಿವು ಅಂದರೆ ಪಂದ್ಯದ ಸಂದರ್ಭಗಳ ತಿಳುವಳಿಕೆಯೂ ಇರುವುದಿಲ್ಲ. ಏಕೆಂದರೆ ಆಟಗಾರರಿಗೆ ಯಾವಾಗ ಯಾವ ಶಾಟ್ ಆಡಬೇಕು ಎಂದು ತಿಳಿದಿಲ್ಲ. ಈ ಎಲ್ಲಾ ವಿಷಯಗಳನ್ನು ತಮ್ಮ ವರದಿಯಲ್ಲಿ ಬರೆದು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಮುಖ್ಯಸ್ಥರಿಗೆ ಕಳುಹಿಸುವುದಾಗಿ’ ಕರ್ಸ್ಟನ್ ಹೇಳಿದ್ದಾರೆ ಎಂದು ವರದಿಯಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:02 pm, Mon, 17 June 24