T20 World Cup 2024: ಸೂಪರ್ 8 ಸುತ್ತಿನಲ್ಲಿ 3 ಬಾರಿ ಎಡವಿರುವ ಟೀಂ ಇಂಡಿಯಾ..!
T20 World Cup 2024: ಈ ಮೊದಲು ಕಳೆದ 8 ಆವೃತ್ತಿಗಳಲ್ಲಿ ಸೂಪರ್-8ಸುತ್ತಿನಲ್ಲಿ ಭಾರತ ತಂಡ ಹೇಗೆ ಪ್ರದರ್ಶನ ನೀಡಿದೆ? ಎಂಬುದು ತಿಳಿದುಕೊಳ್ಳುವುದು ಅತ್ಯವಶ್ಯಕವಾಗಿದೆ. ಆದರೆ ಸೂಪರ್ 8 ಸುತ್ತಿನಲ್ಲಿ 3 ಬಾರಿ ಮುಗ್ಗರಿಸಿರುವ ಕಹಿ ಅನುಭವ ಟೀಂ ಇಂಡಿಯಾಕ್ಕಿದೆ ಎಂಬುದು ಆಘಾತಕ್ಕಾರಿ ಸಂಗತಿಯಾಗಿದೆ.
ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ (T20 World Cup 2024) ಟೀಂ ಇಂಡಿಯಾ ಅದ್ಭುತ ಪ್ರದರ್ಶನ ನೀಡಿ ಸೂಪರ್-8 ಸುತ್ತನ್ನು ಪ್ರವೇಶಿಸಿದೆ. ಸೂಪರ್-8ರಲ್ಲಿ ಭಾರತ ತಂಡ ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಆಸ್ಟ್ರೇಲಿಯಾ ತಂಡಗಳನ್ನು ಎದುರಿಸಲಿದೆ. ಟೂರ್ನಿಯಲ್ಲಿ ಭಾರತ ತಂಡ (Team India) ಇಲ್ಲಿಯವರೆಗೆ ಅಜೇಯವಾಗಿದೆ. ಹೀಗಿರುವಾಗ ಸೂಪರ್-8ಸುತ್ತಿನಲ್ಲಿ ಭಾರತ ತಂಡ ಯಾವ ರೀತಿ ಪ್ರದರ್ಶನ ನೀಡಲಿದೆ ಎಂಬ ಪ್ರಶ್ನೆ ಎಲ್ಲ ಕ್ರಿಕೆಟ್ ಅಭಿಮಾನಿಗಳ ಮನದಲ್ಲಿ ಮೂಡುತ್ತಿದೆ. ಈ ಮೊದಲು ಕಳೆದ 8 ಆವೃತ್ತಿಗಳಲ್ಲಿ ಸೂಪರ್-8ಸುತ್ತಿನಲ್ಲಿ ಭಾರತ ತಂಡ ಹೇಗೆ ಪ್ರದರ್ಶನ ನೀಡಿದೆ? ಎಂಬುದು ತಿಳಿದುಕೊಳ್ಳುವುದು ಅತ್ಯವಶ್ಯಕವಾಗಿದೆ. ಆದರೆ ಸೂಪರ್ 8 ಸುತ್ತಿನಲ್ಲಿ 3 ಬಾರಿ ಮುಗ್ಗರಿಸಿರುವ ಕಹಿ ಅನುಭವ ಟೀಂ ಇಂಡಿಯಾಕ್ಕಿದೆ ಎಂಬುದು ಆಘಾತಕ್ಕಾರಿ ಸಂಗತಿಯಾಗಿದೆ.
2009 ರಲ್ಲಿ 3 ಪಂದ್ಯಗಳಲ್ಲೂ ಸೋಲು
2007ರಲ್ಲಿ ನಡೆದಿದ್ದ ಟೂರ್ನಿಯ ಮೊದಲ ಆವೃತ್ತಿಯಲ್ಲಿ ಭಾರತ ತಂಡ, ಪಾಕಿಸ್ತಾನವನ್ನು ಸೋಲಿಸುವ ಮೂಲಕ ಮೊದಲ ಪ್ರಶಸ್ತಿಯನ್ನು ಗೆದ್ದುಕೊಂಡಿತ್ತು. ಇದರ ನಂತರ 2009 ರಲ್ಲಿ ಎರಡನೇ ಆವೃತ್ತಿಯಲ್ಲೂ ಭಾರತ ಸೂಪರ್-8 ಪ್ರವೇಶಿಸಿತ್ತು. ಈ ಸುತ್ತಿನಲ್ಲಿ ಭಾರತ, ದಕ್ಷಿಣ ಆಫ್ರಿಕಾ, ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ಮೂರು ತಂಡಗಳನ್ನು ಎದುರಿಸಿತ್ತು. ಆದರೆ ಈ ಮೂರೂ ತಂಡಗಳ ವಿರುದ್ಧ ಸೋತಿತ್ತು. ಇದರೊಂದಿಗೆ ಗುಂಪಿನಲ್ಲಿ ಕೊನೆಯ ಸ್ಥಾನ ಪಡೆಯುವ ಮೂಲಕ ಟೂರ್ನಿಯಿಂದ ಹೊರಬಿದ್ದಿತ್ತು.
T20 World Cup 2024: ಸೂಪರ್ 8 ಸುತ್ತಿನ ಮೂವರು ಎದುರಾಳಿಗಳ ವಿರುದ್ಧ ಭಾರತದ ದಾಖಲೆ ಹೇಗಿದೆ?
2010ರಲ್ಲೂ ಅದೇ ಕಥೆ
2010ರ ವಿಶ್ವಕಪ್‌ನಲ್ಲಿ ಸಿ ಗುಂಪಿನ ಭಾಗವಾಗಿದ್ದ ಭಾರತ ತನ್ನ ಎರಡೂ ಪಂದ್ಯಗಳನ್ನು ಗೆದ್ದು ಸೂಪರ್-8 ಪ್ರವೇಶಿಸಿತ್ತು. ಆ ಬಳಿಕ ಸೂಪರ್-8ಸುತ್ತಿನಲ್ಲಿ ಆಸ್ಟ್ರೇಲಿಯ, ಶ್ರೀಲಂಕಾ ಮತ್ತು ವೆಸ್ಟ್ ಇಂಡೀಸ್ ತಂಡಗಳನ್ನು ಎದುರಿಸಿದ್ದ ಟೀಂ ಇಂಡಿಯಾ ಆಡಿದ ಎಲ್ಲಾ ಮೂರು ಪಂದ್ಯಗಳನ್ನು ಸೋತಿತ್ತು. ಇದರೊಂದಿಗೆ ತಂಡವು ಗುಂಪಿನಲ್ಲಿ ಕೊನೆಯ ಸ್ಥಾನ ಗಳಿಸಿ ಪ್ರಯಾಣವನ್ನು ಅಂತ್ಯಗೊಳಿಸಿತ್ತು.
2012 ರಲ್ಲಿ ಆಘಾತ ನೀಡಿದ್ದ ನೆಟ್ ರನ್ರೇಟ್
2009 ಮತ್ತು 2010ರ ವಿಶ್ವಕಪ್‌ನಲ್ಲಿ ಆದಂತೆ 2012ರ ವಿಶ್ವಕಪ್‌ನಲ್ಲಿಯೂ ಭಾರತ ಮತ್ತೊಮ್ಮೆ ಸೂಪರ್-8ಸುತ್ತಿನಿಂದ ಹೊರಬಿದ್ದಿತ್ತು. ಈ ವಿಶ್ವಕಪ್‌ನ ಗ್ರೂಪ್ ಹಂತದಲ್ಲಿ ಎರಡೂ ಪಂದ್ಯಗಳನ್ನು ಗೆಲ್ಲುವ ಮೂಲಕ ಭಾರತ ಸೂಪರ್-8 ಪ್ರವೇಶಿಸಿತ್ತು. ಈ ಸುತ್ತಿನಲ್ಲಿ ಆಸ್ಟ್ರೇಲಿಯಾ, ಪಾಕಿಸ್ತಾನ ಮತ್ತು ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಿದ್ದ ಭಾರತ 2 ತಂಡಗಳ ವಿರುದ್ಧ ಗೆದ್ದು, ಆಸ್ಟ್ರೇಲಿಯಾ ವಿರುದ್ಧ ಸೋಲನ್ನು ಎದುರಿಸಬೇಕಾಯಿತು. ಆದರೆ ನೆಟ್ ರನ್ ರೇಟ್ ವಿಚಾರದಲ್ಲಿ ಪಾಕಿಸ್ತಾನಕ್ಕಿಂತ ಹಿಂದಿದ್ದರಿಂದ ಭಾರತ ತಂಡ ಈ ಬಾರಿಯೂ ಸೂಪರ್-8ಸುತ್ತಿನಿಂದ ಹೊರಬಿದ್ದಿತ್ತು.
ಈ ಬಾರಿ ಈ 3 ತಂಡಗಳ ಸವಾಲು
ಭಾರತ ತಂಡ ಪ್ರಸಕ್ತ ವಿಶ್ವಕಪ್‌ನಲ್ಲಿ ಸೂಪರ್-8 ಸುತ್ತಿನಲ್ಲಿ ಆಸ್ಟ್ರೇಲಿಯಾ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶ ತಂಡಗಳನ್ನು ಎದುರಿಸಲಿದೆ. ಈ ಮೂರೂ ತಂಡಗಳ ವಿರುದ್ಧ ಭಾರತ ಅತ್ಯುತ್ತಮ ಪ್ರದರ್ಶನ ನೀಡಿದೆ. ಆದರೆ ಆಸ್ಟ್ರೇಲಿಯ ಮತ್ತು ಅಫ್ಘಾನಿಸ್ತಾನದ ಈಗಿನ ಫಾರ್ಮ್ ನೋಡಿದರೆ ಭಾರತ ತಂಡದ ಪಯಣ ಸೆಮಿಫೈನಲ್‌ವರೆಗೆ ಸುಲಭವಲ್ಲ. ಹೀಗಾಗಿ ಈ ಸುತ್ತಿನಲ್ಲಿ ಭಾರತ ಎಚ್ಚರಿಕೆಯಿಂದ ಆಡುವುದು ಅವಶ್ಯಕವಾಗಿದೆ.
ಟಿ20 ವಿಶ್ವಕಪ್‌ನಲ್ಲಿ ಭಾರತದ ಪಯಣ
- 2007- ಚಾಂಪಿಯನ್
- 2009- ಸೂಪರ್-8
- 2010- ಸೂಪರ್-8
- 2012- ಸೂಪರ್-8
- 2014- ರನ್ನರ್ ಅಪ್
- 2016- ಸೆಮಿಫೈನಲ್
- 20200- ಸೂಪರ್-12
- 2022- ಸೆಮಿಫೈನಲ್
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ