T20 World Cup 2024: ಟಿ20 ವಿಶ್ವಕಪ್ ಸೆಮಿಫೈನಲ್- ಫೈನಲ್ ಪಂದ್ಯಕ್ಕೆ ಮೀಸಲು ದಿನ ನಿಗದಿ
T20 World Cup 2024: 2024 ರ ಟಿ20 ವಿಶ್ವಕಪ್‌ನಲ್ಲಿ ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳಿಗೆ ಮೀಸಲು ದಿನವನ್ನು ಘೋಷಿಸುವುದರ ಜೊತೆಗೆ, ಐಸಿಸಿ ಮತ್ತೊಂದು ಪ್ರಮುಖ ಘೋಷಣೆ ಮಾಡಿದ್ದು, ಡಕ್ ವರ್ತ್ ಲೂಯಿಸ್ ನಿಯಮವನ್ನು ಹೇಗೆ ಅನುಷ್ಠಾನಕ್ಕೆ ತರಲಾಗುವುದು ಎಂಬುದರ ಬಗ್ಗೆ ಐಸಿಸಿ ವಿವರಣೆ ನೀಡಿದೆ.
ಜೂನ್ನಲ್ಲಿ ನಡೆಯಲ್ಲಿರುವ ಟಿ20 ವಿಶ್ವಕಪ್ಗೆ (T20 World Cup 2024) ಆತಿಥ್ಯವಹಿಸಲು ಅಮೆರಿಕ ಮತ್ತು ವೆಸ್ಟ್ ಇಂಡೀಸ್ (USA and West Indies) ಸಜ್ಜಾಗಿವೆ. ಪ್ರಕಟವಾಗಿರುವ ವೇಳಾಪಟ್ಟಿಯ ಪ್ರಕಾರ ಲೀಗ್ ಹಂತದ ಪಂದ್ಯಗಳು ಅಮೇರಿಕಾದಲ್ಲಿ ನಡೆದರೆ, ಅದರ ನಂತರದ ಎಲ್ಲಾ ಪ್ರಮುಖ ಪಂದ್ಯಗಳು ವೆಸ್ಟ್ ಇಂಡೀಸ್ನಲ್ಲಿ ನಡೆಯಲಿವೆ. ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) ಅಂತ್ಯದೊಂದಿಗೆ ಟಿ20ಯ ಈ ಮಹಾಯುದ್ಧ ಆರಂಭವಾಗಲಿದೆ. ಏತನ್ಮಧ್ಯೆ, ಈ ಚುಟುಕು ವಿಶ್ವಕಪ್ಗೆ ಸಂಬಂಧಿಸಿದಂತೆ ಕೆಲವು ಪ್ರಮುಖ ಮಾರ್ಗಸೂಚಿಗಳನ್ನು ಐಸಿಸಿ (ICC) ಬಿಡುಗಡೆ ಮಾಡಿದೆ.
ಮೀಸಲು ದಿನ ನಿಗದಿ
ಐಸಿಸಿ ಬಿಡುಗಡೆ ಮಾಡಿರುವ ಪ್ರಮುಖ ಮಾರ್ಗಸೂಚಿಗಳಲ್ಲಿ ಒಂದು ಟೂರ್ನಿಯ ಸೆಮಿಫೈನಲ್ ಹಾಗೂ ಫೈನಲ್ ಪಂದ್ಯಗಳಿಗೆ ಮೀಸಲು ದಿನವನ್ನು ನಿಗದಿಪಡಿಸಿರುವುದು. ಸಾಮಾನ್ಯವಾಗಿ ಐಸಿಸಿ ಈವೆಂಟ್ಗಳ ನಿರ್ಣಾಯಕ ಪಂದ್ಯಗಳ ಮೀಸಲು ದಿನದ ಕೊರತೆಯಿಂದಾಗಿ, ಹವಾಮಾನ ಸಂಬಂಧಿತ ಸಮಸ್ಯೆಗಳಿಂದ ಯಾವುದೇ ಅಡಚಣೆ ಉಂಟಾದರೆ, ಅದು ಪಂದ್ಯದ ಉತ್ಸಾಹವನ್ನು ಹಾಳುಮಾಡುತ್ತದೆ ಮಾತ್ರವಲ್ಲದೆ ಅದರ ಫಲಿತಾಂಶದ ಮೇಲೂ ಪರಿಣಾಮ ಬೀರುತ್ತದೆ. ಇದೇ ಕಾರಣಕ್ಕೆ ಪಂದ್ಯಾವಳಿ ಆರಂಭಕ್ಕೆ ಎರಡೂವರೆ ತಿಂಗಳಿರುವಾಗಲೇ ಐಸಿಸಿ ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳಿಗೆ ಮೀಸಲು ದಿನವನ್ನು ಘೋಷಿಸುವ ಮೂಲಕ ಎಲ್ಲಾ ತಂಡಗಳಿಗೆ ಬಿಗ್ ರಿಲೀಫ್ ನೀಡಿದೆ.
T20 World Cup 2026: 2026 ರ ಟಿ20 ವಿಶ್ವಕಪ್ ಅರ್ಹತಾ ನಿಯಮಗಳನ್ನು ಪ್ರಕಟಿಸಿದ ಐಸಿಸಿ
ಡಕ್ ವರ್ತ್ ಲೂಯಿಸ್ ನಿಯಮ
2024 ರ ಟಿ20 ವಿಶ್ವಕಪ್‌ನಲ್ಲಿ ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳಿಗೆ ಮೀಸಲು ದಿನವನ್ನು ಘೋಷಿಸುವುದರ ಜೊತೆಗೆ, ಐಸಿಸಿ ಮತ್ತೊಂದು ಪ್ರಮುಖ ಘೋಷಣೆ ಮಾಡಿದ್ದು, ಡಕ್ ವರ್ತ್ ಲೂಯಿಸ್ ನಿಯಮವನ್ನು ಹೇಗೆ ಅನುಷ್ಠಾನಕ್ಕೆ ತರಲಾಗುವುದು ಎಂಬುದರ ಬಗ್ಗೆ ಐಸಿಸಿ ವಿವರಣೆ ನೀಡಿದೆ. ಇದರ ಪ್ರಕಾರ ಗ್ರೂಪ್ ಹಂತ ಹಾಗೂ ಸೂಪರ್ 8ರ ಘಟ್ಟದ ಪಂದ್ಯಗಳ ಎರಡನೇ ಇನಿಂಗ್ಸ್‌ನಲ್ಲಿ ಕನಿಷ್ಠ 5 ಓವರ್ ಬೌಲ್ ಮಾಡಿದ ನಂತರವಷ್ಟೇ ಡಕ್ ವರ್ತ್ ಲೂಯಿಸ್ ನಿಯಮದ ಪ್ರಕಾರ ಫಲಿತಾಂಶ ನೀಡಲಾಗುತ್ತದೆ.
ಹಾಗೆಯೇ ಸೆಮಿಫೈನಲ್ ಮತ್ತು ಫೈನಲ್‌ಗಳಲ್ಲಿ ಎರಡನೇ ಇನಿಂಗ್ಸ್‌ನಲ್ಲಿ ಕನಿಷ್ಠ 10 ಓವರ್‌ಗಳನ್ನು ಆಡಿದ ನಂತರವಷ್ಟೇ ಡಕ್‌ವರ್ತ್ ನಿಯಮವನ್ನು ಅನ್ವಯಿಸಿ ಫಲಿತಾಂಶ ಘೋಷಿಸಲಾಗುತ್ತದೆ. ಅಲ್ಲದೆ, ಸೆಮಿಫೈನಲ್ ಮತ್ತು ಫೈನಲ್ ಪಂದ್ಯದ ಮೀಸಲು ದಿನವೂ ಮಳೆ ಸುರಿದು ಪಂದ್ಯ ನಿಂತರೆ ಆಗಲೂ ಇದೇ ನಿಯಮವನ್ನು ಅಳವಡಿಸಿಕೊಳ್ಳಲಾಗುತ್ತದೆ ಎಂದು ಐಸಿಸಿ ಘೋಷಿಸಿದೆ.
ಜೂನ್ 2 ರಿಂದ ಟೂರ್ನಿ ಆರಂಭ
ಟಿ20 ವಿಶ್ವಕಪ್ 2024 ಜೂನ್ 2 ರಿಂದ ಪ್ರಾರಂಭವಾಗಲಿದೆ. ಈ ಬಾರಿಯ ಟೂರ್ನಿಯನ್ನು ವೆಸ್ಟ್ ಇಂಡೀಸ್ ಮತ್ತು ಅಮೆರಿಕ ಆತಿಥ್ಯ ವಹಿಸಲಿವೆ. ಮೊದಲ ಪಂದ್ಯದಲ್ಲಿ ಅಮೆರಿಕ ಕೆನಡಾವನ್ನು ಎದುರಿಸಲಿದೆ. ಭಾರತ ತಂಡ ಜೂನ್ 5 ರಂದು ಐರ್ಲೆಂಡ್ ವಿರುದ್ಧ ಅಭಿಯಾನ ಆರಂಭಿಸಲಿದೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯ ಜೂನ್ 9 ರಂದು ನಡೆಯಲಿದೆ. ಟೂರ್ನಿಯ ಅಂತಿಮ ಪಂದ್ಯ ಜೂನ್ 29 ರಂದು ಬಾರ್ಬಡೋಸ್‌ನಲ್ಲಿ ನಡೆಯಲಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ