Breaking: ಮುಂಬೈ ಮಣಿಸಿ ಮೊದಲ ಬಾರಿಗೆ ಫೈನಲ್ಗೇರಿದ ಆರ್‌ಸಿಬಿ..!
WPL 2024: ದೆಹಲಿಯಲ್ಲಿ ನಡೆದ ಮಹಿಳಾ ಪ್ರೀಮಿಯರ್ ಲೀಗ್‌ನ ಎಲಿಮಿನೇಟರ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು 5 ರನ್‌ಗಳಿಂದ ಮಣಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ತಂಡ ಇದೇ ಮೊದಲ ಬಾರಿಗೆ ಲೀಗ್ನಲ್ಲಿ ಫೈನಲ್‌ಗೇರಿದೆ.
ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಮಹಿಳೆಯರ ಪ್ರೀಮಿಯರ್ ಲೀಗ್ (Women’s Premier League) 2024 ರ ಎಲಿಮಿನೇಟರ್ ಪಂದ್ಯದಲ್ಲಿ ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡವನ್ನು 5 ರನ್‌ಗಳಿಂದ ಮಣಿಸಿದ ಸ್ಮೃತಿ ಮಂಧಾನ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ (Mumbai Indians vs Royal Challengers Bangalore) ಇದೇ ಮೊದಲ ಬಾರಿಗೆ ಮಹಿಳೆಯರ ಪ್ರೀಮಿಯರ್ ಲೀಗ್ ಫೈನಲ್‌ಗೇರಿದೆ. ಟೂರ್ನಿಯ ಎರಡನೇ ಸೀಸನ್‌ನ ಅಂತಿಮ ಪಂದ್ಯ ಇದೀಗ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ನಡೆಯಲಿದೆ. ಪಾಯಿಂಟ್ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆಯುವ ಮೂಲಕ ಡೆಲ್ಲಿ ತಂಡ ಈಗಾಗಲೇ ಫೈನಲ್‌ಗೆ ಅರ್ಹತೆ ಪಡೆದುಕೊಂಡಿದೆ. ಇತ್ತ ಕಳೆದ ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡದ ಸತತ ಎರಡನೇ ಬಾರಿಗೆ ಟ್ರೋಫಿ ಗೆಲ್ಲುವ ಕನಸು ಭಗ್ನಗೊಂಡಿದೆ.
ಆರ್ಸಿಬಿಗೆ ಕಳಪೆ ಆರಂಭ
ಎಲಿಮಿನೇಟರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕಿ ಸ್ಮೃತಿ ಮಂಧಾನ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ದರು. ಅದರಂತೆ ಬ್ಯಾಟಿಂಗ್ ಆರಂಭಿಸಿದ ಆರ್ಸಿಬಿಗೆ ಅತ್ಯಂತ ಕಳಪೆ ಆರಂಭ ಸಿಕ್ಕಿತು. ತಂಡದ ಮೊತ್ತ 20 ರನ್ಗಳಿದ್ದಾಗ ಆರಂಭಿಕ ಆಟಗಾರ್ತಿ ಸೋಫಿ ಡಿವೈನ್ ರೂಪದಲ್ಲಿ ಮೊದಲ ವಿಕೆಟ್ ಪತನವಾಯಿತು. ನಿರ್ಣಾಯಕ ಪಂದ್ಯದಲ್ಲಿ ಸೋಫಿ ಡಿವೈನ್ ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆಯಿತ್ತು. ಆದರೆ ಅವರು ಕೇವಲ 10 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು. ಇದಾದ ಬಳಿಕ ನಾಯಕಿ ಸ್ಮೃತಿ ಮಂಧಾನ ಕೂಡ ಅದೇ ಸ್ಕೋರ್‌ನಲ್ಲಿ ಅಂದರೆ 10 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಮಂಧಾನ ಔಟಾದ ನಂತರ ಬಂದ ದಿಶಾ ಕ್ಯಾಸಟ್ ಖಾತೆ ತೆರೆಯಲು ಸಾಧ್ಯವಾಗದೆ ಪೆವಿಲಿಯನ್ ಸೇರಿಕೊಂಡರು ಈ ವೇಳೆಗೆ ಬೆಂಗಳೂರಿನ ಸ್ಕೋರ್ 23 ರನ್‌ಗಳಿಗೆ 4 ವಿಕೆಟ್ ಆಗಿತ್ತು.
WPL 2024: ಗೆಲ್ಲಲೇಬೇಕಾದ ಪಂದ್ಯದಲ್ಲಿ ಟಾಸ್ ಗೆದ್ದ ಆರ್‌ಸಿಬಿ
ಇದಾದ ಬಳಿಕ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ರಿಚಾ ಘೋಷ್ ಕೂಡ ಹೇಯ್ಲಿ ಮ್ಯಾಥ್ಯೂಸ್ ಎಸೆತದಲ್ಲಿ 19 ಎಸೆತಗಳಲ್ಲಿ 14 ರನ್ ಗಳಿಸಿ ಔಟಾದರು. ರಿಚಾ ಔಟಾದ ನಂತರ, ಆರ್‌ಸಿಬಿ ನಿಯಮಿತ ಅಂತರದಲ್ಲಿ ತನ್ನ ವಿಕೆಟ್‌ಗಳನ್ನು ಕಳೆದುಕೊಳ್ಳುತ್ತಾ ಸಾಗಿತು. ಆದರೆ ಒಂದು ತುದಿಯಲ್ಲಿ ಸಮಯೋಜಿತ ಬ್ಯಾಟಿಂಗ್ ನಡೆಸಿದ ಎಲಿಸ್ ಪೆರ್ರಿ 50 ಎಸೆತಗಳಲ್ಲಿ 66 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದರು. ಇವರ ಆಟದಿಂದಾಗಿ ಬೆಂಗಳೂರು ತಂಡ 20 ಓವರ್‌ಗಳಲ್ಲಿ 135 ರನ್ ಗಳಿಸಲಷ್ಟೇ ಶಕ್ತವಾಯಿತು. ಮುಂಬೈ ಪರ ಬೌಲಿಂಗ್ನಲ್ಲಿ ಹೇಲಿ ಮ್ಯಾಥ್ಯೂಸ್, ನ್ಯಾಟ್ ಸಿವರ್-ಬ್ರಂಟ್ ಮತ್ತು ಸೈಕಾ ಇಶಾಕ್ ತಲಾ 2 ವಿಕೆಟ್ ಪಡೆದರು.
ಮುಂಬೈಗೆ ನಿಧಾನಗತಿಯ ಆರಂಭ
20 ಓವರ್‌ಗಳಲ್ಲಿ 136 ರನ್‌ಗಳನ್ನು ಬೆನ್ನಟ್ಟಿದ ಹರ್ಮನ್‌ಪ್ರೀತ್ ಸಾರಥ್ಯದ ಮುಂಬೈ ಇಂಡಿಯನ್ಸ್‌ಗೆ ವಿಶೇಷ ಆರಂಭ ಸಿಗಲಿಲ್ಲ. 27 ರನ್‌ಗಳಾಗುವಷ್ಟರಲ್ಲಿ ತಂಡವು ಇನ್‌ಫಾರ್ಮ್ ಬ್ಯಾಟರ್ ಹೇಲಿ ಮ್ಯಾಥ್ಯೂಸ್ ಅವರ ಪ್ರಮುಖ ವಿಕೆಟ್ ಅನ್ನು ಕಳೆದುಕೊಂಡಿತು. ಹೇಲಿ ಮ್ಯಾಥ್ಯೂಸ್ 14 ಎಸೆತಗಳಲ್ಲಿ 15 ರನ್‌ಗಳ ಇನಿಂಗ್ಸ್ ಆಡಿದರು. ಇದರ ನಂತರ ಸ್ಕೋರ್ 50 ರ ಸಮೀಪದಲ್ಲಿದ್ದಾಗ ಎರಡನೇ ಆರಂಭಿಕ ಬ್ಯಾಟರ್ ಯಾಸ್ತಿಕಾ ಭಾಟಿಯಾ ಕೂಡ ಯಾವುದೇ ದೊಡ್ಡ ಇನ್ನಿಂಗ್ಸ್ ಆಡದೆ ಪೆವಿಲಿಯನ್ ಸೇರಿಕೊಂಡರು.
ಭಾಟಿಯಾ 27 ಎಸೆತಗಳಲ್ಲಿ 19 ರನ್‌ಗಳ ಅತ್ಯಂತ ನಿಧಾನಗತಿಯ ಇನ್ನಿಂಗ್ಸ್ ಆಡಿದರು. ಇದಾದ ಬಳಿಕ ನಾಯಕಿ ಹರ್ಮನ್‌ಪ್ರೀತ್ ಕೌರ್ 30 ಎಸೆತಗಳಲ್ಲಿ 33 ರನ್ ಗಳಿಸಿ ತಂಡವನ್ನು ಗೆಲುವಿನತ್ತ ಕೊಂಡೊಯ್ಯುತ್ತಿದ್ದರು. ಆದರೆ ಕನ್ನಡತಿ ಶ್ರೇಯಾಂಕ ಮಾಡಿದ 18ನೇ ಓವರ್ನಲ್ಲಿ ಬಿಗ್ ಶಾಟ್ ಆಡುವ ಯತ್ನದಲ್ಲಿ ಕ್ಯಾಚಿತ್ತು ಪೆವಿಲಿಯನ್ ಸೇರಿಕೊಂಡರು. ಕೌರ್ ಔಟಾದ ಬಳಿಕ ಮುಂಬೈ ತಂಡದ ಇನ್ನಿಂಗ್ಸ್ ಆಮೆಗತಿಯಲ್ಲಿ ಸಾಗಿತು. ಹೀಗಾಗಿ ತಂಡ 12 ಎಸೆತಗಳಲ್ಲಿ 15 ರನ್ ಕಲೆಹಾಕಲು ಸಾಧ್ಯವಾಗದೆ 5 ರನ್‌ಗಳಿಂದ ಪಂದ್ಯವನ್ನು ಸೋತಿತು. ಬೆಂಗಳೂರು ಪರ ಕನ್ನಡತಿ ಶ್ರೇಯಾಂಕಾ ಪಾಟೀಲ್ 2 ವಿಕೆಟ್ ಪಡೆದರು. ಬ್ಯಾಟಿಂಗ್ನಲ್ಲಿ ಅಬ್ಬರಿಸುವುದರೊಂದಿಗೆ ಬೌಲಿಂಗ್ನಲ್ಲೂ ಶ್ರೇಷ್ಠ ಪ್ರದರ್ಶನ ನೀಡಿದ ಎಲಿಸ್ ಪೆರ್ರಿ 1 ವಿಕೆಟ್ ತಮ್ಮ ಖಾತೆಯಲ್ಲಿ ಹಾಕಿಕೊಂಡರು. ಜಾರ್ಜಿಯಾ ವೇರ್‌ಹ್ಯಾಮ್ ಕೂಡ ಒಂದು ವಿಕೆಟ್ ಪಡೆದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:52 pm, Fri, 15 March 24