ಟಿ20 ವಿಶ್ವಕಪ್ನಲ್ಲಿ (T20 World Cup 2024) ನಿನ್ನೆ ನಡೆದ ಹೈ-ವೋಲ್ಟೇಜ್ ಪಂದ್ಯದಲ್ಲಿ ಭಾರತವು, ಪಾಕಿಸ್ತಾನವನ್ನು (India vs Pakistan) ಆರು ರನ್‌ಗಳಿಂದ ಸೋಲಿಸಿತು. ಈ ಗೆಲುವಿನೊಂದಿಗೆ ಟೀಂ ಇಂಡಿಯಾ ಸೂಪರ್ ಎಂಟಕ್ಕೇರುವ ಹಕ್ಕು ಬಲಗೊಂಡಿದೆ. ಅದೇ ವೇಳೆ ಪಾಕಿಸ್ತಾನ ತಂಡ ಹೊರಬೀಳುವ ಭೀತಿಯಲ್ಲಿದೆ. ಇದು ಕಡಿಮೆ ಸ್ಕೋರಿಂಗ್ ಪಂದ್ಯ ಆಗಿದ್ದ ಕಾರಣ ಪಂದ್ಯ ಯಾವ ಕಡೆ ತಿರುಗುತ್ತದೆ ಎಂದು ಅಭಿಮಾನಿಗಳು ಊಹಿಸಲು ಸಾಧ್ಯವಾಗಲಿಲ್ಲ. ಅದರಲ್ಲೂ ಮೊದಲು ಬ್ಯಾಟಿಂಗ್ ಮಾಡಿದ ಭಾರತದ ಬ್ಯಾಟಿಂಗ್ ಅತ್ಯಂತ ಕಳಪೆಯಾಗಿತ್ತು. ಹೀಗಾಗಿ ಅನೇಕ ಭಾರತೀಯ ಅಭಿಮಾನಿಗಳು ಮ್ಯಾಚ್ ನೋಡಿರುವ ಸಾಧ್ಯತೆ ತೀರ ಕಡಿಮೆ. ಇನ್ನು ಕೆಲವರಿಗೆ ಕಾರಣಗಳಿಂದಾಗಿ ಪಂದ್ಯವನ್ನು ವೀಕ್ಷಿಸಲು ಸಾಧ್ಯವಾಗದಿರಬಹುದು. ಅಂತಹವರಿಗೆಲ್ಲ ಪಂದ್ಯದ ಝಲಕ್ ತೋರಿಸುವ ಸಲುವಾಗಿ ಐಸಿಸಿ (ICC) ಈ ರೋಚಕ ಪಂದ್ಯದ ರೋಚಕ ಕ್ಷಣಗಳನ್ನು ವಿಡಿಯೋ ಮೂಲಕ ಹಂಚಿಕೊಂಡಿದೆ.
ಪಂದ್ಯದ ಬಗ್ಗೆ ಹೇಳುವುದಾದರೆ.. ಈ ರೋಚಕ ಪಂದ್ಯದಲ್ಲಿ ಭಾರತ ತಂಡ ಪಾಕಿಸ್ತಾನವನ್ನು ಆರು ರನ್‌ಗಳಿಂದ ಸೋಲಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ 19 ಓವರ್‌ಗಳಲ್ಲಿ 119 ರನ್‌ಗಳಿಗೆ ಆಲೌಟ್ ಆಯಿತು. ತಂಡದ ಪರ ರೋಹಿತ್ ಶರ್ಮಾ 13 ರನ್, ವಿರಾಟ್ ಕೊಹ್ಲಿ ನಾಲ್ಕು ರನ್, ಅಕ್ಷರ್ ಪಟೇಲ್ 20 ರನ್, ಸೂರ್ಯಕುಮಾರ್ ಯಾದವ್ ಏಳು ರನ್, ಶಿವಂ ದುಬೆ ಮೂರು ರನ್ ಗಳಿಸಿ ಔಟಾದರು. ಹಾರ್ದಿಕ್ ಪಾಂಡ್ಯ ಏಳು ರನ್ ಗಳಿಸಿದರೆ, ರವೀಂದ್ರ ಜಡೇಜಾ ಮತ್ತು ಜಸ್ಪ್ರೀತ್ ಬುಮ್ರಾ ಖಾತೆ ತೆರೆಯಲು ಸಾಧ್ಯವಾಗಲಿಲ್ಲ. ಅರ್ಷದೀಪ್ ಸಿಂಗ್ ಒಂಬತ್ತು ರನ್ ಗಳಿಸಿ ರನೌಟ್ ಆದರೆ, ಸಿರಾಜ್ ಏಳು ರನ್ ಗಳಿಸಿ ಅಜೇಯರಾಗಿ ಉಳಿದರು. ಭಾರತದ ಪರ ರಿಷಬ್ ಪಂತ್ ಗರಿಷ್ಠ 42 ರನ್ ಬಾರಿಸಿದರು. ಪಾಕ್ ಪರ ನಸೀಮ್ ಶಾ ಮತ್ತು ಹ್ಯಾರಿಸ್ ರೌಫ್ ತಲಾ ಮೂರು ವಿಕೆಟ್ ಪಡೆದರು. ಮೊಹಮ್ಮದ್ ಆಮಿರ್ ಎರಡು ವಿಕೆಟ್ ಪಡೆದರೆ, ಶಾಹೀನ್ ಅಫ್ರಿದಿ ಒಂದು ವಿಕೆಟ್ ಪಡೆದರು.
ಇದಕ್ಕುತ್ತರವಾಗಿ ಗುರಿ ಬೆನ್ನಟ್ಟಿದ ಪಾಕಿಸ್ತಾನ ತಂಡ ಸುಲಭವಾಗಿ ಗೆಲ್ಲುವ ಲಕ್ಷಣಗಳಿದ್ದವು. ಒಂದು ಹಂತದಲ್ಲಿ ತಂಡ 14 ಓವರ್ ಅಂತ್ಯಕ್ಕೆ ಮೂರು ವಿಕೆಟ್ ಕಳೆದುಕೊಂಡು 80 ರನ್ ಕಲೆಹಾಕಿತ್ತು. ಆದರೆ ರಿಜ್ವಾನ್-ಶಾದಾಬ್ ಔಟಾದ ಬಳಿಕ ಪಂದ್ಯ ತಿರುವು ಪಡೆಯಿತು. ಜಸ್ಪ್ರೀತ್ ಬುಮ್ರಾ 19ನೇ ಓವರ್‌ನಲ್ಲಿ ಬೌಲಿಂಗ್ ಮಾಡಲು ಬಂದು ಕೇವಲ ಮೂರು ರನ್ ನೀಡಿ ಇಫ್ತಿಕರ್ ವಿಕೆಟ್ ಪಡೆದರು. 20ನೇ ಓವರ್‌ನಲ್ಲಿ ಪಾಕಿಸ್ತಾನ ಗೆಲುವಿಗೆ 18 ರನ್‌ಗಳ ಅಗತ್ಯವಿತ್ತು. ಆದರೆ, ಅರ್ಷದೀಪ್ ಕೇವಲ 11 ರನ್ ನೀಡಿ ಇಮಾದ್ ವಾಸಿಮ್ ವಿಕೆಟ್ ಪಡೆದರು.
ಪಾಕಿಸ್ತಾನ ಪರ ರಿಜ್ವಾನ್ ಗರಿಷ್ಠ 31 ರನ್ ಗಳಿಸಿದರೆ, ಬಾಬರ್ ಆಝಂ 13 ರನ್, ಉಸ್ಮಾನ್ ಖಾನ್ 13 ರನ್, ಫಖರ್ ಜಮಾನ್ 13 ರನ್ ಮತ್ತು ಇಮಾದ್ ವಾಸಿಮ್ 15 ರನ್ ಗಳಿಸಿ ಔಟಾದರು. ಶಾದಾಬ್ ಖಾನ್ ನಾಲ್ಕು ರನ್, ಇಫ್ತಿಕರ್ ಅಹ್ಮದ್ ಐದು ರನ್ ಗಳಿಸಲಷ್ಟೇ ಶಕ್ತರಾದರೆ, ನಸೀಮ್ ಶಾ 10 ರನ್ ಗಳಿಸಿ ಅಜೇಯರಾಗಿ ಉಳಿದರು. ಭಾರತದ ಪರ ಬುಮ್ರಾ ಮೂರು ವಿಕೆಟ್ ಪಡೆದು ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರೆ, ಹಾರ್ದಿಕ್ ಎರಡು ವಿಕೆಟ್, ಅರ್ಷದೀಪ್ ಮತ್ತು ಅಕ್ಷರ್ ತಲಾ ಒಂದು ವಿಕೆಟ್ ಪಡೆದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:56 pm, Mon, 10 June 24