IND vs ENG: ಸೇಡಿನ ಸಮರದಲ್ಲಿ ಆಂಗ್ಲರನ್ನು ಬಗ್ಗುಬಡಿದು ಫೈನಲ್ಗೇರಿದ ಭಾರತ..!
T20 World Cup 2024 IND vs ENG: ಗಯಾನಾದ ಪ್ರಾವಿಡೆನ್ಸ್ ಸ್ಟೇಡಿಯಂನಲ್ಲಿ ನಡೆದ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟಿ20 ವಿಶ್ವಕಪ್ನ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ 68 ರನ್ಗಳಿಂದ ಗೆದ್ದು ಫೈನಲ್ ಪ್ರವೇಶಿಸಿದೆ. ಟಿ20 ವಿಶ್ವಕಪ್ ಇತಿಹಾಸದಲ್ಲಿ ಇದು ಮೂರನೇ ಬಾರಿಗೆ ಟೀಂ ಇಂಡಿಯಾ ಫೈನಲ್ಗೇರಿದ ಸಾಧನೆ ಮಾಡಿದೆ.
ಗಯಾನಾದ ಪ್ರಾವಿಡೆನ್ಸ್ ಸ್ಟೇಡಿಯಂನಲ್ಲಿ ನಡೆದ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟಿ20 ವಿಶ್ವಕಪ್ನ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ 68 ರನ್ಗಳಿಂದ ಗೆದ್ದು ಫೈನಲ್ ಪ್ರವೇಶಿಸಿದೆ. ಟಿ20 ವಿಶ್ವಕಪ್ ಇತಿಹಾಸದಲ್ಲಿ ಇದು ಮೂರನೇ ಬಾರಿಗೆ ಟೀಂ ಇಂಡಿಯಾ ಫೈನಲ್ಗೇರಿದ ಸಾಧನೆ ಮಾಡಿದೆ. ಇದರ ಜೊತೆಗೆ ಅಜೇಯ ತಂಡವಾಗಿ ಫೈನಲ್ಗೆ ಲಗ್ಗೆ ಇಟ್ಟಿರುವ ಟೀಂ ಇಂಡಿಯಾ, ಕಳೆದ ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಇದೇ ಇಂಗ್ಲೆಂಡ್ ವಿರುದ್ಧ ಎದುರಿಸಿದ್ದ 10 ವಿಕೆಟ್ಗಳ ಹೀನಾಯ ಸೋಲಿಗೆ ಸರಿಯಾಗಿ ಸೇಡು ತೀರಿಸಿಕೊಂಡಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ ನಿಗದಿತ 20 ಓವರ್‌ಗಳಲ್ಲಿ 171 ರನ್ ಕಲೆಹಾಕಿತು. ಆದರೆ ಈ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ತಂಡ 16.4 ಓವರ್‌ಗಳಲ್ಲಿ 103 ರನ್‌ಗಳಿಗೆ ಆಲೌಟ್ ಆಯಿತು. ಇದೀಗ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ, ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದೆ.
ಮತ್ತೆ ಕೊಹ್ಲಿ ವಿಫಲ
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾಗೆ ಎಂದಿನಂತೆ ನಿರೀಕ್ಷಿತ ಆರಂಭ ಸಿಗಲಿಲ್ಲ. ಟೀಂ ಇಂಡಿಯಾ 19 ರನ್ ಗಳಿಸಿದ್ದಾಗ ವಿರಾಟ್ ಕೊಹ್ಲಿ 9 ರನ್ ಗಳಿಸಿ ಔಟಾದರು. ಆ ಬಳಿಕ ರಿಷಬ್ ಪಂತ್ ಕೂಡ 4 ರನ್ ಗಳಿಸಿ ಪೆವಿಲಿಯನ್ಗೆ ಮರಳಿದರು. ಹೀಗಾಗಿ ಟೀಂ ಇಂಡಿಯಾ ಮೊದಲ 6 ಓವರ್‌ಗಳಲ್ಲಿ 40 ರನ್ ಕಲೆಹಾಕುವಷ್ಟರಲ್ಲಿ ಪ್ರಮುಖ 2 ವಿಕೆಟ್ ಕಳೆದುಕೊಂಡಿತು. ಆದರೆ ಆ ನಂತರ ರೋಹಿತ್ ಶರ್ಮಾ ಮತ್ತು ಸೂರ್ಯಕುಮಾರ್ ಯಾದವ್ ಇಬ್ಬರೂ ಟೀಮ್ ಇಂಡಿಯಾದ ಇನ್ನಿಂಗ್ಸ್ ನಿಭಾಯಿಸಿದಲ್ಲದೆ, ಈ ಇಬ್ಬರೂ 73 ರನ್‌ಗಳ ಜೊತೆಯಾಟವನ್ನು ಹಂಚಿಕೊಂಡರು.
ಭಾರತಕ್ಕೆ ರೋಹಿತ್- ಸೂರ್ಯ ಆಸರೆ
ಇದೇ ವೇಳೆ ರೋಹಿತ್ 32ನೇ ಅರ್ಧಶತಕ ದಾಖಲಿಸಿದರು. ಆದರೆ ಆ ನಂತರ ರೋಹಿತ್ ಮತ್ತು ಸೂರ್ಯ ಜೋಡಿ ಬೇಗನೆ ಮುರಿದುಬಿತ್ತು. ರೋಹಿತ್ 57 ರನ್ ಬಾರಿಸಿ ಇನ್ನಿಂಗ್ಸ್ ಮುಗಿಸಿದರೆ, ಸೂರ್ಯಕುಮಾರ್ 47 ರನ್‌ಗಳ ಕಾಣಿಕೆ ನೀಡಿದರು. ನಂತರ ರವೀಂದ್ರ ಜಡೇಜಾ ಔಟಾಗದೆ 17 ರನ್ ಬಾರಿಸಿದರೆ, ಹಾರ್ದಿಕ್ ಪಾಂಡ್ಯ 23 ರನ್‌ಗಳ ಸ್ಫೋಟಕ ಇನ್ನಿಂಗ್ಸ್ ಕಟ್ಟಿದರು. ಅಕ್ಷರ್ ಪಟೇಲ್ 10 ರನ್ ಬಾರಿಸಿದರೆ, ಅರ್ಷದೀಪ್ ಸಿಂಗ್ ಅಜೇಯ 1 ರನ್‌ಗಳ ಕಾಣಿಕೆ ನೀಡಿದರು. ಇಂಗ್ಲೆಂಡ್ ಪರ ಬೌಲ್ ಮಾಡಿದ 6 ಬೌಲರ್ಗಳ ಪೈಕಿ ನಾಲ್ವರು ತಲಾ 1 ವಿಕೆಟ್ ಪಡೆದರೆ, ಕ್ರಿಸ್ ಜೋರ್ಡಾನ್ ಅತಿ ಹೆಚ್ಚು 3 ವಿಕೆಟ್ ಪಡೆದರು.
𝙄𝙣𝙩𝙤 𝙏𝙝𝙚 𝙁𝙞𝙣𝙖𝙡𝙨! 🙌 🙌#TeamIndia absolutely dominant in the Semi-Final to beat England! 👏 👏
It’s India vs South Africa in the summit clash!
All The Best Team India! 👍 👍#T20WorldCup | #INDvENG pic.twitter.com/yNhB1TgTHq
— BCCI (@BCCI) June 27, 2024
ಇಂಗ್ಲೆಂಡ್ ಪೆವಿಲಿಯನ್ ಪರೇಡ್
ಗೆಲುವಿಗೆ 171 ರನ್‌ಗಳ ಗುರಿ ಬೆನ್ನಟ್ಟಿದ ಇಂಗ್ಲೆಂಡ್ಗೆ ಮೊದಲ ವಿಕೆಟ್ಗೆ 26 ರನ್‌ಗಳ ಜೊತೆಯಾಟ ಸಿಕ್ಕಿತು. ಆದರೆ ನಾಯಕ ಜೋಸ್ ಬಟ್ಲರ್ ವಿಕೆಟ್ ಪತನದೊಂದಿಗೆ ಇಂಗ್ಲೆಂಡ್ ತಂಡದ ಪೆವಿಲಿಯನ್ ಪರೇಡ್ ಆರಂಭವಾಯಿತು. ಆಂಗ್ಲ ತಂಡದ ಪರ ಹ್ಯಾರಿ ಬ್ರೂಕ್ 25 ರನ್ ಬಾರಿಸಿ ಅಗ್ರ ಸ್ಕೋರರ್ ಎನಿಸಿಕೊಂಡರೆ, ಜೋಸ್ ಬಟ್ಲರ್ 23 ರನ್‌ಗಳ ಕಾಣಿಕೆ ನೀಡಿದರು. ಕೊನೆಯಲ್ಲಿ ವೇಗಿ ಜೋಫ್ರಾ ಆರ್ಚರ್ 21 ರನ್‌ಗಳ ಸ್ಫೋಟಕ ಇನ್ನಿಂಗ್ಸ್ ಆಡಿದರು. ಉಳಿದಂತೆ ತಂಡದ ಯಾವೊಬ್ಬ ಬ್ಯಾಟರ್ ಕೂಡ ಒಂದಂಕಿ ದಾಟಲಿಲ್ಲ. ಭಾರತದ ಪರ ಕುಲ್ದೀಪ್ ಯಾದವ್ 19 ರನ್ ನೀಡಿ ಮೂರು ವಿಕೆಟ್ ಪಡೆದರೆ, ಅಕ್ಷರ್ ಪಟೇಲ್ 23 ರನ್ ನೀಡಿ 3 ವಿಕೆಟ್ ಪಡೆದರು. ಅಕ್ಷರ್ ಅವರ ಪ್ರದರ್ಶನಕ್ಕಾಗಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:43 am, Fri, 28 June 24