T20 World Cup 2024: ಆಂಗ್ಲರ ಕೈ ಹಿಡಿದ ಆಸ್ಟ್ರೇಲಿಯನ್ನರು
T20 World Cup 2024: ಆಸ್ಟ್ರೇಲಿಯಾ ತಂಡದ ಗೆಲುವಿನೊಂದಿಗೆ ಇಂಗ್ಲೆಂಡ್ ತಂಡವು ನೆಟ್ ರನ್ ರೇಟ್ (+3.611) ನೆರವಿನಿಂದ ಸ್ಕಾಟ್ಲೆಂಡ್ (+1.255) ತಂಡವನ್ನು ಹಿಂದಿಕ್ಕಿ ಸೂಪರ್-8 ಹಂತಕ್ಕೇರಿದೆ. ಈ ಮೂಲಕ ಜೋಸ್ ಬಟ್ಲರ್ ನೇತೃತ್ವದ ಇಂಗ್ಲೆಂಡ್ ತಂಡವು ದ್ವಿತೀಯ ಸುತ್ತಿನಲ್ಲಿ ಗ್ರೂಪ್-2 ನಲ್ಲಿ ಕಣಕ್ಕಿಳಿಯಲಿದೆ.
T20 World Cup 2024: ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡವು ಟಿ20 ವಿಶ್ವಕಪ್ನ ದ್ವಿತೀಯ ಸುತ್ತಿಗೆ ಪ್ರವೇಶಿಸಿದೆ. ಅದು ಕೂಡ ಕೇವಲ 5 ಅಂಕಗಳೊಂದಿಗೆ ಎಂಬುದು ವಿಶೇಷ. ಅಂದರೆ ಈ ಬಾರಿಯ ವಿಶ್ವಕಪ್ನಲ್ಲಿ ಹಾಲಿ ಚಾಂಪಿಯನ್ ಪಟ್ಟದೊಂದಿಗೆ ಕಣಕ್ಕಿಳಿದಿದ್ದ ಇಂಗ್ಲೆಂಡ್ ತಂಡದ ಮೊದಲ ಪಂದ್ಯವು ಮಳೆಗೆ ಅಹುತಿಯಾಗಿತ್ತು. ಇನ್ನು ದ್ವಿತೀಯ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋಲನುಭವಿಸಿತ್ತು.
ಮೂರನೇ ಪಂದ್ಯದಲ್ಲಿ ಒಮಾನ್ ವಿರುದ್ದ ಗೆಲ್ಲುವ ಮೂಲಕ ಗೆಲುವಿನ ಖಾತೆ ತೆರೆದ ಇಂಗ್ಲೆಂಡ್ಗೆ ನಮೀಬಿಯಾ ವಿರುದ್ಧ ಪಂದ್ಯ ನಿರ್ಣಾಯಕವಾಗಿತ್ತು. ಅದರಂತೆ ನಮೀಬಿಯಾ ವಿರುದ್ಧ 41 ರನ್ಗಳ ಜಯ ಸಾಧಿಸಿ ಅಂಕಪಟ್ಟಿಯಲ್ಲಿ 5 ಪಾಯಿಂಟ್ಸ್ನೊಂದಿಗೆ ದ್ವಿತೀಯ ಸ್ಥಾನ ಅಲಂಕರಿಸುವಲ್ಲಿ ಯಶಸ್ವಿಯಾಗಿತ್ತು.
ಕೈ ಹಿಡಿದ ಆಸ್ಟ್ರೇಲಿಯನ್ನರು:
ಗ್ರೂಪ್-ಬಿ ಪಾಯಿಂಟ್ಸ್ ಟೇಬಲ್ನಲ್ಲಿ ದ್ವಿತೀಯ ಸ್ಥಾನ ಅಲಂಕರಿಸಿದರೂ ಇಂಗ್ಲೆಂಡ್ ಸೂಪರ್-8 ಹಂತಕ್ಕೇರುವುದು ಖಚಿತವಾಗಿರಲಿಲ್ಲ. ಏಕೆಂದರೆ ಅತ್ತ ಸ್ಕಾಟ್ಲೆಂಡ್ ತಂಡ ಕೂಡ 5 ಅಂಕಗಳೊಂದಿಗೆ 3ನೇ ಸ್ಥಾನದಲ್ಲಿತ್ತು.
ಹೀಗಾಗಿ ಆಸ್ಟ್ರೇಲಿಯಾ ಮತ್ತು ಸ್ಕಾಟ್ಲೆಂಡ್ ನಡುವಣ ಪಂದ್ಯವು ಇಂಗ್ಲೆಂಡ್ ಪಾಲಿಗೆ ನಿರ್ಣಾಯಕವಾಗಿತ್ತು. ಈ ಪಂದ್ಯದಲ್ಲಿ ಸ್ಟಾರ್ ಆಟಗಾರರಿಗೆ ವಿಶ್ರಾಂತಿ ನೀಡುತ್ತೇವೆ ಎನ್ನುವ ಮೂಲಕ ಆಸ್ಟ್ರೇಲಿಯಾ ಟೀಮ್ ಮ್ಯಾನೇಜ್ಮೆಂಟ್ ಇಂಗ್ಲೆಂಡ್ನ ಚಿಂತೆ ಹೆಚ್ಚಿಸಿದ್ದರು.
ಅಲ್ಲದೆ ಇಂಗ್ಲೆಂಡ್ ತಂಡವನ್ನು ಸೂಪರ್-8 ಹಂತದಿಂದ ಹೊರಗಿಡುವುದೇ ನಮ್ಮ ಧ್ಯೇಯ ಎಂಬ ಹೇಳಿಕೆಗಳನ್ನು ಆಸ್ಟ್ರೇಲಿಯಾ ಆಟಗಾರರು ನೀಡಿದ್ದರು. ಹೀಗಾಗಿ ಸ್ಕಾಟ್ಲೆಂಡ್ ವಿರುದ್ಧ ಆಸೀಸ್ ಪಡೆ ಸೋಲಲಿದ್ದಾರಾ ಎಂಬ ಆತಂಕವೊಂದು ಆಂಗ್ಲರಲ್ಲಿ ಮನೆ ಮಾಡಿತ್ತು.
ಇದನ್ನೂ ಓದಿ: Tim Southee: 24 ಎಸೆತಗಳಲ್ಲಿ ಹೊಸ ಇತಿಹಾಸ ನಿರ್ನಿಸಿದ ಟಿಮ್ ಸೌಥಿ
ಆದರೆ ಇಂಗ್ಲೆಂಡ್ ಪಾಲಿಗೆ ನಿರ್ಣಾಯಕವಾಗಿದ್ದ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಭರ್ಜರಿ ಪ್ರದರ್ಶನ ನೀಡಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸ್ಕಾಟ್ಲೆಂಡ್ ತಂಡವು 20 ಓವರ್ಗಳಲ್ಲಿ 180 ರನ್ ಕಲೆಹಾಕಿತು. ಈ ಕಠಿಣ ಗುರಿಯನ್ನು ಬೆನ್ನತ್ತಿದ ಆಸ್ಟ್ರೇಲಿಯಾ ತಂಡ 19.4 ಓವರ್ಗಳಲ್ಲಿ ಗುರಿ ಮುಟ್ಟುವಲ್ಲಿ ಯಶಸ್ವಿಯಾಗಿದೆ. ಈ ಗೆಲುವಿನ ಮೂಲಕ ಇಂಗ್ಲೆಂಡ್ ತಂಡ ಸೂಪರ್-8 ಹಂತಕ್ಕೇರುವಲ್ಲಿ ಆಸ್ಟ್ರೇಲಿಯಾ ಪ್ರಮುಖ ಪಾತ್ರವಹಿಸಿದೆ.